Advertisement

ಅರಬಸ್ಥಾನದ ಕತೆ: ಕರೀಮನ ಚಪ್ಪಲಿಗಳು

07:30 AM Apr 15, 2018 | |

ಒಂದು ನಗರದಲ್ಲಿ ಕರೀಮ ಎಂಬ ಧನವಂತನಿದ್ದ. ಅವನ ಮನೆ ತುಂಬ ಧನಕನಕಗಳು ರಾಶಿ ಬಿದ್ದಿದ್ದರೂ ಅದರಿಂದ ಒಂದು ಬಿಲ್ಲೆಯನ್ನೂ ತೆಗೆದು ಅವನು ಖರ್ಚು ಮಾಡುತ್ತಿರಲಿಲ್ಲ. ಹಸಿದು ಬಂದವರಿಗೆ ಕುಡಿಯಲು ನೀರು ಕೂಡ ಕೊಡುವ ಔದಾರ್ಯ ಅವನಲ್ಲಿರಲಿಲ್ಲ. ಚಿಂದಿಯಾದ ಬಟ್ಟೆಗಳನ್ನು ಧರಿಸುತ್ತಿದ್ದ. ಕಾಲುಗಳಿಗೆ ತೊಡುತ್ತಿದ್ದ ಚಪ್ಪಲಿಗಳು ಸವೆದು ಅಲ್ಲಲ್ಲಿ ತೂತಾಗಿದ್ದವು, ಭಾರ ಕಿತ್ತುಹೋಗಿತ್ತು. ಆದರೂ ಮತ್ತೆ ಮತ್ತೆ ಅದನ್ನು ಹೊಲಿದು ಕಾಲುಗಳಿಗೆ ತೊಟ್ಟುಕೊಳ್ಳುತ್ತಿದ್ದನಲ್ಲದೆ ಹೊಸದನ್ನು ಕೊಳ್ಳುತ್ತಿರಲಿಲ್ಲ. ಅವನು ಅಷ್ಟು ದೂರದಲ್ಲಿ ನಡೆದುಕೊಂಡು ಬರುವಾಗಲೇ ಚಪ್ಪಲಿಗಳಿಂದ ಬರುವ “ಝರಕ್‌ ಝರಕ್‌’ ಎಂಬ ಸದ್ದನ್ನು ಕೇಳಿ ಜನರು, “”ಹೋ, ಲೋಭಿ ಕರೀಮ ತನ್ನ ಕೊಳಕು ಚಪ್ಪಲಿಗಳೊಂದಿಗೆ ಬರುತ್ತಿದ್ದಾನೆ. ಮೂಗು ಮುಚ್ಚಿಕೊಂಡು ದೂರ ಓಡದಿದ್ದರೆ ಅದರ ವಾಸನೆಯಿಂದ ಉಸಿರುಗಟ್ಟಿ ಸಾಯಬೇಕಷ್ಟೇ” ಎಂದು ಹೇಳಿಕೊಂಡು ನಗುತ್ತಿದ್ದರು.

Advertisement

    ಒಂದು ಸಲ ಕರೀಮ ಸಾರ್ವಜನಿಕ ಸ್ನಾನಗೃಹಕ್ಕೆ ಹೋಗಿದ್ದ. ಉಚಿತವಾಗಿ ಅಲ್ಲಿ ಸಿಗುವ ನೀರಿನಿಂದ ಸ್ನಾನ ಮಾಡಿದರೆ ಮನೆಯ ನೀರನ್ನು ಉಳಿಸಬಹುದೆಂಬ ಲೆಕ್ಕಾಚಾರ ಅವನದು. ಹೊರಗೆ ತನ್ನ ಹಳೆಯ ಚಪ್ಪಲಿಗಳನ್ನು ಕಳಚಿಟ್ಟು ಒಳಗೆ ಹೋದ. ಸ್ನಾನ ಮುಗಿಸಿ ಬಂದಾಗ ಅವನ ಚಪ್ಪಲಿಗಳ ಸ್ಥಾನದಲ್ಲಿ ಎರಡು ಹೊಚ್ಚ ಹೊಸ ಚಪ್ಪಲಿಗಳಿದ್ದವು. ಬಂಗಾರದ ನೂಲಿನಿಂದ ಹೊಲಿದಿದ್ದ ಚಪ್ಪಲಿಯ ಮೇಲೆ ರತ್ನಗಳನ್ನು ಕೂಡಿಸಲಾಗಿತ್ತು. ದೇವರು ತನ್ನ ಹಳೆಯ ಚಪ್ಪಲಿಗಳನ್ನು ನೋಡಿ ಕನಿಕರದಿಂದ ಹೊಸ ಚಪ್ಪಲಿಗಳನ್ನಾಗಿ ಬದಲಾಯಿಸಿರಬಹುದೆಂದು ಭಾವಿಸಿ ಅದನ್ನು ಮೆಟ್ಟಿಕೊಂಡು ಹೋದ.

    ಆ ಹೊಸ ಚಪ್ಪಲಿಗಳು ಊರಿನ ನ್ಯಾಯಾಧೀಶನದ್ದು. ಅವನು ಚಪ್ಪಲಿ ಹೊರಗಿರಿಸಿ ಒಳಗೆ ಸ್ನಾನ ಮಾಡುತ್ತಿದ್ದ. ಸ್ನಾನ ಮುಗಿಸಿ ಹೊರಗೆ ಬಂದಾಗ ತನ್ನ ಹೊಸ ಚಪ್ಪಲಿಗಳಿರಲಿಲ್ಲ. ಮೂಲೆಯಲ್ಲಿ ಕರೀಮನ ಚಪ್ಪಲಿಗಳು ಕಾಣಿಸಿದವು. ಸೇವಕರನ್ನು ಕರೆದ. “”ಆ ಕೊಳಕು ಚಪ್ಪಲಿ ಧರಿಸುವ ವ್ಯಕ್ತಿ ಯಾರು ಗೊತ್ತಿದೆಯೇ? ಅವನು ತನ್ನ ಚಪ್ಪಲಿಗಳನ್ನು ಇಲ್ಲಿ ಬಿಟ್ಟು ನನ್ನ ಚಪ್ಪಲಿಗಳೊಂದಿಗೆ ಪಲಾಯನ ಮಾಡಿದ್ದಾನೆ. ಅವನನ್ನು ಎಳೆದುಕೊಂಡು ಬನ್ನಿ” ಎಂದು ಆಜ್ಞಾಪಿಸಿದ. ನ್ಯಾಯಾಲಯದ ಸೇವಕರಿಗೆ ಅಲ್ಲಿರುವುದು ಕರೀಮನ ಚಪ್ಪಲಿಗಳೆಂದು ಗುರುತಿಸಲು ಕಷ್ಟವಾಗಲಿಲ್ಲ. ನ್ಯಾಯಾಧೀಶನ ಚಪ್ಪಲಿಗಳ ಸಹಿತ ಅವನನ್ನು ಎಳೆದುಕೊಂಡ ಬಂದರು.

    ನ್ಯಾಯಾಧೀಶನು ಚಪ್ಪಲಿ ಅಪಹರಿಸಿದ ಅಪರಾಧಕ್ಕಾಗಿ ಕರೀಮನಿಗೆ ಒಂದು ಮೂಟೆ ತುಂಬ ಚಿನ್ನದ ನಾಣ್ಯಗಳ ದಂಡ ವಿಧಿಸಿದ. ತಪ್ಪಿದರೆ ಸಾಯುವ ವರೆಗೂ ಜೈಲು ಶಿಕ್ಷೆ ಅನುಭವಿಸಲು ಹೇಳಿದ. ವಿಧಿಯಿಲ್ಲದೆ ಕರೀಮ ದಂಡ ತೆತ್ತು ಚಪ್ಪಲಿಗಳನ್ನು ತೆಗೆದುಕೊಂಡು ಮನೆಗೆ ಬಂದ. ತನಗೆ ಇಷ್ಟು ದೊಡ್ಡ ನಷ್ಟವುಂಟು ಮಾಡಿದ ಚಪ್ಪಲಿಗಳ ಮೇಲೆ ಅವನಿಗೆ ತಾಳಲಾಗದ ಕೋಪ ಬಂದಿತು. ಅವುಗಳನ್ನು ಎತ್ತಿ, “”ಶನಿಗಳೇ, ಇಷ್ಟು ಕಾಲ ಆಶ್ರಯ ನೀಡಿದ ನನಗೆ ನೀವು ಹಾನಿಯುಂಟು ಮಾಡಿದಿರಿ. ಕೃತಘ್ನರಾದ ನೀವಿನ್ನು ನನ್ನ ಬಳಿ ಇರಬಾರದು” ಎಂದು ಹೇಳಿ ಕಿಟಕಿಯ ಮೂಲಕ ಭರದಿಂದ ಹೊರಗೆ ಎಸೆದ. ಆಗ ಮೀನುಗಾರನೊಬ್ಬ ತಲೆಯ ಮೇಲೆ ಮೀನಿನ ಬುಟ್ಟಿ ಹೊತ್ತುಕೊಂಡು ಹೋಗುತ್ತಿದ್ದ. ಕರೀಮನ ಚಪ್ಪಲಿಗಳು ನೇರವಾಗಿ ಅವನ ಬುಟ್ಟಿಗೆ ಅಪ್ಪಳಿಸಿ ಬುಟ್ಟಿ ಕೆಳಗೆ ಬಿದ್ದಿತು. ಅದರಲ್ಲಿರುವ ಮೀನುಗಳೆಲ್ಲವೂ ಧೂಳಿಗೆ ಬಿದ್ದವು.

    ಮೀನುಗಾರ ಕೋಪದಿಂದ ಕರೀಮನ ಚಪ್ಪಲಿಗಳೊಂದಿಗೆ ಅವನ ಮನೆಯೊಳಗೆ ಬಂದ. “”ನಿನ್ನ ಕೊಳಕು ಚಪ್ಪಲಿಗಳಿಂದ ಒಂದು ಮೂಟೆ ಚಿನ್ನದ ನಾಣ್ಯ ಸಿಗುವಷ್ಟು ಮೀನುಗಳನ್ನು ಕಳೆದುಕೊಂಡಿದ್ದೇನೆ. ನನಗೆ ಅಷ್ಟು ನಾಣ್ಯಗಳನ್ನು ಕೊಟ್ಟರೆ ಸರಿ. ತಪ್ಪಿದರೆ ನ್ಯಾಯಾಲಯಕ್ಕೆ ದೂರುಕೊಟ್ಟು ಜೀವನವಿಡೀ ಸೆರೆಮನೆಯಲ್ಲಿರುವ ಹಾಗೆ ಮಾಡುತ್ತೇನೆ” ಎಂದು ಜೋರು ಮಾಡಿದ. ಭಯಗೊಂಡ ಕರೀಮ, “”ಬೇಡ ಬೇಡ, ಹಾಗೆ ಮಾಡಬೇಡ. ನಾನು ನಿನಗಾಗಿರುವ ನಷ್ಟವನ್ನು ತುಂಬಿಸಿಕೊಡುತ್ತೇನೆ” ಎಂದು ಹೇಳಿ ಮೂಟೆ ತುಂಬ ನಾಣ್ಯಗಳನ್ನು ಕೊಟ್ಟು ಕಳುಹಿಸಿದ.

Advertisement

    ಕರೀಮನಿಗೆ ಈ ಸಲ ಚಪ್ಪಲಿಗಳ ಮೇಲೆ ಇನ್ನಷ್ಟು ದ್ವೇಷವುಕ್ಕಿತು. “”ನನ್ನ ಸಂಪತ್ತನ್ನು ಕರಗಿಸಲು ಕಾದು ಕುಳಿತ ಪಿಶಾಚಿಗಳೇ, ತೊಲಗಿ ಇಲ್ಲಿಂದ” ಎಂದು ಶಪಿಸುತ್ತ ಅವುಗಳನ್ನು ಮನೆಯ ಮುಂದೆ ಹರಿಯುತ್ತಿದ್ದ ಕೊಳಚೆ ನೀರಿನ ಕಾಲುವೆಗೆ ಎಸೆದ. ಪೀಡೆ ತೊಲಗಿತೆಂದು ನೆಮ್ಮದಿಯಿಂದ ಇದ್ದ. ಆದರೆ ಚಪ್ಪಲಿಗಳು ಕಾಲುವೆಯಿಂದ ನೀರು ಹೊರಗೆ ಹೋಗುವ ಕೊಳವೆಯ ದ್ವಾರವನ್ನೇ ಮುಚ್ಚಿದವು. ಕೊಳಚೆ ನೀರು ಉಕ್ಕಿ ಹರಿದು ಇಡೀ ನಗರವನ್ನು ಮುಳುಗಿಸಿತು. ಕೆಟ್ಟ ವಾಸನೆಯಿಂದಾಗಿ ಮೂಗು ಬಿಡಲು ಕಷ್ಟವಾಯಿತು. ಅಧಿಕಾರಿಗಳು ಯಾಕೆ ಹೀಗಾಯಿತೆಂದು ನೋಡಿದಾಗ ಕರೀಮನ ಚಪ್ಪಲಿಗಳಿಂದಾಗಿ ಅನಾಹುತ ಸಂಭವಿಸಿರುವುದು ಗೊತ್ತಾಯಿತು. ಅವನ ಎಲ್ಲ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಂಡು ಚಪ್ಪಲಿಗಳನ್ನು ಕೈಗೆ ಕೊಟ್ಟು ಕಳುಹಿಸಿದರು.

ಇನ್ನಾದರೂ ದರಿದ್ರ ಚಪ್ಪಲಿಗಳಿಂದ ಮುಕ್ತಿ ಹೊಂದಬೇಕು. ಅವುಗಳನ್ನು ಹೂಳಬೇಕೆಂದು ಕರೀಮ ನಿರ್ಧರಿಸಿದ. ಶ್ಮಶಾನದ ಬಳಿ ರಾತ್ರೆ ಹೊಂಡ ತೋಡತೊಡಗಿದ. ಇದನ್ನು ಕಂಡವರು ರಾಜನ ಬಳಿಗೆ ಹೋಗಿ, ಕರೀಮ ಭೂಮಿಯನ್ನು ಅಗೆದು ನಿಧಿಯನ್ನು ತೆಗೆಯುತ್ತಿರುವುದಾಗಿ ಹೇಳಿದರು. ರಾಜನು ತಕ್ಷಣ ಭಟರನ್ನು ಕಳುಹಿಸಿದ. ಭಟರು ಶ್ಮಶಾನದ ಬಳಿ ಹೊಸದಾಗಿ ಕಾಣಿಸಿದ ಗುಂಡಿಯನ್ನು ಮುಚ್ಚಿದ್ದ ಮಣ್ಣನ್ನು ಹೊರಗೆ ಸರಿಸಿ ನೋಡಿದಾಗ ಒಳಗೆ ಹಳೆಯ ಚಪ್ಪಲಿಗಳು ಕಾಣಿಸಿದವು. ಅದರೊಂದಿಗೇ ಕರೀಮನನ್ನು ಆಸ್ಥಾನಕ್ಕೆ ಎಳೆದು ತಂದರು. ರಾಜನು, “”ಭೂಮಿಯೊಳಗೆ ಚಪ್ಪಲಿಗಳನ್ನಿರಿಸಿ ಮಣ್ಣು ಮುಚ್ಚಿದರೆ ನಮಗೆ ತಿಳಿಯುವುದಿಲ್ಲವೆಂದುಕೊಂಡೆಯಾ? ಎಲ್ಲಿದೆ ಆ ನಿಧಿ ಸತ್ಯ ಹೇಳು. ತಪ್ಪಿದರೆ ಸಾಯುವ ವರೆಗೂ ಸೆರೆಯಲ್ಲಿ ಕೊಳೆಯಬೇಕಾಗುತ್ತದೆ” ಎಂದು ಹೇಳಿದ.

    ಕರೀಮ ಬಿಕ್ಕಿ ಬಿಕ್ಕಿ ಅತ್ತ. “”ದೊರೆಯೇ, ನನಗೆ ಸಾಯುವ ವರೆಗೂ ಸೆರೆವಾಸವೇ ಆಗಬಹುದು. ಆದರೆ ನನ್ನ ಚಪ್ಪಲಿಗಳೊಂದಿಗೆ ಮರಳಿ ಮನೆಗೆ ಹೋಗುವಂತೆ ಮಾಡಬೇಡಿ. ಅವುಗಳಿಂದಾಗಿ ನಾನು ಸರ್ವಸ್ವವನ್ನೂ ಕಳೆದುಕೊಂಡಿರುವ ಕಾರಣ ನನ್ನ ಬಳಿ ದಂಡವಾಗಿ ಕೊಡಲು ಏನೂ ಉಳಿದಿಲ್ಲ” ಎಂದು ನಿವೇದಿಸಿದ. ರಾಜನಿಗೆ ಕುತೂಹಲವಾಯಿತು. “”ಚಪ್ಪಲಿಗಳಿಂದಾಗಿ ಯಾಕೆ ನಿನಗೆ ನಷ್ಟವಾಯಿತು?” ಎಂದು ಕೇಳಿದ.

    “”ಲೋಭತನದಿಂದಾಗಿ ಹಳೆಯ ಚಪ್ಪಲಿಗಳನ್ನೇ ತೇಪೆ ಹಚ್ಚಿ ಹಾಕಿಕೊಳ್ಳುತ್ತಿದ್ದೆ. ಅದರಿಂದಾಗಿ ನಾನು ಎಲ್ಲ ಆಸ್ತಿಯನ್ನೂ ಕಳೆದುಕೊಂಡೆ. ಇನ್ನೂ ಅವು ನನ್ನ ಜೊತೆಗಿದ್ದರೆ ನನ್ನ ಜೀವವೂ ಉಳಿಯುವುದಿಲ್ಲ” ಎಂದು ಕರೀಮ ನಡೆದ ವಿಷಯಗಳನ್ನು ವಿವರಿಸಿದ. ರಾಜನಿಗೆ ಅವನ ಮೇಲೆ ಕನಿಕರವುಂಟಾಯಿತು. “”ಲೋಭತನ ಬಿಟ್ಟು ಒಳ್ಳೆಯವನಾಗಿ ಬದುಕಿಕೋ. ನಾನು ನಿನಗೆ ವ್ಯಾಪಾರ ಮಾಡಲು ಸ್ವಲ್ಪ ಹಣವನ್ನು ಕೊಡುತ್ತೇನೆ” ಎಂದು ಹೇಳಿದ. ಕರೀಮ ಒಳ್ಳೆಯ ಮನುಷ್ಯನಾಗಿ ಬದುಕಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next