Advertisement
ಭಾರತಕ್ಕೆ ಗರಿಷ್ಠ ಪದಕ ಬರುವ ಕ್ರೀಡೆ ಶೂಟಿಂಗ್, ಅದನ್ನೇ ಕಿತ್ತು ಹಾಕಿರುವುದರ ಹಿಂದೆ ಭಾರತವನ್ನು ಕುಗ್ಗಿಸುವ ಹುನ್ನಾರವಿದೆ ಎನ್ನುವುದು ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ ಅಭಿಮತ. ಇದಕ್ಕೆ ಪೂರಕವಾಗಿ, ಸೆಪ್ಟೆಂಬರ್ ತಿಂಗಳು ರುವಾಂಡದಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟದ ಸಭೆಯನ್ನು ಐಒಎ ಬಹಿಷ್ಕರಿಸಿದೆ. ಅದರ ಚುನಾವಣೆಯಿಂದ ಭಾರತೀಯರ ನಾಮಪತ್ರವನ್ನೂ ಹಿಂಪಡೆದಿದೆ. ಇದರ ಬೆನ್ನಲ್ಲೇ ಕಂಗೆಟ್ಟಿರುವ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ, ‘ಇಂತ ಹ ನಿರ್ಧಾರ ಮಾಡಬೇಡಿ, ಮಾತುಕತೆ ನಡೆಸಿ ನಿರ್ಧರಿಸೋಣ’ ಎಂದು ಮನವಿ ಮಾಡಿದೆ.
ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ, ಶೂಟಿಂಗ್ ರದ್ದು ಪಡಿಸುವುದಕ್ಕೆ ನೀಡುವ ಕಾರಣ ಬೇರೆಯೇ ಇದೆ. ಭಾರತ ಶೂಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ ಶೂಟಿಂಗ್ ಪಾಲು ಬಹುದೊಡ್ಡದು. ಶೂಟಿಂಗ್ ರದ್ದಾದರೆ ಭಾರತದ ಪದಕಗಳ ಸಂಖ್ಯೆ ತಗ್ಗುತ್ತದೆ. ಈ ಉದ್ದೇಶದಿಂದಲೇ ಶೂಟಿಂಗ್ ಕೈಬಿಡುವ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಕ್ರೀಡೆಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದರೇ ಹೀಗೆ ಏನಾದರೂ ಮಾಡುತ್ತಾರೆ. ಒಂದೋ ರದ್ದು ಮಾಡುತ್ತಾರೆ, ಇಲ್ಲವೇ ನಿಯಮ ಬದಲಾಯಿಸುತ್ತಾರೆ. ಈಗ ಭಾರತ ಯಾವುದೇ ರಾಷ್ಟ್ರದ ವಸಾಹತು ಅಲ್ಲ. ನಾವೀಗ ಕಠಿನ ಪ್ರಶ್ನೆಗಳನ್ನು ಕೇಳುವ ಸಮಯ ಬಂದಿದೆ ಎಂದು ಬಾತ್ರಾ ಹೇಳುತ್ತಾರೆ. ಏಕಪಕ್ಷೀಯ ನಿರ್ಧಾರ ಅಸಾಧ್ಯ
ಜೂನ್ ತಿಂಗಳಲ್ಲಿ ಕಾಮನ್ವೆವೆಲ್ತ್ ಬಹಿಷ್ಕರಿಸುವ ಕುರಿತು ಬಾತ್ರಾ ಹೇಳಿಕೆ ನೀಡಿದ ಕೂಡಲೇ ಕೇಂದ್ರ ಕ್ರೀಡಾ ಸಚಿವಾಲಯ ಪ್ರತಿಕ್ರಿಯಿಸಿತು. ‘ಹಾಗೆಲ್ಲ ಐಒಎ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ನೂರಾರು ಕ್ರೀಡಾಪಟುಗಳ ಭವಿಷ್ಯ ಅಡಗಿದೆ. ಆದ್ದರಿಂದ ಈ ಬಗ್ಗೆ ಐಒಎ ಸರಕಾರದೊಂದಿಗೆ ಕೂತು ಚರ್ಚಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
Related Articles
Advertisement
ಸಂಘಟಕರ ಹಾಸ್ಯಾಸ್ಪದ ಕಾರಣ2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗನ್ನು ಯಾಕೆ ರದ್ದು ಮಾಡಲಾಗಿದೆ ಎನ್ನುವುದಕ್ಕೆ ಬರ್ಮಿಂಗ್‌ಹ್ಯಾಮ್ ಸಂಘಟಕರು ಹಾಸ್ಯಾಸ್ಪದ ಕಾರಣ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಶೂಟಿಂಗ್ ಕ್ರೀಡೆ ನಡೆಸುವುದಕ್ಕೆ ಸೂಕ್ತವಾದ ತಾಣವಿಲ್ಲ ಎಂಬುದು ಅದರ ಹೇಳಿಕೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಡೆಸುವ ಗೇಮ್ಸ್ ತಾಣದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸುವುದಕ್ಕೆ ಏಕೆ ಸಾಧ್ಯವಿಲ್ಲ ಎನ್ನುವುದು ಇಲ್ಲಿನ ಪ್ರಶ್ನೆ.