ಡಾ.ಸಿ.ಎನ್. ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ.
ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ದೃಷ್ಟಿಯಲ್ಲಿ ರಾಜ್ಯ ಬಜೆಟ್ ಆಶಾದಾಯಕವಾಗಿದೆ. ಆದರೆ ಇದರ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಲಿದೆ ಎಂಬುದು ಮುಖ್ಯ. ಹಾಗೆಯೇ ಆರೋಗ್ಯ ಕ್ಷೇತ್ರದ ನಿರ್ವಹಣೆ ಅತ್ಯಂತ ಪ್ರಮುಖ ಸಂಗತಿಯಾಗಿದೆ.
ಇಂದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ನಿರ್ಮಾಣಗೊಳ್ಳುತ್ತಿವೆ. ಆದರೆ ಇದರ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳನ್ನು ನೀಡುವ ಮಾನವ ಸಂಪನ್ಮೂಲದ ಕೊರತೆ ಎದ್ದು ಕಾಣುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯ ಸೇವಾ ರಂಗದಲ್ಲಿ ಮಾನವ ಸಂಪನ್ಮೂಲ ಸೃಷ್ಟಿಸುವ ಪ್ರಯತ್ನವನ್ನು ಸರ್ಕಾರ ಮಾಡಬಹುದಿತ್ತು.
ತಾಲೂಕು ಆಸ್ಪತ್ರೆಗಳಲ್ಲಿಯೂ ತುರ್ತು ಚಿಕಿತ್ಸೆ ಸಿಗುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಹಾಗೆಯೇ ಅಪಘಾತ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ರಾಜ್ಯದಲ್ಲಿ ಸಂಭವಿಸುವ ಸಾವುಗಳಲ್ಲಿ ಶೇ. 12 ರಿಂದ ಶೇ. 13ರಷ್ಟು ಅಪಘಾತದ ಕಾರಣದಿಂದ ಘಟಿಸುತ್ತಿದೆ. ಆದ್ದರಿಂದ ಟ್ರಾಮಾ ಕೇಂದ್ರಗಳನ್ನು ಹೆಚ್ಚಿಸುವ ಅಗತ್ಯವಿದೆ.
ಬೆಂಗಳೂರಿನಂತಹ ನಗರದ ನಾಲ್ಕು ದಿಕ್ಕಿನಲ್ಲೂ 300 ಬೆಡ್‌ಗಳ ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು. ನಮ್ಮ ಜಯದೇವವೇ ಆರಂಭಗೊಂಡಿದ್ದಾಗ ನಗರದ ಹೊರ ವಲಯದಲ್ಲಿತ್ತು. ಆದರೆ ಈಗ ನಗರ ವಿಸ್ತಾರಗೊಂಡು ಜಯದೇವ ಆಸ್ಪತ್ರೆಯೇ ಹೃದಯ ಭಾಗಕ್ಕೆ ಬಂದು ಬಿಟ್ಟಿದೆ. ಆದ್ದರಿಂದ ನಗರದ ಹೊರ ವಲಯದ ನಾಲ್ಕು ದಿಕ್ಕಿನಲ್ಲೂ ಆಸ್ಪತ್ರೆ ನಿರ್ಮಿಸುವ ಪ್ರಸ್ತಾಪವನ್ನು ಬಜೆಟ್ ಹೊಂದಿರಬೇಕಿತ್ತು.
ಇನ್ನು ಸರ್ಕಾರಿ ಯೋಜನೆಗಳಾದ ಆಯುಷ್ಮಾನ್ ಭಾರತ್ ಮತ್ತು ಯಶಸ್ವಿನಿ ಯೋಜನೆ ಸರ್ಕಾರಿ ಆಸ್ಪತ್ರೆಗಳಿಗೆ ಸೀಮಿತವಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಭಾರೀ ಹೊರೆ ಬಿದ್ದಿದೆ. ಈ ಯೋಜನೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಿಸುವ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆ ಮಾಡಬಹುದು. ಆದರೆ ಇದಕ್ಕಿಂತ ಮುಂಚಿತವಾಗಿ ಯೋಜನೆಯಡಿಯಲ್ಲಿನ ಚಿಕಿತ್ಸೆಗಳ ದರ ಪರಿಷ್ಕರಣೆ ಆಗಬೇಕು.
Related Articles
ಹೃದಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿದ್ದಾಗ ತಾಲೂಕು ಆಸ್ಪತ್ರೆಗಳಲ್ಲಿ ತೃತೀಯ ಹಂತದ ಆಸ್ಪತ್ರೆಗಳ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕಿತ್ತು. ಇದರಿಂದಾಗಿ ಹೃದಯಾಘಾತ ಪ್ರಕರಣಗಳಲ್ಲಿ ಸುವರ್ಣ ಅವಧಿಯಲ್ಲಿ ಚಿಕಿತ್ಸೆ ಸಿಕ್ಕಿ ಹೃದ್ರೋಗಿ ಪ್ರಾಣಾಪಾಯದಿಂದ ಪಾರಾಗುವ ಸಂಭವ ಹೆಚ್ಚು. ಮೂರ್ನಾಲ್ಕು ಗಂಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆ ಬಳಿಕ ಆ ವ್ಯಕ್ತಿಯನ್ನು ಹೃದ್ರೋಗ ಆಸ್ಪತ್ರೆಗಳಿಗೆ ರವಾನಿಸುವ ವ್ಯವಸ್ಥೆಯ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖೀಸುವ ನಿರೀಕ್ಷೆಯಿತ್ತು.
ಎಲ್ಲ ಮೆಡಿಕಲ್ ಕಾಲೇಜ್‌ಗಳಲ್ಲಿ ಸಣ್ಣ ಸಣ್ಣ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು. ಮೊದಲ ಮತ್ತು ಎರಡನೇ ಹಂತದ ಕ್ಯಾನ್ಸರ್‌ಗೆ ಅಲ್ಲೇ ಚಿಕಿತ್ಸೆ ಸಿಗುವಂತೆ ಮಾಡುವ ಕ್ರಮ ಕೈಗೊಳ್ಳಬೇಕಿತ್ತು.