Advertisement

ರಾಜ್ಯದ ಧಾರ್ಮಿಕ ಸಂಸ್ಥೆಗಳಿಂದ ಕೋಟ್ಯಂತರ ರೂ. ವಿದ್ಯುತ್‌ ಬಿಲ್‌ ಬಾಕಿ!

12:50 AM Jan 02, 2022 | Team Udayavani |

ಉಡುಪಿ: ರಾಜ್ಯದ ದೇವಸ್ಥಾನ, ಮಸೀದಿ, ಚರ್ಚ್‌, ಗುರುದ್ವಾರ, ಆಶ್ರಮಗಳು, ಮಠಗಳು, ಧಾರ್ಮಿಕ ದತ್ತಿ ಸಂಸ್ಥೆಗಳ ಸಹಿತ ಒಟ್ಟು 13,786 ಧಾರ್ಮಿಕ ಕೇಂದ್ರಗಳಿಂದ 2,74,17,071 ರೂ. ವಿದ್ಯುತ್‌ ಬಿಲ್‌ ಪಾವತಿಗೆ ಬಾಕಿಯಿದೆ.

Advertisement

ಗ್ರಾ.ಪಂ.ಗಳಿಂದಲೂ ಕೋಟ್ಯಂತರ ರೂ. ಬಾಕಿ ಇದ್ದು, ಇಂಧನ ಇಲಾಖೆ ವಸೂಲಾತಿ ಕಾರ್ಯ ಆರಂಭಿಸಿದೆ. ಧಾರ್ಮಿಕ ಕೇಂದ್ರಗಳ ಬಿಲ್‌ ಬಾಕಿ ಇರುವುದು ಇಲಾಖೆಯ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಹೀಗಾಗಿ ಅಂತಹ ಕೇಂದ್ರಗಳಿಂದ ನೋಟಿಸ್‌ ನೀಡುವ ಹಾಗೂ ಪಾವತಿಸದಿರುವ ಸಂಸ್ಥೆಗಳ ಸಂಪರ್ಕ ಕಡಿತ ಮಾಡಲು ನಿರ್ಧರಿಸಿದೆ.

ಕೊರೊನಾ ಕಾರಣ 2021ರ ಜೂನ್‌ ಅಂತ್ಯದವರೆಗೆ ಬಿಲ್‌ ಪಾವತಿಸದ ಯಾವುದೇ ಧಾರ್ಮಿಕ ಕೇಂದ್ರದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿಲ್ಲ. ಈಗ ಕ್ಷೇತ್ರಗಳು ಸಾರ್ವಜನಿಕರಿಗೆ ಮುಕ್ತವಾಗಿರುವುದರಿಂದ ಆದಾಯವೂ ಬರು
ತ್ತಿದೆ. ಹೀಗಾಗಿ ಕೆಇಆರ್‌ಸಿ ನಿಯಮಾನು ಸಾರವಾಗಿ ವಿದ್ಯುತ್‌ ಬಾಕಿ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಇಂಧನ ಇಲಾಖೆ ಖಚಿತಪಡಿಸಿದೆ.

ಉಡುಪಿ ಜಿಲ್ಲೆ ಮಾದರಿ
ಎಲ್ಲ ಜಿಲ್ಲೆಗಳ ದೇವಸ್ಥಾನ, ಮಸೀದಿ, ಚರ್ಚ್‌ಗಳು ಲಕ್ಷಾಂತರ ರೂ.ಗಳ ಬಿಲ್‌ ಬಾಕಿ ಇಟ್ಟುಕೊಂಡಿವೆ. ಆದರೆ ಉಡುಪಿ ಜಿಲ್ಲೆಯ ಒಂದೇ ಒಂದು ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ನಿಂದ ಪಾವತಿಗೆ ಬಾಕಿಯಿಲ್ಲ. ದ.ಕ. ಜಿಲ್ಲೆಯ 94 ದೇವಸ್ಥಾನಗಳಿಂದ 60,590 ರೂ., 107 ಮಸೀದಿಗಳಿಂದ 63,234 ರೂ., 36 ಚರ್ಚ್‌ಗಳಿಂದ 4,996 ಮತ್ತು ಇತರ 10 ಧಾರ್ಮಿಕ ಕೇಂದ್ರದಿಂದ 2,163 ರೂ. ಸೇರಿದಂತೆ ಒಟ್ಟು 247 ಧಾರ್ಮಿಕ ಕೇಂದ್ರಗಳಿಂದ 1,30,983 ರೂ. ಪಾವತಿಗೆ ಬಾಕಿಯಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯ ಬಿಲ್‌ ಬಾಕಿ ಪ್ರಮಾಣ ಕಡಿಮೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸರಕಾರವೇ ಬದಲಿ ಮಾರ್ಗ ಸೂಚಿಸಲಿ
ವಿವಿಧ ಕಾರಣಗಳಿಂದ ಧಾರ್ಮಿಕ ಕೇಂದ್ರಗಳ ಆದಾಯ ಕುಸಿದಿದ್ದು. ಪ್ರತೀ ತಿಂಗಳು ಸಾವಿರಾರು ರೂ.ಗಳ ಬಿಲ್‌ ಪಾವತಿ ಕಷ್ಟವಾಗುತ್ತಿದೆ. ಕೇಂದ್ರಗಳ ಆದಾಯ ನೇರವಾಗಿ ಸರಕಾರಕ್ಕೇ ಹೋಗುವುದರಿಂದ ಇಲ್ಲಿನ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕು ಅಥವಾ ಸರಕಾರವೇ ಪರ್ಯಾಯ ಮಾರ್ಗ ಸೂಚಿಸಬೇಕು ಎಂಬುದು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರ ಆಗ್ರಹವಾಗಿದೆ.

Advertisement

2.50 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್‌ ಬಿಲ್‌ ಧಾರ್ಮಿಕ ಕೇಂದ್ರಗಳಿಂದ ಬರಬೇಕಿದೆ. ಕೊರೊನಾದಿಂದ 2021ರ ಜೂನ್‌ ಅಂತ್ಯದವರೆಗೂ ವಿದ್ಯುತ್‌ ಕಡಿತ ಮಾಡಿಲ್ಲ. ಈಗ ನೋಟಿಸ್‌ ನೀಡುತ್ತಿದ್ದೇವೆ. ಪಾವತಿ ಮಾಡದಿದ್ದಲ್ಲಿ ವಿದ್ಯುತ್‌ ಕಡಿತ ಮಾಡಲಾಗುವುದು.
– ವಿ. ಸುನಿಲ್‌ ಕುಮಾರ್‌,
ಇಂಧನ ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next