Advertisement

ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ

09:36 PM Jul 08, 2019 | Team Udayavani |

ಚಾಮರಾಜನಗರ: ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿರುವ ಕೇಂದ್ರ ಬಜೆಟ್‌ ಬಡಜನರ ವಿರೋಧಿಯಾಗಿದೆ ಎಂದು ಆರೋಪಿಸಿ ಜನ ಹಿತಾಸಕ್ತಿ ಹೋರಾಟ ವೇದಿಕೆಯಿಂದ ನಗರದಲ್ಲಿ ಖಾಲಿ ಡಬ್ಬ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಜೆಟ್‌ನಲ್ಲಿ ಯಾವುದೇ ಸತ್ವ ಇಲ್ಲ. ಇದೊಂದು ಖಾಲಿ ಬಜೆಟ್‌ ಎಂದು ಆಕ್ರೋಶ ವ್ಯಕ್ತಪಡಿಸಿ ಖಾಲಿ ಡಬ್ಬಗಳನ್ನು ಪ್ರದರ್ಶಿಸಲಾಯಿತು.

ಜನ ಹಿತಾಸಕ್ತಿಹೋರಾಟ ವೇದಿಕೆ ಅಧ್ಯಕ್ಷ ರಾಮಸಮುದ್ರ ಸುರೇಶ್‌ ಮಾತನಾಡಿ, ಕೇಂದ್ರದ ಬಿ.ಜೆ.ಪಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಬಜೆಟ್‌ ಮಂಡನೆ ಮಾಡುವಾಗ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜನ ಸಾಮಾನ್ಯರಿಗೆ ಬಡವರಿಗೆ ಹೊರೆ ಹೇರುತ್ತಿದೆ. ಕಚ್ಛಾ ತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಿಂದ ವಿಶೇಷವಾಗಿ ದಲಿತ ಸಮುದಾಯ, ರೈತರು ಮತ್ತು ಬಿಪಿಎಲ್‌ ಕುಟುಂಬದವರು ತಮಗೆ ಅನುಕೂಲವಾಗಬಹುದು ಎಂಬ ನಿಟ್ಟಿನಲ್ಲಿ ಭಾರಿ ವಿಶ್ವಾಸ ಹೊಂದಿದ್ದರು ಆದರೆ ಇದು ಸುಳ್ಳಾಗಿ ಕೇವಲ ಬಂಡವಾಳ ಶಾಹಿಗಳು, ಶ್ರೀಮಂತರು, ಉಳ್ಳವರಿಗೆ ಅನುಕೂಲವಾಗುವಂತೆ ಮಾಡಿದೆ. ಜನರ ಕಣ್ಣಿಗೆ ಮಣ್ಣು ಎರಚಿದ್ದಾರೆ.

ಮೋದಿ ಸರ್ಕಾರ ಈ ಭಾರಿ ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರನ್ನು ಉದ್ದಾರ ಮಾಡುತ್ತಾರೆ ಎಂದು ನಂಬಿದ್ದ ದೇಶದ ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಟೀಕಿಸಿದರು. ದಿನ ನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಕೇಂದ್ರ ಬಜೆಟ್‌ ನಲ್ಲಿ ಮೊದಲಿನಿಂದಲೂ ಸಹ ಕರ್ನಾಟಕ ರಾಜ್ಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್‌ ನೀಡದೇ ಮಲತಾಯಿ ಧೋರಣೆ ಮಾಡಲಾಗಿದೆ ಕೃಷಿ, ಉದ್ಯೋಗ, ದಲಿತ ಅಭಿವೃದ್ದಿ ಯೋಜನೆಗಳಿಗೆ ಕತ್ತರಿ ಹಾಕಿ ಕೇಂದ್ರ ಬಜೆಟ್‌ ಸಂಪೂರ್ಣ, ಜನ ವಿರೋಧಿ ಬಜೆಟ್‌ ಆಗಿದೆ ಇದನ್ನು ಚಾಮರಾಜನಗರ ಜಿಲ್ಲಾ ಜನ ಹಿತಾಸಕ್ತಿ ಹೋರಾಟ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಸಂಘಸೇನಾ, ಬಂಗಾರಸ್ವಾಮಿ, ಶರೀಫ್, ಜಗದೀಶ್‌, ನಾಗೇಂದ್ರೆಗೌಡ, ನಿರ್ಮಲಾ, ಶಾಂತರಾಜು, ಸಿದ್ದಪಾಜಿ, ಚಂದ್ರಕುಮಾರ್‌, ಸೋಮಣ್ಣ, ಸಿದ್ದರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next