Advertisement

ಜೈಲಲ್ಲಿ ಹುಟ್ಟಿದ ಕಥೆ

11:21 AM Dec 16, 2018 | Team Udayavani |

“ಒಳಿತು ಮಾಡು ಮನುಸ’ ಖ್ಯಾತಿಯ ಗೀತೆ ರಚನೆಕಾರ ನಮ್‌ ಋಷಿ “ಪಾಯಿಂಟ್‌ ಔಟ್‌’ ಎಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಕಾಲ ಜೈಲು ಸೇರಿದ್ದ ನಮ್‌ ಋಷಿ, ಅಲ್ಲೇ ಹಲವು ಕಥೆಗಳನ್ನು ಬರೆದಿದ್ದರಂತೆ. ಜೈಲಿನ ವಾತವರಣದಲ್ಲಿರುವ ಬಹುಪಾಲು ಜನ ಮುಗªರು. ಆದರೆ, ಹೊರಗಿನವರು ಅವರನ್ನು ಭ್ರಷ್ಟರು, ಮೋಸಗಾರರು ಅಂತ ತಿಳಿದುಕೊಂಡಿದ್ದಾರೆ.

Advertisement

ಇದೇ ಅಂಶ ಇಟ್ಟುಕೊಂಡು ಈ ಚಿತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲು ಅಣಿಯಾಗುತ್ತಿದ್ದಾರೆ ನಮ್‌ ಋಷಿ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್‌ ಧರ್ಮದ ನಾಲ್ವರು ಬಿಂದಾಸ್‌ ಹುಡುಗರ ಮಧ್ಯೆ ಹುಡುಗಿಯೊಬ್ಬಳು ಪ್ರವೇಶಿಸಿದಾಗ ಏನೆಲ್ಲಾ ನಡೆಯುತ್ತದೆ ಎಂಬ ಅಂಶ ಇಲ್ಲಿ ಹೈಲೈಟ್‌. ಅಲ್ಲದೆ ಪ್ರಸ್ತುತ ಸಮಾಜದಲ್ಲಿ ನಾವೇನು ಮಾಡುತ್ತಿದ್ದೇವೆ. ಜನ ಏನು ಯೋಚನೆ ಮಾಡುತ್ತಿದ್ದಾರೆ.

ಯಾವುದು ಸರಿ, ಯಾವುದು ತಪ್ಪು ಹೀಗೆ ಹಲವು ವಿಷಯಗಳ ಸುತ್ತ “ಪಾಯಿಂಟ್‌ ಔಟ್‌’ ಚಿತ್ರ ಸಾಗಲಿದೆಯಂತೆ. ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಕೂಡ ಇರಲಿದೆ ಎನ್ನುತ್ತದೆ ಚಿತ್ರತಂಡ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ “ಪಾಯಿಂಟ್‌ ಔಟ್‌’ ಚಿತ್ರ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರ ಸೆಟ್ಟೇರಿದೆ. ಚಿತ್ರದಲ್ಲಿ ಬರುವ “ಒಳಿತು ಮಾಡು ಮನುಸ’ ಹಾಡಿಗೆ ಕಲಾವಿದರು ನೃತ್ಯ ಮಾಡುವ ಮೊದಲ ದೃಶ್ಯಕ್ಕೆ ಲಹರಿ ವೇಲು ಕ್ಲಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಪುನೀತ್‌, ಮಂಜು, ಪ್ರಭು ಜಾವಗಲ್‌, ಮನು, ಅಜಯ್‌ ಶಂಕರ್‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಯುವ ಪ್ರತಿಭೆಗಳಾದ ಪ್ರದೀಪ್‌-ವಿವೇಕ್‌ ಜಂಟಿಯಾಗಿ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಗುರು ಸಂಗೀತ ಸಂಯೋಜನೆಯಿದೆ. ಶಂಕರ ಛಾಯಾಗ್ರಹಣ ಮಾಡಿದರೆ, ಸಿ.ಕೆ ಕುಮಾರ್‌ ಸಂಕಲನವಿದೆ.

ಬೆಂಗಳೂರು ಮತ್ತು ರಾಜಸ್ಥಾನದಲ್ಲಿ “ಪಾಯಿಂಟ್‌ ಔಟ್‌’ ಚಿತ್ರೀಕರಣ ನಡೆಯಲಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆಗೆ “ಭೂಮಿ ಮೇಲೆ ಸಾವು ಸಂಭ್ರಮವಾದರೆ, ದ್ವೇಷ ಸಾಯುತ್ತದೆ’ ಎಂಬ ಅಡಿಬರಹವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮೇ ವೇಳೆಗೆ ಜನರ ಮುಂದೆ “ಪಾಯಿಂಟ್‌ ಔಟ್‌’ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next