Advertisement

2 ವರ್ಷದಲ್ಲಿ ಅತ್ಯಾಧುನಿಕ ಡೈರಿ ಕಾರ್ಯಾರಂಭ

01:30 PM Jun 02, 2017 | Team Udayavani |

ದಾವಣಗೆರೆ: ತಾಲೂಕಿನ ಎಚ್‌. ಕಲ್ಪನಹಳ್ಳಿಯಲ್ಲಿ ಇನ್ನೆರಡು ವರ್ಷಗಳಲ್ಲಿ ಅತ್ಯಾಧುನಿಕ ಹಾಲು ಪ್ಯಾಕ್‌ ಮಾಡುವ, ಪ್ಯಾಶ್ಚರೀಕರಣ ಹಾಗೂ ಇತರೆ ಉತ್ಪನ್ನ ತಯಾರಿಸುವ ಘಟಕ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ.

Advertisement

ರೋಟರಿ ಬಾಲಭವನದಲ್ಲಿ ಗುರುವಾರ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಭಾರತೀಯ ಅಂಚೆ ಇಲಾಖೆಯಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಂದಿನಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ, ಹಾಲು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಎಚ್‌. ಕಲ್ಪನಹಳ್ಳಿಯಲ್ಲಿ ಸುಮಾರು 14 ಎಕರೆ ಜಾಗದಲ್ಲಿ 120 ಕೋಟಿ ವೆಚ್ಚದಲ್ಲಿ ಹಾಲಿನ ಸ್ವಯಂಚಾಲಿತ ಹಾಲಿನ ಘಟಕ ಆರಂಭವಾಗಲಿದೆ. ಇತರೆ ಘಟಕಗಳಲ್ಲಿಗಿಂತ ಹೆಚ್ಚಿನ ಉತ್ಪನ್ನ ತಯಾರಿಕೆಗೆ ಈ ಘಟಕ ಸಹಕಾರಿಯಾಗಲಿದೆ ಎಂದರು. ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ ಸುಮಾರು 80 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದ್ದು, 40 ಲಕ್ಷ ಲೀಟರ್‌ ಹಾಲನ್ನು ದಿನ ಬಳಕೆಗೆ ಹಾಗೂ 40 ಲಕ್ಷ ಲೀಟರ್‌ ಹಾಲನ್ನು ವಿವಿಧ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. 

ಶಿವಮೊಗ್ಗ-ದಾವಣಗೆರೆ- ಚಿತ್ರದುರ್ಗ ಹಾಲೂ ಒಕ್ಕೂಟದಲ್ಲಿ ದಿನಂಪ್ರತಿ 5 ಲಕ್ಷ ಲೀಟರ್‌ ಹಾಲು ಶೇಖರಣೆ ಮಾಡಲಾಗುತ್ತಿದ್ದು, 2.5 ಲಕ್ಷ ಲೀಟರ್‌ ಕುಡಿಯಲು ಬಳಸಲಾಗುತ್ತಿದೆ. ಹಾಲಿನ ಉತ್ಪಾದನೆಯಲ್ಲಿ ನಾವು ಶೇ. 100 ಕ್ಕಿಂತ ಹೆಚ್ಚು ಪ್ರಗತಿ ಸಾಧಿ ಸಿದ್ದೇವೆ ಎಂದು ತಿಳಿಸಿದರು. 

ಶಿವಮೊಗ್ಗ-ದಾವಣಗೆರೆ- ಚಿತ್ರದುರ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಜಿ .ಟಿ. ಗೋಪಾಲ್‌ ಮಾತನಾಡಿ, ರಾಜ್ಯದಲ್ಲಿ 70 ರಿಂದ 80 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ರಾಜ್ಯ ದೇಶದಲ್ಲಿ 2ನೇ ಸ್ಥಾನ ಹೊಂದಿದೆ. ಪ್ರಸ್ತುತ ಸಾಲಿನಲ್ಲಿ ಶೇ.14 ಹಾಲಿನ ಉತ್ಪಾದನೆ ಹೆಚ್ಚಾಗಿದೆ.

Advertisement

ನಮ್ಮ ಒಕ್ಕೂಟದಿಂದ ಪ್ರತಿದಿನ 1.5 ಕೋಟಿ ರೂಪಾಯಿಗಳನ್ನು 1,100 ಹಾಲು ಸಹಕಾರ ಸಂಘಗಳಿಗೆ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು. ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ತಿಂಗಳಿಗೆ 40 ಕೋಟಿ ರೂಪಾಯಿ ಬಟವಾಡೆ ಮಾಡಲಾಗುತ್ತಿದೆ. ರೈತರಿಗೆ ಸಹಾಯ ಧನದರೂಪದಲ್ಲಿ ಆನ್‌ಲೆ„ನ್‌ ಮೂಲಕ 5 ರೂಪಾಯಿ ನೀಡಲಾಗುತ್ತಿದೆ.

ಶೇ. 96 ಆನ್‌ಲೈನ್‌ ಆಗಿದೆ.ತಾಂತ್ರಿಕ ಕಾರಣಗಳಿಗಾಗಿ ಶೇ.4 ಬಾಕಿ ಇದ್ದು ಸದ್ಯದಲ್ಲೇ ಶೇ. 100 ಆನ್‌ಲೆ„ನ್‌ ಪಾವತಿ ಆಗಲಿದೆ. ಹಾಲು ಯಥೇತ್ಛವಾಗಿ ಉತ್ಪಾದಿಸಲಾಗುತ್ತಿದ್ದು ಮಾರುಕಟ್ಟೆಗೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು. ಹಾಲಿನಪುಡಿ ತಯಾರಿಸಲು 30 ಲಕ್ಷ ಲೀಟರ್‌ ಹಾಲನ್ನು ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. 

ದೇಶೀ ತಳಿಯ ಹಾಲನ್ನು ಎ-2 ಮತ್ತು ಮಿಶ್ರತಳಿಯನ್ನು ಎ-1 ಹಾಲು ಎಂದು ವರ್ಗೀಕರಿಸಲಾಗಿದ್ದು ಗ್ರಾಹಕರಿಂದ ಮಿಶ್ರತಳಿ ರಾಸುಗಳ ಹಾಲಿಗಿಂತ ದೇಶೀ ತಳಿ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಎ-2 ಹಾಲು ಗುಣಮಟ್ಟ ಮತ್ತು ಪೌಷ್ಟಿಕಾಂಶಯುಕ್ತವಾಗಿದ್ದು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಸಾಬೀತಾಗಿದ್ದು, ದೇಶೀಯ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಹಾಗೂ ಕೇಂದ್ರ ಸರ್ಕಾರವೂ ದೇಶೀಯ ತಳಿ ಉಳಿಸಲು ಸೂಚನೆ ನೀಡಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಜಗದೀಶಪ್ಪ ಬಣಕಾರ್‌ ಮಾತನಾಡಿ, ಎಲ್ಲರಿಗೂ ಅತ್ಯವಶ್ಯವಾಗಿರುವ ಹಾಲಿನ ಕುರಿತ ಅರಿವು ಕಾರ್ಯಕ್ರಮ ಅತ್ಯಂತ ಪ್ರಸ್ತುತವಾಗಿದೆ. ದಾವಣಗೆರೆಗೆ ಸುಮಾರು 120 ಕೋಟಿ ವೆಚ್ಚದಲ್ಲಿ ಒಕ್ಕೂಟ ಮತ್ತು ಘಟಕ ಸ್ಥಾಪನೆಗೆ ಮಂಜೂರಾತಿ ದೊರೆತಿದ್ದು, ಅಗತ್ಯವಾಗಿ ಬೇಕಾಗಿರುವ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 

ಅಂಚೆ ಇಲಾಖೆಯ ದಕ್ಷಿಣ ವಲಯದ ಸಹ ನಿರ್ದೇಶಕ ಕೆ.ವಿ. ಅನಂತರಾಮು, ಹಾಲು ಒಕ್ಕೂಟದ ವ್ಯವಸ್ಥಾಪಕ ಕೆ.ಎಂ. ರುದ್ರಯ್ಯ, ನಿರ್ದೇಶಕರಾದ ಡಿ.ಜಿ. ಷಣ್ಮುಖ ಪಾಟೀಲ್‌, ಎಚ್‌.ಕೆ. ಪಾಲಾಕ್ಷಪ್ಪ, ಎಚ್‌.ಕೆ. ಬಸಪ್ಪ, ಆರ್‌. ಹನುಮಂತಪ್ಪ, ನಾಮನಿರ್ದೇಶಿತ ಸದಸ್ಯ ಶಿವಲಿಂಗಪ್ಪ, ಅಂಚೆ ಅಧೀಕ್ಷಕಿ ಕೆಂಪಲಕ್ಕಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಂದಿನಿ ಗುಡ್‌ಲೈಫ್‌ ಹಾಲು ವಿತರಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next