ಕನ್ನಡದಲ್ಲಿ “ಗಂಧದ ಗುಡಿ’ ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ. ಅರಣ್ಯ ಉಳಿಸುವ, ಪ್ರಾಣಿ ಸಂರಕ್ಷಿಸುವ ಕುರಿತಂತೆ ಬೆಳಕು ಚೆಲ್ಲಿದ ಚಿತ್ರವದು. ಈಗ “ಗಂಧದಕುಡಿ’ ಸರದಿ. ಹೌದು, ಇಲ್ಲೂ ಸಹ ಅರಣ್ಯ ನಾಶಪಡಿಸುವುದು ಬೇಡ, ಪ್ರಾಣಿ, ಗಿಡ, ಮರ, ಪ್ರಕೃತಿಯನ್ನು ರಕ್ಷಿಸಬೇಕೆಂಬ ವಿಷಯ ಹೊಂದಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು, ಚಿತ್ರದ ಆಡಿಯೋ ಬಿಡುಗಡೆ ಮಾಡುವ ಮೂಲಕ ಒಂದಷ್ಟು ಮಾಹಿತಿ ಹಂಚಿಕೊಂಡಿತು ಚಿತ್ರತಂಡ.
ಸಂತೋಷ್ ಶೆಟ್ಟಿ ಕಟೀಲ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯೂ ಅವರದೇ. ನಿರ್ದೇಶಕರಿಗೆ ಅನಿಮೇಷನ್ ಗೊತ್ತು, ಎಡಿಟಿಂಗ್ ಗೊತ್ತು, ಗ್ರಾಫಿಕ್ಸ್ ಕೂಡ ಗೊತ್ತಿತ್ತು. ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಕೂಡ ಇತ್ತು. “ಕನಸು ಕಣ್ಣು ತೆರೆದಾಗ’ ಎಂಬ ಮೊದಲ ಚಿತ್ರ ನಿರ್ದೇಶಿಸಿದ್ದ ಅವರಿಗೆ ಪ್ರಶಸ್ತಿ ಕೂಡ ಲಭಿಸಿತ್ತು. ಈಗ “ಗಂಧದಕುಡಿ’ ಮಾಡಿದ್ದಾರೆ. ಹಿಂದಿಯಲ್ಲೂ “ಚಂದನ್‌ವನ್’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲಾ ಮಾಡಿದ ನಿರ್ದೇಶಕರು, ಪ್ರಮೋಶನ್‌ಗಾಗಿ ಫೋಟೋಶೂಟ್ ಮಾಡಲು ಕಾಡಿಗೆ ಹೋಗಿದ್ದ ವೇಳೆ, ನೀರಿನ ಸೆಳೆತಕ್ಕೆ ಸಿಲುಕಿ ಅಸುನೀಗಿದ್ದಾರೆ. ಅವರ ಕನಸಿನ ಚಿತ್ರ ಈಗ ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕ ಕೆ.ಸತ್ಯೇಂದ್ರ ಪೈ ಅವರು ಮುಂದಾಗಿದ್ದಾರೆ.
ನಿರ್ಮಾಪಕ ಸತ್ಯೇಂದ್ರ ಪೈ ಅವರದು ಐಟಿ ಕ್ಷೇತ್ರ. ಅವರಿಗೆ ಸಿನಿಮಾ ಮಾಡುವ ಆಸೆ ಇತ್ತು. ಆದರೆ, ಮನರಂಜನೆ ಜೊತೆ ಒಳ್ಳೆಯ ವಿಷಯ ಇಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಶಯ ಇತ್ತು. ಪ್ರಕೃತಿಗೆ ಸಂಬಂಧಿಸಿದಂತೆ, ಮರ,ಗಿಡ ಬೆಳೆಸಿ, ಪೋಷಿಸ ಬೇಕೆಂಬ ಸಂದೇಶ ಇಟ್ಟುಕೊಂಡು ಮಕ್ಕಳ ಚಿತ್ರ ಮಾಡಲು ತೀರ್ಮಾನಿಸಿ, ಸಂತೋಷ್ ಹೇಳಿದ ಕಥೆಗೆ ಗ್ರೀನ್‌ಸಿಗ್ನಲ್ ಕೊಟ್ಟು, ಸಿನಿಮಾ ಮಾಡಿದ್ದಾರೆ. “ಇದೊಂದು ಸಾರ್ಥಕ ಪ್ರಯತ್ನ. ನನ್ನ ಮೊದಲ ಸಿನಿಮಾ ಇದಾಗಿರು ವುದರಿಂದ ಚೆನ್ನಾಗಿ ಮೂಡಿ ಬರಬೇಕು ಎಂಬ ಉದ್ದೇಶವಿತ್ತು. ಹಾಗಾಗಿ, ಬಜೆಟ್ ಲೆಕ್ಕೆ ಹಾಕದೆ, ಒಂದು ಕಮರ್ಷಿಯಲ್ ಸಿನಿಮಾ ರೇಂಜ್‌ಗೆ ಚಿತ್ರ ಮಾಡಿದ್ದೇವೆ. ಇನ್ನು, ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ನೋಡಿ, ಅವರನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಹಿಂದೆಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಹಿರಿಯ ಕಲಾವಿದರಾದ ರಮೇಶ್‌ಭಟ್, ಶಿವಧ್ವಜ್ ಅವರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ’ ಅಂದರು ಅವರು.
ನಟ ರಮೇಶ್ ಭಟ್ ಅವರು, ನಿರ್ಮಾಪಕರ ಧೈರ್ಯ ಬಗ್ಗೆ ಹೇಳುತ್ತ ಮಾತಿಗಿಳಿದರು. “ಇಲ್ಲಿ ಸ್ವತ್ಛ ಮನಸ್ಸಿನಿಂದ ಸಿನಿಮಾ ಮಾಡಲಾಗಿದೆ. ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ, ದೊಡ್ಡ ಬಜೆಟ್‌ನಲ್ಲಿ ಮಕ್ಕಳ ಚಿತ್ರ ಮಾಡಿದ್ದಾರೆ. ಮಕ್ಕಳ ರಜಾ ದಿನ ನೋಡಿಕೊಂಡೇ ಚಿತ್ರೀಕರಣ ಮಾಡಲಾಗಿದೆ. ಕಾಡಲ್ಲಿ ಒಂದು ವಿಮಾನ ಸೆಟ್ ಹಾಕಿದ್ದು ವಿಶೇಷ. ಅದೊಂದು ಅದ್ಭುತ ಸೆಟ್ ಆಗಿತ್ತು. ಅಷ್ಟೊಂದು ಖರ್ಚು ಮಾಡಿ ಮಕ್ಕಳ ಸಿನಿಮಾ ಮಾಡಬೇಕಾ ಎಂಬ ಪ್ರಶ್ನೆ ಬಂದರೂ, ನಿರ್ಮಾಪಕರ ಸಿನಿಮಾ ಪ್ರೀತಿ ಅಷ್ಟಕ್ಕೆಲ್ಲ ಕಾರಣವಾಯ್ತು. ಇನ್ನು ಇಲ್ಲಿ ಸಜ್ಜನರ ಗುಂಪು ಕೆಲಸ ಮಾಡಿದ್ದರಿಂದ ಒಳ್ಳೆಯ ಚಿತ್ರ ಮೂಡಿಬಂದಿದೆ ಎಂದರು ರಮೇಶ್‌ಭಟ್.
ನಟ ಶಿವಧ್ವಜ್ ಅವರಿಗೆ ನಿರ್ದೇಶಕರು ಕಥೆ ಹೇಳುವ ಮುನ್ನ, ಸ್ಟೋರಿಬೋರ್ಡ್ ಪುಸ್ತಕ ಕೊಟ್ಟರಂತೆ. ಅದನ್ನು ನೋಡಿದ ಶಿವಧ್ವಜ್ ಅವರಿಗೆ ಇಡೀ ಸಿನಿಮಾ ನೋಡಿದಂತೆ ಭಾಸವಾಯಿತಂತೆ. ಆಮೇಲೆ ನಿರ್ದೇಶಕರು ಕಥೆ ಹೇಳಿದಾಗ, ಮಿಸ್ ಮಾಡಿಕೊಳ್ಳಬಾರದು ಅಂತ ಚಿತ್ರ ಮಾಡಿದ್ದೇನೆ. ಇಲ್ಲಿ ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ. ನಾನು ಇಲ್ಲಿ ಉದ್ಯಮಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ಚಿತ್ರಗಳು ವಿದ್ಯಾರ್ಥಿಗಳಿಗೆ ತಲುಪಬೇಕು. ಸರ್ಕಾರ ಈ ನಿಟ್ಟಿನಲ್ಲಿ ಒಂದು ಆದೇಶ ಹೊರಡಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಪರಿಸರ ಕಾಳಜಿ ಬಗ್ಗೆ ಅರಿವಾಗುತ್ತದೆ ಎಂದರು ಶಿವಧ್ವಜ್.
ಪ್ರಸಾದ್ ಕೆ. ಶೆಟ್ಟಿ ಸಂಗೀತವಿದೆ, ಸಚಿನ್ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ರವಿರಾಜ್ ಗಾಣಿಗ ಸಂಕಲನವಿದೆ. ಕರಿಸುಬ್ಬು, ಸಂಭಾಷಣೆ ಬರೆದ ರಜಾಕ್ ಪುತ್ತೂರು, ಸಿನಿಮಾ ಹೊಣೆಗಾರಿಕೆ ಹೊತ್ತ ಪ್ರೀತ ಮೆನೇಜಸ್ ಮಾತನಾಡಿದರು. ಚಿತ್ರಕ್ಕೆ ಕೃಷ್ಣಮೋಹನ್ ಪೈ ಕೂಡ ನಿರ್ಮಾಪಕರು. ಚಿತ್ರದಲ್ಲಿ ಜ್ಯೋತಿ ರೈ, ಅರವಿಂದ್ ಶೆಟ್ಟಿ, ತಮನ್ನಾ ಶೆಟ್ಟಿ ಇತರರು ನಟಿಸಿದ್ದಾರೆ. ಲಹರಿ ವೇಲು ಹಾಗೂ ಪೊಲೀಸ್ ಮಾಜಿ ಅಧಿಕಾರಿ ಬಿ.ಎನ್.ಎಸ್.ರೆಡ್ಡಿ ಚಿತ್ರದ ಕುರಿತು ಮಾತನಾಡಿದರು.
ವಿಜಯ್ ಭರಮಸಾಗರ