ಹಿಂದೂ ಪಂಚಾಂಗವು ಸೂರ್ಯ ಮತ್ತು ಚಂದ್ರನ ಚಲನೆಗೆ ಸಂಬಂಧಪಟ್ಟ ಒಂದು ಗಣಿತವಾಗಿದೆ. ಚಂದ್ರನ ಚಲನೆಯಿಂದ ಉಂಟಾಗುವ ಹುಣ್ಣಿಮೆಯಿಂದ ಚಂದ್ರಮಾಸವೂ, ಸೂರ್ಯನ ಚಲನೆಯಿಂದ ಉಂಟಾಗುವ ಸಂಕ್ರಾಂತಿಯಿಂದ ಸೌರಮಾನದ ಲೆಕ್ಕಾಚಾರವನ್ನು ಮಾಡಲಾಗುತ್ತದೆ.
ಇದನ್ನೂ ಓದಿ:ವಾಯ್ಸ್ ಮೆಸೇಜ್ ಮಾಡಿ, ಕಾರು ಸಮೇತ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಇಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯಣವು ಸೂರ್ಯನ ಚಲನೆಗೆ ಸಂಬಂಧಪಟ್ಟ ಒಂದು ಲೆಕ್ಕಾಚಾರವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರವ್ಯೂಹವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ. ಮೇಷದಿಂದ ಆರಂಭಿಸಿ ಮೀನ ರಾಶಿವರೆಗೆ 12 ರಾಶಿಗಳಿವೆ. ಗಣಿತದ ಪ್ರಕಾರ ಒಂದೊಂದು ರಾಶಿಯು 30 ಡಿಗ್ರಿ (360 ಭಾಗಿಸು 12) ವಿಸ್ತಾರವನ್ನು ಹೊಂದಿದೆ. ಸೂರ್ಯನಿಗೆ ಒಂದೊಂದು ರಾಶಿಯನ್ನು ಕ್ರಮಿಸಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಸೂರ್ಯನು ರಾಶಿ ಪರಿವರ್ತನೆ ಮಾಡುವ ಕಾಲ ಅಂದರೆ ಉದಾಹರಣೆಗ, ಮೇಷರಾಶಿಯಲ್ಲಿ ಪ್ರಯಾಣ ಮುಗಿಸಿ, ವೃಷಭ ರಾಶಿ ಪ್ರವೇಶಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ.
ಈ ಪ್ರಕಾರ ಒಟ್ಟು 12 ಸಂಕ್ರಮಣಗಳು ಇವೆ. ಒಂದೊಂದು ರಾಶಿ ಪರಿವರ್ತನೆ ಮಾಡುವ ಕಾಲವು ಸಂಕ್ರಮಣ ಕಾಲವಾಗಿದೆ. ಜ್ಯೋತಿಷ್ಯದಲ್ಲಿ 2 ಸಂಕ್ರಮಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಂದು ಕರ್ಕಾಟಕ ಸಂಕ್ರಮಣ, ಮತ್ತೊಂದು ಮಕರ ಸಂಕ್ರಮಣ.
ಸೂರ್ಯನು ಧನುರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ದಿನ ಅಂದರೆ ಸುಮಾರು ಜನವರಿ 14ನೇ ತಾರೀಕಿನಂದು ಮಕರ ಸಂಕ್ರಮಣ ಸಂಭವಿಸುತ್ತದೆ. ಆ ದಿನದಂದು ಉತ್ತರಾಯಣ ಪ್ರಾರಂಭವಾಗುತ್ತದೆ. ಹೆಸರೇ ತಿಳಿಸಿರುವಂತೆ ಉತ್ತರಾಯಣ ಅಂದರೆ ಸೂರ್ಯನು ತನ್ನ ಪಥವನ್ನು ದಕ್ಷಿಣದಿಂದ ಬದಲಾಯಿಸಿ ಉತ್ತರದ ದಿಕ್ಕಿಗೆ ಪ್ರಯಾಣ ಮಾಡುವ ಕಾಲ. ಸೂರ್ಯನು ಆರು ತಿಂಗಳ ಕಾಲ ಉತ್ತರ ಧ್ರುವದ ಕಡೆಗೆ ತನ್ನ ಪ್ರಯಾಣ ಪೂರ್ಣಗೊಳಿಸಿ ಜುಲಾಯಿ 16ನೇ ತಾರೀಕಿನಂದು ಮಿಥುನ ರಾಶಿಯಿಂದ ಕರ್ಕಾಟಕ ರಾಶಿ ಪ್ರವೇಶಿಸುವ ದಿನ ಕರ್ಕಾಟಕ ಸಂಕ್ರಮಣ. ಆ ದಿನದಿಂದ ಸೂರ್ಯನು ತನ್ನ ಪಥವನ್ನು ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಬದಲಾಯಿಸುತ್ತಾನೆ. ಇದೇ ದಕ್ಷಿಣಾಯನ.
ಸೂರ್ಯನ ಪಥ ಬದಲಾವಣೆಯಿಂದ ಭೂಮಿಯ ಮೇಲೆ ಕೆಲವಷ್ಟು ಬದಲಾವಣೆಗಳು ಉಂಟಾಗುತ್ತದೆ. ಋತುಗಳ ಬದಲಾವಣೆ, ವಸಂತ ಕಾಲ, ಬೇಸಿಗೆ ಕಾಲ, ಶರತ್ಕಾಲ, ಚಳಿಗಾಲ ಬರುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿಯೂ ಬದಲಾವಣೆಯಾಗುತ್ತದೆ.
ಉದಾಹರಣೆಗೆ ಮಾರ್ಚ್ 23 ಮತ್ತು ಸೆಪ್ಟೆಂಬರ್ 23ನೇ ತಾರೀಕಿನಂದು ಹಗಲು ಮತ್ತು ರಾತ್ರಿಯ ಪ್ರಮಾಣ ಒಂದೇ ಆಗಿರುತ್ತದೆ. ಅದೇ ರೀತಿ ಜೂನ್ 21 ದೀರ್ಘವಾದ ದಿನ, ಡಿಸೆಂಬರ್ 21 ದೀರ್ಘವಾದ ರಾತ್ರಿ ಸಂಭವಿಸುತ್ತದೆ. ಇದಕ್ಕೆಲ್ಲ ಕಾರಣ ಭೂಮಿಯು ತನ್ನ ಕಕ್ಷೆಯಲ್ಲಿ 23 ಡಿಗ್ರಿಯಷ್ಟು ವಾಲಿಕೊಂಡಿರುವುದು.
ರವೀಂದ್ರ ಐರೋಡಿ,
ಜ್ಯೋತಿಷ್ಯ ವಿಶ್ಲೇಷಕರು
ಉಡುಪಿ