Advertisement

ದಕ್ಷಿಣಕನ್ನಡದ ಉತ್ತರ ಭಾಗದಲ್ಲಿ ಬಿರುಗಾಳಿ, ಮಳೆ

11:49 AM May 21, 2018 | Harsha Rao |

ಮಂಗಳೂರು: ರವಿವಾರ ಮುಂಜಾನೆ ಮೂರು ಗಂಟೆಯ ಸುಮಾರಿಗೆ ದ.ಕ. ಜಿಲ್ಲೆಯ ಅಲ್ಲಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಎರಡು ದೈವಸ್ಥಾನಗಳ ಧ್ವಜಸ್ತಂಭ (ಕೊಡಿಮರ) ತುಂಡಾಗಿದ್ದು, ನೂರಾರು ಮರಗಳು ಉರುಳಿ ಬಿದ್ದಿವೆ.

Advertisement

ಮಂಗಳೂರು ತಾಲೂಕಿನ ಬಜಪೆ, ಸುರತ್ಕಲ್‌, ಮೂಡಬಿದಿರೆ ಹಾಗೂ ಸುಳ್ಯ ತಾಲೂಕಿನ ವಿವಿಧೆಡೆ ಬಿರುಗಾಳಿಯಿಂದ ಹಾನಿ ಸಂಭವಿಸಿದೆ. ಗಾಳಿಯೊಂದಿಗೆ ಸಿಡಿಲಿನ ಅಬ್ಬರವೂ ಜೋರಾಗಿತ್ತು. ಗಾಳಿಯು ಏಕಾಏಕಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಬೀಸಿದೆ. ಪುತ್ತೂರು ತಾಲೂಕಿ ನಲ್ಲಿಯೂ ಗಾಳಿ ಮಳೆಯಾಗಿದೆ.

ಮರ ಬಿದ್ದು ಹಾನಿ 
ಸುರತ್ಕಲ್‌ ಮಲ್ಲಮಾರ್‌ ಬೀಚ್‌ ಬಳಿ ಗಾಳಿ ಮರ ಬಿದ್ದು ಗಿರಿಜಾ ಪೂಜಾರ್ತಿ ಹಾಗೂ ಕಾವೇರಿ ಅವರ ಮನೆಗಳಿಗೆ ಹಾನಿಯುಂಟಾಗಿದೆ. ಮನೆಯಲ್ಲಿ ಏಳೆಂಟು ಮಂದಿ ಮಲಗಿದ್ದರು, ರಾತ್ರಿ ವೇಳೆ ಮರ ಬಿದ್ದ ಶಬ್ದಕ್ಕೆ ಹೆದರಿ ಹೊರಗೋಡಿ ಬಂದರು. ಸುಮಾರು ಒಂದು ಲಕ್ಷ ರೂ. ನಷ್ಟ ಸಂಭವಿಸಿದೆ. ಸುಳಿಗಾಳಿಯ ಅಬ್ಬರಕ್ಕೆ ಮರ ಸೀಳಿ ಉರುಳಿದೆ. ವಿಶೇಷ ಎಂದರೆ ಮರ ಎರಡು ಮನೆಯ ನಡುವಿನ ಅಂತರಕ್ಕೆ ಬಿದ್ದುದರಿಂದ ಭಾರೀ ಹಾನಿ ತಪ್ಪಿದೆ.
ಇದೇ ಪರಿಸರದಲ್ಲಿ ಗಾಳಿಗೆ ಸುಮಾರು ಮೂರು ವಿದ್ಯುತ್‌ ಕಂಬಗಳು ತುಂಡಾಗಿದ್ದು, ವಿದ್ಯುತ್‌ ವ್ಯತ್ಯಯವಾಗಿದೆ.

ಮೆಸ್ಕಾಂ ಸಿಬಂದಿ ತುರ್ತು ಕಾರ್ಯಾಚರಣೆ ನಡೆಸಿ ಮುರಿದ ಕಂಬಗಳನ್ನು ತೆರವುಗೊಳಿಸಿದರು. ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಜೋಕಟ್ಟೆ ರಸ್ತೆಯಲ್ಲಿ ಮರ ಉರುಳಿ ಬಸ್‌ ಸಹಿತ ವಿವಿಧ ವಾಹನಗಳ ಓಡಾಟಕ್ಕೆ ತಡೆ ಉಂಟಾಯಿತು. ಕೈಗಾರಿಕಾ ವಲಯದ ಜೆ.ಆರ್‌. ಸ್ಟೋರ್‌ ಬಳಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಮನೆಗೆ ಬಿದ್ದ ಮರ: ವೃದ್ಧೆ ಪಾರು
ಮೂಡಬಿದಿರೆ ಪರಿಸರದಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಗೌರಿ ದೇಗುಲ ಬಳಿ ಮರ ಬಿದ್ದು ಮನೆಯೊಂದಕ್ಕೆ ಆಂಶಿಕ ಹಾನಿಯಾಗಿದೆ. ಈ ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧೆ ಯಾವತ್ತೂ ಮಲಗುವಲ್ಲಿ ಮಲಗದೆ ಬೇರೆಡೆ ಮಲಗಿದ್ದು, ಪಾರಾಗಿದ್ದಾರೆ.

Advertisement

ಏರ್‌ಪೋರ್ಟ್‌ ರಸ್ತೆಗೆ ಮರ
ಗಾಳಿಮಳೆಗೆ ಮರವೂರು ಜಂಕ್ಷನ್‌ನಲ್ಲಿ ರಾ. ಹೆ. 67ಕ್ಕೆ ದೇವದಾರು ಮರ ಉರುಳಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು. ಬೆಳಗ್ಗೆ 3.45ರಿಂದ 6 ಗಂಟೆವರೆಗೆ ಈ ಹೆದ್ದಾರಿಯಲ್ಲಿ ಸಂಚರಿ ಸುವ ವಿಮಾನ ನಿಲ್ದಾಣ ಪ್ರಯಾಣಿಕ ರಿಗೆ ತೊಂದರೆಯಾಯಿತು. ಮರ ಉರುಳಿದಾಗ ಮೂರು ವಿದ್ಯುತ್‌ ಕಂಬಗಳು ತುಂಡಾಗಿವೆ. ಬಜಪೆ ಸಮೀಪದ ಪಡುಪೆರಾರ ಗ್ರಾ. ಪಂ. ವ್ಯಾಪ್ತಿಯ ಕತ್ತಲ್‌ಸಾರ್‌ನಲ್ಲಿ ರಬ್ಬರ್‌, ಅಡಿಕೆ ತೋಟಕ್ಕೆ ಹಾನಿಯಾಗಿದೆ.

ಸುಳ್ಯ: 150 ವಿದ್ಯುತ್‌ ಕಂಬ ಧರೆಗೆ
ಸುಳ್ಯ ತಾಲೂಕಿನಾದ್ಯಂತ ಶನಿವಾರ ತಡರಾತ್ರಿ ರಭಸವಾಗಿ ಗಾಳಿ ಬೀಸಿದ್ದು ನೂರಾರು ಮರಗಳು ಉರುಳಿ ಬಿದ್ದಿವೆ. ಸುಳ್ಯ ತಾಲೂಕಿನಲ್ಲಿ ಸುಮಾರು 150 ವಿದ್ಯುತ್‌ ಕಂಬಗಳು ತುಂಡಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಮವಾರವಷ್ಟೇ ವಿದ್ಯುತ್‌ ಸರಬರಾಜು ಪುನರಾರಂಭಗೊಳ್ಳಬಹುದು. ಗಾಳಿಯಿಂದ ಹಲವು ಅಡಿಕೆ ಮರ, ಇತರ ಮರ ಬಿದ್ದಿವೆ. ಸಮುದಾಯ ಆಸ್ಪತ್ರೆಯ ಮೇಲಿನ ಶೀಟ್‌ ಹಾರಿ ಹೋಗಿವೆ. 
ಸಿಡಿಲಿನಿಂದ ಹಾನಿ: ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಶಾಲೆಗೆ ಶನಿವಾರ ತಡರಾತ್ರಿ ಸಿಡಿಲು ¬ಬಡಿದು ಹಾನಿಯಾಗಿದೆ.  ಛಾವಣಿ, ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್‌ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿವೆ.
**
ಶಿಬರೂರು ದೈವಸ್ಥಾನ ಧ್ವಜಸ್ತಂಭ ಧರೆಗೆ
ಸುರತ್ಕಲ್‌
: ಮೂಲ್ಕಿ ಸಮೀಪದ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಧ್ವಜಸ್ತಂಭ ಮುರಿದು ದೈವಸ್ಥಾನದ ಮೇಲೆ ಬಿದ್ದಿದೆ. ದೈವಸ್ಥಾನದ ಮೇಲಿನ ಕಲಶಗಳು ನೆಲಕ್ಕುರುಳಿದ್ದು, ತಾಮ್ರದ ಹೊದಿಕೆಗಳು ಮೇಲೆದ್ದಿವೆ. ಸುಮಾರು 40 ವರ್ಷಗಳ ಹಿಂದೆ ಈ ಧ್ವಜಸ್ತಂಭವನ್ನು ಕಾರ್ಕಳದಿಂದ ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ತಾಮ್ರದ ಹೊದಿಕೆಗಳ ಸಂದಿಗಳಿಂದ ಮಳೆಗಾಲದಲ್ಲಿ ನೀರು ಒಳಸೋರಿ ಕಾಲಕ್ರಮೇಣ ಧ್ವಜಸ್ತಂಭ ಶಿಥಿಲವಾಗುತ್ತಾ ಬಂದಿದೆ ಎಂದು ಅಂದಾಜಿಸಲಾಗಿದೆ. 

ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಆಡಳಿತ ವ್ಯವಸ್ಥೆ ಯೋಜನೆ ರೂಪಿಸುತ್ತಿತ್ತು. ಈ ನಡುವೆ ಶನಿವಾರ ಬೀಸಿದ ಬಿರುಗಾಳಿಗೆ  ಧ್ವಜಸ್ತಂಭ ನೆಲಕ್ಕುರುಳಿದೆ. ಜೆಸಿಬಿ ಮೂಲಕ ಧ್ವಜಸ್ತಂಭವನ್ನು ಮೇಲಕ್ಕೆತ್ತಲಾಗಿದ್ದು, ದೈವಸ್ಥಾನದ ಛಾವಣಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. 
**
ಸಾರಂತಾಯ ಗರೋಡಿ ಧ್ವಜಸ್ತಂಭಕ್ಕೆ ಹಾನಿ 
ಹಳೆಯಂಗಡಿ
: ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಧ್ವಜಸ್ತಂಭಕ್ಕೂ ಗಾಳಿ, ಮಳೆಯಿಂದ ಹಾನಿಯಾಗಿದೆ.

ಸುಮಾರು 35 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಧ್ವಜಸ್ತಂಭಕ್ಕೆ 15 ವರ್ಷಗಳ ಹಿಂದೆ ತಾಮ್ರ ಹೊದೆಸ ಲಾಗಿತ್ತು. ಭಾರೀ ಗಾಳಿ ಮತ್ತು ಮಳೆಗೆ ಧ್ವಜಸ್ತಂಭ ಬುಡದಲ್ಲಿಯೇ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿ ವಾಲಿ ನಿಂತಿದೆ. ಮೇಲ್ಭಾಗದಲ್ಲಿ ತಗಡು ಶೀಟಿನ ಛಾವಣಿ ಇದ್ದುದರಿಂದ ಧ್ವಜಸ್ತಂಭವು ನೆಲಕ್ಕುರುಳಿಲ್ಲ. ಇಲ್ಲವಾದಲ್ಲಿ ದೈವಸ್ಥಾನದ ಗೋಪುರದ ಮೇಲೆ ಬಿದ್ದು ಹಾನಿಯಾಗುವ ಸಂಭವವಿತ್ತು. ಸುಮಾರು 3.5 ಲಕ್ಷ ರೂ. ನಷ್ಟ ಸಂಭವಿಸಿದೆ.

ಈ ಬಗ್ಗೆ ದೈವಸ್ಥಾನದ ಪ್ರಮುಖರು ದೈವಸ್ಥಾನದಲ್ಲಿ ಪ್ರಶ್ನೆ ಇರಿಸಿದ್ದು, ಹೊಸ ಧ್ವಜಸ್ತಂಭವನ್ನು ಶೀಘ್ರದಲ್ಲಿಯೇ ಅಳವಡಿಸುವ ಬಗ್ಗೆ ಕಾರ್ಯಪ್ರವೃತ್ತರಾಗ ಬೇಕು ಎಂಬ ಸೂಚನೆ ಲಭಿಸಿದೆ. ಕಳೆದ ಬಾರಿ ನೇಮದ ಸಂದರ್ಭದಲ್ಲೂ ಧ್ವಜಸ್ತಂಭವನ್ನು ಬದಲಾಯಿಸುವ ಬಗ್ಗೆ ಆಡಳಿತ ಮಂಡಳಿ ಪ್ರಶ್ನೆಯಲ್ಲಿ ಕೇಳಿದ್ದು, ದೈವದ ಸಮ್ಮತಿಯೂ ಲಭಿಸಿತ್ತು ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಕಾರದಿಂದ ಧ್ವಜಸ್ತಂಭವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next