ಮೈಸೂರು: ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ತಯಾರು ಮಾಡುವ ಮೂಲಕ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ದೆಹಲಿಯ ನಿರ್ಮಾಣ ಉದ್ಯಮ ಅಭಿವೃದ್ಧಿ ಮಂಡಳಿ ಪ್ರಧಾನ ನಿರ್ದೇಶಕ ಡಾ.ಪಿ.ಆರ್.ಸ್ವರೂಪ್ ಅಭಿಪ್ರಾಯಪಟ್ಟರು.
ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ವತಿಯಿಂದ ನಗರದ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಆಯೋಜಿಸಿರುವ ಮೂರು ದಿನಗಳ ಬಿಲ್ಡ್‌ಟೆಕ್-2017 ತಾಂತ್ರಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಬಹುತೇಕ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರುವ ಪರಿಣಾಮ ಸೂಕ್ತ ಅರ್ಹತೆ ಹಾಗೂ ತಂತ್ರಜ್ಞಾನದ ಕೊರತೆಯಿಂದ ಉದ್ಯೋಗ ಪಡೆಯುವಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಮೂಲಕ ದೇಶದ ಯುವಶಕ್ತಿಯನ್ನು ತಯಾರು ಮಾಡಬೇಕಿದೆ. ಕಾಲೇಜು ಹಂತದಲ್ಲೇ ಶಿಕ್ಷಕರು ಸೂಕ್ತ ಮಾರ್ಗದರ್ಶನ ಹಾಗೂ ಪ್ರಸ್ತುತ ಅಗತ್ಯವಿರುವ ತಂತ್ರಜ್ಞಾನದ ಬಗ್ಗೆ ಅರಿವು ನೀಡುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಚ್.ಎನ್.ವಿಜಯರಾಘವರೆಡ್ಡಿ, ಹಳೆ ತಂತ್ರಜ್ಞಾನವನ್ನೇ ಬಳಸಿ ಕಟ್ಟಡ ನಿರ್ಮಿಸುವ ಬದಲು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಟ್ಟಡಗಳ ನಿರ್ಮಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಇದರಿಂದ ದೇಶದ ಅಭಿವೃದ್ಧಿಗೂ ಹೆಚ್ಚಿನ ವೇಗ ದೊರೆಯಲಿದೆ ಎಂದರು.
ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜಾಧ್ಯಕ್ಷ ಎಸ್.ಆರ್.ಸ್ವಾಮಿ, ಪ್ರಮುಖರಾದ ಎಸ್.ಮಹದೇಸ್ವಾಮಿ, ಎಂ.ರತ್ನರಾಜ್, ಎ.ಎಸ್.ಯೋಗನರಸಿಂಹ, ಕೆ.ಯು.ಗಣಪತಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಎಂಜಿನಿಯರುಗಳು, ಆರ್ಕಿಟೆಕ್ಟ್ಗಳು ಭಾಗವಹಿಸಿದ್ದರು.