Advertisement

ವಿಷಯಾಧಾರಿತ ಪ್ರಚಾರ ಗೌಣ, ವ್ಯಕ್ತಿಯೇ ಪ್ರಧಾನ

06:00 AM Oct 24, 2018 | |

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿಯು ಕೇಂದ್ರ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆ, ಕೊಡುಗೆ ವಿಚಾರಕ್ಕಿಂತ ಪ್ರಭಾವಿ ನಾಯಕರ ವ್ಯಕ್ತಿಗತ ನೆಲೆಗಟ್ಟನ್ನು ನೆಚ್ಚಿಕೊಂಡು ಎದುರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಅನಿರೀಕ್ಷಿತವಾಗಿ ಘೋಷಣೆಯಾದ
ಲೋಕಸಭಾ ಉಪಚುನಾವಣೆ ಬಗ್ಗೆ ಬಿಜೆಪಿಯಲ್ಲೂ ಹಲವರು ಅಸಮಾಧಾನ ತೋರಿದ್ದು ಕಂಡು ಬಂತು. ಹಾಗಿದ್ದರೂ ಅವರಿಂದಲೇ ತೆರವಾದ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ನಾಯಕರು ಕಾರ್ಯತಂತ್ರ ರೂಪಿಸಿದ್ದು, ಅದರಂತೆ ಪ್ರಚಾರವೂ
ಬಿರುಸಾಗಿಯೇ ನಡೆದಿದೆ.

Advertisement

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಐದಾರು ತಿಂಗಳಷ್ಟೇ ಬಾಕಿ ಇರುವಾಗ ನಡೆದಿರುವ ಉಪಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯಕ್ಕೆ ಕೇಂದ್ರದ ಕೊಡುಗೆಗಳನ್ನು ಜನರಿಗೆ ತಿಳಿಸುವ ಮೂಲಕ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸುವ ನಿರೀಕ್ಷೆ ಇತ್ತು. ಆದರೆ ಸ‌ದ್ಯ ಇದು ಉಪಚುನಾವಣೆಯ ಪ್ರಮುಖ “ಅಸ್ತ್ರ’ವಾಗಿಯೇ ಉಳಿದಂತೆ ಕಾಣುತ್ತಿಲ್ಲ.
ಉಪಚುನಾವಣೆ ನಡೆದಿರುವ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ, ಪ್ರಧಾನಿ ಮೋದಿಯವರ ಆಡಳಿತದ ಬಗ್ಗೆ ಬಿಜೆಪಿ ನಾಯಕರೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿಲ್ಲ. ರೈತರು, ಕಾರ್ಮಿಕರು, ಯುವಜನತೆ, ಹಿರಿಯ ನಾಗರಿಕರು, ಮಹಿಳೆಯರು, ಗ್ರಾಮೀಣ ಜನರ ಅನುಕೂಲಕ್ಕಾಗಿ ಜಾರಿ ಗೊಳಿಸಿದ ಯೋಜನೆಗಳು, ಕಲ್ಯಾಣ ಕಾರ್ಯ ಕ್ರಮಗಳು, ದೇಶದ ಅಭಿವೃದ್ಧಿ ಹಾಗೂ ರಾಜ್ಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಕುರಿತು ನಾಯಕರು ಉಲ್ಲೇಖೀಸುತ್ತಿರುವುದು ಬಹಳ ಕಡಿಮೆ. 

ಕಾಂಗ್ರೆಸ್‌ -ಜೆಡಿಎಸ್‌ ಪಕ್ಷ ತಮ್ಮ ವೈಯಕ್ತಿಕ ಕೊಡುಗೆ ಬಗ್ಗೆ ಪ್ರಸ್ತಾಪಿಸಿದರೆ ಮೈತ್ರಿ ಪಕ್ಷದ ಮತ್ತೂಂದು ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆ ಇರುತ್ತದೆ. ಆದರೆ ಬಿಜೆಪಿಗೆ ಆ ಸಮಸ್ಯೆ ಇಲ್ಲ. ಕೇಂದ್ರ ಸರ್ಕಾರದ ಕೊಡುಗೆಗಳನ್ನು ಜನರಿಗೆ ತಿಳಿಸಿ ಸೆಳೆಯಲು ಹೆಚ್ಚಿನ ಅವಕಾಶವಿದ್ದಂತಿದೆ. ಆದರೆ, ಈ ವಿಚಾರಗಳು ಪ್ರಚಾರ ಹಾಗೂ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಮುಂಚೂಣಿಯಲ್ಲೇ ಇಲ್ಲ. ಹಾಗಾಗಿ ನಾಯಕರು ಪೈಪೋಟಿಗೆ ಬಿದ್ದವರಂತೆ ಆರೋಪ- ಪ್ರತ್ಯಾರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. 

ಪುತ್ರನನ್ನು ಕಣಕ್ಕಿಳಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಗೆಲ್ಲಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸಹೋದರಿ ಜೆ.ಶಾಂತಾ ಅವರ ಗೆಲುವಿಗೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಇಲ್ಲೆಲ್ಲವೂ ಕೇಂದ್ರದ ಸಾಧನೆಗಿಂತ ವ್ಯಕ್ತಿಗತ ಆರೋಪಗಳೇ
ಮುಖ್ಯವಾಗಿವೆ. 

ಗುಪ್ತಗಾಮಿನಿಯಂತೆ ಪ್ರಚಾರ: ಸಂಘ ಪರಿವಾರದ ವರು ಅಬ್ಬರದ ಪ್ರಚಾರದ ಮೊರೆ ಹೋಗದೆ ಕೇಂದ್ರದ ಬಿಜೆಪಿ ಸರ್ಕಾರದ ಕೊಡುಗೆ, ಪ್ರಧಾನಿಯವರ ಕಾರ್ಯವೈಖರಿ ಬಗ್ಗೆ ಜಾಗೃತಿ ಮೂಡಿಸುತ್ತಾ ಮತ ದಾರರನ್ನು ಸೆಳೆಯುವ ಕಾರ್ಯ ವನ್ನು ಸದ್ದಿಲ್ಲದೆ ನಡೆ
ಸುತ್ತಿದ್ದಾರೆ. ನೇರವಾಗಿ ಮತ ದಾರರೊಂದಿಗೆ ಸಂಪರ್ಕ ಸಾಧಿಸಿ ಪಕ್ಷವನ್ನು ಬೆಂಬಲಿ ಸುವಂತೆ ಪ್ರಚಾರ ನಡೆಸುತ್ತಾ ಗುಪ್ತಗಾಮಿನಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಕಾಣುತ್ತಿದೆ.ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ಇದಕ್ಕೆ ಹೊರತಾ ಗಿಲ್ಲ. ಹಿಂದಿನ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಹಾಗೂ 150 ದಿನ ಪೂರೈಸಿರುವ ಮೈತ್ರಿ ಸರ್ಕಾರದ ಕೊಡುಗೆಯನ್ನು ಉಭಯ ಪಕ್ಷಗಳ ನಾಯಕರು ಹೆಚ್ಚಾಗಿ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ ಸ್ಥಳೀಯತೆ, ಜಾತಿ ವಾರು ಸಮುದಾಯಗಳಿಗೆ ನೀಡಿದ ಸೌಲಭ್ಯ, ವೈಯಕ್ತಿಕ ವರ್ಚಸ್ಸು, ಪ್ರಭಾವಳಿಯನ್ನೇ ಕೇಂದ್ರವಾಗಿರಿಸಿಕೊಂಡು ಪ್ರಚಾರ ನಡೆಸುತ್ತಿರುವುದು ಈವರೆಗೆ ಕಂಡು ಬಂದಿದೆ.

Advertisement

ಪ್ರಚಾರ ವಿಧಾನಕ್ಕಿಂತ ಗೆಲುವು ಮುಖ್ಯ
ಉಪಚುನಾವಣೆಗೆ ರಾಜಕಾರಣಿಗಳಿಗಷ್ಟೇ ಅಲ್ಲ ಜನರಿಗೂ ಹೆಚ್ಚಿನ ಆಸಕ್ತಿ ಇದ್ದಂತಿಲ್ಲ. ಹಾಗಿದ್ದರೂ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ  ಕೊಡುಗೆಗಳನ್ನು ಜನರಿಗೆ ತಿಳಿಸುವುದರ ಜತೆಗೆ ಅಭ್ಯರ್ಥಿಗಳು, ನಾಯಕರ ವರ್ಚಸ್ಸು, ಪ್ರಭಾವಳಿಯೂ ಮುಖ್ಯವೆನಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಕಾರ್ಯತಂತ್ರ ಹೆಣೆದು ಕಾರ್ಯಪ್ರವೃತ್ತವಾಗುತ್ತಿದ್ದೇವೆ. ಪ್ರಚಾರ ವಿಚಾರ,
ವಿಧಾನ ಏನೇ ಇದ್ದರೂ ಗೆಲ್ಲುವುದು ಮುಖ್ಯವೆನಿಸಿದ್ದು, ಅದರಂತೆ ಪ್ರಯತ್ನ ನಡೆಸಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next