Advertisement

ಪ್ರಬಲ ಕನ್ನಡ ವಿಧೇಯಕ ಮಂಡಿಸಿದ ರಾಜ್ಯ ಸರಕಾರ; ಕಾಯಿದೆ ಉಲ್ಲಂಘನೆಗೆ ದಂಡ

04:41 PM Sep 22, 2022 | Team Udayavani |

ಬೆಂಗಳೂರು : ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸುವುದಕ್ಕೆ ಅಗತ್ಯವಾದ ಶಾಸನಾತ್ಮಕ  ಬಲವನ್ನು ಒಳಗೊಂಡಂಥ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ರಾಜ್ಯ ಸರಕಾರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದೆ.

Advertisement

ಕನ್ನಡ  ಮತ್ತು ಸಂಸ್ಕ್ರತಿ, ಇಂಧನ ಸಚಿವ ವಿ ಸುನಿಲ್ ಕುಮಾರ್ ವಿಧೇಯಕವನ್ನು ಮಂಡಿಸಿದ್ದು, ಆಡಳಿತ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಸೇರಿದಂತೆ ಶಿಸ್ತು ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಜಾರಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ಈ ವಿಧೇಯಕದ ಮೂಲಕ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಆನೆಗಳ ಭ್ರೂಣ ಹತ್ಯೆ ಪ್ರಸ್ತಾಪ ಸರಕಾರದ ಮುಂದೆ ಇಲ್ಲ: ಸಚಿವ ಹೆಬ್ಬಾರ್

ಮುಖ್ಯವಾಗಿ ರಾಜ್ಯದಲ್ಲಿ ಭೂಮಿ, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು, ಕಾರ್ಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಕಾಯಿದೆಯ ಮೇಲ್ವಿಚಾರಣೆಗೂ ಈ ವಿಧೇಯಕ ಬಲ ನೀಡಲಿದೆ.

ಕಾಯಿದೆಯ ಮುಖ್ಯಾಂಶಗಳು

Advertisement

1. ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವುದು.

2. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉನ್ನತ , ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ.

3. ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆಗಳು, ಸಹಕಾರ ಸಂಘಗಳ ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯ.

4. ಅಧೀನ ನ್ಯಾಯಾಲಯ ಹಾಗೂ ನ್ಯಾಯ ಮಂಡಳಿಗಳಲ್ಲಿ ಕನ್ನಡ ಭಾಷಾ ಬಳಕೆ.

5. ಕನ್ನಡದ ಬಳಕೆ ಮತ್ತು ಪ್ರಸಾರಕ್ಕೆ ನೀತಿ.

6. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶದಲ್ಲಿ ಕನ್ನಡ ಬಳಕೆಗೆ ಕ್ರಮ.

7 . ರಾಜ್ಯ ಸರಕಾರದಿಂದ ತೆರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವುದು.

8. ಉದ್ಯೋಗ ಪೋರ್ಟಲ್ ಸ್ಥಾಪನೆ.

9 . ಅನುಷ್ಠಾನಗಳ ಮೇಲ್ವಿಚಾರಣೆಗೆ ಕಾರ್ಯ ವ್ಯವಸ್ಥೆ ಸ್ಥಾಪನೆ.

ದಂಡ
ಕನ್ನಡ ಅನುಷ್ಠಾನ ಉಲ್ಲಂಘನೆ ಮಾಡಿದ ವ್ಯಕ್ತಿ, ಸಂಘ- ಸಂಸ್ಥೆಗಳಿಗೆ ಈ ಕಾಯಿದೆಯ ಮೂಲಕ ದಂಡ ವಿಧಿಸುವ ಉಪಬಂಧವನ್ನು ಈ ಕಾಯಿದೆಯ ಮೂಲಕ ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಖಾಸಗಿ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ 5000 ರೂ, ಎರಡನೇ ಬಾರಿಗೆ 10,000 ರೂ. ಹಾಗೂ ಮೂರನೇ ಬಾರಿಗೆ ತಪ್ಪೆಸಗಿದವರಿಗೆ 20,000 ರೂ.ವರೆಗೆ ದಂಡ ವಿಧಿಸುವ ಅಧಿಕಾರವನ್ನು ವಿವಿಧ ಹಂತದಲ್ಲಿ ಇರುವ ಜಾರಿ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಸರಕಾರಿ ಅಧಿಕಾರಿಗಳು ಕನ್ನಡ ಜಾರಿ ವಿಚಾರದಲ್ಲಿ ಎಸಗುವ ತಪ್ಪನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ.

ಪ್ರೋತ್ಸಾಹ
ಇ ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಸರಕಾರಕ್ಕೆ ಸೃಜನಾತ್ಮಕ ಸಲಹೆ ನೀಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವುದಕ್ಕೂ ಈ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next