Advertisement

ಕೇಂದ್ರದ ಯೋಜನೆಗಳನ್ನೇ ತನ್ನದೆನ್ನುತ್ತಿರುವ ರಾಜ್ಯ ಸರಕಾರ

04:23 PM Jun 16, 2017 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ಬಿಂಬಿಸುತ್ತ ಪ್ರಚಾರ ಪಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು. 

Advertisement

ನಗರದ ನೆಹರು ಮೈದಾನದಲ್ಲಿ ಜೂ.17ರಂದು ನಡೆಯುವ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಪ್ರಚಾರ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 

ಕೇಂದ್ರ ಸರ್ಕಾರದ ಉಚಿತ ವಿದ್ಯುತ್‌ ಸರಬರಾಜು ಯೋಜನೆಗೆ “ಹೊಸ ಬೆಳಕು’ ಎಂದು ಹಾಗೂ ಬಡ ಜನರಿಗೆ ಆಹಾರ ಧಾನ್ಯ ನೀಡುವ ಯೋಜನೆಗೆ “ಅನ್ನಭಾಗ್ಯ’ ಎಂದು ನಾಮಕರಣ ಮಾಡಿ “ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬಂತೆ ತನ್ನದೇ ಕಾರ್ಯಕ್ರಮಗಳೆಂದು ಪ್ರಚಾರ ಪಡೆಯುತ್ತಿದೆ ಎಂದರು. 

ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಅಕ್ಕಿಗೆ 38ರೂ. ನೀಡಿ ಅದನ್ನು 3 ರೂ.ನಂತೆ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಅದೇ ರೀತಿ ಪ್ರತಿ ಕೆ.ಜಿ.ಗೋಧಿಗೆ 28ರೂ. ನೀಡಿ ಅದನ್ನು 2ರೂ.ನಂತೆ ನೀಡುತ್ತಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಯಾವುದೇ ತಾರತಮ್ಯ ಮಾಡದೆ ರಾಜ್ಯದಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದಾರೆ.

ಮುಂದೆ ಇನ್ನೂ ಹಲವು ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿವೆ ಎಂದರು. ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ರಾಜ್ಯದಲ್ಲಿ 36 ಲಕ್ಷ ಫ‌ಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ನೀಡಲಾಗುವುದು.

Advertisement

ಮಹತ್ವದ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ, ಅನಂತಕುಮಾರ, ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರ್ಗಿ, ಜಯತೀರ್ಥ ಕಟ್ಟಿ, ಶಂಕ್ರಪ್ಪ ಬಿಜವಾಡ, ಉಮೇಶ ದುಶಿ, ವೆಂಕಟೇಶ ಮೇಸಿ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next