ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ವಿಲೇವಾರಿಯೇ ಭಾರೀ ಸವಾಲಿನ ಕೆಲಸ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಅವರು ಶುಕ್ರವಾರ ನಿವೃತ್ತರಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ವಿದಾಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡುವ ಬಗ್ಗೆ ಹಲವು ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಯೋಚಿಸಿದ್ದರೂ ಅದನ್ನು ಕಾರ್ಯ ರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಹೊಸದಿಲ್ಲಿಗೆ ಬರುವುದಕ್ಕೆ ಮೊದಲು ಅಲ್ಲಿ ಭಾರೀ ಎಚ್ಚರಿಕೆಯಂದ ಇರಬೇಕು ಎಂಬ ಸೂಚನೆ ನೀಡಲಾಗಿತ್ತು ಎಂದು ಮುಖ್ಯ ನ್ಯಾಯಮೂರ್ತಿ ರಮಣ ನೆನಪಿಸಿಕೊಂಡರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ 224 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದೂ ಅವರು ಹೇಳಿದರು. ಮುಖ್ಯ ನ್ಯಾಯಮೂರ್ತಿ ರಮಣ 2021ರ ಎ.24ರಂದು ಪದಗ್ರಹಣ ಮಾಡಿದ್ದರು.
ಇಂದು ಪ್ರಮಾಣ: ಸುಪ್ರೀಂಕೋರ್ಟ್‌ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ| ಉದಯ ಉಮೇಶ್ ಲಲಿತ್ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ನ. 8ರ ವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಖ್ಯಾತ ನ್ಯಾಯವಾದಿಯಾಗಿದ್ದ ಲಲಿತ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಅವರು ಮೂಲತಃ ಮಹಾರಾಷ್ಟ್ರದವರು.