Advertisement

ಆರನೇ ದಿನವೂ ರಾಜ್ಯದಲ್ಲಿ ಮುಂದುವರಿದ ಮುಷ್ಕರ

03:45 AM Apr 05, 2017 | Harsha Rao |

ಬೆಂಗಳೂರು: ಸರಕು ಸಾಗಣೆ ವಾಹನದಾರರ ಮುಷ್ಕರ ಬುಧವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಸರಕು ಮತ್ತು ಸೇವೆಗಳ
ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಾರಂಭಿಸಿದೆ. ಆ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರವೂ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ.

Advertisement

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಮಂಗಳವಾರ ತುರ್ತು ಸಭೆ ನಡೆಸಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದ್ದಾರೆ. ಹಾಗೆಯೇ ಎಲ್ಲ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದು, ಪರ್ಯಾಯ ಮಾರ್ಗೋಪಾಯದ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಅಗತ್ಯಬಿದ್ದರೆ ಸರ್ಕಾರಿ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತರಕಾರಿ, ಆಹಾರ ಧಾನ್ಯ ಸಾಗಣೆಗೆ ಬಳಸಿಕೊಳ್ಳಲು ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸುವಂತೆ ಸೂಚಿಸಿದ್ದಾರೆ.
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಮಂಡಳಿ (ಐಆರ್‌ಡಿಎ) ಸೋಮವಾರ ನಡೆಸಿದ ಸಭೆ ವಿಫ‌ಲವಾದ ಹಿನ್ನೆಲೆಯಲ್ಲಿ
ದಕ್ಷಿಣ ವಲಯ ಮೋಟಾರು ಸಾಗಣೆದಾರರ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ಹಾಗೂ ಅಖೀಲ ಭಾರತ ಸರಕು ಸಾಗಣೆ ವಾಹನ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಸೇರಿ ಇತರೆ ಪ್ರಮುಖರೊಂದಿಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಸಭೆ ನಡೆಸಿದರು.

ಹಾಲು, ಹಣ್ಣು, ತರಕಾರಿ, ಔಷಧ, ಆಹಾರ ಧಾನ್ಯ, ಬೇಳೆಕಾಳು, ಪೆಟ್ರೋಲಿಯಂ ಉತ್ಪನ್ನ, ಅಡುಗೆ ಅನಿಲ ಸೇರಿ ಇತರೆ
ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಪಡಿಸದಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಸಾಗಣೆದಾರರ ಸಂಘದ ಪ್ರತಿನಿಧಿಗಳು ಇವುಗಳಿಗೆ ವಿನಾಯಿತಿ ನೀಡಿರುವುದಾಗಿ ಹೇಳಿದರು. ಆದರೆ ಸಾಗಣೆದಾರರೇ ಸ್ವಯಂ ಪ್ರೇರಿತವಾಗಿ ಮುಷ್ಕರಕ್ಕಿಳಿದರೆ ನಿಯಂತ್ರಿಸುವುದು ಕಷ್ಟ ಎಂಬುದಾಗಿ ತಿಳಿಸಿದ್ದಾರೆ. ಹಾಗಾಗಿ ಅಗತ್ಯ ವಸ್ತು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಸಹಕರಿಸುವಂತೆ ಕೋರಲಾಗಿದೆ ಎಂದು ಬಸವರಾಜು “ಉದಯವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸೋಮವಾರ ಚರ್ಚಿಸಲಾಗಿದ್ದು, ಅವರ ಸೂಚನೆಯಂತೆ
ಮಂಗಳವಾರ ತೋಟಗಾರಿಕೆ ಇಲಾಖೆ, ಹಾಪ್‌ಕಾಮ್ಸ್‌, ಎಪಿಎಂಸಿ ಸೇರಿ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ತುರ್ತು ಪರಿಹಾರ ಕಾರ್ಯಗಳಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶೀಥಲಗೃಹದಲ್ಲಿನ ವಸ್ತುಗಳ ಸಾಗಣೆಗೆ ವಾಹನಗಳ ಅಗತ್ಯವಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂತು. ತಕ್ಷಣವೇ
ಸರ್ಕಾರದ ವತಿಯಿಂದ 25 ಟ್ರಕ್‌ಗಳನ್ನು ಒದಗಿಸಲು ಕ್ರಮ ವಹಿಸಲಾಯಿತು. ಇದೇರೀತಿ ರಾಜ್ಯಾದ್ಯಂತ ಅಗತ್ಯವಿರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ಪರಿಸ್ಥಿತಿ ಬಿಗಡಾಯಿಸುವ ಭೀತಿ: ಈ ಮಧ್ಯೆ ಮುಷ್ಕರದ ಹೊರತಾಗಿಯೂ ಹಾಲು, ತರಕಾರಿ ಸೇರಿ ಇತರೆ ಅಗತ್ಯ
ವಸ್ತುಗಳ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬಂದಿಲ್ಲ. ಆದರೆ ಬೇಳೆಕಾಳು, ಆಹಾರಧಾನ್ಯಗಳ ಪೂರೈಕೆ ಸಂಪೂರ್ಣ ಸ್ಥಗಿತವಾಗಿರುವುದರಿಂದ ದಾಸ್ತಾನು ಖಾಲಿಯಾದ ಬಳಿಕ ಅಭಾವ ಕಾಣಿಸಿಕೊಂಡು ಪರಿಸ್ಥಿತಿ ಬಿಗಡಾಯಿಸುವ ಭೀತಿ ಮೂಡಿದೆ.ಇನ್ನೊಂದೆಡೆ, ಪೆಟ್ರೋಲಿಯಂ ಡೀಲರ್‌ಗಳು ಹಾಗೂ ಅಡುಗೆ ಅನಿಲ ಸಿಲಿಂಡರ್‌ ವಿತರಕರು ಮುಷ್ಕರದಿಂದ ದೂರ ಉಳಿದಿದ್ದು, ಸದ್ಯಕ್ಕೆ ರಾಜ್ಯಾದ್ಯಂತ ಸೇವೆ ಮುಂದುವರಿಸಿದ್ದಾರೆ. ಸೋಮವಾರದಿಂದ ಎಪಿಎಂಸಿ ಮಾರುಕಟ್ಟೆಗೆ ಯಾವುದೇ ಬೇಳೆಕಾಳು, ಆಹಾರ ಧಾನ್ಯ ದಾಸ್ತಾನು ಪೂರೈಕೆಯಾಗಿಲ್ಲ. ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆ, ಕಲಾಸಿಪಾಳ್ಯ, ಬಿನ್ನಿಮಿಲ್‌ ಮಂಡಿ ಹಾಗೂ ಹೊಸೂರು ಮಾರುಕಟ್ಟೆಗೆ ತರಕಾರಿ, ಹಣ್ಣು ಪೂರೈಕೆಯಲ್ಲಿ ತುಸು ವ್ಯತ್ಯಯ ಕಾಣಿಸಿಕೊಳ್ಳಲಾರಂಭಿಸಿದೆ.

Advertisement

ಸ್ಪಂದಿಸದ ರಾಜ್ಯ ಸರ್ಕಾರ: ಆರೋಪ
ಬೆಂಗಳೂರು: ದೇಶಾದ್ಯಂತ ತೀವ್ರ ಸ್ವರೂಪ ಪಡೆಯುತ್ತಿರುವ ಲಾರಿ ಮುಷ್ಕರದ ಬಿಸಿ ದಿನಕಳೆದಂತೆ ರಾಜ್ಯವನ್ನು ತೀವ್ರವಾಗಿ ಕಾಡಲಾರಂಭಿಸಿದರೂ ಉಪ ಚುನಾವಣೆ ಗುಂಗಿನಲ್ಲಿರುವ ರಾಜ್ಯ ಸರ್ಕಾರ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಸಾಮಾನ್ಯವಾಗಿ ಲಾರಿ ಮುಷ್ಕರ ನಡೆದಾಗ ಅಗತ್ಯ ವಸ್ತುಗಳ ಪೂರೈಕೆಗೆ
ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿತ್ತು. ಆದರೆ, ಈ ಬಾರಿ ಮಾತ್ರ ಸಿಎಂ ಸೇರಿ ಸಚಿವ ಸಂಪುಟದ ಬಹುತೇಕ ಸದಸ್ಯರು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳು ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಲಾರಿ ಮಾಲೀಕರ ಸಂಘಟನೆಗಳೂ ಬೇಸರ ವ್ಯಕ್ತಪಡಿಸಿವೆ. ಮುಷ್ಕರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕನಿಷ್ಠ ಸೌಜನ್ಯವನ್ನೂ ತೋರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next