Advertisement

ಬರಸಿಡಿಲಿಗೆ ರಾಜ್ಯ ಕೆಂಡಾಮಂಡಲ; ಕೇಂದ್ರದ ಷರತ್ತಿಗೆ ತೀವ್ರ ವಿರೋಧ

05:55 AM Jul 20, 2017 | Team Udayavani |

ಬೆಂಗಳೂರು: ಬರಗಾಲ ಪರಿಸ್ಥಿತಿ ಘೋಷಣೆಗೆ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಗಳನ್ನು ಬದಲಾಯಿಸಿ ಕಠಿಣ ಷರತ್ತು ವಿಧಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಸಲಾಗಿದ್ದು, ಕೇಂದ್ರ ಸರ್ಕಾರ ಕಳುಹಿಸಿರುವ ಹೊಸ ನಿಯಮಾವಳಿಗಳ ಪ್ರಕಾರ ಬರ ಘೋಷಣೆ ಮಾಡಲು ಅಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಈ ಕುರಿತು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಈ ಬಗ್ಗೆ ಮಂಗಳವಾರ ಉದಯವಾಣಿ “ಕೇಂದ್ರದಿಂದ ಬರಸಿಡಿಲು’ ವರದಿ  ಪ್ರಕಟಿಸಿತ್ತು.

ಸಂಪುಟ ಸಭೆ ನಂತರ ಮಾತನಾಡಿದ ಸಚಿವ ಜಯಚಂದ್ರ, “ಕಳೆದ ವರ್ಷ ರಾಜ್ಯದಲ್ಲಿ ತೀವ್ರ ಬರ ಇರುವುದರಿಂದ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ ಕೇವಲ 38 ತಾಲೂಕುಗಳನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಲು ಅವಕಾಶ ದೊರೆಯಲಿದೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ನಿಯಮಾವಳಿಗಳನ್ನು ಕಠಿಣಗೊಳಿಸಿದ್ದು, ಹಿಂದಿನ ನಿಯಮಾವಳಿಗಳಲ್ಲಿ 4 ವಾರ ವಾಡಿಕೆಗಿಂತ ಕಡಿಮೆ ಮಳೆಯಾದರೆ ಬರ ಪೀಡಿತ ಎಂದು ಘೋಷಣೆ ಮಾಡಲು ಅವಕಾಶವಿತ್ತು. ಆದರೆ, ಹೊಸ ನಿಯಮಗಳಲ್ಲಿ ಕನಿಷ್ಠ  ಶೇಕಡಾ 50ಕ್ಕಿಂತ ಕಡಿಮೆ ಬಿತ್ತನೆಯಾಗಿರಬೇಕು. ಅಂತರ್‌ ಜಲ ಮಟ್ಟ ಕುಸಿದಿರಬೇಕು, ಶೇಕಡಾ 50ರಷ್ಟು ಮಳೆ ಕಡಿಮೆಯಾಗಿರಬೇಕು ಎಂಬ ಕಠಿಣ ಷರತ್ತುಗಳನ್ನು ಹಾಕಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆಯಲು ನಿರ್ಧರಿಸಿದೆ’ ಎಂದು ತಿಳಿಸಿದರು.

“ಈ ವರ್ಷವೂ ಬರಗಾಲದ ಮುನ್ಸೂಚನೆ ಕಂಡು ಬಂದಿದೆ. ಜೂನ್‌ ಹಾಗೂ ಜುಲೈನಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದೆ. ಮಲೆನಾಡು ಭಾಗದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ವಾರದಲ್ಲಿ ಇನ್ನೂ ಎರಡುಮೂರು ದಿನ ಮಳೆಯಾಗಲಿದೆ’ ಎಂದರು.

ಪ್ರತಿ  ಜಿಲ್ಲೆಯಲ್ಲಿ ಮೇವು ಬ್ಯಾಂಕ್‌: ರಾಜ್ಯ ಸರ್ಕಾರ ಈಗಲೂ ಅಗತ್ಯವಿರುವ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ನಡೆಸುತ್ತಿದೆ. ಒಂದು ವೇಳೆ ಗೋಶಾಲೆ ಬೇಡ ಎಂದರೂ, ಜಾನುವಾರುಗಳಿಗೆ ಮೇವು ಪೂರೈಸಲು ಪ್ರತಿ ಜಿಲ್ಲೆಯಲ್ಲಿಯೂ ಮೇವು ಬ್ಯಾಂಕ್‌ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಖಾಸಗಿಯವರಿಂದ 10 ರೂಪಾಯಿಗೆ ಒಂದು ಕೆಜಿಯಂತೆ ಮೇವು ಖರೀದಿಸಿ, ರೈತರಿಗೆ ಕೆಜಿಗೆ 2 ರೂ.ನಂತೆ ನೀಡಲು ತೀರ್ಮಾನಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಯಚಂದ್ರ ತಿಳಿಸಿದ್ದಾರೆ.

Advertisement

ಹಿಂಗಾರು ಪರಿಹಾರ ಬಿಡುಗಡೆ: ರಾಜ್ಯದಲ್ಲಿ ಕಳೆದ ವರ್ಷ ಹಿಂಗಾರಿನಲ್ಲಿ ಬೆಳೆ ಹಾನಿಗೆ ಕೇಂದ್ರ ಸರ್ಕಾರದಿಂದ 795.54 ಕೋಟಿ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ. ಆ ಹಣವನ್ನು ನೇರವಾಗಿ ರೈತರ ಅಕೌಂಟ್‌ಗಳಿಗೆ ತಕ್ಷಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ ಸಚಿವ ಜಯಚಂದ್ರ.

ಸಂಪುಟದ ಪ್ರಮುಖ ನಿರ್ಣಯಗಳು
– ಕುಶಲ ತಾಂತ್ರಿಕತೆ ಬಳಸಿ ಬೇಸಾಯ ಮಾಡುವ ರೈತರಿಗೆ ಪ್ರೋತ್ಸಾಹ ಧನ ನೀಡಲು 130 ಕೋಟಿ ರೂಪಾಯಿ ವೆಚ್ಚದ ಯೋಜನೆ ಜಾರಿಗೆ ಒಪ್ಪಿಗೆ
– ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಒಕ್ಕೂಟ ಬ್ಯಾಂಕ್‌ಗಳಿಂದ ಮಾಡಿರುವ 27 ಕೋಟಿ ರೂ. ಸಾಲಕ್ಕೆ ಒಂದು ವರ್ಷದ ಖಾತರಿ ನೀಡುವುದು.
– 146 ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಸೌಲಭ್ಯವುಳ್ಳ ತೀವ್ರ ನಿಗಾ ಘಟಕ ಸ್ಥಾಪಿಸಲು 45.48 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ
– ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ತೋಟಗಾರಿಕೆ ಇಲಾಖೆಯಿಂದ 5 ಎಕರೆ ಜಮೀನು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಉಚಿತವಾಗಿ ನೀಡುವುದು.
– ಕರ್ನಾಟಕ ಅನಿಮೇಶನ್‌ ವಿಜುವಲ್‌ ಎಫೆಕ್ಟ್, ಗೇಮಿಂಗ್‌ ಮತ್ತು ಕಾಮಿಕ್ಸ್‌ ನೀತಿ 2017-22 ಕ್ಕೆ ಸಂಪುಟ ಒಪ್ಪಿಗೆ
– ಕೇಂದ್ರ ಸರ್ಕಾರದ ಎಂಎಸ್‌ಎಂಇ ಕೇಂದ್ರ ಸ್ಥಾಪಿಸಲು ತುಮಕೂರಿನ ಅಮಲಾಪುರದಲ್ಲಿ 15 ಎಕರೆ ಜಮೀನು ಉಚಿತವಾಗಿ ನೀಡಲು ಒಪ್ಪಿಗೆ
– ಗ್ರಾಮೀಣ ರಸ್ತೆಗಳ ಕರಡು ನೀತಿ 2017 ಕ್ಕೆ ಸಂಪುಟ ಅನುಮೋದನೆ.
– ಕರ್ನಾಟಕ ವಸತಿ ಶಿಕ್ಷಣ ಸಂಸ್ತೆಗಳ ವಿದ್ಯಾರ್ಥಿಗಳಿಗೆ ನಿರ್ಮಲ ಮತ್ತು ಸ್ಪೂರ್ತಿ ಕಿಟ್‌ ನೀಡಲು 15.70 ಕೋಟಿ ರೂಗಳನ್ನು ಬಿಡುಗಡೆಗೆ ಒಪ್ಪಿಗೆ
– ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ 10 ಗ್ರಾಮಗಳಿಗೆ ಕೃಷ್ಣಾ ನದಿಯಿಂದ 39 ಕೆರೆಗಳನ್ನು ತುಂಬಿಸಲು  91.40 ಕೋಟಿ ರೂಪಾಯಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
– ಸರ್ಕಾರಿ ಮತ್ತು ಅನುದಾನಿತ ಎಂಜನೀಯರಿಂಗ್‌ ಮತ್ತು ಪಾಲಿಟೆಕ್ನಿಕ್‌, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 300 ಕೋಟಿ ವೆಚ್ಚದಲ್ಲಿ ಉಚಿತ ಲ್ಯಾಪ್‌ಟಾಪ್‌ ನೀಡಲು ನಿರ್ಧಾರ.

ಕೇಂದ್ರದಿಂದ ರೈತರ ಕಡೆಗಣನೆ: ಖರ್ಗೆ ಕೆಂಡಾಮಂಡಲ
ನವದೆಹಲಿ:
ರಾಜ್ಯಸಭೆಯಲ್ಲಿ  ಗೋ ರಕ್ಷಣೆ ನೆಪದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಲಾಗುತ್ತದೆಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದರೆ, ಕೇಂದ್ರ ಸರ್ಕಾರ ರೈತರ ಕಷ್ಟಕ್ಕೆ ನೆರವಿಗೆ ಬರುತ್ತಿಲ್ಲ ಎಂದು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿವೆ.

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ದೇಶದ ಕೃಷಿ ಕ್ಷೇತ್ರ ಭಾರಿ ಪ್ರಮಾಣದ ಸಮಸ್ಯೆಯಲ್ಲಿ ಸಿಲುಕಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಕೃಷಿ ಕ್ಷೇತ್ರದ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫ‌ಲ ಹೊಂದಿದೆ’ ತರಾಟೆಗೆ ತೆಗೆದುಕೊಂಡರು.

ರೈತರು ಹೊಂದಿರುವ ಸಾಲ ಮನ್ನಾ ಮಾಡಬೇಕು. ಅವರು ಬೆಳೆ ಬೆಳೆಯಲು ಮಾಡಿದ ಖರ್ಚಿನ ಶೇ.50ರಷ್ಟನ್ನು ನೀಡುವ ಮೂಲಕ ಕೇಂದ್ರ ತಾನು ನೀಡಿದ ವಾಗ್ಧಾನ ಪೂರೈಸಬೇಕು ಎಂದು ಖರ್ಗೆ ಒತ್ತಾಯಿಸಿದರು. ಆರಂಭದಲ್ಲಿ ಕಾಂಗ್ರೆಸ್‌, ಟಿಎಂಸಿ ಮತ್ತು ಇತರ ಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿತ್ತು. ಖರ್ಗೆ ಮಾತನಾಡುವುದಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ತಡೆಯಲು ಪ್ರಯತ್ನಿಸಿದರೂ ಸಫ‌ಲರಾಗಿರಲಿಲ್ಲ. ಖರ್ಗೆ ಆರೋಪಗಳಿಗೆ ಕೂಡಲೇ ಪ್ರತಿಕ್ರಿಯೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಪ್ರತಿಕ್ರಿಯಿಸಿ, ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬೇರೆಲ್ಲರಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ,’ ಎಂದು ಸಮರ್ಥಿಸಿಕೊಂಡರು.
ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ರೈತರ ಹಿತ ಕಾಪಾಡುವಲ್ಲಿ ಕೆಂದ್ರ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ಹಾಗೂ ಇತರ ಪ್ರತಿಪಕ್ಷಗಳ ಸದಸ್ಯರು ಬುಧವಾರ ಲೋಕಸಭೆಯ ಬಾವಿಗಿಳಿದು ಪ್ರತಿಭಟಿಸಿದರು.

ಬುಧವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ಕೃಷಿ ಕ್ಷೇತ್ರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ಸಂಸತ್‌ನ ಬಾವಿಗಿಳಿದ ಕಾಂಗ್ರೆಸ್‌, ಟಿಎಂಸಿ, ಆರ್‌ಜೆಡಿ ಹಾಗೂ ಎಡ ಪಕ್ಷಗಳ ಸದಸ್ಯರು, “ಮನ್‌ ಕಿ ಬಾತ್‌ ಬಂದ್‌ ಕರೋ, ಕರ್ಜಾ ಮಾಫಿ ಶುರೂ ಕರೊ’ (ಮನ್‌ ಕಿ ಬಾತ್‌ ನಿಲ್ಲಿಸಿ, ಸಾಲ ಮನ್ನಾ ಆರಂಭಿಸಿ) ಎಂದು ಘೋಷಣೆ ಕೂಗಿದರು. ಇದರಿಂದ ಒಂದು ಗಂಟೆ ಕಾಲ ಕಲಾಪಕ್ಕೆ ಅಡ್ಡಿಯಾಯಿತು.

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿ ಮಾಡುವ ಸಂಬಂಧ ಮಧ್ಯರಾತ್ರಿ 12 ಗಂಟೆಗೆ ಸಂಸತ್‌ನ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆದರೆ ಕೃಷಿಕರ ಸಮಸ್ಯೆ ಕುರಿತು ಚರ್ಚಿಸಲು ಸರ್ಕಾರದ ಬಳಿ ಒಂದು ನಿಮಿಷ ಸಮಯವೂ ಇಲ್ಲ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next