Advertisement
ಆತ ನಮ್ಮ ಆಪರೇಶನ್ ಟೇಬಲ್ ಮೇಲೆ ಮಲಗಿದ್ದ. ಕಾಂತಿಯಿಲ್ಲದ ಕಣ್ಣು, ಬಿಳಚಿದ ಮುಖ. ಯಾವಾಗಲೂ ಟ್ರಿಮ್ ಆಗಿ ಇರುತ್ತಿದ್ದ, ಈಗ ಎತ್ತೆತ್ತಲೋ ಬೆಳೆದ ಗಡ್ಡ. ಎತ್ತಲೋ ದಿಟ್ಟಿಸುವ ನೋಟ. ಬದುಕಲ್ಲಿ ಆಸಕ್ತಿ ಇಲ್ಲದ ಭಾವ. ಸದಾಕಾಲ ಚೈತನ್ಯದ ಚಿಲುಮೆ ಆಗಿದ್ದ ಆತ ಇಂದು ನಿಶ್ಶಕ್ತನಾಗಿದ್ದ. ಆಪರೇಶನ್ ಥಿಯೇಟರ್‌ನ ಸೀಲಿಂಗ್‌ಗೆ ಜೋತುಬಿಟ್ಟ ಪ್ರಖರ ದೀಪವನ್ನೇ ನೋಡುತ್ತಾ ಮಲಗಿದ್ದ. ಅವನ ಎರಡೂ ಕಾಲುಗಳಲ್ಲಿ ಬಾವು. ಬಲಗಾಲಿನ ಕಿರುಬೆರಳು, ಅದರ ಬದಿಯ ಬೆರಳು ಕಪ್ಪಾಗಿದ್ದವು. ಪಾದ ಮುಟ್ಟಿದರೆ ತಣ್ಣಗಿನ ಅನುಭವ. ನಾಡಿ ಬಡಿತ ಕ್ಷೀಣ. ಅವೆರಡೂ ಬೆರಳುಗಳು ಕೊಳೆತು ಗ್ಯಾಂಗ್ರೀನ್ ಆಗಿದೆಯೆಂದು ಗೊತ್ತಾಗುತ್ತಿತ್ತು. ಅವುಗಳನ್ನು ಕತ್ತರಿಸಿ ತೆಗೆಯದೆ ಬೇರೆ ಉಪಾಯವಿಲ್ಲ.
Related Articles
Advertisement
ಮಧುಮೇಹವೇ ಹಾಗೆ. ಒಂದು ರೀತಿ ನೋಡಿದರೆ ಅದು ರೋಗವಲ್ಲದ ರೋಗ. ಯಾವುದೇ ಬಾಹ್ಯ ರೋಗಕಾರಕಗಳಿಲ್ಲದೆ ಆಂತರ್ಯದ ಅವ್ಯವಸ್ಥೆಯಿಂದಾಗಿ ಕಾಡುವ ರೋಗ. ಅದೊಂದು “ಮೌನ ಕೊಲೆಗಾರ’. ಲಕ್ಷಿಸಿದರೆ ಸೌಮ್ಯ, ನಿರ್ಲಕ್ಷಿಸಿದರೆ ಮಹಾಕ್ರೂರಿ. ಮೇದೋಜೀರಕ ಗ್ರಂಥಿಯ ಬಾಲದಲ್ಲಿನ ಲ್ಯಾಂಗರ್ ಹ್ಯಾನ್ಸ್ನ ದ್ವೀಪಗಳೆಂದು ಕರೆಯಲ್ಪಡುವ ಅಂಗಾಂಶಗಳಲ್ಲಿ ತಯಾರಾಗುವ ಇನ್ಸುಲಿನ್ ಎಂಬ ಅಂತರ್‌ಸ್ರವಿಕೆ ಇಡೀ ಶರೀರದಲ್ಲಿನ ಜೀವ ಕೋಶಗಳ ಚಯಾಪಚಯ ಕ್ರಿಯೆಗೆ ಅತ್ಯವಶ್ಯ. ಮನುಷ್ಯನ ಶರೀರದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾದಾಗ ಮಧುಮೇಹ ಬರುತ್ತದೆ. ಡಯಾಬಿಟಿಸ್ ರೋಗಿಗಳ ರಕ್ತದಲ್ಲಿ ಸಾಕಷ್ಟು ಸಕ್ಕರೆಯ ಪ್ರಮಾಣವೇನೋ ಇರುತ್ತದೆ, ಆದರೆ ಅದು ಜೀವಕೋಶಗಳ ಬಳಕೆಗೆ ಲಭ್ಯವಾಗುವುದಿಲ್ಲ. ಸುತ್ತಲೂ ಸಂಪತ್ತು, ಆದರೆ ಬಳಕೆಗೆ ದೊರಕದ ಸ್ಥಿತಿ. ಜೀವಕೋಶಗಳು ಗ್ಲುಕೋಸ್ ದೊರಕದೆ ಸೊರಗುತ್ತವೆ, ಕಾರ್ಯಕ್ಷಮತೆ ಕುಂದುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶ ತೀರ ಹೆಚ್ಚಾದಾಗ ಮೂತ್ರಪಿಂಡಗಳು ಅದನ್ನು ಸೋಸಿ ಮೂತ್ರದ ಮುಖಾಂತರ ಹೊರಹಾಕತೊಡಗುತ್ತವೆ. ತಿಂದ¨ªೆಲ್ಲ ಹೊರಹೋಗ ತೊಡಗಿ ಮನುಷ್ಯ ಸೊರಗುತ್ತಾನೆ. ಮುಖದ ಕಳೆ ಕಡಿಮೆಯಾಗುತ್ತದೆ. “ನೀರಡಿಕೆ’, “ಹಸಿವು’, “ಹೆಚ್ಚು ಮೂತ್ರವಿಸರ್ಜನೆ’ ಎಂಬ ತ್ರಿವಳಿ ಲಕ್ಷಣಗಳು ಮಧುಮೇಹದ ಮೊದಲ ಚಿಹ್ನೆಗಳು.
ಮೆದುಳು ಮತ್ತು ಯಕೃತ್ತನ್ನು ಹೊರತುಪಡಿಸಿ ದೇಹದ ಇನ್ನುಳಿದ ಪ್ರತಿಯೊಂದು ಅಂಗಾಂಗಗಳ ಜೀವಕೋಶವೂ ರಕ್ತದಲ್ಲಿರುವ ಗುÉಕೋಸನ್ನು ಬಳಸಿಕೊಳ್ಳಬೇಕಾದರೆ ಇನ್ಸುಲಿನ್ ಅತ್ಯವಶ್ಯ. ಹೀಗಾಗಿ ಮೆದುಳು ಹಾಗೂ ಯಕೃತ್ತನ್ನು ಬಿಟ್ಟು ಉಳಿದೆಲ್ಲ ಅಂಗಗಳೂ ಮಧುಮೇಹದ ದುಷ್ಪರಿಣಾಮಕ್ಕೆ ಈಡಾಗುತ್ತವೆ. ಸಣ್ಣ ರಕ್ತನಾಳಗಳು, ನರಗಳು, ಕಣ್ಣು, ಮೂತ್ರಪಿಂಡಗಳು ಮಧುಮೇಹ ದಿಂದ ಜರ್ಜರಿತವಾಗುತ್ತವೆ. ಹೀಗಾಗಿ ಕಾಲುಗಳ ಬೆರಳುಗಳು ಕೊಳೆಯುವುದು, ಜುಮ್ ಎನ್ನುವುದು, ಸ್ಪರ್ಶಜ್ಞಾನವಿಲ್ಲದಂತಾ ಗುವುದು, ಮೂತ್ರಪಿಂಡಗಳು ವಿಫಲಗೊಳ್ಳುವುದು, ಕಣ್ಣಿನ ಕ್ಷಮತೆ ಕಡಿಮೆಯಾಗುವುದು ಸಾಮಾನ್ಯ. ಹಿಂದಿನ ದಿನಗಳಲ್ಲಿ ಶ್ರಮಜೀವಿ ಗಳಾಗಿದ್ದ ಭಾರತೀಯರಲ್ಲಿ ಮಧುಮೇಹದ ಪ್ರಮಾಣ ಕಡಿಮೆ ಯಿತ್ತು. ಪಾಶ್ಚಿಮಾತ್ಯರ ಅನುಕರಣೆ ಮಾಡುತ್ತ, “ಜಂಕ್ ಫುಡ್’ಗಳನ್ನು ಫ್ಯಾಶನ್ ಎಂದು ಬಗೆಯುತ್ತ, ಕಡಿಮೆ ಸಮಯದಲ್ಲಿ ಹೆಚ್ಚು ಸಾಧಿಸುವ ಹುಂಬತನವನ್ನು ಮೈಮೇಲೆಳೆದುಕೊಂಡು ಹೆಚ್ಚು ಸಂಪತ್ತು ಗಳಿಸುವ ಹಂಬಲದಿಂದ ಆಫೀಸಿನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ನಮ್ಮ ಯುವಜನ ಮಧುಮೇಹವನ್ನು ಆಹ್ವಾನಿಸುತ್ತಿ¨ªಾರೆ.
25 ವರ್ಷದೊಳಗಿನ ಪ್ರತಿ ನಾಲ್ಕು ಯುವಕರಲ್ಲಿ ಒಬ್ಬನಿಗೆ ಮಧುಮೇಹವಿದೆ. ಕಡಿಮೆ ಕೆಲಸ ಹೆಚ್ಚು ತಿನ್ನುವುದು, ಅದಕ್ಕೆ ಕಾರಣಗಳÇÉೊಂದು. ಜೊತೆಗೆ, ಬಿಳಿಯಾಗಿದ್ದದ್ದೇ ಚೆಂದ ಎಂದು ಅಕ್ಕಿಯನ್ನೆಲ್ಲ ಪಾಲಿಶ್ ಮಾಡಿ, ತಿಂದ ಮರುಕ್ಷಣವೆ ಅದು ಜೀರ್ಣ ಗೊಂಡು ರಕ್ತದ ಗುÉಕೋಸ್ ಪ್ರಮಾಣ ವನ್ನು ಭರ್ರನೆ ಏರಿಸುವ ಕ್ರಿಯೆಯೂ ಕಾರಣ. ಆನುವಂಶೀ ಯತೆಯನ್ನೂ ಅಲ್ಲಗಳೆಯ ಲಾಗದು. ಭಾರತ ಈಗ ಜಾಗತಿಕ ಮಧುಮೇಹದ ಹೆಚ್ಚಿನ ಭಾರ ಹೊರುತ್ತಿದೆ. 2017 ಸಮೀಕ್ಷೆಯಂತೆ ಭಾರತದಲ್ಲಿ 72 ಮಿಲಿಯನ್ ಮಧುಮೇಹಿಗಳು. ಇನ್ನೂ ಕಂಡುಹಿಡಿಯಲಾರದವರೆಷ್ಟೋ ಜನ. 2025ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ಶಂಕೆ. ಇಡೀ ಜಗತ್ತಿನ ಸುಮಾರು 50 ಪ್ರತಿಶತ ಮಧುಮೇಹಿಗಳು ಭಾರತದಲ್ಲಿದ್ದಾರೆಂದರೆ ಅದರ ಅಗಾಧತೆ ಅರ್ಥವಾಗುತ್ತದೆ. ಒಂದು ಲಕ್ಷ ಜನಸಂಖ್ಯೆಯಲ್ಲಿ 53 ಜನ ಮಧುಮೇಹ ದಿಂದ ಸಾಯುತ್ತಿದ್ದಾರೆ. ಅರಿವು, ಆಹಾರ, ಇರುವಿಕೆ, ಉಪಚಾರ ಇವು ಮಧುಮೇಹ ರೋಗದ ನಿಯಂತ್ರಣಕ್ಕೆ ಅವಶ್ಯಕ. ರೋಗದ ಕಾರಣ ಅರಿತರೆ ಅದನ್ನು ನಿಯಂತ್ರಣದಲ್ಲಿ ಡುವುದೂ ಸಾಧ್ಯವಾಗುತ್ತದೆ. ಕಾಲ ಕಾಲಕ್ಕೆ ರಕ್ತ ತಪಾಸಣೆ ಮಾಡುವುದರಿಂದ ಮಾತ್ರ ಅದರ ಇರುವಿಕೆಯನ್ನು ಅರಿಯಲು ಸಾಧ್ಯ. ಜೊತೆಗೇ ಆರೋಗ್ಯಪೂರ್ಣ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ನಿಯಮಿತ ಹಾಗೂ ನಿರಂತರ ವ್ಯಾಯಾಮ, ಒತ್ತಡರಹಿತ ಜೀವನ ಶೈಲಿ ಹಾಗೂ ಅವಶ್ಯಕ ಔಷಧೋಪಚಾರಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ. “ಒಮ್ಮೆ ಮಧುಮೇಹಿ ಯಾದರೆ ಜೀವನಪೂರ್ತಿ ಮಧುಮೇಹಿ’ ಎಂಬುದನ್ನು ನೆನಪಿಡ ಬೇಕು. ಅದನ್ನು ತಹಬದಿಗೆ ತಂದು ಆರೋಗ್ಯಪೂರ್ಣ ಜೀವನ ಸಾಗಿಸಬಹುದೇ ಹೊರತು ಪೂರ್ಣ ಗುಣಮುಖರಾಗುವುದು ಅಸಾಧ್ಯ. “ಪೂರ್ಣ ಗುಣಪಡಿಸುತ್ತೇವೆ’ ಎಂಬಂಥ ಯಾವ್ಯಾ ವುದೋ ಜಾಹೀರಾತಿಗೆ ಮರುಳಾಗಿ ರೋಗ ಉಲ್ಬಣಗೊಂಡ ವರೆಷ್ಟೋ ಮಂದಿ.
ಆತನ ಬೆರಳುಗಳನ್ನು ತೆಗೆದಾದ ಮೇಲೆ ಆತನಲ್ಲಿ ಧೈರ್ಯ ತುಂಬಲು ಪ್ರಯತ್ನಿಸಿದೆ. ಇನ್ನೂ ಕಾಲ ಮಿಂಚಿಲ್ಲ, ದೂರ ಗಗನದ ಅಂಚಲ್ಲಿ ಆಶಾಕಿರಣವಿದೆ, ಎಂದು. ಆತ ನಿರ್ಲಿಪ್ತ. ಸಾವನ್ನು ನಿರೀಕ್ಷಿಸು ತ್ತಿದ್ದಂತೆ ಸುಮ್ಮನಾಗಿಬಿಟ್ಟ. ಅದಾಗಲೇ ಅವನ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಗ್ಗಿಬಿಟ್ಟಿತ್ತು. ಅದಕ್ಕೆ ಮೂತ್ರ ಪಿಂಡ ಕಸಿಯೊಂದೇ ದಾರಿ. ಈಗಾಗಲೇ ಡಯಾಲಿಸಿಸ್ ಮೇಲಿದ್ದ ಆತನಿಗೆ ಮೂತ್ರಪಿಂಡ ಕಸಿ ಮಾಡುವ ಭರವಸೆ ನೀಡತೊಡಗಿದೆ. ಎಲ್ಲದಕ್ಕೂ ಮೌನವೇ ಉತ್ತರ. ಮುಂದೆ ಒಂದೇ ವಾರಕ್ಕೆ ನಾನು ಯೂರೋಪಿನ ಪ್ರವಾಸಕ್ಕೆ ತೆರಳಬೇಕಾದಾಗ ನನ್ನೆಡೆಗೆ ಆರ್ತನೋಟ ಬೀರಿದ್ದ. ನಾನೂ ಭಾರವಾದ ಮನಸ್ಸಿನಿಂದಲೇ ಹೊರಟಿ¨ªೆ, ಅವನನ್ನು ನನ್ನ ಮಗನ ಸುಪರ್ದಿಗೆ ಬಿಟ್ಟು.
ಅಂದು ನಾನು ನಾರ್ವೆಯಲ್ಲಿದ್ದೆ. ರಾತ್ರಿಯ ಒಂದು ಗಂಟೆ, ಮಗ ನಿಂದ ಫೋನ್ ಕಾಲ್. ಆತ ಹೋಗಿಬಿಟ್ಟಿದ್ದ. ಒಮ್ಮಿಂದೊಮ್ಮೆಲೆ ರಕ್ತದಲ್ಲಿನ ಕ್ರಿಯಾಟಿನಿನ್ ಪ್ರಮಾಣ ಹೆಚ್ಚಾಯಿತೆಂದೂ, ಬೆಂಗಳೂರಿಗೆ ಕಳಿಸಿದರೆಂದೂ ಅಲ್ಲಿಯೇ ಅಸುನೀಗಿದನೆಂದೂ ದುಃಖೀತನಾಗಿ ತಿಳಿಸಿದ. ನನ್ನ ಮನಸ್ಸು ಭಾರ. ನಾರ್ವೆಯ ಪ್ರವಾಸ ರುಚಿಸಲಿಲ್ಲ. ಹೀಗೆ ಸುಸಂಗತವಾದ ಜೀವವೊಂದು ಅಸಂಗತ ವಾಗಿ ಅಸ್ತವಾಯಿತು. ಎಲ್ಲ ಬದುಕುಗಳೂ ಅಸಂಗತವೇ. ಆದರೆ ಅಕಾಲದಲ್ಲಿ ಬದುಕು ಮುಗಿದರೆ ಅದರಂಥ ಅನ್ಯಾಯ ಬೇರೊಂದಿರಲಾರದು. ಚೈತನ್ಯದ ಚಿಲುಮೆ, ಬದುಕನ್ನು, ಬದುಕಲ್ಲಿ ದೊರಕಿದ ಎಲ್ಲರನ್ನೂ, ಎಲ್ಲವನ್ನೂ ಅಗಾಧವಾಗಿ ಪ್ರೀತಿಸಿದ ಆತನ ಅಗಲಿಕೆ ನಂಬಲ ಸಾಧ್ಯವಾದ ಕಹಿಸತ್ಯ.
ಹಲವು ಪ್ರತಿಭೆಗಳ ಸಂಗಮ, ಮನೆಗೆ ಬಂದವರ ಮನದಲ್ಲಿ ಸದಾ ನೆನಪಲ್ಲಿ ಉಳಿಯುವ ವ್ಯಕ್ತಿತ್ವ. “ಉಪ’ಜೀವನಕ್ಕಾಗಿ ಜೀವವಿಮೆಯ ಅಧಿಕಾರಿ. ಅದನ್ನೂ ತೀವ್ರವಾಗಿ ಪ್ರೀತಿಸುತ್ತ ಕರ್ತವ್ಯದ ಉತ್ತುಂಗ ತಲುಪಿದವ. ಇಲಾಖೆಯಿಂದ ದೊರೆತ ಮೆಚ್ಚುಗೆಯ “ಶಹಬ್ಟಾಶ್’. ಅಂಚೆ ಚೀಟಿಯಲ್ಲಿ ಮೂಡಿದ ಕಾಂತಿ ತುಂಬಿದ, ಮಾಸದ ಮುಗುಳ್ನಗೆಯ ಮುಖ. ಜೀವವಿಮೆಯೆಂಬ “ಉಪ’ ಜೀವನವನ್ನೇ ಅದ್ಭುತವಾಗಿ ನಿಭಾಯಿಸಿದ ಆತ, ಬದುಕೆಂಬ “ಮುಖ್ಯ’ ಜೀವನದಲ್ಲಿ ಹತ್ತು ಹಲವು ಬದ್ಧತೆಗಳನ್ನು ಮೈಮೇಲೆಳೆದುಕೊಂಡು ಪ್ರತಿ ಗಳಿಗೆಯನ್ನೂ ಸಾರ್ಥಕವಾಗಿಸಿಕೊಂಡ ಸಾಧಕ. ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ನಿತ್ಯಬದುಕಿನ ಉಸಿರಾಗಿಸಿಕೊಂಡು ಅದಕ್ಕೆ ತಕ್ಕುದಾಗಿ ಬದುಕಿದ ಧೀಮಂತ. ತಾನಾಗೇ ದೊರಕಿದ ಹಲವು ಅವಕಾಶಗಳನ್ನೂ, ಶತಪ್ರಯತ್ನ ಮಾಡಿ ದಕ್ಕಿಸಿಕೊಂಡ, ಇನ್ನು ಕೆಲವನ್ನು ಜಾಣತನದಿಂದ ನಿಭಾಯಿಸಿದ ಚತುರಮತಿ. ಅವನೊಂದು ಪ್ರತಿಭಾಸಂಗಮ. ಆದರೇನು. ಎಲ್ಲ ವ್ಯರ್ಥ. ಎಲ್ಲ ಇದ್ದೂ ಏನೂ ಇಲ್ಲದಂತಾಗಿಬಿಟ್ಟ.. ಹಲವು ಕೆಲಸಗಳನ್ನು ಮೈಮೇಲೆಳೆದುಕೊಂಡು ಆರೋಗ್ಯವನ್ನು ಅಲಕ್ಷಿಸಿದ. ಮಧುಮೇಹದ ಬಗ್ಗೆ ಎಲ್ಲ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿದ. ನಾನು ಸಾವಿರ ಬಾರಿ ಎಚ್ಚರಿಸಿ¨ªೆ, ತನ್ನನ್ನು ಗೌರವಿಸದವರನ್ನು ನಿರ್ದಾಕ್ಷಿಣ್ಯವಾಗಿ ಮುಗಿಸಿಬಿಡುವ ರೋಗ ಅದೆಂದು. ಆತ ನಕ್ಕುಬಿಡುತ್ತಿದ್ದ. ಬದುಕಿನಾದ್ಯಂತ ಹಲವು ಸಾಧನೆಗಳ ಸಂತಸ ಮೂಡಿಸಿದವನು ಅಕಾಲದಲ್ಲಿ ಕೈಕೊಸರಿಕೊಂಡು ಆಘಾತದ ನೀಡಿಬಿಟ್ಟ. ಆತನ ಬದುಕೇ ಒಂದು ಕವಿತೆ. ಆದರೆ ಇನ್ನೂ ಆಸ್ವಾದಿಸಬೇಕೆನ್ನುವಾಗಲೇ ಒಮ್ಮೆಲೆ ಸ್ಥಬ್ದವಾದ ಗೀತೆ. ಆತ ಇನ್ನೂ ಹಲವು ವರ್ಷ ಬದುಕಬಹುದಿತ್ತು, ಮಧುಮೇಹದ ಜೊತೆಗೇ ಸುಂದರ ಸಹಬಾಳ್ವೆ ಮಾಡುತ್ತ. ಸ್ವಲ್ಪ ಎಚ್ಚರದಿಂದಿರಬೇಕಿತ್ತು.
ಇತ್ತೀಚೆಗೆ ಮಹಾಲಿಂಗಪುರದಲ್ಲಿ ಜರುಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ದ್ವಾರಕ್ಕೆ ಅವನದೇ ಹೆಸರು. ಯಾವ ಸಮ್ಮೇಳನದಲ್ಲಿ ಸರ್ವಾಧ್ಯಕ್ಷನಾಗಿ ಸಂಭ್ರಮಿಸಬಹುದಿತ್ತೋ ಆ ಸಮ್ಮೇಳನದ ದ್ವಾರಕ್ಕೆ ಹೆಸರಾಗಿಬಿಟ್ಟ…
ಡಾ. ಶಿವಾನಂದ ಕುಬಸದ