ನಗರ: ಚಿಕ್ಕ ಮಕ್ಕಳ ಪುಸ್ತಕದ ಹೊರೆಯನ್ನು ಕಡಿಮೆಗೊಳಿಸಬೇಕೆಂಬ ಒತ್ತಡದ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಸರಕಾರದ ಕಡೆಯಿಂದಲೂ ಇದಕ್ಕೆ ಒಂದಷ್ಟು ಪೂರಕ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.
ಈ ಮಧ್ಯೆ ವಿದ್ಯಾರ್ಥಿಯೋರ್ವ ಬ್ಯಾಗ್ ಹಾಗೂ ಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವ ಉಪಕ್ರಮಗಳನ್ನು ತಾನೇ ಕಂಡುಕೊಂಡು ಅದನ್ನು ಸ್ವತಃ ಕಾರ್ಯರೂಪದ ಅನುಸರಣೆಗೂ ತಂದಿದ್ದಾನೆ. ಜತೆಗೆ ಈತ ಕಂಡುಕೊಂಡ ಉಪಕ್ರಮದ ಕುರಿತ ಸಿ.ಡಿ.ಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಕಳುಹಿಸಿಕೊಟ್ಟಿದ್ದಾನೆ.
ವಿವೇಕಾನಂದ ಆಂ.ಮಾ. ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ವಿದ್ಯಾರ್ಥಿ ಸಮಂತನಿಗೆ ಮನೆ ಉರಿಮಜಲು ಮುದಲೆಗುಂಡಿಯಿಂದ 1 ಕಿ.ಮೀ. ನಡೆದುಕೊಂಡು ಬಂದು ಅನಂತರ ಶಾಲಾ ವಾಹನವನ್ನು ಆಶ್ರಯಿಸಬೇಕಾಗಿತ್ತು. ಪುಸ್ತಕಗಳು ತುಂಬಿದ ಭಾರದ ಬ್ಯಾಗ್ ಅನ್ನು ಹೊತ್ತುಕೊಂಡು ಬರುವುದೇ ತ್ರಾಸದಾಯಕವಾಗುತ್ತಿರುವುದನ್ನು ಮನಗಂಡ ಈತ ಅಂದಿನ ಬೋಧನೆಗೆ ಬೇಕಾದ ಪಠ್ಯಗಳನ್ನು ಮಾತ್ರ ಕೊಂಡೊಯ್ಯುವ ಉದ್ದೇಶದಿಂದ ಅಗತ್ಯವಿರುವ ಪಠ್ಯ, ನೋಟ್ಸ್ ಅನ್ನು ಹರಿದು ಶಾಲೆಗೆ ಕೊಂಡೊಯ್ಯುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಾನೆ. ಇದು ಸರಿಯಾದ ಕ್ರಮವಲ್ಲ ಎಂದು ಅಜ್ಜ ಬಿ.ಜಿ. ನೂಜಿ ಹೇಳುತ್ತಾರೆ ಮತ್ತು ಅಜ್ಜ-ಮೊಮ್ಮಗ ಸೇರಿ ಉಪಕ್ರಮದ ದಾರಿ ಹುಡುಕಿಕೊಳ್ಳುತ್ತಾರೆ.
ಪ್ರಸ್ತುತ ವಿದ್ಯಾರ್ಥಿ ಸಮಂತ ಮುದಲೆ ಗುಂಡಿ ವಿವೇಕಾನಂದ ಆಂ.ಮಾ. ಶಾಲೆಯಲ್ಲಿ 7ನೇ ತರಗತಿ ಮುಗಿಸಿ 8ನೇ ತರಗತಿಗೆ ಅಳಿಕೆ ವಿದ್ಯಾಸಂಸ್ಥೆಗೆ ಸೇರಿಕೊಂಡಿದ್ದಾನೆ. ವಿವೇಕಾನಂದದಲ್ಲಿ ಕಲಿಕೆಯ ಒಂದು ವರ್ಷ ಅವಧಿಯಲ್ಲಿ ಈ ಉಪಕ್ರಮವನ್ನು ಅಳವಡಿಸಿ ಕೊಂಡು ವಿದ್ಯಾಭ್ಯಾಸ ಮಾಡಿದ್ದಾನೆ.
ಮಕ್ಕಳ ಬ್ಯಾಗ್ ಹಾಗೂ ಪಠ್ಯದ ಹೊರೆ ಯನ್ನು ಉಳಿಸಬೇಕೆಂಬ ಒತ್ತಡ ವಿದ್ದರೂ ಸರಕಾರದ ಮಟ್ಟದಲ್ಲಿ ಸಮರ್ಪಕ ಪೂರಕ ಕ್ರಮಗಳು ಆಗಿಲ್ಲ. ಇವು ಮಕ್ಕಳ ದೈಹಿಕ ಆರೋಗ್ಯಕ್ಕೂ ತೊಂದರೆಯುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಮೊಮ್ಮಗನ ಒತ್ತಾಸೆಗೆ ಬೆಂಬಲವಾಗಿ ನಿಂತು ಉಪಕ್ರಮ ವನ್ನು ಅಳವಡಿಸಿದ್ದೇವೆ. ಸರಕಾರದ ಕಡೆಯಿಂದಲೂ ಉಪ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಧಾನಿಯವರಿಗೂ ಉಪಕ್ರಮದ ಸಿಡಿಯನ್ನು ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ ಅಜ್ಜ ಜಿ.ಬಿ. ನೂಜಿ ಅವರು.
ಅನುಶೋಧನೆ ಹೀಗೆ
•ಶಾಲೆಯಲ್ಲಿ ಸಿದ್ಧಪಡಿಸಿದ ಟೈಮ್ ಟೇಬಲ್ (ಪಾಠದ ಕ್ರಮ ಪಟ್ಟಿ) ಅನ್ನು ಗಮನಿಸುವುದು
•ಪಾಠ ಪುಸ್ತಕಗಳನ್ನು ಹೊಲಿಯುವ ಬದಲು ಪಂಚ್ ಮಾಡಿ ಪಟ್ಟಿ ನೂಲು (ಟ್ಯಾಗ್) ಹಾಕುವುದು. •ನೋಟ್ ಮತ್ತು ರಫ್ ವರ್ಕಿಂಗ್ ಪುಸ್ತಕಗಳನ್ನು ಹೊಲಿಯುವ ಬದಲು ಪಂಚ್ ಮಾಡಿ ಟ್ಯಾಗ್ ಹಾಕಿಡುವುದು.
•ಮುನ್ನಾ ದಿನ, ಆ ದಿನ, ಮರುದಿನದ ಟೈಮ್ ಟೇಬಲ್ನಂತೆ ಪಾಠಗಳನ್ನು ಟ್ಯಾಗ್ ಹಾಕಿ ಪೈಲ್ ಮಾಡುವುದು.
•ಮೇಲಿನಂತೆ 3 ದಿನದ ಪರಿಶ್ರಮದ ಹಾಳೆಗಳನ್ನೂ ಟ್ಯಾಗ್ ಹಾಕಿ ಫೈಲ್ ಮಾಡುವುದು.
•ಶಾಲೆಗೆ ಒಯ್ಯುವಾಗ ಪಠ್ಯ ಮತ್ತು ಪರಿಶ್ರಮದ ಕ್ರಮ ಸಂಖ್ಯೆ 4 ಮತ್ತು 5ರಲ್ಲಿ ತಿಳಿಸಿದಂತೆ ಅಂದಾಜು 40 ಹಾಳೆಗಳ 2 ಫೈಲ್ಗಳು ಮಾತ್ರ.
ಗುಣಾಂಕ
• ಪುಸ್ತಕಗಳ ಭಾರ ಶೇ. 70 ರಿಂದ 80 (ಶತಾಂಶ) ಇಳಿಕೆ.
• ಹೊಲಿಗೆ ಬುಕ್ ಬೈಂಡಿಂಗ್ ಬೇಕಾಗಿಲ್ಲ.
• ವಿಧಾನ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೂ ಹೊಂದಿಕೊಳ್ಳುತ್ತದೆ.