Advertisement
ಈಗಿರುವ ಬೆಲೆಗೆ ಸಕ್ಕರೆ ಮಾರಾಟ ಮಾಡಿದರೆ ಯಾವ ಕಾರಣಕ್ಕೂ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ. ಆದ ಕಾರಣ ಸಕ್ಕರೆ ಬೆಲೆಯನ್ನು ಆಧರಿಸಿ ಕಾರ್ಖಾನೆಗಳನ್ನು ಆರಂಭಿಸಲು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟ ಆಲೋಚಿಸುತ್ತಿದೆ.
ಸಕ್ಕರೆ ಬೆಲೆಯೇ ಕೆಜಿಗೆ 26 ರೂ. ಇದ್ದು, ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ಆಡಳಿತ ಮಂಡಳಿಗಳು ರೈತರಿಗೆ 2550 ರೂ. ನೀಡುತ್ತಿವೆ. ಟನ್ ಕಬ್ಬನ್ನು ಸಕ್ಕರೆಯಾಗಿ ಪರಿವರ್ತಿಸಲು 2800 ರೂ.ನಿಂದ 3000 ರೂ. ಖರ್ಚು ಬೀಳುತ್ತದೆ. ಉತ್ಪಾದನಾ ವೆಚ್ಚ ಮಾರುಕಟ್ಟೆ ದರಕ್ಕಿಂತ ಹೆಚ್ಚಳವಿರುವುದರಿಂದ ಸಕ್ಕರೆಯನ್ನು ಮಾರಾಟ ಮಾಡುವುದಾದರೂ ಹೇಗೆ ಎನ್ನುವುದು ಆಡಳಿತ ಮಂಡಳಿ ಪ್ರಶ್ನೆಯಾಗಿದೆ. ಕಬ್ಬಿನ ಇಳುವರಿ ಶೇ.9.3 ಬಂದರೂ ಸಕ್ಕರೆ ಬೆಲೆ ಹೆಚ್ಚಳವಾಗದೆ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದಿಲ್ಲ ಎನ್ನುವುದು ಕಾರ್ಖಾನೆ ಆಡಳಿತ ಮಂಡಳಿಗಳು ಹೇಳುವ ಮಾತು. ಸಕ್ಕರೆ ಬೆಲೆಗೂ ಹಾಗೂ ಉತ್ಪಾದನಾ ವೆಚ್ಚಕ್ಕೂ ಕನಿಷ್ಠ 200 ರಿಂದ 400 ರೂ. ಅಂತರವಿದ್ದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸಾಧ್ಯವಾಗುತ್ತದೆ. ಪ್ರಸ್ತುತ ಇರುವ ಸಕ್ಕರೆ ಬೆಲೆ ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕೂ ಸಾಧ್ಯವಾಗದಂತಹ ಸ್ಥಿತಿ ಇದೆ.
Related Articles
ದೇಶದಲ್ಲಿ ಸಕ್ಕರೆ ಅಧಿಕ ಪ್ರಮಾಣದಲ್ಲಿ ದಾಸ್ತಾನಿದೆ. ಭಾರತ ದೇಶಕ್ಕೆ ಪ್ರತಿ ವರ್ಷ 150 ಲಕ್ಷ ಟನ್ ಸಕ್ಕರೆ ಸಾಕು. ದೇಶದಲ್ಲಿ ಸದ್ಯಕ್ಕೆ 150 ಲಕ್ಷ ಟನ್ ಸಕ್ಕರೆ ಗೋದಾಮುಗಳಲ್ಲಿ ಸಂಗ್ರಹವಿದೆ. 315 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ಇದಲ್ಲದೆ, ಪಾಕಿಸ್ತಾನದಿಂದಲೂ 10 ಲಕ್ಷ ಟನ್ ಸಕ್ಕರೆ ದೇಶಕ್ಕೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ದೇಶದ ಯಾವುದೇ ಕಾರ್ಖಾನೆಗಳೂ ಕಬ್ಬು ನುರಿಸದಿದ್ದರೂ ಕೊರತೆ ಕಂಡುಬರುವುದಿಲ್ಲ ಎನ್ನುವುದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪವನ್‌ಕುಮಾರ್ ಹೇಳುವ ಮಾತು.
Advertisement
ಮಂಡ್ಯದಲ್ಲೂ ಸ್ಟಾಕ್:ಮಂಡ್ಯ ಜಿಲ್ಲೆಯಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳಲ್ಲಿ 40 ರಿಂದ 50 ಲಕ್ಷ ಟನ್ ಸಕ್ಕರೆ ಇರಬಹುದೆಂದು ಅಂದಾಜಿಸಲಾಗಿದೆ. ಈ ಸಕ್ಕರೆಯನ್ನು ಪ್ರಸ್ತುತ ಮಾರುಕಟ್ಟೆ ಮಾರಾಟ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುವುದು ಕಾರ್ಖಾನೆ ಆಡಳಿತ ಮಂಡಳಿಗಳು ಹೇಳುವ ಮಾತಾಗಿದೆ. ಮೂರ್‍ನಾಲ್ಕು ಕಂತುಗಳಲ್ಲಿ ನೀಡಲು ಮನವಿ:
ಸಕ್ಕರೆ ಬೆಲೆ ಹೆಚ್ಚಳವಾಗದಿದ್ದರೆ ಕಬ್ಬಿಗೆ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯನ್ನು ಇಳಿಸಬೇಕು. ಆ ಹಣವನ್ನು ಮೂರ್‍ನಾಲ್ಕು ಕಂತುಗಳಲ್ಲಿ ನೀಡುವುದಕ್ಕೆ ಅವಕಾಶ ಕಲ್ಪಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಹೆಚ್ಚಳ ಮಾಡುವ ದೃಷ್ಟಿಯಲ್ಲಿ ಯಾವ ಕ್ರಮ ವಹಿಸಲಿದೆ, ನೂತನ ಸರ್ಕಾರ ಯಾವ ರೀತಿ ಸಕ್ಕರೆ ಕಾರ್ಖಾನೆ ಮಾಲೀಕರ ಮನವಿಗೆ ಸ್ಪಂದಿಸಲಿದೆ ಎಂಬುದನ್ನು ನೋಡಬೇಕು ಎಂದು ಪವನ್‌ಕುಮಾರ್ ಹೇಳಿದ್ದಾಳೆ. ಇಸ್ಮಾ ಕೇಂದ್ರಕ್ಕೆ ಮನವಿ
ಸಕ್ಕರೆ ಬೆಲೆ ಕುಸಿತಗೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಬೆಲೆ ಕನಿಷ್ಠ ಬೆಲೆಗಿಂತ ಕೆಳಗಿಳಿಯದಂತೆ ಎಚ್ಚರ ವಹಿಸುವುದು, ಸಕ್ಕರೆ ಬೆಲೆ ಕುಸಿದಾಗ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟ ಕೇಂದ್ರ ಸರ್ಕಾರಕ್ಕೆ ಮೂರಂಶಗಳ ಮನವಿ ಸಲ್ಲಿಸಿದೆ. ಮನವಿಯಲ್ಲಿ ಈ ಕೆಳಗಿನ ಅಂಶಗಳಿವೆ. 1. ಕಬ್ಬಿಗೆ ಕನಿಷ್ಠ ಬೆಲೆ ನಿಗದಿಪಡಿಸುವ ರೀತಿಯಲ್ಲಿ ಸಕ್ಕರೆ ಬೆಲೆಗೂ ಕನಿಷ್ಠ ಬೆಲೆ ನಿಗದಿಪಡಿಸುವುದು.
2. ಬ್ರೆಜಿಲ್‌ನಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾದ ಸಮಯದಲ್ಲೆಲ್ಲಾ ಎಥೆನಾಲ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡಿ ನಷ್ಟವನ್ನು ಸರಿದೂಗಿಸಿಕೊಳ್ಳುವರು. ಅದೇ ಮಾದರಿಯನ್ನು ಭಾರತದಲ್ಲಿಯೂ ಜಾರಿಗೊಳಿಸಬೇಕು.
3. ಭಾರತದಲ್ಲೇ ಸಕ್ಕರೆ ಉತ್ಪಾದನೆ ಹೆಚ್ಚಿರುವಾಗ ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಹೊರದೇಶದಿಂದ ಬರುವ ಸಕ್ಕರೆ ಮೇಲೆ ನಿರ್ಬಂಧ ವಿಧಿಸಿ ನಮ್ಮದೇ ಸಕ್ಕರೆ ಮಾರುಕಟ್ಟೆಯಲ್ಲಿರುವಂತೆ ಎಚ್ಚರ ವಹಿಸಬೇಕು. ಸರ್ಕಾರ ಸ್ಪಂದನೆ ಸಾಧ್ಯತೆ
ಕಾರ್ಖಾನೆಗಳನ್ನು ವಿಳಂಬವಾಗಿ ಆರಂಭಿಸುವುದು, ರೈತರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಸಕ್ಕರೆ ಬೆಲೆ ಕೆಜಿಗೆ 26 ರೂ.ಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಈಗಿನ ಸ್ಥಿತಿಯಲ್ಲಿ ಕಬ್ಬು ಅರೆಯುವಿಕೆ ಆರಂಭಿಸುವುದು ಕಷ್ಟವಾಗಿದೆ. ಕಾರ್ಖಾನೆ ಮಾಲೀಕರ ಸಂಕಷ್ಟ ಪರಿಹರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಯಾವ ರೀತಿ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದ ನೂತನ ಸರ್ಕಾರ ಹೇಗೆ ಸ್ಪಂದಿಸಲಿದೆ ನೋಡಬೇಕಿದೆ ಎಂದು ಕಬ್ಬು ಬೆಲೆ ನಿಯಂತ್ರಣ ಮಂಡಳಿ ಸದಸ್ಯ ಪವನ್‌ಕುಮಾರ್ ತಿಳಿಸಿದರು. ಕಾರ್ಖಾನೆಯವರು ಮಾತ್ರ ಸಕ್ಕರೆ ಬೆಲೆ ಕಾರಣ ತೋರಿಸಿ ಕಬ್ಬು ಅರೆಯುವಿಕೆ ವಿಳಂಬ ಮಾಡುವುದಾಗಿ ಹೇಳ್ತಾರೆ. ಸಕ್ಕರೆ ಬೆಲೆ 40 ರಿಂದ 42 ರೂ. ಇದ್ದಾಗ ರೈತರಿಗೆ ಕನಿಷ್ಠ ಬೆಲೆಯನ್ನು 2500 ರೂ. ಕೊಡಲಿಲ್ಲವೇಕೆ? ನಿಮಗಾದಾಗ ಮಾತ್ರ ನಷ್ಟ. ರೈತರ ನಷ್ಟ ಕೇಳ್ಳೋರ್ಯಾರು.
– ಶಂಭೂನಹಳ್ಳಿ ಕೃಷ್ಣ, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ – ಮಂಜುನಾಥ್