Advertisement

ಕತೆ: ಸುಳಿದು ಮರೆಯಾದ ತಂಗಾಳಿಯಂತೆ

09:49 AM Feb 17, 2020 | mahesh |

ತಡರಾತ್ರಿ, ವಿದೇಶದಲ್ಲಿರುವ ಅಪ್ಪನ ಜೊತೆ ಮಾತನಾಡಿದ್ದು ರಾಹುಲನ ಕಿವಿಗಳಲ್ಲಿ ಇನ್ನೂ ಗುಂಯುಡುತ್ತಲೇ ಇತ್ತು. ಕಣ್ಮುಚ್ಚಿದ್ದರೂ ನಿದ್ದೆಗೆ ಆಸ್ಪದ ಕೊಡದೆ ಅವನನ್ನು ತಮ್ಮ ಹತೋಟಿಗೆ ತಂದುಕೊಂಡಿದ್ದ ಆ ಮಾತುಗಳ ಆಕ್ರಮಣಕ್ಕೆ ತನ್ನ ಹಾಸಿಗೆಯ ತುಂಬೆಲ್ಲ ಹೊರಳಾಡುತ್ತಲೇ ಇದ್ದ.

Advertisement

ಮಂದ ಬೆಳಕಿನ ರಾತ್ರಿ ದೀಪವನ್ನು ದಿಟ್ಟಿಸುತ್ತ ಕೂತವನಿಗೆ, ನಾಳೆಯ ಬೆಳಕನ್ನು ಈಗಲೇ ಕಾಣುವ ಉಮೇದು. ಆದರೆ, ಸಮಯ ನಿರ್ದಯವಾಗಿ ಹೆಪ್ಪುಗಟ್ಟಿತ್ತು. ಅಪಾರ ಸಂಪಾದನೆಯ ರುಚಿ ಕಂಡಿದ್ದ ಅಪ್ಪ-ಅಮ್ಮನಿಗೆ, ತಮ್ಮ ಮಗನಿಗೂ ಅದೇ ಹಾದಿ ಹಿಡಿಸುವ ಭರಾಟೆ. ನಗರದ ಐಷಾರಾಮಿ ಫ್ಲಾಟ್‌ ಬಾಡಿಗೆಗೆ ಗೊತ್ತುಮಾಡಿ ಅಲ್ಲಿ ಮಗನನ್ನಿಟ್ಟು, ದೊಡ್ಡ ಕಾಲೇಜೊಂದರಲ್ಲಿ ಅವನ ಉನ್ನತ ವ್ಯಾಸಂಗಕ್ಕೆ ವ್ಯವಸ್ಥೆ ಮಾಡುವಲ್ಲಿ ಅಪ್ಪ-ಅಮ್ಮ ತೋರಿಸಿದ್ದ ಹಮ್ಮು- ಆ ಮನೆಯ ಪ್ರತೀ ವೈಭವೋಪೇತ ಮೇಜು-ಕುರ್ಚಿಗಳಲ್ಲಿ, ಎಲ…ಇಡಿ ಟೀವಿ, ಕೂಲರ್‌ನಲ್ಲಿ ರಾರಾಜಿಸುತ್ತಿದ್ದವು. ಆದರೆ ಅವ್ಯಾವುವೂ ಕಂಗೆಟ್ಟ ರಾಹುಲನ ಸನಿಹ ಬಂದು ಸಂತೈಸುವ ಗೋಜಿಗೆ ಬಾರದೇ ಇದ್ದಲ್ಲೇ ಅಣಕಿಸುವಂತೆ ಬಿದ್ದುಕೊಂಡಿದ್ದವು. ಅಪ್ಪನ ಚಿತ್ರ ಕಣ್ಮುಂದೆ ಧಿಮಿಧಿಮಿ ಕುಣಿಯುವಂತೆನಿಸಿ, ರಾಹುಲ ಹಾಸಿಗೆಯಿಂದೆದ್ದು, ಕಿಟಕಿಯಾಚೆಯ ಕತ್ತಲನ್ನು ನೋಡುತ್ತಾ ನಿಂತ. ಇಡೀ ಕಾಲೋನಿ ನಿದ್ದೆಯಲ್ಲಿದ್ದಂತೆ, ಅಪ್ಪಅಮ್ಮ ಇಬ್ಬರೇ ನಿರ್ಜನ ರಸ್ತೆಯ ಆಚೆಬದಿ ನಿಂತು, ಪ್ರಖರವಾಗಿ ಬೆಳಕು ಬೀರುವ ಟಾರ್ಚ್‌ ದೀಪವೊಂದನ್ನು ನೇರವಾಗಿ ತನ್ನ ಕಣ್ಣುಗಳಿಗೆ ಚುಚ್ಚುವಂತೆ ಹಾಯಿಸಿ ಏನೋ ಹೇಳುವಂತೆ ಭಾಸವಾದಂತಾಗಿ, ರಾಹುಲ ಮತ್ತೆ ಹಾಸಿಗೆಯ ಕಡೆಗೋಡಿದ ಭಾರನೇ ಅದರ ಮೇಲೆ ಅಂಗಾತ ಬಿದ್ದ. ಕೊಂಚ ಹೊತ್ತಿನಲ್ಲಿ ನಿದ್ರೆಯ ಭ್ರಮೆಗೊಳಗಾಗಿದ್ದ.

ಮೊಬೈಲಿನ ಅಲಾರಾಮ್‌ ಹೊಡೆದುಕೊಂಡಾಗ ಕಣ್ಣುಬಿಟ್ಟ ರಾಹುಲ, ಕಿಟಕಿಯ ಬಳಿ ಬಂದು, ಪರದೆಗಳನ್ನು ಸರಿಸಿದ್ದ. ಅಷ್ಟರಲ್ಲಿ, ಜೋರು ಜೋರಾದ ಮಾತುಗಳ ಸದ್ದು, ಅದರೊಟ್ಟಿಗೆ ಜನರ ಗುಂಪೊಂದು ಕಾಲೋನಿಯ ಅಂಚಿಗಿದ್ದ ಸಣ್ಣ ಪಾರ್ಕಿನ ಕಡೆಗೆ ಧಾವಿಸುತ್ತಿರುವುದು ಕಂಡಿತು. ಬಾಲ್ಕನಿಯ ಬಾಗಿಲು ತೆಗೆದು ಕೆಳಕ್ಕೆ ಇಣುಕಿದ. ಅದಾಗಲೇ ಇನ್ನಷ್ಟು ಜನ, ಪೊಲೀಸರು ಕೂಡ ನೆರೆದಿದ್ದು ನೋಡಿ ಕುತೂಹಲ ಹೆಚ್ಚಿ ಕೆಳಗಿಳಿದು ಬಂದಿದ್ದ.

ಜನಜಂಗುಳಿಯ ನಡುವಿಂದ ಯಾರೋ ಮುದುಕಮ್ಮ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಬಂದು ಮಲಗಿದ್ದಾರಂತೆ ಎನ್ನುವ ಸುದ್ದಿ ತೂರಿ ಬಂದಿತ್ತು. ಆ ಮುದುಕಿಯನ್ನು ನೋಡಲು ಎಡತಾಕುತ್ತಿದ್ದ ಜನರೊಟ್ಟಿಗೆ ತಾನೂ ಮುಂದುವರೆದಿದ್ದ. ಜನರನ್ನು ಪಕ್ಕಕ್ಕೆ ಸರಿಸಲು ಹರಸಾಹಸ ಪಡುತ್ತಿದ್ದ ಪೊಲೀಸರು ಒಂದು ಕಡೆ, ಇನ್ನೊಂದೆಡೆ, ಈ ಗಲಾಟೆಗಳನ್ನು ಲೆಕ್ಕಿಸದೆ ನಿರುಮ್ಮಳವಾಗಿ ನಿ¨ªೆಮಾಡುತ್ತಿದ್ದ ಮುದುಕಿ- ಕೊನೆಗೂ ರಾಹುಲನಿಗೆ ಕಂಡಳು.

ಸಣ್ಣ ಪಟ್ಟಾ-ಪಟ್ಟಿ ಬಣ್ಣದ ಚೀಲವೊಂದನ್ನು ದಿಂಬು ಮಾಡಿಕೊಂಡು, ಸುಕ್ಕುಗಟ್ಟಿದ ತನ್ನ ಕೈಗಳನ್ನು ಮಡಚಿ ಅದರ ಮೇಲಿಟ್ಟುಕೊಂಡು ಕಲ್ಲುಬೆಂಚಿನ ಮೇಲೆ ನಿದ್ರಿಸುತ್ತಿದ್ದವಳ ಹತ್ತಿರ ಹೋಗಲು ಅಂಜುತ್ತಿ¨ªಾಗ ಕಾಲೋನಿಯ ಮುಖ್ಯಸ್ಥನೆನಿಸಿಕೊಂಡವ ಮೆಲ್ಲನೆ ಮುದುಕಿಯ ಬಳಿ ಸಾರಿ, “”ಏಳಜ್ಜಿ… ಏಳು ಇಲ್ಲಿ ಯಾಕೆ ಬಂದು ಮಲಗಿದ್ಯಾ?” ಎಂದೊಡನೆ, ಆ ಮುದುಕಿ ಎದ್ದು ಕಣ್ಣುಜ್ಜಿಕೊಳ್ಳುತ್ತ, ಸುತ್ತ ಮುತ್ತಿಕೊಂಡ ಮುಖಗಳನ್ನು ಒಮ್ಮೆ ನೋಡಿ, “”ನಾನು ಇನ್ನು ಬದುಕಿದೀನಿ… ಹೆದರಬೇಡಿ… ನನ್ನ ಸಂಬಂಧಿಕರ ಮನೆಗೆ ಹೋಗೋದಿತ್ತು, ವಿಳಾಸ ಸಿಕ್ಕದೆ ಹುಡುಕಿ ಹೈರಾಣಾಗಿ ಇÇÉೇ ಮಲಗಿºಟ್ಟೆ, ಸಾರೀ ಫಾರ್‌ ದಿ ಟ್ರಬಲ…” ಎನ್ನುತ್ತ ತನ್ನ ಬ್ಯಾಗಿನಿಂದ ಮೊಬೈಲ್‌ ತೆಗೆದಳು. “”ಅಯ್ಯೋ ಬ್ಯಾಟರಿ ಮುಗಿದಿದೆ…” ಎಂದು ಅಲವತ್ತುಕೊಂಡು ಬೊಚ್ಚುಬಾಯಿಯಲ್ಲಿ ನಗು ತುಂಬಿಸಿಕೊಂಡು, “”ಯಾಕೆ ಇನ್ನೂ ಸಂದೇಹ? ನಾ ಪ್ರಾಣ ಬಿಡೋಕ್ಕೆ ಬಂದಿಲ್ಲ, ಐ ಆಮ್‌ ಸ್ಟ್ರಾಂಗ್‌” ಅಂದ ತಕ್ಷಣ, ನೆನ್ನೆಯಿಂದ ಕುಗ್ಗಿಹೊಗಿದ್ದ ರಾಹುಲನಿಗೆ ಏನನ್ನಿಸಿತೋ ಏನೋ. “”ಅವ್ರು ನಮ್ಮಜ್ಜಿ ಶಾಂತಮ್ಮ ಅಂತ ಸ್ವಲ್ಪ ಅರಳುಮರಳು, ನನ್ನನ್ನೇ ಹುಡುಕಿ ಬಂದು ದಾರಿ ತಪ್ಪಿ¨ªಾರೆ” ಎಂದು ಇತ್ತ ಪೊಲೀಸರಿಗೆ ಜೋರಾಗಿ ಕೇಳುವಂತೆ ಹೇಳುತ್ತ ಅತ್ತ. “”ಏನಜ್ಜಿ ಹಿಂಗ ಮಾಡೋದು, ರಾತ್ರಿ ಎಲ್ಲ ನಿಮಗೋಸ್ಕರ ಕಾಯೋದೇ ಆಯಿತು ಬನ್ನಿ ಬನ್ನಿ” ಎನ್ನುತ್ತ, ತೋಚಿದಷ್ಟು ಸಮಜಾಯಿಷಿ ಕೊಟ್ಟು, ಅಜ್ಜಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ಮೆತ್ತಗಾಗಿದ್ದ ಅವರ ಕೈಹಿಡಿದು ನಡೆಸುತ್ತ ರಾಹುಲ ಮಾತಿಗಿಳಿದ,

Advertisement

“”ನಿನ್ನ ಹೆಸರೇನು ಅಜ್ಜಿ ?”
“ನೀನೆ ಇಟ್ಟೆಯಲ್ಲ ಶಾಂತಮ್ಮಜ್ಜಿ ಅಂತ”
“”ಹೇ… ಅದು ಸುಳ್ಳು ಅಂತ ನಿಂಗೂ ಗೊತ್ತು”
“”ಸುಳ್ಳೋ ನಿಜಾನೋ… ನಾನೀಗ ನಿನ್ನ ಶಾಂತಮ್ಮಜ್ಜಿ”
ಮತ್ತೆ ಬೊಚ್ಚು ಬಾಯಿಬಿಟ್ಟು ನಕ್ಕು ರಾಹುಲನ ಕೈಹಿಡಿದು ಮೆಲ್ಲಗೆ ಅದುಮಿದಾಗ, ಅಲ್ಲಿ ವಿಚಿತ್ರ ಸಂಬಂಧವೊಂದು ಬೆಸೆದಂತಿತ್ತು. ಮೂರನೇ ಮಹಡಿಯಲ್ಲಿದ್ದ ಫ್ಲಾಟಿಗೆ ಲಿಫ್ಟ್ ಬೇಡ ಎನ್ನುತ್ತ ಮೆಟ್ಟಿಲೇರಿಯೇ ಹೋಗೋಣ ಎಂದ ಶಾಂತಮ್ಮಜ್ಜಿ- ತನ್ನನ್ನು ತಾನೇ ಪರಿಚಯಿಸಿಕೊಳ್ಳತೊಡಗಿದಳು. ರಾಹುಲನಿರುವ ಕಾಲೊನಿಯಿಂದ ಬಹುದೂರದಲ್ಲಿರುವ ಬಡಾವಣೆಯಲ್ಲಿನ ಆಕೆಯ ಮಗನ ಹಂಗಿನರಮನೆಯಲ್ಲವಳ ವಾಸ್ತವ್ಯವಂತೆ. ಎಲ್ಲವೂ ಇದ್ದರೂ ಏನೋ ಕಳಕೊಂಡ ಅನಾಥಪ್ರಜ್ಞೆಯನ್ನು ಹೊರದೂಡಲು, ಯಾರಿಗೂ ಹೇಳದೆ ಕೇಳದೆ, ವಾಕಿಂಗ್‌ ಮಾಡುವ ನೆಪದಲ್ಲಿ, ಆಗಾಗ್ಗೆ ಏಕಾಂಗಿಯಾಗಿ ವಿಹರಿಸುವುದು, ಅಪರಿಚಿತರಾದರೂ ಸಿಕ್ಕವರೊಡನೆ ಗಂಟೆಗಟ್ಟಲೆ ಮಾತಾಡುವುದು ಆಕೆಗೀಗ ಅನಿವಾರ್ಯ ಗೀಳು.

ಕಥೆ ಕೇಳುತ್ತಲೇ ಮೂರನೆಯ ಮಹಡಿ ತಲುಪಿ ಬಾಗಿಲು ತೆರೆದು ಅಜ್ಜಿಯನ್ನು ಬರಮಾಡಿಕೊಂಡಿದ್ದೇ ತಡ, ಮನೆಯನ್ನೆಲ್ಲ ದಿಟ್ಟಿಸಿ, “”ಅಪ್ಪ ಅಮ್ಮ?” ಎಂದು ಕೇಳಿದ್ದಳು. ರಾಹುಲ ತನ್ನ ಅಪ್ಪ-ಅಮ್ಮನ ಬಗ್ಗೆ, ತಾನು ಇಲ್ಲಿದ್ದುಕೊಂಡು ಕಲಿಯುತ್ತಿರುವುದರ ಕಥೆಯನ್ನು ಹೇಳಿದಾಗ, “ನೀನು ನನ್ನ ಹಾಗೆ ಅಂತಾಯಿತು” ಎಂದು ಉದ್ಗರಿಸಿದಳು.

ಅಜ್ಜಿಯ ನಗುಮಿಶ್ರಿತ ಪ್ರಶ್ನೆಗೆ ರಾಹುಲನಲ್ಲಿ ಉತ್ತರವಿರಲಿಲ್ಲ. ರಾಹುಲನ ತುಂಬು ಕೆನ್ನೆಗಳನ್ನು ಹಿಂಡಿ ಸೋಫಾ ಮೇಲೆ ಕುಳಿತು ಅರಸಿನ-ಕುಂಕುಮ ಮೆತ್ತಿದ ತೆಂಗಿನಕಾಯಿಯ ಚಿಪ್ಪುಗಳನ್ನು ತನ್ನ ಖಾಕಿ ಚೀಲದಿಂದ ಹೊರತೆಗೆದು ರಾಹುಲನ ಕೈಗಿಟ್ಟಳು. ಮಗನ ಹುಟ್ಟುಹಬ್ಬಕ್ಕೆಂದು ಕಾಲೋನಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ಒಂದಿಷ್ಟು ಕಾಲಕ್ಷೇಪ ನಡೆಸಿ ಪಾರ್ಕಿನಲ್ಲಿ ಅಡ್ಡಾಡಿ, ಬಳಲಿದಂತಾಗಿ ಅಲ್ಲೇ ಪಾರ್ಕಿನ ಕಲ್ಲುಬೆಂಚಿನ ಮೇಲೆ ಮಲಗಿದ್ದು- ಅಜ್ಜಿಯ ವಿವರಣೆಯನ್ನೆಲ್ಲ ವಿನಮ್ರನಾಗಿ ಕೂತು ಕಣ್ಣರಳಿಸಿಕೊಂಡು ಕೇಳುತ್ತಿದ್ದ.

ಕೇವಲ ಚಿಕ್ಕ ಅವಧಿಯಲ್ಲಿ ತಳುಕು ಹಾಕಿಕೊಂಡ ಈ ಅಜ್ಞಾತಸಂಬಂಧ, ಬರಬರುತ್ತ ಸಲುಗೆಯಾಗಿ ಪರಿವರ್ತನೆಯಾಗುತ್ತಿದ್ದಂತೆ- ತನ್ನ ಮುಂದೆ ಕೂತ ರಾಹುಲನ ತಲೆಗೂದಲಲ್ಲಿ ಬೆರಳಾಡಿಸಿ ಅಜ್ಜಿ,, “”ಇವತ್ತು ನಿನ್ನ ಮನೆಯಲ್ಲಿ ನನ್ನ ಮಗನ ಬರ್ತ್‌ಡೇ ಮಾಡಕ್ಕೆ ಅನುಮತಿ ಕೊಡತೀಯೇನಪ್ಪಾ?” ಎಂದಿದ್ದಳು.

ತನ್ನ ಹೆಸರೂ ಕೇಳದೆ ಇಷ್ಟು ಆಪ್ತವಾಗುತ್ತಿರುವ ಶಾಂತಮ್ಮಜ್ಜಿಯ ಮುಖದಲ್ಲಿದ್ದ ದೈನ್ಯತೆಗೆ, ಪ್ರತೀಕ್ಷೆಗೆ ತಾನಿಂದು ನೆರವಾಗುತ್ತಿರುವಾಗ ರಾಹುಲನಿಗೆ ಹಿಗ್ಗು. “ಅಷ್ಟೇ ತಾನೆ?’ ಎನ್ನುವವನಂತೆ ಹುಟ್ಟುಹಬ್ಬದ ಆಚರಣೆಗೆ ಏನೇನು ತರಬೇಕು, ಅಣಿಮಾಡಿಕೊಳ್ಳಬೇಕು ಎನ್ನುವ ಚರ್ಚೆಗೆ ಇಳಿದ. ಅಜ್ಜಿ, ತನ್ನ ಮೊಬೈಲನ್ನು ಛಾರ್ಜರಿಗೆ ಸಿಕ್ಕಿಸುತ್ತ “”ಇದು ಸ್ವಲ್ಪ ಬಂದ್‌ ಆಗಿರ್ಲಿ… ನಿರಾಳ ಅನ್ನಿಸುತ್ತೆ” ಎಂದವನನ್ನು ಪ್ರೀತಿಯಿಂದ ನಿರ್ದೇಶಿಸುತ್ತ ಹೋದಳು. “”ಬಾ, ನಿನ್‌ ಮೊಬೈಲ್‌ ತೊಗೊ. ನಿಂಗೆ ಇಷ್ಟ ಆಗಿರೋ ಕೇಕು ಆರ್ಡರ್‌ ಮಾಡೋಣ, ಚೀಸ್‌ ಜಾಸ್ತಿ ಇರೋ ಪಿಜ್ಜಾ ತರಸೋಣ’ ಹೀಗೆಲ್ಲ ಬಡಬಡಿಸುತ್ತಲೇ ಕೇಕು, ಪಿಜ್ಜಾ ಆರ್ಡರ್‌ ಮಾಡುವ ವಹಿವಾಟನ್ನು ಅಜ್ಜಿ ಸಮರ್ಪಕವಾಗಿ ಸಂಪೂರ್ಣಗೊಳಿಸಿದಾಗ ಅವನು ಬೆಕ್ಕಸಬೆರಗಾಗಿದ್ದ. ‘ರಾಗಿ-ಹುರಿಟ್ಟು, ಕೋಡುಬಳೆ, ಗುಳ್ಳಪಾವಟೆ- ಇವಿಷ್ಟೇ ಅಂದೊRಂಡ್ಯಾ’ ಎಂದು ಶಾಂತಮ್ಮಜ್ಜಿ ಛೇಡಿಸಿದಾಗ ರಾಹುಲ ಆ ತಿನಿಸುಗಳ ಹೆಸರು ಕೇಳುತ್ತಿರುವುದು ಇದೇ ಮೊದಲ ಸಲ ಎಂಬಂತೆ ಬೆಪ್ಪಾಗಿ ನಕ್ಕಿದ್ದ.

“ಹುರಿಟ್ಟು ಅಂದ್ರೆ ಗೊತ್ತಾ… ಅಪ್ಪಿ’ ಎಂದು ಸೋಫಾದಿಂದ ಕೆಳಗಿಳಿದು ಅವನ ಮುಂದೆ ತನ್ನ ಅನುಭವದ ಹರಹು ಹರಡುವಂತೆ ಕೂತಳು. ರಾಹುಲನ ಕಿವಿಗಳಿಗೆ ತೀರಾ ಹೊಸದೆನಿಸುವ ಪದಗಳೊಂದಿಗೆ ಅಜ್ಜಿ ರಸವತ್ತಾಗಿ ವಿವರಿಸುವಾಗ, ಮನೆಯಲ್ಲಿ ಇಂದೇನೋ ಹಬ್ಬ ಜರುಗುವಂತೆ, ಹೊಸಗಾಳಿ ಹಾಯುವಂತೆ ಆಹ್ಲಾದ ಮೂಡುತ್ತಿತ್ತು. “”ಹುರಿಟ್ಟು ಮಾಡಕ್ಕೆ ನೆನೆಸಿದ ರಾಗಿಯನ್ನು ತಂಪಾಗಿ ಒಣಗಿಸಬೇಕು, ಆಮೇಲೆ ಆ ರಾಗಿಯನ್ನು ದೊಡ್ಡ ಬಾಣಲೆಯಲ್ಲಿ ಹಾಕಿ ಹಂಚಿ ಕಡ್ಡಿಪೊರಕೆಯ ಹಿಡಿಯಲ್ಲಿ ಆಡಿಸುತ್ತಾ ಚಿಟಚಿಟ ಎನ್ನುವಂತೆ ಪ್ರತಿಕಾಳನ್ನೂ ಅರಳಿಸಬೇಕು. ಕಪ್ಪು ಮೈಒಡೆದುಕೊಂಡು ಬೆಳ್ಳಗೆ ಕಾಣುವ ರಾಗಿ ಕಾಳುಗಳು, ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳಂತೆ! ಅವನ್ನೆಲ್ಲ ನುಣ್ಣಗೆ ಬೀಸಿಕೊಂಡು ಬಂದರೆ… ಹುರಿಟ್ಟು ರೆಡಿ. ಹಂಚಿಕಡ್ಡಿಪೊರಕೆ ಅಂದ್ರೆ ನೆನಪಾಗತ್ತೆ… ಅದರ ಊಬುಗಳು ಚಡ್ಡಿಗೋ, ಬನಿಯನ್ನಿಗೋ ಹತ್ತಿದರೆ ಚುಚ್ಚಿಕಾಡ್ತವೆ ಆ ಊಬಿನ ಸಂಗಡ ಸ್ವಲ್ಪ ಹುಷಾರಾಗಿರಬೇಕು”- ಅಜ್ಜಿಯ ಈ ಮಾತುಗಳನ್ನು ಕೇಳುವಾಗ ಇಲ್ಲೇ ತನ್ನೆದುರು ಕೂತು ರಾಗಿ ಹುರಿದು, ಹುರಿಟ್ಟು ಮಾಡುತ್ತಿರುವಂತನಿಸಿತ್ತು. “”ಹುರಿಟ್ಟು ಮಾಡಿದ್ದೇನೋ ಆಯಿತು ಅದನ್ನು ತಿನ್ನೋದು ಹೇಗೆ” ಎನ್ನುವುದರ ಬಗ್ಗೆ ತನ್ನ ಅನುಭವದ ಮೂಸೆಯ ಮುಚ್ಚಳ ತೆರೆದಿಟ್ಟಳು. ಬಿಸಿಹಾಲಿನ ಜೊತೆ, ತುಪ್ಪ-ಸಕ್ಕರೆ ಹಾಕಿ ಹದವಾಗಿ ಕಲಸಿದ ಹುರಿಹಿಟ್ಟಿನ ಉಂಡೆಯೊಂದನ್ನು ಮೆಲ್ಲುವುದನ್ನು ಹಾವ-ಭಾವ ತುಂಬಿದ ಮೂಕಾಭಿನಯದೊಂದಿಗೆ ಪ್ರಾತ್ಯಕ್ಷಿಕೆ ನೀಡುವಷ್ಟರಲ್ಲಿ ಪಿಜ್ಜಾದವನು, ಅಜ್ಜಿ ಆರ್ಡರ್‌ ಮಾಡಿದ್ದ ಎಲ್ಲವನ್ನು ಹೊತ್ತು ತಂದಿದ್ದ. ದುಡ್ಡು ತೆರಲು ಮುಂದಾದ ರಾಹುಲನನ್ನು ತಡೆದು, ಅಜ್ಜಿ ತನ್ನ ಬ್ಯಾಗಿನಿಂದ ಮಡಚಿ ಮಡಚಿ ಇಟ್ಟುಕೊಂಡ ನೋಟುಗಳನ್ನು ತೆಗೆದಿದ್ದಳು. ಲೆಕ್ಕಮಾಡಿ, ಬಿಲ್ಲನ್ನು ಮೂರ್ನಾಲ್ಕು ಸಾರಿ ನೋಡಿ, “”ರೇಟ್‌ ಜಾಸ್ತಿ ಮಾಡಿದೀರಾ? ಚೀಸ್‌ ಜಾಸ್ತಿ ಹಾಕಿದೀರಾ ತಾನೆ?”ಎಂದೆಲ್ಲ ದೃಢಪಡಿಸಿಕೊಳ್ಳುತ್ತ, ಚಿಲ್ಲರೆ ಹಿಂಪಡೆದಾಗ, ರಾಹುಲನಿಗೆ ಅಬ್ಟಾ, ಈ ಅಜ್ಜಿಗಂತೂ ಎಷ್ಟು ಜೀವನೋತ್ಸಾಹ ಎನಿಸಿತ್ತು.

ಪಿಜ್ಜಾ ಪೊಟ್ಟಣ ಹಿಡಿದು ಒಳಗೆ ಬಂದವಳೇ, “”ನನ್ನ ಮುದ್ದು ರಾಹುಲನಿಗೆ ಏನುಬೇಕು… ತೊಗೊಳಪ್ಪ” ಎಂದ ಅಜ್ಜಿಗೆ ತನ್ನ ಹೆಸರು ಹೇಗೆ ಗೊತ್ತಾಯಿತು ಎಂದು ಚಕಿತನಾದ. ಅಜ್ಜಿ, ಪಿಜಾ j ರಸೀತಿಯನ್ನು ತೋರಿ, “”ಇದ್ರಲ್ಲಿತ್ತಲ್ಲ ನಿನ್ನ ಹೆಸರು… ನಂಗೂ ಕೊಂಚ ಓದಕ್ಕೆ ಬರುತ್ತೆ” ಎಂದು ಅವನ ಕೆನ್ನೆಗಳನ್ನು ಹಿಂಡಿ, “”ಹುಟ್ಟುಹಬ್ಬಕ್ಕೆ ತರಿಸಿರೋ ಕೇಕು ನೀನೆ ಕಟ್‌ಮಾಡು, ಇಬ್ಬರೂ ಸೇರಿ ಹಾಡೋಣ-ಹ್ಯಾಪಿಬರ್ತ್‌ಡೇ ಟು ಯೂ”- ತಟ್ಟುಚಪ್ಪಾಳೆ, ನಮ್ಮಿಬ್ಬರದೇ ಆದರೂ ದೂರದಲ್ಲಿರೋ ಆ ನನ್ನ ಮಗನಿಗೆ ಕೇಳಿಸಬೇಕು, ಹಾಗೆ ತಟ್ಟೋಣ. ಆ ವೃದ್ಧೆಯ ಸಡಗರಕ್ಕೆ ತನ್ನ ಮನೆ ಸಾಕ್ಷಿಯಾಗುತ್ತಿರುವುದಕ್ಕೆ ರಾಹುಲನ ಕಣ್ಣುಗಳು ಒದ್ದೆಯಾದವು. ಪಿಜ್ಜಾ ತಿನ್ನುತ್ತ ರಾಹುಲ ತನ್ಮಯನಾಗಿ, “”ಅಜ್ಜಿ ಏನಾದ್ರೂ ಹೇಳ್ತಿರಿ… ಅಲ್ಲಾ ಹೇಳ್ತಿರು…” ಹೀಗೆ ಅವನ ಮನಸು ಬಯಸುತ್ತಿದ್ದ ಸಾಂತ್ವನವನ್ನು ಅವನ ಮಾತುಗಳು ಅಂಗಲಾಚುತ್ತಿದ್ದವು.

ಅಜ್ಜಿ ವಿಷಾದ ತುಂಬಿದ ನಗೆಯೊಂದಿಗೆ, ತನ್ನ ಮೊಬೈಲ್‌ ಬಳಿಗೆ ಹೋಗಿ, “ಏನು ಹೇಳ್ಳೋದು ಇನ್ನೂ ಛಾರ್ಜ್‌ ಆಗ್ಬೇಕು’ ಎನ್ನುತ್ತ ಸೋಫಾದಲ್ಲಿ ಕುಸಿದಳು. ಇಷ್ಟು ಹೊತ್ತೂ ಚಟುವಟಿಕೆಯ ಕೇಂದ್ರಬಿಂದುವಾಗಿದ್ದವಳು ದಿಢೀರನೆ ಮೌನವಾದದ್ದನ್ನು ಕಂಡು ರಾಹುಲ ಕಂಗಾಲಾದ. ಬಂದು ಪಕ್ಕ ಕುಳಿತ ರಾಹುಲನನ್ನು ಒಮ್ಮೆ, ತನ್ನ ಮೊಬೈಲನ್ನು ಒಮ್ಮೆ ಭಾವುಕಳಾಗಿ ನೋಡುವ ಅಜ್ಜಿಯ ವರ್ತನೆ ಕಂಡು, ಅವನಲ್ಲಿ ಅವ್ಯಕ್ತ ಭಯ ನುಸುಳುತ್ತಿತ್ತು. ತಾನು ಬೆಳಿಗ್ಗೆ ಬಾಲ್ಕನಿಯಲ್ಲಿ ನಿಂತಿದ್ದು, ಜನ ಸೇರಿದ್ದು, ಕೂಗಿದ್ದು, ಪಾರ್ಕಿಗೆ ಓಡಿದ್ದು, ಅಜ್ಜಿಯನ್ನು ಕಂಡಿದ್ದು, ಇಲ್ಲಿಗೆ ಕರೆತಂದಿದ್ದು, ಪಿಜ್ಜಾ-ಕೇಕು ತಿಂದಿದ್ದು- ಎಲ್ಲ ಮುಗಿದು ಅಜ್ಜಿ ಹೊರಡುವ ಸಮಯ ಬಂತೇ ಎನ್ನುವಂತೆ ಗೋಡೆಯ ಮೇಲಿನ ಗಡಿಯಾರ ನೋಡಿದ. ಅದನ್ನು ಅರ್ಥಮಾಡಿಕೊಂಡಂತೆ ಕೂತಿದ್ದವಳು, “”ನಾನು ಹೊರಡದಿದ್ರೂ ಅವನೇ ಹುಡುಕಿಕೊಂಡು ಬರ್ತಾನೆ ನೋಡ್ತಿರು” ಎಂದಳು. ರಾಹುಲ ತಕ್ಷಣ ಕೇಳಿದ್ದ “”ಯಾರಜ್ಜಿ?”

ಅದಕ್ಕೆ ಅಜ್ಜಿ , “”ನನ್ನ ಮಗ… ಮೊಬೈಲ್‌ ಆನ್‌ ಮಾಡು, ಎಲ್ಲ ಗೊತ್ತಾಗುತ್ತೆ”.

ರಾಹುಲ ಗರಬಡಿದಂತೆ ಆಕೆಯ ಮೊಬೈಲಿಗೆ ಜೀವ ಕೊಟ್ಟೊಡನೆ, ಏದುಸಿರು ಬಿಡುತ್ತ ಚಡಪಡಿಸುತ್ತಿರುವ ಅಜ್ಜಿಯ ಮುಖದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ನಿಚ್ಚಳವಾಗಿ ಗುರ್ತಿಸಿದ್ದ. ಅವಳ ಮೊಬೈಲಿಗೆ ಅಷ್ಟು ಹೊತ್ತಿಗಾಗಲೇ ಸೆರೆಮನೆ ಎಂದು ನಮೂದಿಸಿಕೊಂಡ ಕಾಂಟಾಕ್ಟ್ನಿಂದ ಸಂದೇಶಗಳು ಬಂದು ಕೂತಿದ್ದವು. “”ಅಮ್ಮ ಎಲ್ಲಿದೀಯ? ಎಲ್ಲೆಲ್ಲಿ ಹುಡುಕಿ ಸಾಯೋದು ನಿನ್ನ, ಬೇಗ ಬಾ” ಬಂದ ಈ ಸಂದೇಶಗಳನ್ನು ಅಜ್ಜಿಗೆ ತೋರುವಷ್ಟರಲ್ಲಿ ಅದೇ ಸೆರೆಮನೆಯಿಂದ ಕರೆಯೂ ಬಂದಿತ್ತು. ಆಗವಳು ಬಂದು, “”ಕರ್ಕೊಂಡು ಹೋಗ್ಲಿ ಬಿಡು, ಫೋನ್‌ ತೊಗೋಬೇಡ” ಎಂದು ಸಣ್ಣಗೆ ರೇಗಿದ್ದಳು. ಅಜ್ಜಿ ಯಾಕಿಷ್ಟು ಹೊತ್ತು ಮೊಬೈಲನ್ನು ಆಫ್ ಮಾಡಿದ್ದು ಎನ್ನುವದರ ಗುಟ್ಟು ಆಗವನಿಗೆ ತಿಳಿದೊಡನೆ ತನ್ನ ದೊಡ್ಡ ಮನೆಯನ್ನು ಆವರಿಸಿದ ಅಜ್ಜಿ ಕೊಟ್ಟ ಚಿಕ್ಕ ಸಂತೋಷವನ್ನು ಯಾರೋ ಬಂದೀಗ ಹಾಳುಗೆಡುವರೆನೋ ಎಂಬ ಭಯದಿಂದ ರಾಹುಲ ಸಾವರಿಸಿಕೊಳ್ಳುವಷ್ಟರಲ್ಲಿ ಒಂದು ಆ್ಯಂಬುಲೆನ್ಸ್‌ ಸದ್ದು ಮಾಡುತ್ತ ಕಾಲೋನಿಯೊಳಗಿತ್ತು. ರಾಹುಲ ಅಜ್ಜಿಯನ್ನು ಕಾದುಕೊಳ್ಳುವಂತೆ ಒಳಗೆ ಓಡಿದೊಡನೆ ಅಜ್ಜಿ ವಿಷಣ್ಣತೆಯಿಂದ, “”ಹೇಳಿಲ್ವ ಬರ್ತಾನೆ ಅಂತ, ಕೊನೆಗೂ ಬಂದ ನಾನಿರೋ ಜಾಡು ಹಿಡಿದು” ಎಂದಳು. ರಾಹುಲ ಅಜ್ಜಿಯನ್ನು ಅವಚಿಡುವಂತೆ, ಅವಳನ್ನು ಮಲಗುವ ಕೊಠಡಿಗೆ ಕರೆದೊಯ್ದ. ಅಷ್ಟರಲ್ಲಿ ಕಾಲಿಂಗ್‌ ಬೆಲ್‌ ಸದ್ದುಮಾಡಿತ್ತು.

ಬಾಗಿಲು ತೆಗೆದಾಗ, ಮುಖದ ತುಂಬೆಲ್ಲ ದರ್ಪ ಸುರಿಯುತ್ತಿದ್ದ, ಅಜ್ಜಿಯ ಮಗ ಎಂದು ಸಲೀಸಾಗಿ ಹೇಳಬಹುದಾದ ವ್ಯಕ್ತಿಯೊಬ್ಬ ಕಂಡುಬಂದ. ಆತ ಜೊತೆಗೆ ಒಂದು ನಾಯಿಯನ್ನು ಕರೆತಂದಿದ್ದ. ಎದುರಿಗಿದ್ದ ರಾಹುಲನನ್ನು ಲೆಕ್ಕಿಸದೆ, ಆ ನಾಯಿಯ ಪಟ್ಟಿ ಸಡಲಿಸಿ ಮನೆಯೊಳಗೆ ಬಿಟ್ಟು , “ಇಲ್ಲೇ ಇದ್ದಾಳೆ ಆ ಮುದುಕಿ’ ಎಂದು ಗೊಣಗೊಟ್ಟಿದ. ಎರಡು-ಮೂರು ನಿಮಿಷದಲ್ಲಿ ಜರುಗಿಹೋದ ಈ ಶೋಧ ಕಾರ್ಯಕ್ಕೆ ಏನೂ ಸ್ಪಂದಿಸಲು ಸಾಧ್ಯವಾಗದಂತೆ ದಿಗೂnಢನಾಗಿದ್ದ ರಾಹುಲ ಮತ್ತೆ ಪ್ರಜ್ಞೆ ಬಂದವನಂತೆ, ಅಜ್ಜಿ ಇದ್ದ ರೂಮಿಗೆ ಓಡಿದ.

ಅಲ್ಲಿ ಕಂಡ ದೃಶ್ಯ ಅವನ ಹೃದಯ ಕಲಕಿತ್ತು.ಆ ನಾಯಿ, ತೊಡೆಯೇರಿ ಕುಳಿತು ಕಕ್ಕುಲಾತಿಯಿಂದ, ಅಜ್ಜಿಯ ಮೈಕೈಗಳನ್ನು ನೆಕ್ಕುತ್ತಿತ್ತು. ಅಜ್ಜಿಯು ಅದರ ಮೈದಡವಿ, “ಯಾಕೋ ಮುನ್ನ, ನನ್ನ ಬಿಟ್ಟಿರಲ್ವಾ ಮರಿ. ನಡಿ ಹೋಗೋಣ” ಎಂದು ಅಷ್ಟೇ ಅಪ್ಯಾಯತೆಯಿಂದ ನಾಯಿಯನ್ನು ಅಪ್ಪಿಕೊಂಡಿದ್ದಳು. ಅದನ್ನು ಗಮನಿಸಿದ ಅವಳ ಮಗ ಮುಖ ಗಂಟಿಕ್ಕಿಕೊಂಡು ಅಜ್ಜಿಯನ್ನು ಸಿಕ್ಕ ಕೈದಿಯಂತೆ ಬಂಧಿಸಿಕೊಂಡು ಹೊರಡಲನುವಾದ.

ಅಜ್ಜಿ ಬಾಗಿಲ ತನಕ ಹೋದವಳು, ಒಂದು ಕ್ಷಣ ನಿಂತು, ರಾಹುಲನಿಗೆ, “”ಮನೆ ಗೊತ್ತಾಯಿತಲ್ಲ. ಇನ್ನೊಮ್ಮೆ ಬತೇìನೆ ಹುರಿಟ್ಟು ತರ್ತೇನೆ. ತಿನ್ನೋಣ” ಎಂದಾಗ ರಾಹುಲನಿಗೆ ಓಡಿ ಅಜ್ಜಿಯನ್ನು ಅಪ್ಪಬೇಕೆನಿಸಿತ್ತು. ಅಷ್ಟರಲ್ಲಿ ಅವನ ಮೊಬೈಲಿಗೆ ಕರೆಬಂದಿತ್ತು. ಯಾರದ್ದದು ಎಂದು ನೋಡುವಷ್ಟರಲ್ಲಿ, ಅಜ್ಜಿಯನ್ನು ಅವಳ ಮಗ ಹೊರಡಿಸಿಕೊಂಡು ಕೆಳಗಿಳಿದಾಗಿತ್ತು, ರಾಹುಲನ ಅಪ್ಪನ ಕರೆ ಮೇಲಿಂದ ಮೇಲೆ ಬರುತ್ತಲೇ ಇತ್ತು. ಉತ್ತರಿಸಹೋಗದೆ ರಾಹುಲ ಮೊಬೈಲ… ಅನ್ನು ಅಲ್ಲಿಯೇ ಬಿಸಾಡಿ ಬಾಲ್ಕನಿಯತ್ತ ಓಡಿದ್ದ. ಅಜ್ಜಿಯನ್ನು ತುರುಕಿಟ್ಟುಕೊಂಡು, ಆ್ಯಂಬುಲೆನ್ಸ್‌ ಸದ್ದುಮಾಡುತ್ತ ಕಣ್ಮರೆಯಾಗುತ್ತಿತ್ತು. ಆ ಸದ್ದು ಕಡಿಮೆಯಾದಂತೆ, ಆ ರಸ್ತೆಯ ತುಂಬ ಶಾಂತಮ್ಮಜ್ಜಿಯ ಹುರಿಟ್ಟು ಚೆಲ್ಲಿದಂತೆ, ಅದರ ಮೇಲೆ ಆ್ಯಂಬುಲೆನ್ಸ್‌ ಗಾಡಿಯ ಚಕ್ರಗಳ ಗುರುತು ಮೂಡಿದಂತೆನಿಸಿ, ರಾಹುಲ ಅಲ್ಲಿಯೇ ನಿಂತು ತನ್ನೊಳಗೆ ಉಳಿದುಹೋಗಿ, ಅತೀತ ಅನುಭವವೆನಿಸಿದ ಅಜ್ಜಿಗೆ ಕೈಮುಗಿದಿದ್ದ.

ಇತ್ತ ಮೇಲಿಂದ ಮೇಲೆ ಬರುತ್ತಿದ್ದ ಅಪ್ಪನ ಕರೆಯಿಂದ, ರಾಹುಲನ ಮೊಬೈಲ್‌ ಬಳಲಿ ಹೋಗಿತ್ತು.

ಕೆ. ಎಲ್‌. ಶ್ರೀವತ್ಸ

Advertisement

Udayavani is now on Telegram. Click here to join our channel and stay updated with the latest news.

Next