Advertisement

State government: ಲೋಕಸಭೆ, ರಾಜ್ಯಸಭೆ ಸಂಸದರ ಸಭೆ ನಡೆಸಿದ ರಾಜ್ಯ ಸರಕಾರ

10:53 PM Jun 27, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ರಾಜ್ಯದಿಂದ ಗೆದ್ದ ಲೋಕಸಭೆ, ರಾಜ್ಯಸಭೆ ಸದಸ್ಯರು ಹಾಗೂ ಕೇಂದ್ರ ಸಚಿವರ ಸಭೆಯನ್ನು ಇದೇ ಮೊದಲ ಬಾರಿಗೆ ನಡೆಸಿದ ರಾಜ್ಯ ಸರಕಾರ, ನಾಡಿನ ನೆಲ, ಜಲ, ಸಂಸ್ಕೃತಿ, ಸಂಪನ್ಮೂಲದ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಒಕ್ಕೊರಲಿನಿಂದ ಸಹಕರಿಸುವಂತೆ ಮನವಿ ಮಾಡಿದೆ.

Advertisement

ಗುರುವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಏನೇನು ಆಗಬೇಕೆಂಬುದರ ದೊಡ್ಡ ಪಟ್ಟಿಯೇ ಇದೆ. ಅಗತ್ಯ ಬೇಡಿಕೆ, ಯೋಜನೆ, ಪ್ರಸ್ತಾವನೆಗಳನ್ನು ನಿಮ್ಮ ಮುಂದೆ ಇಟ್ಟು ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎನ್ನುವುದಷ್ಟೇ ನನ್ನ ಮನವಿ ಎಂದರು. ಅಲ್ಲದೆ, ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಬಗ್ಗೆ ಧ್ವನಿ ಎತ್ತುವಂತೆ ಕೋರಿದರು.

ಇದೇ ವಿಚಾರವನ್ನು ಸಭೆಯಲ್ಲಿ ಮಂಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಮ್ಮ ರಾಜ್ಯದಲ್ಲಿ ಬಾಕಿ ಉಳಿದಿರುವ ಕೇಂದ್ರ ಯೋಜನೆಗಳು, ಅನುದಾನ ಇತ್ಯಾದಿ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತ ಕಾಪಾಡಬೇಕು. ಚುನಾವಣಾ ರಾಜಕೀಯ ಮುಗಿದಿದೆ. ರಾಜ್ಯದ ಹಿತಕ್ಕಾಗಿ ಸಂಸತ್ತಿನ ಒಳಗೆ, ಹೊರಗೆ ರಾಜ್ಯದ ಪರವಾಗಿ ಒಕ್ಕೊರಿನಿಂದ ಧ್ವನಿ ಎತ್ತಿ ಎಂದು ಮನವಿ ಮಾಡಿದರು.

ಮೇಕೆದಾಟು, ಕಳಸಾ-ಬಂಡೂರಿ,ಭದ್ರಾ ಯೋಜನೆಗಳ ಪ್ರಸ್ತಾಪ:

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದೆ. ಭದ್ರಾ ಯೋಜನೆ ಬಗ್ಗೆಯೂ ಪ್ರಯತ್ನ ಮುಂದುವರಿಸಬೇಕಾಗಿದೆ. ಕೇಂದ್ರದ ಹಣಕಾಸು ಮಂತ್ರಿ ತಮ್ಮ ಬಜೆಟ್‌ನಲ್ಲೇ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆ ಹಣ ಕೊಡಿಸಿ ಕೊಡಲು ಸಭೆಯಲ್ಲಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಎಂ ಮನವಿ ಮಾಡಿದರು. ಅಲ್ಲದೆ, ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಅಗತ್ಯವಿದೆ. ಇದು ಬಾಕಿ ಇರುವುದರಿಂದ ಕೆಲಸ ಶುರು ಮಾಡಲು ಸಾಧ್ಯವಾಗಿಲ್ಲ ಎಂದೂ ಗಮನ ಸೆಳೆದರು.

Advertisement

ಏಮ್ಸ್‌, ಐಐಟಿಗೆ ಬೇಡಿಕೆ:

ಕಲ್ಯಾಣ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಲು ಮನವಿ ಸಲ್ಲಿಸಿದ್ದೇವೆ. ಇದರ ಈಡೇರಿಕೆ ಅಗತ್ಯವಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಏಮ್ಸ್‌ ಬಂದರೆ ಅಭಿವೃದ್ಧಿ ಸಾಧ್ಯ ಎಂದರಲ್ಲದೆ, ಮೈಸೂರು ಅಥವಾ ಹಾಸನಕ್ಕೆ ಮತ್ತೂಂದು ಐಐಟಿ ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದೇವೆ. ಇದು ಈಡೇರಿಸಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಡಾ| ಸುಧಾಮೂರ್ತಿ, ಡಾ| ಸಿ.ಎನ್‌.ಮಂಜುನಾಥ್‌, ಬಸವರಾಜ ಬೊಮ್ಮಾಯ, ಜಗದೀಶ್‌ ಶೆಟ್ಟರ್‌, ಯಧುವೀರ್‌ ಒಡೆಯರ್‌ ಸೇರಿದಂತೆ ರಾಜ್ಯದ ಎಲ್ಲ ಸಂಸದರು, ರಾಜ್ಯದ ಸಚಿವರಾದ ಡಾ.ಜಿ.ಪರಮೇಶ್ವರ್‌, ಎಚ್‌.ಕೆ. ಪಾಟೀಲ್‌, ಕೆ.ಜೆ. ಜಾರ್ಜ್‌, ಡಾ| ಎಚ್‌.ಸಿ. ಮಹದೇವಪ್ಪ, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ದಿಲ್ಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌ ಮತ್ತಿತರರು ಉಪಸ್ಥಿತರಿದ್ದರು.

ಸಂಸದರಿಗೆ ರಾಜ್ಯದ ಸರಕಾರದ ಬೇಡಿಕೆಗಳೇನು?:

ಕರಾವಳಿ ಭಾಗಗಳ ಅಭಿವೃದ್ಧಿಗೆ ಉಡಾನ್‌ ಯೋಜನೆಯಲ್ಲಿ ಸಲ್ಲಿಸಿರುವ ಪ್ರಸ್ತಾವನೆ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಇದೆ. ಇದರ ಈಡೇರಿಕೆಗೆ ಪ್ರಯತ್ನಿಸಬೇಕಾಗಿದೆ.

ಬೆಂಗಳೂರು ವಿಮಾನ ನಿಲ್ದಾಣವನ್ನು ಏರ್‌ ಕಾರ್ಗೋ ಕಾಂಪ್ಲೆಕ್ಸ್‌ ಆಗಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಕೆ. ಇದರಿಂದ ರಫ್ತು ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳು ವೇಗಗೊಳ್ಳುತ್ತವೆ.

ಕಸ್ತೂರಿ ರಂಗನ್‌ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ. ಅದನ್ನು ಕೂಡಲೇ ಅಂಗೀಕರಿಸಿ ಪಶ್ಚಿಮಘಟ್ಟದ ಜನರಿಗೆ ನೆಮ್ಮದಿ ಒದಗಿಸಬೇಕು.

ರೈಲ್ವೇ ಸಂಪರ್ಕದಲ್ಲಿ ರಾಜ್ಯ ಹಿಂದುಳಿದಿದೆ. ಹೀಗಾಗಿ ಹೆಚ್ಚು ರೈಲ್ವೇ ಸಂಪರ್ಕ ಹೆಚ್ಚಿಸಲು ಆದ್ಯತೆಗೆ ಮನವಿ.

ಗ್ರಾಮ ಸಡಕ್‌ ಯೋಜನೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಿಂದುಳಿದಿದೆ. ಇದನ್ನು ಸರಿದೂಗಿಸಬೇಕಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next