ನವದೆಹಲಿ:ಅತ್ಯಾಚಾರ ಸಂತ್ರಸ್ತರ ಕನ್ಯತ್ವ ಪರೀಕ್ಷಿಸುವಂಥ “ಟೂ ಫಿಂಗರ್ ಟೆಸ್ಟ್'(ಎರಡು ಬೆರಳಿನ ಪರೀಕ್ಷೆ)ಗೆ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಹೆಣ್ಣುಮಕ್ಕಳ ಘನತೆಯನ್ನು ಉಲ್ಲಂಘಿಸುವಂಥ, ಇಂಥ “ಪಿತೃಪ್ರಧಾನ ಮತ್ತು ಲಿಂಗಭೇದ’ವುಳ್ಳ ಪರೀಕ್ಷೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ನಿರ್ದೇಶಿಸಿದೆ.
ಅತ್ಯಾಚಾರ ಮತ್ತು ಕೊಲೆ ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾ ಮಾಡುವ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗದೊಳಕ್ಕೆ ಎರಡು ಬೆರಳುಗಳನ್ನು ಹಾಕಿ, ಆಕೆ ಕನ್ಯೆಯೇ ಅಥವಾ ಇದಕ್ಕೂ ಮುಂಚೆ ಲೈಂಗಿಕ ಸಂಪರ್ಕ ಮಾಡಿದ್ದಳ್ಳೋ ಎಂದು ಪರೀಕ್ಷಿಸುವುದನ್ನು ಟೂ ಫಿಂಗರ್ ಟೆಸ್ಟ್ ಎನ್ನುತ್ತಾರೆ.
Related Articles
ನ್ಯಾಯಪೀಠ ಹೇಳಿದ್ದೇನು?:
“ಟೂ ಫಿಂಗರ್ ಟೆಸ್ಟ್’ ಎನ್ನುವುದು ಮಹಿಳೆಯ ಘನತೆ ಮತ್ತು ಖಾಸಗಿತನದ ಉಲ್ಲಂಘನೆ ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೂ, ಈ ಪದ್ಧತಿಯನ್ನು ಇಂದಿಗೂ ಮುಂದುವರಿಸುತ್ತಿರುವುದು ದುರದೃಷ್ಟಕರ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ನಡೆಯಲು ಸಾಧ್ಯವಿಲ್ಲ ಎಂದು ಹೇಳಲು ಆಗುತ್ತದೆಯೇ ಎಂದೂ ನ್ಯಾಯಪೀಠ ಪ್ರಶ್ನಿಸಿದೆ.
ಜತೆಗೆ, ಇನ್ನು ಮುಂದೆ ಟೂ ಫಿಂಗರ್ ಟೆಸ್ಟ್ ನಡೆಸದಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ, ರಾಜ್ಯ ಸರ್ಕಾರಗಳು, ಡಿಜಿಪಿಗಳು, ಆರೋಗ್ಯ ಕಾರ್ಯದರ್ಶಿಗಳಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ಯಾರಾದರೂ ವ್ಯಕ್ತಿ ಇಂಥ ಪರೀಕ್ಷೆ ನಡೆಸುತ್ತಾನೆ ಎಂದರೆ, ದುರ್ವರ್ತನೆಯ ಆರೋಪದಡಿ ಆತನನ್ನು ದೋಷಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮಗಳಲ್ಲಿರುವ ಟೂ ಫಿಂಗರ್ ಪರೀಕ್ಷೆಗೆ ಸಂಬಂಧಿಸಿದ ಪರಿಕರಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ.