Advertisement

ರಾಜ್ಯದ 4.86 ಕೋಟಿ ಜನರಿಗೆ ಅನ್ನಭಾಗ್ಯವೇ ಆಧಾರ

10:28 AM Apr 01, 2020 | Sriram |

ಬೆಂಗಳೂರು: ಕೋವಿಡ್‌ 19 ಹಿನ್ನೆಲೆಯಲ್ಲಿ ಬಿಪಿಎಲ್‌ ಕಾರ್ಡ್‌ ದಾರರಿಗೆ ಎಪ್ರಿಲ್‌ ಮತ್ತು ಮೇ ತಿಂಗಳುಗಳ ಪಡಿತರವನ್ನು ಮುಂಗಡವಾಗಿ ನೀಡುವ ಸರಕಾರದ ತೀರ್ಮಾನ ಅನು ಷ್ಠಾನಕ್ಕೆ 4.34 ಲಕ್ಷ ಮೆ. ಟ. ಅಕ್ಕಿ, 40,000 ಮೆ.ಟ. ಗೋಧಿ ಅಗತ್ಯವಾಗಿದ್ದು, ಸಂಪೂರ್ಣ ದಾಸ್ತಾನು ಸಂಗ್ರಹಿಸಲು ಹರಸಾಹಸ ಪಡುವಂತಾಗಿದೆ.

Advertisement

ಪ್ರಸ್ತುತ ಗೋದಾಮುಗಳಲ್ಲಿ ಶೇ.60 ರಷ್ಟು ಮಾತ್ರ ಅಕ್ಕಿ ಮತ್ತು ಗೋಧಿ ದಾಸ್ತಾನು ಇದ್ದು, ಇನ್ನೂ ಶೇ. 40ರಷ್ಟು ದಾಸ್ತಾನು ಎ.1 ರೊಳಗೆ ಸಂಗ್ರಹಿಸಲು ಸೂಚನೆ ಬಂದಿದ್ದು ಇದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸರಕಾರವು ಎರಡು ತಿಂಗಳುಗಳ ಪಡಿತರ ಮುಂಗಡವಾಗಿ ನೀಡುವುದಾಗಿ ಘೋಷಿಸಿರುವುದರಿಂದ 1.16 ಕೋಟಿ ಬಿಪಿಎಲ್‌ ಕಾರ್ಡ್‌ದಾರರು, 11 ಲಕ್ಷ ಅಂತ್ಯೋದಯ ಕಾರ್ಡ್‌ ದಾರರು ಆಹಾರ ಧಾನ್ಯಗಳಿಗಾಗಿ ಕಾಯು ತ್ತಿದ್ದಾರೆ. ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ ದಾರರಿಗಷ್ಟೇ ಅಲ್ಲದೆ ಕೋವಿಡ್‌ 19 ಸಂಕಷ್ಟದ ಹಿನ್ನೆಲೆಯಲ್ಲಿ ಎಪಿಎಲ್‌ ಕಾರ್ಡ್‌ದಾರರಿಗೂ 15 ರೂ. ಬೆಲೆಯಲ್ಲಿ ಹತ್ತು ಕೆಜಿ ಅಕ್ಕಿ ಪೂರೈಸಲು ಸರಕಾರ ತೀರ್ಮಾನಿಸಿದೆ. ಹೀಗಾಗಿ ಅದಕ್ಕೂ ಹೆಚ್ಚುವರಿ ಅಕ್ಕಿ ಸಂಗ್ರಹಿಸಬೇಕಾಗಿದೆ.

ರಾಜ್ಯದ 4.86 ಕೋಟಿ ಫ‌ಲಾನುಭವಿಗಳಿಗೆ ಆಹಾರ ಇಲಾಖೆಯ ಪಡಿತರ ತಲುಪಲಿದ್ದು, ಬಿಪಿಎಲ್‌ ಕುಟುಂಬಗಳ ಸದಸ್ಯರಿಗೆ ತಿಂಗಳಿಗೆ ತಲಾ 5 ಕೆಜಿ ಅಕ್ಕಿ, ಒಂದು ಕಾರ್ಡ್‌ಗೆ ತಲಾ 2 ಕೆಜಿ ಗೋಧಿ ಸಿಗಲಿದೆ. ಉದಾಹರಣೆಗೆ ಒಂದು ಕುಟುಂಬದಲ್ಲಿ ಐವರು ಇದ್ದರೆ ತಲಾ 5 ಕೆಜಿ ಅಕ್ಕಿಯಂತೆ ಎರಡು ತಿಂಗಳಿಗೆ 50 ಕೆಜಿ ಅಕ್ಕಿ, 4 ಕೆಜಿ ಗೋಧಿ ಸಿಗಲಿದೆ. ಸಾಮಾನ್ಯವಾಗಿ ಐವರ ಕುಟುಂಬಕ್ಕೆ ಎರಡು ತಿಂಗಳ ಮಟ್ಟಿಗೆ ಈ ಆಹಾರ ಧಾನ್ಯ ಸಾಕಾಗಲಿದೆ. ಇದೇ ರೀತಿ ಅಂತ್ಯೋದಯ ಕಾರ್ಡ್‌ದಾರರಿಗೆ ಎರಡು ತಿಂಗಳ ಮುಂಗಡ ಪ್ರತಿ ಕಾರ್ಡ್‌ಗೆ 70 ಕೆಜಿ ಅಕ್ಕಿ ಸಿಗಲಿದೆ.

ಅಗತ್ಯ ವ್ಯವಸ್ಥೆ
ಎರಡು ತಿಂಗಳ ಪಡಿತರ ಮುಂಗಡವಾಗಿ ನೀಡುವ ಸಂಬಂಧ ರಾಜ್ಯದ 19 ಸಾವಿರ ಪಡಿತರ ಮಳಿಗೆಗಳಿಗೆ ಸೂಚನೆ ನೀಡಲಾಗಿದ್ದು, ಯಾವುದೇ ಸಮಸ್ಯೆಯಾಗದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ “ಉದಯವಾಣಿ’ಗೆ ತಿಳಿಸಿದರು.

Advertisement

ಎರಡು ತಿಂಗಳ ಮುಂಗಡ ಪಡಿತರ ನೀಡುವುದರಿಂದ ತೂಕದ ಸಮಸ್ಯೆಯೂ ಬರುವುದಿಲ್ಲ. ಬಹುತೇಕ 50 ಕೆಜಿ ಅಕ್ಕಿ ಚೀಲ ಕೊಡಬೇಕಾಗುತ್ತದೆ. ಹೀಗಾಗಿ ವಿತರಣೆಗೆ ಯಾವುದೇ ಸಮಸ್ಯೆಯಾಗದು. ಉಗ್ರಾಣದಿಂದ ಗೋದಾಮು, ಗೋದಾಮಿನಿಂದ ಪಡಿತರ ಮಳಿಗೆಗೆ ಆಹಾರ ಧಾನ್ಯ ವಿತರಣೆಯಾಗಬೇಕು. ಪ್ರತಿ ದಿನ ಎಷ್ಟೆಷ್ಟು ಕಾರ್ಡ್‌ ಗಳಿಗೆ ಎಷ್ಟೆಷ್ಟು ಆಹಾರ ಧಾನ್ಯ ವಿತರಣೆಯಾಗಿದೆ ಎಂಬುದರ ಬಗ್ಗೆ ನಿಗಾ ವಹಿಸಲಾಗುವುದು. ಯಾವುದೇ ರೀತಿಯಲ್ಲೂ ಲೋಪ ಆಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಹೇಳಿದರು.

4.86 ಕೋ.ಫ‌ಲಾನುಭವಿಗಳು
ಕೋವಿಡ್‌-19ಸಂಕಷ್ಟ ಹಿನ್ನೆಲೆಯಲ್ಲಿ ರಾಜ್ಯದ 4.86 ಕೋಟಿ ಜನರಿಗೆ ಅನ್ನಭಾಗ್ಯವೇ ಆಧಾರವಾಗಿದೆ. 1.16 ಕೋಟಿ ಬಿಪಿಎಲ್‌ ಕಾರ್ಡ್‌, 11 ಲಕ್ಷ ಅಂತ್ಯೋದಯ ಕಾರ್ಡ್‌ ಗಳ ಫ‌ಲಾನುಭವಿಗಳು ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಆಹಾರ ಧಾನ್ಯಗಳ ಚಿಂತೆ ಇಲ್ಲದಂತೆ ನಿರಾಳರಾಗಲಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಇನ್ನೂ 2 ಲಕ್ಷ ಪಡಿತರ ಚೀಟಿಗಾಗಿ ಅರ್ಜಿಗಳು ಬಾಕಿಯಿದ್ದು, ಆ ಪೈಕಿ ಅರ್ಹ ಕುಟುಂಬಗಳಿಗೆ ಏನಾದರೂ ನೆರವು ಕಲ್ಪಿಸಬಹುದಾ ಎಂಬ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ದಾಸ್ತಾನು ಗೋದಾಮುಗಳಲ್ಲಿ ಇಲ್ಲ, ಆದರೂ ಶೇ.80 ರಷ್ಟು ದಾಸ್ತಾನು ಇದೆ. ಎ.1 ರೊಳಗೆ ಶೇ.100 ರಷ್ಟು ದಾಸ್ತಾನು ಬರಲಿದೆ. ಎ.10 ರೊಳಗೆ ಪ್ರತಿ ಕುಟುಂಬಕ್ಕೂ ಆಹಾರ ಧಾನ್ಯ ತಲುಪುವಂತೆ ನೋಡಿಕೊಳ್ಳಲಾಗುವುದು. 19 ಸಾವಿರ ಪಡಿತರ ವಿತರಣೆ ಮಳಿಗೆಗಳಿಗೆ ಈ ಸಂಬಂಧ ಅಗತ್ಯ ಸೂಚನೆ ಹೊರಡಿಸಲಾಗಿದೆ.
– ಗೋಪಾಲಯ್ಯ, ಆಹಾರ ಮತ್ತು
ನಾಗರಿಕ ಪೂರೈಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next