Advertisement

ಮರಾಠಾ ಒಂದಾದರೆ ಸ್ಥಾನಮಾನ ಖಚಿತ

03:55 PM May 16, 2022 | Team Udayavani |

ಬೆಳಗಾವಿ: ಮರಾಠಾ ಸಮಾಜದವರು ನಾವು ಎಲ್ಲಿಯವರೆಗೆ ಶೌರ್ಯ ತೋರಿಸುವುದಿಲ್ಲವೋ, ನಮ್ಮ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ನಮಗೆ ಸ್ಥಾನಮಾನ ಸಿಗುವುದಿಲ್ಲ. ಒಗ್ಗಟ್ಟಾದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಬೆಂಗಳೂರಿನ ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿ ಹೇಳಿದರು.

Advertisement

ಸಕಲ ಮರಾಠಾ ಸಮಾಜ ವತಿಯಿಂದ ನಗರದ ವಿದ್ಯಾ ಮಂದಿರ ಪ್ರೌಢಶಾಲೆ ಆವರಣದಲ್ಲಿ ರವಿವಾರ ನಡೆದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜ ಒಗ್ಗಟ್ಟಾದರೆ ಮಾತ್ರ ಬೆಲೆ ಇದೆ. ಒಗ್ಗಟ್ಟಿಲ್ಲದಿದ್ದರೆ ಯಾರೂ ಬೆಲೆ ಕೊಡುವುದಿಲ್ಲ. ಬೇರೆ ಸಮಾಜದ ಪೀಠಾಧಿಪತಿಗಳು ಸರ್ಕಾರದಲ್ಲಿ ನಿರ್ಣಾಯಕರಿದ್ದಾರೆ. ಆ ಗುರುಗಳನ್ನು ಕೇಳಿ ಸಚಿವ ಸ್ಥಾನ, ಶಾಸಕ, ಸಂಸದ ಟಿಕೆಟ್‌ ನೀಡಲಾಗುತ್ತಿದೆ. ಅಲ್ಲಿ ಒಕ್ಕಟ್ಟಿರುವುದರಿಂದ ಆ ಶಕ್ತಿ ಅಂಥ ಸಮಾಜಗಳಿಗೆ ಇದೆ. ಹೀಗಿರುವಾಗ ನಮ್ಮ ಸಮಾಜ ಒಂದಾದರೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸ್ಥಾನಮಾನ ಸಿಗಲು ಸಾಧ್ಯವಿದೆ ಎಂದರು.

ಮಕ್ಕಳಿಗೆ ಸಂಸ್ಕಾರ ನೀಡುವುದನ್ನು ತಂದೆ-ತಾಯಿ ಕಲಿಯಬೇಕಿದೆ. ನಿಗದಿತ ಸಮಯದಲ್ಲಿ ಸಂಸ್ಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ವೃದ್ಧಾಶ್ರಮಗಳು ಕಾಯುತ್ತವೆ. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ದೇಶಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಮಾರ್ಗ ತೋರಿದ ಮಹಾನ್‌ ನಾಯಕ. ಮರಾಠಾ ಸಮಾಜ ಇನ್ನುಳಿದವರನ್ನು ದ್ವೇಷಿಸುವ ಸಮಾಜ ಅಲ್ಲ ಎಂದ ಅವರು, ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ನಾವು ನಿರಂತರ ಹೋರಾಟ ಮಾಡಬೇಕಿದೆ. ಮರಾಠಾ ಸಮಾಜ ಹಿಂದೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಿದೆ ಎಂದರು.

Advertisement

ಮರಾಠಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ. ಮುಳೆ ಮಾತನಾಡಿ, ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮದಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ 20 ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಗೆ ಬಳಸುತ್ತಿದ್ದೇವೆ. ಇದಕ್ಕೆ ಜೀಜಾವು ಜಲ ಭಾಗ್ಯ ಎಂದು ನಾಮಕರಣ ಮಾಡಿದ್ದೇವೆ. ಕೆಳದಿ ಚನ್ನಮ್ಮ ಸುರಭಿ ಯೋಜನೆಯಡಿ ಮಹಿಳೆಯರಿಗೆ 500 ಆಕಳು ನೀಡುವುದು, ನಿರುದ್ಯೋಗಿಗಳಿಗೆ ಶ್ರೀ ಶಹಾಜಿ ರಾಜೆ ಸ್ವ ಉದ್ಯೋಗ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಖಾನಾಪುರ ಶಾಸಕಿ ಡಾ| ಅಂಜಲಿ ನಿಂಬಾಳಕರ ಮಾತನಾಡಿ, ಮರಾಠಾ ಸಮಾಜ ಎಲ್ಲೆಡೆ ನಿರ್ಲಕ್ಷéಕ್ಕೆ ಒಳಗಾಗಿದೆ. ಸಣ್ಣ ಸಣ್ಣ ಗುಂಪುಗಳಾಗಿ ವಿಭಜನೆಯಾಗಿದೆ. ಇಡೀ ಮರಾಠಾ ಸಮಾಜ ಒಗ್ಗೂಡಿಸುವ ಅಗತ್ಯವಿದೆ. ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಧಾರವಾಡ ಸಮಾವೇಶದಲ್ಲಿ ಒತ್ತಾಯಿಸಿದ್ದೆ. ಬಳಿಕ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಆಯಿತು. ಈಗಿರುವ 50 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಶೈಕ್ಷಣಿಕ ದೃಷ್ಟಿಯಿಂದ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಆಯೋಜಕ ಕಿರಣ ಜಾಧವ ಮಾತನಾಡಿ, ಮರಾಠಾ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಸಕಲ ಮರಾಠಾ ಸಮಾಜ ಸ್ಥಾಪನೆ ಮಾಡಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಏಳ್ಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಶ್ರೀರಾಮಸೇನಾ ಹಿಂದೂಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಮಾತನಾಡಿ, ಮರಾಠಾ ಸಮಾಜದವರು ಒಂದಾಗಿ ಶಕ್ತಿ ಪ್ರದರ್ಶಿಸಬೇಕು. ನಮ್ಮ ಸಮಾಜದವರ ಮೇಲೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ. ಅತ್ಯಾಚಾರ ಎಸಗಿದರೆ ಅವರಿಗೆ ಶಿವಾಜಿ ಮಹಾರಾಜರ ತಲವಾರ್‌ ತೋರಿಸುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಗಡಹಿಂಗ್ಲಜ್‌ ರಾಮನಾಥ ಗಿರಿ ಮಠದ ಭಗವಾನಗಿರಿ ಮಹಾರಾಜ, ರುದ್ರ ಕೇಸರಿ ಮಠದ ಸ್ವಾಮೀಜಿ, ಪಾಯೋನಿಯರ್‌ ಬ್ಯಾಂಕ್‌ ಉಪಾಧ್ಯಕ್ಷ ರಣಜಿತ್‌ ಚವ್ಹಾಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಾಮಸುಂದರ ಗಾಯಕವಾಡ, ನಿಪ್ಪಾಣಿಕರ ಸರ್ಕಾರ, ಶಿವಾಜಿ ಸುಂಠಕರ, ಅನಂತ ಲಾಡ, ರಮೇಶ ಗೋರಲ್‌ ಸೇರಿದಂತೆ ಇತರರು ಇದ್ದರು.

70 ಲಕ್ಷ ಮರಾಠಾ ಸಮಾಜ ಬಾಂಧವರು ಮರಾಠಿ ಜತೆಗೆ ಕನ್ನಡ ಭಾಷೆಯನ್ನೂ ಮಾತಾಡುತ್ತೇವೆ. ಸಮಾಜ ಒಡೆದು ಹೋಗಿದ್ದು, ಅದನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಏಕ ಮರಾಠಾ, ಲಾಖ್‌ ಮರಾಠಾ ಹೋರಾಟದಲ್ಲಿ ನಾವೆಲ್ಲರೂ ಕೂಡಿ ಒಕ್ಕಟ್ಟು ಪ್ರದರ್ಶಿಸಿದ್ದು ಮರೆತಿಲ್ಲ. ಇನ್ನೂ ಕಾಲ ಮಿಂಚಿಲ್ಲ, ಒಂದಾಗಬೇಕಿದೆ. –ಅಂಜಲಿ ನಿಂಬಾಳಕರ, ಶಾಸಕರು, ಖಾನಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next