ಸನ್ನಿಧಿ ಟಿ.ರೈ ಪೆರ್ಲ ರಚಿಸಿದ ಎರಡನೇ ಯಕ್ಷಗಾನ ಪ್ರಸಂಗ ಸೂರ್ಯಪ್ರಭೆ. ಕತೆಯೊಂದರ ಆಧಾರದಲ್ಲಿ ರಚಿತವಾದ ಪುಟ್ಟ ಯಕ್ಷಗಾನ ಕೃತಿ ಇದು. ಇದರಲ್ಲಿ ಬರುವ ಪಾತ್ರಗಳು (ಸೂರ್ಯಪ್ರಭೆ,ಕೃಷ್ಣ, ಭೀಷ್ಮ,ದ್ರೋಣ ಮತ್ತು ಮಧುಬಾಹು) ಪೌರಾಣಿಕವಾದರೂ ಕತೆ ಕಾಲ್ಪನಿಕ. ಆದರೆ ಭಾರತೀಯ ತತ್ವದರ್ಶನಕ್ಕೆ ಒಪ್ಪುವ ಕರ್ಮ, ಪುರ್ನಜನ್ಮ ಹಾಗೂ ಅವತಾರ ಸಿದ್ಧಾಂತಗಳು ಇಲ್ಲಿ ಪ್ರತಿಪಾದಿಸಲ್ಪಟ್ಟಿರುವುದು ಗಮನಿಸಬೇಕಾದ ಸಂಗತಿ. ಸಾಮಾನ್ಯ ಯೋಧನೊಬ್ಬನ ಮಡದಿಯಾದ ಸೂರ್ಯಪ್ರಭೆ ಪುರುಷ ಪ್ರಧಾನ ಸಮಾಜದ ಕಟ್ಟುಪಾಡು ಹಾಗು ಸ್ತ್ರೀಶೋಷಣೆಗಳನ್ನು ಕೆಚ್ಚೆದೆಯಿಂದ ಪ್ರಶ್ನಿಸುವುದು ಕತೆಯ ಅಂತಃಸತ್ವವಾಗಿದೆ.
ಕುರುಕ್ಷೇತ್ರ ಯುದ್ಧ ಘೋಷಣೆಯ ಬಳಿಕ ಕೌರವನು ಅಸಂಖ್ಯ ಯೋಧರನ್ನು ಸಮರಾಂಗಣಕ್ಕೆ ಒತ್ತಾಯಪೂರ್ವಕ ಕಳುಹಿಸುತ್ತಾನೆ. ಆಗ ಭಯಗೊಂಡ ಮಧುಬಾಹುವಿಗೆ ಉತ್ಸಾಹ ತುಂಬಿ ಕರ್ತವ್ಯಪ್ರಜ್ಞೆ ಮೂಡಿಸಿ ಪತ್ನಿ ಸೂರ್ಯಪ್ರಭೆ ಆತನನ್ನು ರಣರಂಗಕ್ಕೆ ಕಳುಹಿಸುತ್ತಾಳೆ. ಆದರೆ ಅಕಸ್ಮಾತ್ ಎದೆಗೆ ತಗಲಿದ ಬಾಣವೊಂದು ಅವನ ಮರಣಕ್ಕೆ ಕಾರಣವಾಗುತ್ತದೆ.
ಈ ವಾರ್ತೆಯನ್ನು ತಿಳಿದ ಸೂರ್ಯಪ್ರಭೆ ಸಹಸ್ರಾರು ಸ್ತ್ರೀಯರ ವೈಧವ್ಯ ದುಃಖಕ್ಕೆ ಕಾರಣವಾಗುವ ಯುದ್ಧಕ್ಕೆ ಉತ್ತೇಜನ ನೀಡುವ ರಾಜಕೀಯ ಮುಂದಾಳುಗಳ ಅವಿವೇಕತನದ ವಿರುದ್ಧ ಸಿಡಿದೇಳುತ್ತಾಳೆ. ಯುದ್ಧ ಭೂಮಿಗೆ ತೆರಳಿ ಭೀಷ್ಮ ಮತ್ತು ದ್ರೋಣರನ್ನು ಕಂಡು ಅವರಿಬ್ಬರೂ ಸಮರವನ್ನು ತಡೆಯದಿರುವುದು ತಪ್ಪೆಂದು ವಾದಿಸುತ್ತಾಳೆ. ಇದರಿಂದ ಪ್ರಯೋಜನವಾಗದಿದ್ದಾಗ ದ್ರೋಣರ ಸಲಹೆಯಂತೆ ಶ್ರೀಕೃಷ್ಣನ ಬಳಿಗೆ ಧಾವಿಸುತ್ತಾಳೆ.
ಶ್ರೀಕೃಷ್ಣನು ಅವಳಿಗೆ ಕರ್ಮ ಸಿದ್ಧಾಂತವನ್ನು ತಿಳಿಸುತ್ತಾನೆ. ಆಗ ಸೂರ್ಯಪ್ರಭೆ ತಾನೇನೂ ತಪ್ಪು ಮಾಡದಿದ್ದರೂ ತನಗೇಕೆ ವೈಧವ್ಯದ ಶಿಕ್ಷೆ ಎಂದು ನೇರವಾಗಿ ಪ್ರಶ್ನಿಸುತ್ತಾಳೆ. ಅನಿವಾರ್ಯವಾಗಿ ಕೃಷ್ಣ, ಆಕೆ ಹಿಂದಿನ ಜನ್ಮದಲ್ಲಿ ವಾಲಿಯ ಹೆಂಡತಿ ತಾರೆಯಾಗಿದ್ದಳೆಂದೂ ತನ್ನ ಪತಿಯ ಪಾಪ ಕಾರ್ಯಗಳನ್ನು ವಿರೋಧಿಸದೆ ಇದ್ದುದರಿಂದ ಈ ಜನ್ಮದಲ್ಲಿ ವೈಧವ್ಯ ಪ್ರಾಪ್ತಿಯಾಯಿತೆಂದು ಹೇಳುತ್ತಾನೆ. ಅಲ್ಲದೆ ನಿನ್ನ ಪತಿಯು ಬೇಡನ ರೂಪದಲ್ಲಿ ಬಂದು ನನ್ನ ನಿರ್ಯಾಣಕ್ಕೆ ಕಾರಣನಾದಾಗ ನಿನಗೆ ಮೋಕ್ಷ ಎನ್ನುತ್ತಾನೆ. ಈ ಮಾತಿನಿಂದ ಸಮಾಧಾನಗೊಂಡ ಸೂರ್ಯಪ್ರಭೆ ಬಿಳಿಯ ಬಟ್ಟೆಯುಟ್ಟು ಭಗವತ್ ಸ್ಮರಣೆಗೆ ತೊಡಗುತ್ತಾಳೆ. ಪ್ರಸಂಗವು ಸಣ್ಣದಾದರೂ ಆಟಕೂಟಗಳಿಗೆ ಸೂಕ್ತವಾಗಿದ್ದು ಸನ್ನಿಧಿಯ ಕಾವ್ಯ ರಚನಾ ಚಾತುರ್ಯದಿಂದ ಸನ್ನಿವೇಶಗಳ ಸಮರ್ಪಕ ಜೋಡಣೆಯೊಂದಿಗೆ ಸೊಗಸಾಗಿ ಮೂಡಿಬಂದಿದೆ.
ಸೂರ್ಯಪ್ರಭೆ ಪ್ರಸಂಗದ ಬಿಡುಗಡೆ ಮತ್ತು ತಾಳಮದ್ದಳೆ ಮಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ಇತ್ತೀಚೆಗೆ ನಡೆಯಿತು. ಸೂರ್ಯಪ್ರಭೆಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಆಕೆಯ ಮಾನಸಿಕ ತುಮುಲವನ್ನು ವಿಶ್ಲೇಷಿಸುವಲ್ಲಿ ಯಶಸ್ವಿಯಾದರು. ಭೀಷ್ಮನಾಗಿ ಕಾಣಿಸಿಕೊಂಡ ವೆಂಕಟ್ರಾಮ ಸುಳ್ಯ ವೃದ್ಧ ಪಿತಾಮಹನ ಧರ್ಮಸಂಕಟವನ್ನು ಮನೋಜ್ಞವಾಗಿ ಚಿತ್ರಿಸಿದರು. ಕೃಷ್ಣನಾಗಿ ಅರ್ಥ ಹೇಳಿದ ಡಾ| ರಮಾನಂದ ಬನಾರಿಯವರು ಕರ್ಮ ಸಿದ್ಧಾಂತದ ಹಿನ್ನೆಲೆ, ಮುನ್ನೆಲೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಸೂರ್ಯಪ್ರಭೆಗೆ ಉಂಟಾದ ಕ್ಷೋಭೆಗೆ ಸಮರ್ಪಕವಾದ ಕಾರಣ ನೀಡಿದರು. ದ್ರೋಣನಾಗಿ ಸುನೀಲ್ ಪಲ್ಲಮಜಲು ಮತ್ತು ಮಧುಬಾಹುವಾಗಿ ದಿನಕರ ಪಚ್ಚನಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದರು. ಹಳೆಯ ತಲೆಮಾರು ಮತ್ತು ಹೊಸತಲೆಮಾರುಗಳ ಮಾತುಗಳ ಮಿಲನ ಮನತಣಿಸಿತು. ಪಾತ್ರಧಾರಿಗಳಿಗೆ ಇನ್ನಷ್ಟು ಸಮಯ ದೊರೆತಿದ್ದರೆ ವಿಷಯ ಹಾಗು ರಸಪ್ರತಿಪಾದನೆಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯ ವಿಷಯ ಆಯ್ಕೆ ಮತ್ತು ಪದ ರಚನೆಯ ಸಾಮಾರ್ಥ್ಯ ಮೆಚ್ಚುಗೆಗೆ ಪಾತ್ರವಾಯಿತು.
ಭವ್ಯಶ್ರೀ ಕುಲ್ಕುಂದ ಹಾಗು ಶಿವಪ್ರಸಾದ್ ಕಾಂತಾವರ ಭಾಗವತಿಕೆಯಲ್ಲಿ ಮನ ಮೆಚ್ಚಿಸಿದರೆ ಮದ್ದಳೆಯಲ್ಲಿ ರೋಹಿತ್ ಉಚ್ಚಿಲ ಮತ್ತು ಚೆಂಡೆಯಲ್ಲಿ ವಿಷ್ಣು ಶರಣ ಬನಾರಿ ಹಿಮ್ಮೇಳಕ್ಕೆ ನ್ಯಾಯ ಸಲ್ಲಿಸಿದರು.
ವಿ.ಬಿ.ಅರ್ತಿಕಜೆ