Advertisement
ಗೃಹ ಕಚೇರಿ “ಕೃಷ್ಣಾ’ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಉಪನಗರ ರೈಲು ಯೋಜನೆ ಪಕ್ಷದ ಹಿರಿಯ ನಾಯಕ ದಿವಂಗತ ಅನಂತ ಕುಮಾರ್ ಅವರ ಕನಸಾಗಿತ್ತು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದ ಪಿ.ಸಿ.ಮೋಹನ್ ಅವರ ವಿಶೇಷ ಪ್ರಯತ್ನದಿಂದ ಕೇಂದ್ರ ಆಯವ್ಯಯದಲ್ಲಿ ಯೋಜನೆ ಘೋಷಣೆಯಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಪಿಯೂಶ್ ಗೋಯೆಲ್, ಸುರೇಶ್ ಅಂಗಡಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಮೂಲಕ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಉದ್ದೇಶಿತ ಯೋಜನೆಯಷ್ಟೇ ಜಾರಿಯಾಗಲಿದ್ದು, ಬಿಡದಿ, ದೊಡ್ಡಬಳ್ಳಾಪುರ ಇತರೆಡೆ ವಿಸ್ತರಿಸುವ ಚಿಂತನೆ ಇಲ್ಲ. ಎಲ್ಲ ಶಾಸಕರು, ಸಂಸದರು ಬಯಸಿದರೂ ಸದಕ್ಕೆ ಉದ್ದೇಶಿತ ಯೋಜನೆಯಂತೆ ಕಾರ್ಯಗತವಾಗಲಿದೆ ಎಂದು ಹೇಳಿದರು.
ಪ್ರಯಾಣ ದರ ಎಷ್ಟಿರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅಂಗಡಿ, ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಚರ್ಚಿಸಿ ದರ ನಿಗದಿಪಡಿಸಲಾಗುವುದು. ಸಕಾಲದಲ್ಲಿ ತ್ವರಿತ ಗುಣಮಟ್ಟದ ಸೇವೆ ಒದಗಿಸಿದರೆ ಜನ ಅದರಲ್ಲೂ ಯುವಜನತೆ ಎಷ್ಟು ಹಣವನ್ನಾದರೂ ನೀಡುತ್ತಾರೆ ಎಂಬುದು ಅಂಕಿಸಂಖ್ಯೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಗಳು ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದರೆ ಈ ಹೊತ್ತಿಗಾಗಲೇ ಪೂರ್ಣಗೊಳ್ಳಬೇಕಿತ್ತು. 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕೇಳಿದ ಕೆಲ ಮಾಹಿತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರಲಿಲ್ಲ. ಯೋಜನೆಗೆ ಭೂಸ್ವಾಧೀನ ಸಮಸ್ಯೆ ಇಲ್ಲ. ರೈಲ್ವೆ ಇಲಾಖೆಯೇ ಭೂಮಿ ನೀಡಲಿದೆ. ವಿಶೇಷ ವಿನ್ಯಾಸದ ಬೋಗಿಗಳು ಇರಲಿದೆ ಎಂದು ಮಾಹಿತಿ ನೀಡಿದರು.
ಸಂಸದ ಪಿ.ಸಿ.ಮೋಹನ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯೋಜನೆಗೆ ಆಗಸ್ಟ್‌ನಲ್ಲಿ ಒಪ್ಪಿಗೆ ನೀಡಿದ ಬಳಿಕಷ್ಟೇ ಉಪನಗರ ರೈಲು ಯೋಜನೆ ಈ ಹಂತಕ್ಕೆ ಬರಲು ಕಾಣವಾಯಿತು. ಹಿಂದಿನ ಸರ್ಕಾರಗಳಲ್ಲಿ ಸಂಧಾನ ಕುರಿತು ಚರ್ಚೆ ನಡೆಯುತ್ತಿತ್ತೇ ಹೊರತು ಅಂತಿಮ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಯೋಜನೆಯನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವುದರಿಂದ ಸಾಂಸ್ಥಿಕ ಸಾಲ ಪಡೆಯಲು ಹೆಚ್ಚಿನ ಶಕ್ತಿ ಬರಲಿದೆ ಎಂದು ಹೇಳಿದರು. ಸಚಿವ ಆರ್.ಅಶೋಕ್, ಮಾಜಿ ಸಚಿವ ಉಮೇಶ್ ಕತ್ತಿ, ಸಂಸದ ತೇಜಸ್ವಿ ಸೂರ್ಯ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಇತರರು ಉಪಸ್ಥಿತರಿದ್ದರು.
ಯೋಜನೆ ಇರುವುದೇ ಬಡವರಿಗೆ: ಉಪನಗರ ರೈಲಿನಲ್ಲಿ ಸಾಮಾನ್ಯ ಬೋಗಿ ಇರದೆ ಏಕಪ್ರಕಾರದ ಬೋಗಿ ಇರುವುದರಿಂದ ಬಡವರಿಗೆ ಅವಕಾಶವಿರುವುದೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಅಂಗಡಿ, ಉಪನಗರ ರೈಲು ಯೋಜನೆ ಇರುವುದೇ ಬಡವರಿಗೆ. ಪ್ರಧಾನಿಯವರು ಇರುವುದೇ ಬಡವರಿಗಾಗಿ. ದೇಶದ 70 ವರ್ಷದ ಇತಿಹಾಸದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರು ಬಡವರ ಪ್ರಧಾನಿಯಾಗಿದ್ದರೆ, ಸಣ್ಣ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಇಬ್ಬರೂ ಬಡವರ ಸಲುವಾಗಿಯೇ ಇದ್ದಾರೆ ಎಂದು ಹೇಳಿದರು.
ಬೈಯಪ್ಪನಹಳ್ಳಿ ಕೋಚ್ ಟರ್ಮಿನಲ್ ಸೇರಿದಂತೆ ಅಭಿವೃದ್ಧಿ ಕಾರ್ಯ ತ್ವರಿತವಾಗಿ ನಡೆದಿದ್ದು, ಮಾರ್ಚ್‌ನಲ್ಲಿ ಉದ್ಘಾಟಿಸಲು ಪ್ರಯತ್ನ ನಡೆದಿದೆ. ಉಪನಗರ ರೈಲು ಯೋಜನೆಗೆ ಹೆಸರಿಡುವ ಬಗ್ಗೆ ಇನ್ನೂ ಚಿಂತಿಸಿಲ್ಲ. ವೈಯಕ್ತಿಕ ಹೆಸರುಗಳ ನಾಮಕರಣಕ್ಕೆ ಕೇಂದ್ರ ನಾಯಕರು ನಿರ್ಬಂಧ ಹೇರಿದ್ದಾರೆ ಎಂದು ತಿಳಿಸಿದರು.
ಏರ್‌ಪೋರ್ಟ್‌ಗೆ ಉಪನಗರ ರೈಲು ಸಂಪರ್ಕಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಉಪನಗರ ರೈಲು ಯೋಜನೆ ಜಾರಿಗೆ ಆರು ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯಿದ್ದರೂ ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಆದ್ಯತೆ ಮೇರೆಗೆ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದೆ. ಯೋಜನೆಗೆ ಮಂಜೂರಾತಿ ದೊರೆತ ದಿನಾಂಕದಿಂದ ಆರು ವರ್ಷದೊಳಗೆ ಒಟ್ಟು 148 ಕಿ.ಮೀ. ಉದ್ದದ ಉಪನಗರ ರೈಲು ಮಾರ್ಗದ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ನು “ಕೆ-ರೈಡ್’ ಸಂಸ್ಥೆ ಹೊಂದಿದೆ. ಅದರಲ್ಲಿ ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗವನ್ನು ಮೂರು ವರ್ಷದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ. ಹಾಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರವಾಗಿದ್ದು, ಪ್ರಯಾಣಿಕರು ಸಕಾಲದಲ್ಲಿ ವಿಮಾನನಿಲ್ದಾಣ ತಲುಪಲು ಪರದಾಡಬೇಕಾದ ಸ್ಥಿತಿ ಇದೆ. ಹಾಗಾಗಿ ಆದ್ಯತೆ ಮೇರೆಗೆ ಈ ಮಾರ್ಗ ನಿರ್ಮಾಣಕ್ಕೆ ಒತ್ತು ನೀಡಲು ನಿರ್ಧರಿಸಿರುವುದರಿಂದ ಮೊದಲಿಗೆ ಈ ಮಾರ್ಗದ ಕಾಮಗಾರಿಯೇ ಪೂರ್ಣಗೊಂಡು ಉಪನಗರ ರೈಲು ಸಂಚಾರ ಶುರುವಾಗುವ ನಿರೀಕ್ಷೆ ಮೂಡಿದೆ.