“ಹೊಂಗೆ ಬೈಲುನಲ್ಲಿ ಹದ್ದುಗಳ ಹಾರಾಟ…’ – ಇದು ಮಲೆನಾಡ ತಪ್ಪಲಿನಲ್ಲಿ ಕಾಣಸಿಗುವ ಚಿತ್ರಣ. ಅಲ್ಲಿ ತಲೆಮಾರು ರೈತರ ಬದುಕಿದೆ, ಆ ಬದುಕನ್ನು ಚಿವುಟಿ ಹಾಕುವ ಹುನ್ನಾರವಿದೆ, ಅದನ್ನು ಸಹಿಸದ “ಕೆಂಪು’ ಬಾವುಟಗಳ ಹಾರಾಟವಿದೆ, ಅನ್ಯಾಯದ ವಿರುದ್ಧ ಸಿಡಿದೇಳುವ ಧ್ವನಿಗಳಿವೆ, ಅಮಾಯಕರ ಮೇಲೆ ಬೀಳುವ ಪೊಲೀಸರ ಗುಂಡುಗಳಿವೆ, ದ್ವೇಷಕ್ಕೆ ಕೋವಿ ಹಿಡಿಯುವ ಯುವಕರಿದ್ದಾರೆ, ಬದುಕಿಗಾಗಿ ಹೋರಾಟ ಮತ್ತು ಹಾರಾಟವಿದ್ದರೂ, ಪ್ರಜಾಪ್ರಭುತ್ವದ ಹಕ್ಕು ಮಣ್ಣು ಮುಕ್ಕುತ್ತದೆ … ಇಲ್ಲಿ ಅನ್ಯಾಯ ಹಾಗೂ ಮನುಷ್ಯತ್ವ ಇವೆರೆಡರಲ್ಲಿ ಯಾವುದಕ್ಕೆ ಜಯ ಸಿಗುತ್ತೆ? ಇದು “ಹೊಂಬಣ್ಣ’ದಲ್ಲಿರುವ ಹೂರಣ.
ಚಿತ್ರ ನೋಡಿ ಹೊರ ಬಂದವರಿಗೆ ಹಾಗೊಮ್ಮೆ ವ್ಯವಸ್ಥೆಗೆ ಹಿಡಿ ಶಾಪ ಹಾಕಬೇಕೆನಿಸುತ್ತೆ. ಆಳುವವರನ್ನು ಧಿಕ್ಕರಿಸಬೇಕೆನಿಸುತ್ತದೆ. ಅಷ್ಟರಮಟ್ಟಿಗೆ ಮಲೆನಾಡ ಜನರ ನೋವು, ಸ್ವಾರ್ಥ ಜನರ ದಬ್ಟಾಳಿಕೆ, ಮುಗ್ಧರ ಒಕ್ಕಲೆಬ್ಬಿಸುವಿಕೆ ತೋರಿಸುವ ಮೂಲಕ ಮನಸ್ಸನ್ನು ಭಾರವಾಗಿಸುವುದರ ಜತೆಗೆ ಅಲ್ಲಲ್ಲಿ ಭಾವುಕತೆಗೆ ದೂಡುವಂತೆ ಮಾಡಿದ್ದಾರೆ ನಿರ್ದೇಶಕರು. ತೀರಾ ಕಮರ್ಷಿಯಲ್ ಅಲ್ಲದ, ಗ್ಲಾಮರ್ರೆà ಸುಳಿಯದ ಒಂದು ಅಪ್ಪಟ ಮಾನವ ಸಂಬಂಧ ಬೆಸುಗೆಯ ದೇಸಿತನವನ್ನು ಬೆರೆಸಿ ಒಂದೊಳ್ಳೆಯ ಚಿತ್ರಣವನ್ನು ಉಣಬಡಿಸಿದ್ದಾರೆ ನಿರ್ದೇಶಕರು.
ಮಲೆನಾಡ ಕಾಡಲ್ಲಿ ವಾಸವಾಗಿರುವ ರೈತರನ್ನು ಒಕ್ಕಲೆಬ್ಬಿಸುವುದರ ಕುರಿತ ಚಿತ್ರಣವಿದು. ಇಲ್ಲಿ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು, ಎಷ್ಟು ತೋರಿಸಬೇಕು ಎಂಬ ಜಾಣತನ ಹಾಗೂ ಸಮಯಪ್ರಜ್ಞೆ ಇರುವುದರಿಂದಲೇ “ಹೊಂಬಣ್ಣ’ ಆಪ್ತವಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಕಥೆಯಲ್ಲಿ ಮಲೆನಾಡ ಸೊಗಡು ತುಂಬಿದೆ. ಚಿತ್ರಕಥೆಯಲ್ಲಿ ಚುರುಕುತನವಿದೆ. ನಿರೂಪಣೆಯಲ್ಲೂ ಬಿಗಿ ಹಿಡಿತವಿದೆ. ಹಾಗಾಗಿ, ಇಲ್ಲಿ ಯಾವುದೂ ಅನಾವಶ್ಯಕ ಎನಿಸಲ್ಲ.
ಸುರಿಯೋ ಮಳೆ, ಕಾಣುವ ಪಾತ್ರಗಳು, ಆಡುವ ಭಾಷೆ, ಎಲ್ಲವೂ ಮಲೆನಾಡತನ ಬಿಟ್ಟು ಆಚೀಚೆ ಹೋಗಿಲ್ಲ. ಗಂಭೀರ ವಿಷಯದಲ್ಲೂ ಆಗಾಗ ತಿಳಿಹಾಸ್ಯ ನುಸುಳಿ ಹೋಗುತ್ತೆ. ಒಂಚೂರು ಪ್ರೀತಿ ಇಣುಕಿ ನೋಡುತ್ತೆ. ತವಕ, ತಲ್ಲಣಗಳ ನಡುವೆ ಮೂಕ ವೇದನೆಯೊಂದೇ ಉಳಿಯುತ್ತೆ. ಆರಂಭದಿಂದ ಅಂತ್ಯದವರೆಗೂ ಕಾಣಸಿಗುವ ಪಾತ್ರಗಳಾÂವೂ ಡಮ್ಮಿ ಎನಿಸುವುದಿಲ್ಲ. ಕಾಣುವ ಕೆಲ ಸನ್ನಿವೇಶಗಳು ವ್ಯವಸ್ಥೆಯನ್ನೇ ಅಣಕಿಸುವಂತಿರುವುದರಿಂದ “ಹೊಂಬಣ್ಣ’ ಒಂದು ಚಿಂತನೆಗೆ ಹಚ್ಚುವ ಸಿನಿಮಾ ಅಂದರೆ ಅತಿಶಯೋಕ್ತಿಯೇನಲ್ಲ. ಇಲ್ಲಿ ಮನುಷ್ಯನ ಸ್ವಾರ್ಥ ಎಷ್ಟರ ಮಟ್ಟಿಗೆ ಬೇಲಿ ಹಾಕಿದೆ ಅನ್ನುವ ವಿಷಯವೇ ಇಡೀ ಸಿನಿಮಾದ ಹೈಲೈಟ್. ಸುಮ್ಮನೆ ನೋಡಿಸಿಕೊಂಡು ಹೋಗುವ ಬಹಳಷ್ಟು ಸಿನಿಮಾಗಳು ಬಂದಿವೆಯಾದರೂ, “ಹೊಂಬಣ್ಣ’ ಆ ಸಾಲಿನಲ್ಲಿ ನಿಂತು, ಒಂದಷ್ಟು ವ್ಯವಸ್ಥೆಗೂ “ಛೀಮಾರಿ’ ಹಾಕುವ ಕೆಲಸ ಮಾಡಿದೆ. ಅದು ಮಲೆನಾಡ ತಪ್ಪಲಲ್ಲಿರುವ ಹೊಂಗೆಬೈಲು, ಹೆಬ್ಬೆಟ್ಟೆ ಬೆಟ್ಟ, ಹೂಟಿ ಮನೆಯ ಕಥೆ. ಅಲ್ಲಿರೋದು ಬೆರಳೆಣಿಕೆ ಮನೆಗಳು, ಒಂದಷ್ಟು ರೈತರು. ಅವರನ್ನು ಆ ಕಾಡಿನಿಂದ ಒಕ್ಕಲೆಬ್ಬಿಸುವ ತಂತ್ರ ಒಂದು ಕಡೆ ನಡೆದರೆ, ಅವರನ್ನು ಉಳಿಸಬೇಕೆಂಬ ಹೋರಾಟ ನಕ್ಸಲರಿಂದ ನಡೆಯುತ್ತೆ. ಇನ್ನೊಂದು ಕಡೆ, ನಕ್ಸಲರನ್ನು ಹೊಡೆದುರುಳಿಸಬೇಕೆಂಬ
ಸಂಚು ಸರ್ಕಾರದ್ದು. ಇದರ ನಡುವೆ ಒಂದಷ್ಟು ಅಮಾಯಕರು ಬಲಿಯಾಗುತ್ತಾರೆ. ನಕ್ಸಲರೂ ನೆಲಕ್ಕುರುಳುತ್ತಾರೆ. ಆ ಹೊಂಗೆಬೈಲಿನಲ್ಲಿ ವಕೀಲನಿದ್ದಾನೆ, ಹಿರಿಯ ಹೋರಾಟಗಾರ ಸಿಗುತ್ತಾನೆ, ವಕೀಲನೂ ಇದ್ದಾನೆ, ಪತ್ರಕರ್ತನೂ
ಓಡಾಡುತ್ತಾನೆ, ಮೂವರು ಯುವಕರ ತಂತ್ರಗಾರಿಕೆಯೂ ಇದೆ, ಎನ್‌ಕೌಂಟರ್ ಸ್ಪೆಷಲಿಸ್rನ ಆರ್ಭಟವೂ ಇದೆ … ಹಾಗಾದರೆ, ಅಲ್ಲಿಂದ ಆ ರೈತರನ್ನು ಒಕ್ಕಲೆಬ್ಬಿಸಲಾಗುತ್ತಾ, ಅವರಿಗೆ ನ್ಯಾಯ ಸಿಗುವುದಿಲ್ಲವೇ? ಇದಕ್ಕೆ ಉತ್ತರ ಬೇಕಾದರೆ “ಹೊಂಬಣ್ಣ’ ನೋಡಬಹುದು. ಚಿತ್ರದಲ್ಲಿ ಸುಚೇಂದ್ರಪ್ರಸಾದ್ ಮತ್ತು ದತ್ತಣ್ಣ ಇಬ್ಬರೂ ಬದುಕು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತಪರ ನಿಲ್ಲುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಕ್ಸಲೈಟ್ ಪಾತ್ರದಲ್ಲಿ ನೀನಾಸಂ ಅಶ್ವತ್ಥ್ ಇಷ್ಟವಾಗುತ್ತಾರೆ. ಉಳಿದಂತೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಗುಪ್ತ, ತುಂಗ, ಪತ್ರಕರ್ತೆ ಪ್ರಬಂಧ
ಸೇರಿದಂತೆ ಬರುವ ಎಲ್ಲಾ ಪಾತ್ರಗಳು ನ್ಯಾಯ ಸಲ್ಲಿಸಿವೆ. ಮುಖ್ಯವಾಗಿ ವಿನು ಮನಸು ಸಂಗೀತದ ಹಾಡು ಹಾಗೂ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಪ್ರವೀಣ್ ಅವರ ಕ್ಯಾಮೆರಾದಲ್ಲಿ “ಹೊಂಬಣ್ಣ’ ಕಲರ್‌ಫುಲ್ ಎನಿಸಿದೆ.
– ವಿಜಯ್ ಭರಮಸಾಗರ