Advertisement

ಜಾಗತೀಕರಣದಿಂದ ರಾಜ್ಯ ಭಾಷೆ ಸಾಯುತ್ತಿದೆ

11:20 AM Jul 23, 2017 | Team Udayavani |

ಬೆಂಗಳೂರು: ಜಾಗತೀಕರಣ ಹಾಗೂ ಖಾಸಗೀಕರಣದಿಂದ ದೇಶೀಯ ಭಾಷೆ ಸಾಯುತ್ತಿದೆ. ಹಿಂದಿ ಹೇರಿಕೆಯಿಂದ ಪ್ರತಿ ರಾಜ್ಯದಲ್ಲೂ ಆಯಾ ರಾಜ್ಯಭಾಷೆಯ ಅಭಿವೃದ್ಧಿ ಪ್ರಾಧಿಕಾರ ಅನಿವಾರ್ಯವಾಗುತ್ತಿದೆ. ಈ ಸಂದರ್ಭದಲ್ಲಿ ನಾಡ ಬಾವುಟ ಬೇಕು, ನಾಡ ಸಂಸ್ಕೃತಿ ಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

ಡಾ. ಅಂಬೇಡ್ಕರ್‌ ರಾಷ್ಟ್ರೀಯ ಸಮಾವೇಶದಲ್ಲಿ “ಜಾಗತೀಕರಣ, ಖಾಸಗೀಕರಣ-ದಲಿತರು ಮತ್ತು ಹಿಂದುಳಿದ ವರ್ಗ’ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಕೇಂದ್ರ ಸರ್ಕಾರ ಬಂದ ಮೇಲೆ ಏಕ ಭಾಷೆ, ಏಕ ಸಂಸ್ಕೃತಿ ಹೀಗೆ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತರುತ್ತಿದೆ. ನಾಡ ಬಾವುಟ ಬೇಕು. ಇದು ಪರ್ಯಾಯ ವ್ಯವಸ್ಥೆಯಲ್ಲ ಇದು ಪೂರಕ ವ್ಯವಸ್ಥೆ ಎಂದರು. 

ಆರ್‌ಟಿಇ ಗಾಳಕ್ಕೆ ಹಾಕುವ ಎರೆಹುಳ: ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಸರ್ಕಾರಗಳು ಖಾಸಗಿಯವರನ್ನು ಬಲಾಡ್ಯರನ್ನಾಗಿ ಮಾಡುತ್ತಿವೆ. 300 ರಿಂದ 400 ಕೋಟಿ ರೂ. ಖಾಸಗಿಯವರಿಗೆ ನೀಡುವ ಬದಲು, ಈ ಹಣವನ್ನೇ ಸರ್ಕಾರಿ ಶಾಲೆಗೆ ಹಾಕಿ ಏಕೆ ಸಬಲೀಕರಣ ಮಾಡಬಾರದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸರ್ಕಾರ ನೀಡುವ ಭೂಮಿ, ಕೊಡುವ ಸವಲತ್ತಿಗಾಗಿ ಶೇ.25 ಸೀಟುಗಳನ್ನು ಉಚಿತವಾಗಿ ನೀಡಿ ಎಂದು ಸರ್ಕಾರ ಏಕೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರಶ್ನಿಸುವುದಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 10 ವರ್ಷದಲ್ಲಿ 11 ಸಾವಿರ ಕನ್ನಡ ಶಾಲೆ ಮುಚ್ಚಿದೆ. ಇದರ ಬದಲಾಗಿ ಯಾರು ಖಾಸಗಿ ಶಿಕ್ಷಣ ಸಂಸ್ಥೆ ತೆಗೆದಿದ್ದಾರೆ, ಇದು ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸುವುದಿಲ್ಲ. ಜಾಗತೀಕರಣ ಖಾಸಗೀಕರಣದ ಒಡಲು.

ಇದರಿಂದ ನಾಶವಾಗುತ್ತಿರುವುದು ಭಾಷೆ, ಸಂಸ್ಕೃತಿ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಬಂಜಗೆರೆ ಜಯಪ್ರಕಾಶ್‌,  ಜಾಗತೀಕರಣ ಬಂದ ಮೇಲೆ ಸಾರ್ವಜನಿಕ ಕ್ಷೇತ್ರಗಳೂ ಖಾಸಗೀಕರಣವಾಗುತ್ತಿದೆ. ದೇಶದಿಂದ ಜಾಗತೀಕರಣ ಓಡಿಸದೇ ಹೋದರೆ ಸಮಾಜಿಕ ನ್ಯಾಯ ತರಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next