ಬೆಳಗಾವಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅತಿ ಶಿಸ್ತಿನ ಇಲಾಖೆ ಎಂಬ ಹೆಸರು ಪಡೆದಿದೆ. ಪೊಲೀಸ್ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಜಾತಿ, ಮತ, ಧರ್ಮದ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು ಎಂದು ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್. ಹಿತೇಂದ್ರ ಹೇಳಿದರು.
ನಗರದ ಕಂಗ್ರಾಳಿ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಕೆಎಸ್‌ಆರ್‌ಪಿ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತಂಡಗಳ ನಿರ್ಗಮನ ಪಥ ಸಂಚಲನ ಪರಿವೀಕ್ಷಿಸಿ ಮಾತನಾಡಿದ ಅವರು, ಮಾನಸಿಕ ಹಾಗೂ ದೈಹಿಕ ದೃಢ ಸಂಕಲ್ಪದಿಂದ ಉತ್ತಮ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಶಿಕ್ಷಣಾರ್ಥಿಗಳು ವಿವಿಧ ಪದವಿ, ಸ್ನಾತಕೋತ್ತರ ಪದವಿ ಪಡೆದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗೆ ಸೇರ್ಪಡೆಯಾಗಿದ್ದು, ಸಂತಸದ ಸಂಗತಿ. ಸಮವಸ್ತ್ರ ಧರಿಸಿ ಯಾವುದೇ ತೊಂದರೆ ಆಗದಂತೆ ಜಾಗ್ರತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಧೈರ್ಯ, ಶಿಸ್ತು, ಪೊಲೀಸ್ ಇಲಾಖೆಗೆ ಸ್ವಂತಿಕೆಯಾಗಿದೆ. ವಿವಿಧ ರಕ್ಷಣಾತ್ಮಕ ಕಲೆಗಳ ತರಬೇತಿ ಜೊತೆಗೆ ಕಂಪ್ಯೂಟರ್ ಜ್ಞಾನ, ಕಾನೂನು ವಿಷಯಗಳು, ಮಾನವ ಹಕ್ಕುಗಳು, ನಿಯಮ ಪಾಲನೆ ಸೇರಿದಂತೆ ವಿವಿಧ ಕಾಯ್ದೆಗಳ ಅರಿವು ತರಬೇತಿಯಲ್ಲಿ ನೀಡಲಾಗಿದ್ದು, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಈ ತರಬೇತಿ ಸಹಾಯವಾಗಲಿವೆ ಎಂದರು.
Related Articles
ಪ್ರಶಿಕ್ಷಣಾರ್ಥಿಗಳು ಪರಿಶ್ರಮದಿಂದ ಈ ಇಲಾಖೆ ಆಯ್ಕೆ ಮಾಡಿಕೊಂಡಿದ್ದೀರಿ. ಇದಕ್ಕೆ ನಿಮಗೆ ಅಭಿನಂದನೆಗಳು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ದುರಭ್ಯಾಸಗಳನ್ನು ಬೆಳೆಸಿಕೊಳ್ಳದೆ, ಉತ್ತಮ ಜೀವನದ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಆರ್. ಹಿತೇಂದ್ರ ಕಿವಿಮಾತು ಹೇಳಿದರು.
ಕಂಗ್ರಾಳಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಮೇಶ ಬೋರಗಾವೆ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಪ್ರಶಿಕ್ಷಣಾರ್ಥಿಗಳ ಅನಿಸಿಕೆಗಳ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಯಿತು. ತರಬೇತಿ ಅವಧಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅಂಕ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇದಕ್ಕೂ ಮುನ್ನ ರಾಜ್ಯದ ವಿವಿಧ ಘಟಕಗಳಾದ ತುಮಕೂರು, ಮಂಗಳೂರು, ಶಿವಮೊಗ್ಗ, ಕಲಬುರ್ಗಿ, ದಕ್ಷಿಣ ಕನ್ನಡ, ಮೈಸೂರು, ರಾಯಚೂರು, ಉಡುಪಿ, ಬೆಂಗಳೂರು, ಹಾಸನ, ಮೈಸೂರು, ಬೆಳಗಾವಿ ಹಾಗೂ ಶಿಗ್ಗಾಂವಿಯ ಕೆ.ಎಸ್.ಆರ್.ಪಿ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತಂಡಗಳ ಪಥ ಸಂಚಲನ, ನಿರ್ಗಮನ ಕವಾಯತು ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಎಸ್.ಆರ್. ಪಿ ಪೊಲೀಸ್ ಮಹಾ ನಿರೀಕ್ಷಕರಾದ ರವಿ ಎಸ್, ಉಪ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ವಿ ರಾಮಕೃಷ್ಣ ಪ್ರಸಾದ್, ಪೊಲೀಸ್ ಆಯುಕ್ತ ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆ.ಎಸ್. ಆರ್. ಪಿ 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳ ಕುಟುಂಬದ ಸದಸ್ಯರು ಕವಾಯಿತು ವೀಕ್ಷಣೆಗೆ ಸಾಕ್ಷಿಯಾದರು.