ಪ್ರಧಾನಿ ಮೋದಿ ಅವರ ರೂಪಿಸಿದ ಯೋಜನೆಗಳೆಲ್ಲಾ ಒಂದೊಂದೇ ಚಿತ್ರವಾಗುತ್ತಿದೆ ಎನ್ನುವುದು ವಿಶೇಷ. “ಸ್ವತ್ಛ ಭಾರತ’ ಆಂದೋಲನದಿಂದ ಸ್ಫೂರ್ತಿಗೊಂಡ ನಿರ್ಮಾಪಕ ಬಿ. ವಿಜಯಕುಮಾರ್ ಮತ್ತು ನಿರ್ದೇಶಕ ಬಿ.ಆರ್ ಕೇಶವ್, “ಸ್ವತ್ಛ ಭಾರತ’ ಎಂಬ ಚಿತ್ರ ಮಾಡಿದ್ದರು. ಈಗ ಮೋದಿ ಅವರ ಇನ್ನೊಂದು ಜನಪ್ರಿಯ ಯೋಜನೆಯು, ಚಿತ್ರವೊಂದರ ಟೈಟಲ್ ಆಗಿದೆ. ದುಡ್ಡಿನ ಅಗತ್ಯತೆ, ಕಷ್ಟಪಟ್ಟವರ ಹಣ ಯಾರ್ಯಾರ “ಕೈ’ ಸೇರುತ್ತೆ ಎಂಬಿತ್ಯಾದಿ ವಿಷಯ ಕುರಿತು ಒಂದು ಸಿನಿಮಾ ಸೆಟ್ಟೇರುತ್ತಿದೆ. ಅದಕ್ಕೆ “ಜನ್‌ಧನ್’ ಎಂದು ನಾಮಕರಣ ಮಾಡಲಾಗಿದೆ.
ಈ “ಜನ್‌ಧನ್” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ ನಾಗಚಂದ್ರ. ಸಿದ್ಧಿ ವಿನಾಯಕ ಬ್ಯಾನರ್‌ನಲ್ಲಿ ಗೆಳೆಯರು ಸೇರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ತುಂಬಿವೆ. ಅದರಲ್ಲೂ ರಂಗಭೂಮಿ ಕಲಾವಿದರಿಗೆ ಆವಕಾಶ ಕೊಟ್ಟಿದ್ದಾರೆ ನಿರ್ದೇಶಕರು. ಸುನೀಲ್ ಶಶಿ ಮತ್ತು ರಚನಾ ದಶರಥ್ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಅನುಭವ. ಕ್ಯಾಮೆರಾ ಮುಂದೆ ನಿಲ್ಲುವ ಮುನ್ನ, ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಪಕ್ವತೆ ಪಡೆದೇ ಬಂದಿದ್ದಾರೆ ಸುನೀಲ್, ರಚನಾ ದಶರಥ್.
ಇದೊಂದು ಜರ್ನಿ ಸ್ಟೋರಿ. ಬೆಂಗಳೂರು ಟು ಶಿರಾವರೆಗೂ ಕಥೆ ಸಾಗಲಿದೆ. ಮುಂಜಾನೆ 4 ಗಂಟೆಗೆ ಶುರುವಾಗುವ ಆ ಜರ್ನಿ ಸಂಜೆ 6 ಕ್ಕೆ ಅಂತ್ಯವಾಗುತ್ತೆ. ಈ ಒಂದು ದಿನದ ಜರ್ನಿ ಸ್ಟೋರಿಯಲ್ಲಿ ನಿರೀಕ್ಷಿಸದ ಘಟನೆಗಳು ನಡೆದು ಹೋಗುತ್ತವೆ. ಹುಡುಗ-ಹುಡುಗಿಯ ನಡುವಿನ ಪ್ರೀತಿ, ಪ್ರೇಮ, ಪ್ರಣಯ, ದುಡ್ಡಿನ ಲೆಕ್ಕಾಚಾರ, ಕೊಲೆ, ಜಗಳ, ಅಲ್ಲಲ್ಲಿ ಮನರಂಜನೆಗಳ ಮೂಲಕ “ಜನ್‌ಧನ್’ ಕಥೆ ಸಾಗುತ್ತದೆ. ದುಡ್ಡಿನ ಅಗತ್ಯ ಎಲ್ಲರಿಗೂ ಇದೆ. ಕಷ್ಟಪಟ್ಟು ದುಡಿದ ಜನರ ಹಣ ಯಾರ ಕೈ ಸೇರುತ್ತೆ.
ಏನೆಲ್ಲಾ ಆಗುತ್ತೆ ಎಂಬ ವಿಷಯದ ಜತೆಗೆ ಸಣ್ಣದ್ದೊಂದು ಹಾರರ್ ಟಚ್ ಕೂಡ ಇದರಲ್ಲಿದೆ. ಅದೇ ಸಿನಿಮಾದ ಟ್ವಿಸ್ಟು ಎನ್ನುತ್ತಾರೆ ನಿರ್ದೇಶಕರು. ಅಂದಹಾಗೆ, ಚಿತ್ರಕ್ಕೆ ಮಾರ್ಚ್ 3 ರಂದು ಮುಹೂರ್ತ ನೆರವೇರಲಿದೆ. ಎಸ್.ನಾರಾಯಣ್ ಕ್ಲಾಪ್ ಮಾಡಲಿದ್ದಾರೆ. ರೇಣು ಸಂಗೀತ ನೀಡಿದರೆ, ಉಮೇಶ್ ಕಂಪ್ಲಾಪುರ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಬೆಂಗಳೂರು, ಶಿರಾ ಮತ್ತು ಅದರ ನಡುವಿನ ರಸ್ತೆ ಬದಿಯೇ ಚಿತ್ರೀಕರಣ ನಡೆಯಲಿದೆ.