Advertisement

ರಾಜ್ಯದಲ್ಲಿ ಕೋವಿಡ್-19 ಕರಿನೆರಳಲ್ಲೀಗ ತಲ್ಲಣದ ಛಾಯೆ

01:46 AM Mar 30, 2020 | Sriram |

ಬೆಂಗಳೂರು: ಕೋವಿಡ್-19 ಸೋಂಕಿನ ಭಯದಲ್ಲಿರುವ ಜನತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಯ ಬಿಡುತ್ತಿರುವ ಸುಳ್ಳು ಸುದ್ದಿಗಳು ಆತಂಕಕ್ಕೆ ದೂಡಿವೆ. ಈ ನಡುವೆ ಲಾಕ್‌ಡೌನ್‌, ಹೋಂ ಕ್ವಾರಂಟೈನ್‌ ಆದೇಶವಿದ್ದರೂ ಇವನ್ನುಉಲ್ಲಂಘಿಸಿರುವ ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗಿದೆ. ಕೋವಿಡ್-19 ಭೀತಿಯ ಕರಿನೆರಳಲ್ಲೇ ರಾಜ್ಯದ ವಿವಿಧೆಡೆ ನಡೆದ ಇಂಥ ಘಟನೆಗಳ ವಿವರ ಇಲ್ಲಿದೆ…

Advertisement

ಯುವಕನ ಮೇಲೆ ಪ್ರಕರಣ ದಾಖಲು
ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕೋವಿಡ್-19 ಪ್ರಕರಣ ದೃಢಪಡದಿದ್ದರೂ ಜಿಲ್ಲೆಯ ನಾಗಠಾಣ ಗ್ರಾಮದ 5 ಮಂದಿಗೆ ಕೋವಿಡ್-19 ಪಾಸಿಟಿವ್‌ ಇದೆ ಎಂದು ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಸುಳ್ಳು ಸುದ್ದಿ ಹಬ್ಬಿಸಿರುವುದು ಬೆಳಕಿಗೆ ಬಂದಿದೆ. ಪ್ರಕಾಶ್‌ ಚವ್ಹಾಣ ತನ್ನ ಫೇಸ್‌ಬುಕ್‌ನಲ್ಲಿ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಜ್‌ ಯಾತ್ರೆಗೆ ತೆರಳಿದ್ದ 15 ಮಂದಿಯ ಪೈಕಿ ಐವರಲ್ಲಿ ಕೋವಿಡ್-19 ಪಾಸಿಟಿವ್‌ ದೃಢಪಟ್ಟಿದೆ ಎಂದು ಪೋಸ್ಟ್‌ ಹಾಕಿ ಜನರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಈತನ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಂಟೈನ್‌ ಉಲ್ಲಂಘನೆ: ದೂರು
ಶಿವಮೊಗ್ಗ: ವಿದೇಶ ಪ್ರಯಾಣ ಮಾಡಿ ಬಂದವರು ಮನೆಯಲ್ಲೇ ಇರಬೇಕೆಂದು ತಿಳಿಸಿದ್ದರೂ ಆದೇಶ ಧಿಕ್ಕರಿಸಿ ಹೊರಗೆ ಓಡಾಡುತ್ತಿದ್ದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಇಲ್ಲಿನ ಗೋಪಾಲಗೌಡ ಬಡಾವಣೆಯ ಶೇಖರ್‌ ಶೆಟ್ಟಿ ಅವರ ಪುತ್ರಿ ಮತ್ತು ಮೊಮ್ಮಗಳು ಮಾ.9ರಂದು ಬಹ್ರೈನ್‌ನಿಂದ ಮತ್ತು ಅವರ ಮಗ ಮಾ.11ರಂದು ದುಬಾಐಯಿಂದ ಶಿವಮೊಗ್ಗಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಮನೆಯಲ್ಲೇ ಇರಲು ಸೂಚಿಸಿದ್ದರು. ಆದರೆ ಶೇಖರ್‌ ಶೆಟ್ಟಿ ಮನೆಯಿಂದ ಹೊರಬಂದು ಓಡಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಜನಾಂಗೀಯ ದ್ವೇಷ ಪ್ರಕರಣ
ಮೈಸೂರು: ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಈಶಾನ್ಯ ರಾಜ್ಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳು ಜೆಎಲ್‌ಬಿ ರಸ್ತೆಯಲ್ಲಿರುವ ಮೆಗಾ ಸ್ಟೋರ್‌ಗೆ ಭೇಟಿ ನೀಡಿ ದಿನಸಿ ಖರೀದಿಸಲು ಮುಂದಾಗಿದ್ದರು. ಆದರೆ ಅಲ್ಲಿನ ಸಿಬಂದಿ ಒಳ ಬಿಡದೆ ಚೀನ ದೇಶದವರೆಂದು ಆರೋಪಿಸಿ ಜನಾಂಗೀಯ ತಾರತಮ್ಯ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೆ.ಆರ್‌.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಹಲವರು ಖಂಡಿಸಿದ್ದಾರೆ. ನಾಗಾಲ್ಯಾಂಡ್‌ನ‌ ಯೊಕೈ ಜಾನಿ ಕೊನ್ಯಾಕ್‌ ಮತ್ತು ಅಲಿ ಮೆರೆನ್‌ ಎಂಬವರು ಜನಾಂಗೀಯ ದ್ವೇಷಕ್ಕೆ ತುತ್ತಾದವರು. ಜತೆಯಲ್ಲಿ ಆಧಾರ್‌ ಕಾರ್ಡ್‌ ತಂದರೂ ಸಿಬಂದಿ ಒಳ ಬಿಡಲು ನಿರಾಕರಿಸಿದ್ದಾರೆ. ಘಟನೆಯನ್ನು ವೀಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಡಲಾಗಿತ್ತು.

ಸುಳ್ಳು ಸುದ್ದಿಗೆ ಅಧಿಕಾರಿಗಳ ತಲ್ಲಣ
ಎಚ್‌.ಡಿ.ಕೋಟೆ: 5 ಮಂದಿಗೆ ಕೋವಿಡ್-19 ಪಾಸಿಟಿವ್‌ ಪತ್ತೆಯಾಗಿದೆ ಎಂಬ ಸುಳ್ಳು ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ತಾಲೂಕಿನ ಜನತೆಯಷ್ಟೇ ಅಲ್ಲದೆ ಬೆಂಗಳೂರಿನ ಅಧಿಕಾರಿಗಳೂ ತಲ್ಲಣಗೊಂಡರು. ಬಹುತೇಕ ಅಧಿಕಾರಿಗಳು ವೈರಲ್‌ ಆದ ಸುದ್ದಿ ಆಲಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ| ರವಿಕುಮಾರ್‌ ಅವರಿಂದ ಮಾಹಿತಿ ಪಡೆದರು. ರವಿಕುಮಾರ್‌ ಅವರೇ ಧ್ವನಿ ಸುರುಳಿಯೊಂದನ್ನು ಬಿಡುಗಡೆ ಮಾಡಿ, ತಾಲೂಕಿನಲ್ಲಿ ಕೋವಿಡ್-19 ದೃಢಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಜನತೆ ನಿಟ್ಟುಸಿರು ಬಿಡುವಂತಾಯಿತು.

Advertisement

ಹತ್ತೇ ನಿಮಿಷಗಳಲ್ಲಿ ಮದುವೆ!
ಶ್ರೀರಂಗಪಟ್ಟಣ: ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಈ ಸಂದರ್ಭದಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮನೆ ಮಂದಿ ಸೇರಿ ಕೇವಲ ಹತ್ತೇ ನಿಮಿಷಗಳಲ್ಲಿ ನೆರವೇರಿಸಿದ ಪ್ರಸಂಗ ಕೆಆರ್‌ಎಸ್‌ನಲ್ಲಿ ನಡೆದಿದೆ. ಕೆಆರ್‌ಎಸ್‌ನ ತಲಕಾಡು ಗ್ರಾಮದ ನವೀನಾ ಮತ್ತು ಪ್ರಶಾಂತ್‌ ವಿವಾಹವನ್ನು ಈ ಹಿಂದೆಯೇ ನಿಶ್ಚಯಿಸಲಾಗಿತ್ತು. ಲಾಕ್‌ಡೌನ್‌ ನಿಯಮ ಪಾಲಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ವಿವಾಹ ರದ್ದುಪಡಿಸಿ ಮುಂಜಾಗ್ರತ ಕ್ರಮಗಳೊಂದಿಗೆ ವಧೂವರರ ಮನೆಯವರು ಸೇರಿ ವಧುವಿನ ಮನೆಯಲ್ಲಿ ರವಿವಾರ ಬೆಳಗ್ಗೆ 7.30ರ ಮಹೂರ್ತದಲ್ಲಿ ವಿವಾಹ ಶಾಸ್ತ್ರ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next