ಆನೇಕಲ್: ಬನ್ನೇರುಘಟ್ಟಕ್ಕೆ ಬಂದಾಗ ನೀವು ಈ ಆನೆಯನ್ನು ನೋಡಿಯೇ ನೋಡಿರುತ್ತೀರಿ. ಈಕೆ ನಮ್ಮ ರಾಜ್ಯದಲ್ಲಿರುವ ಅತ್ಯಂತ ಹಿರಿಯ ಸಾಕಿದ ಆನೆ ಗಾಯತ್ರಿ. ವಯಸ್ಸು- 84 ವರ್ಷ.
ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ 6 ಆನೆ ಶಿಬಿರಗಳಿವೆ. ಜತೆಗೆ ಮೃಗಾಲಯ ಪ್ರಾಧಿಕಾರಕ್ಕೆ ಒಳಪಟ್ಟಿರುವ 2 ಮೃಗಾಲಯಗಳಲ್ಲಿ ಸುಮಾರು 159 ಸಾಕಾನೆಗಳಿವೆ.
1968ರಲ್ಲಿ ಸೆರೆ ಸಿಕ್ಕಿತ್ತು
Advertisement
ಉದ್ಯಾನವನದಲ್ಲಿ ಇರುವ 21 ಆನೆಗಳಿಗೆ ಗಾಯತ್ರಿಯೇ ಹಿರಿಯಾನೆ. ಈ ಅಜ್ಜಿ ಧೈರ್ಯವಂತೆ, ಗಂಡಾನೆಗಳ ಪುಂಡಾಟಗಳಿಗೆ ಬ್ರೇಕ್ ಹಾಕುವ ಟೀಚರ್, ಮರಿಯಾನೆಗಳನ್ನು ಪ್ರೀತಿಯಿಂದ ಸಲಹುವ ಅಮ್ಮ, ವೀಕ್ಷಕರು ಮತ್ತು ಮಾವುತರ ಪ್ರೀತಿಯದ್ದು ಇದು. ಅಂದ ಹಾಗೆ ಈ ‘ಗಾಯತ್ರಿ’ ಗಾತ್ರದಲ್ಲಿ ಮಾತ್ರ ಕುಳ್ಳಗೆ.
Related Articles
Advertisement
ಬಳ್ಳೆ ಅರಣ್ಯ ಪ್ರದೇಶದಿಂದ ಕಾರ್ಯಾಚರಣೆ ಮೂಲಕ ಈ ಆನೆಯನ್ನು ಸೆರೆಹಿಡಿಯಲಾಗಿತ್ತು. 1968ರಲ್ಲಿ ನಡೆದಿದ್ದ ಈ ಕಾರ್ಯಾಚರಣೆ ವೇಳೆ ಹಾಲಿ ಅಜ್ಜಿಗೆ 32 ವರ್ಷ ವಯಸ್ಸೆಂದು ಅಂದಾಜಿಸಲಾಗಿತ್ತು. ಮೂರ್ಕಲ್ ಆನೆ ಶಿಬಿರದಲ್ಲಿ ಪಾಠ ಕಲಿಸಿದ ಬಳಿಕ ಒಂದಷ್ಟು ದಿನ ಸಕ್ರೆಬೈಲು, ಮುತ್ತೋಡಿ ಆನೆ ಶಿಬಿರಗಳಲ್ಲಿ ಆಶ್ರಯ ಪಡೆದಿತ್ತು. ಆ ವೇಳೆಗೆ ಗಾಯತ್ರಿ ಕಾಡಾನೆಗಳನ್ನು ಹಿಡಿಯುವ ಆನೆಗಳಿಗೆ ನಾಯಕಿಯಂತಾಗಿದ್ದಳು.
2010ರಲ್ಲಿ ಬನ್ನೇರುಘಟ್ಟಕ್ಕೆ
2010ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬನ್ನೇರುಘಟ್ಟ ವಲಯದಲ್ಲಿ ಪುಂಡಾನೆ ಸೆರೆಹಿಡಿಯಲೆಂದು ಶಿವಮೊಗ್ಗದಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ಬಂದ ಗಾಯತ್ರಿ ಮತ್ತು ಲಿಲ್ಲಿ ಆನೆಗಳು ತಮ್ಮ ವೈಶಿಷ್ಟ್ಯಗಳಿಂದ ಇಲ್ಲಿನ ಅಧಿಕಾರಿಗಳಿಗೆ ಇಷ್ಟವಾಗಿ ಉದ್ಯಾನವನದಲ್ಲೇ ಖಾಯಂ ಆನೆಗಳ ಪಟ್ಟಿಗೆ ಸೇರಿಕೊಂಡವು.
ಗಾಯತ್ರಿ ಇಲ್ಲಿಗೆ ಬರುವ ಮೊದಲು ಆರು ಮರಿಗಳಿಗೆ ಜನ್ಮ ನೀಡಿದ್ದಳು. ಇಲ್ಲಿಗೆ ಬಂದ ಬಳಿಕ ಅಜ್ಜಿ ಸ್ಥಾನ ಪಡೆದು ಕ್ಯಾಂಪ್‌ನ ಮರಿ ಆನೆಗಳನ್ನು ಕಾಳಜಿಯಿಂದ ಸಲಹುವ ಕಾಯಕ ಮಾಡುತ್ತಿದ್ದಾಳೆ.
ವಿಶೇಷ ಆರೈಕೆ
ವರ್ಷದಿಂದ ವರ್ಷಕ್ಕೆ ಗಾಯತ್ರಿ ಹಿರಿಯಳಾಗುತ್ತಿದ್ದಂತೆ ನಾವು ಅದನ್ನು ವಿಶೇಷ ಹಾರೈಕೆ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೇವೆ. ಕ್ಯಾಂಪ್‌ಗ್ಳಲ್ಲಿ ಹಿರಿಯ ಆನೆಗಳು ಇದ್ದರೆ ಮಾತ್ರ ಉಳಿದ ಆನೆಗಳು ಭಯ ಮತ್ತು ಶಿಸ್ತಿನಿಂದ ಇರುವುವು. ಹೀಗಾಗಿ ಗಾಯತ್ರಿ ಇರುವುದರಿಂದ ಆನೆ ಕ್ಯಾಂಪ್‌ನ ಎಲ್ಲ ಆನೆಗಳು ಒಂದು ಶಿಸ್ತಿನ ಪಾಠ ಕಲಿತಿವೆ ಎಂದು ಉದ್ಯಾನವನದ ಸಹಾಯಕ ನಿರ್ದೇಶಕ ಡಾ| ಉಮಾಶಂಕರ್ ಹೇಳಿದರು.
ಮಾವುತರ ಪ್ರೀತಿಯ ಆನೆ
ನಾನು ಹಲವು ಆನೆಗಳನ್ನು ನೋಡಿದ್ದೇನೆ. ಆದರೆ ಗಾಯತ್ರಿ ತೀರಾ ಮೃದು ಸ್ವಭಾವದ ಆನೆ. ವಯಸ್ಸು ಹೆಚ್ಚುತ್ತಿದ್ದಂತೆ ಗಾಯತ್ರಿ ನಿಜಕ್ಕೂ ರಾಜ ಗಾಂಭೀರ್ಯವನ್ನು ಮೈಗೂಡಿಸಿಕೊಂಡಿದ್ದಾಳೆ. ಗಾಯತ್ರಿ ಎಂದೂ ನನ್ನ ಮಾತನ್ನು ಧಿಕ್ಕರಿಸಿದ್ದೆ ಇಲ್ಲ. ನನ್ನ ಪಾಲಿಗೆ ಆಕೆಯೇ ಅಮ್ಮ, ಅಜ್ಜಿ, ಅನ್ನದಾತೆಯಾಗಿದ್ದಾಳೆ. ನಾನು ಹಸಿದಿದ್ದರೂ ಗಾಯತ್ರಿಯ ಆಹಾರಕ್ಕೆ ತಡ ಮಾಡಲಿಲ್ಲ. ನನ್ನ ಬದುಕಿನ ಅವಿಭಾಜ್ಯ ಅಂಗವಾಗಿ ಬದುಕಿನೊಂದಿಗೆ ಬೆರೆತು ಹೋಗಿದ್ದಾಳೆ ಎಂದು 19 ವರ್ಷಗಳಿಂದ ಗಾಯತ್ರಿಗೆ ಮಾವುತನಾಗಿರುವ ರಾಜು ಹೇಳುತ್ತಾರೆ.
– ಮಂಜುನಾಥ್ ಎನ್. ಬನ್ನೇರುಘಟ್ಟ