ಚಂದನವನದ “ಕೃಷ್ಣ’ನಾಗಿ ಸಾಫ್ಟ್ಲುಕ್‌ನಲ್ಲಿ ಪ್ರೇಕ್ಷಕರ ಮನಗೆದ್ದಿರುವ ನಟ ಅಜೇಯ್ ರಾವ್, ಈಗ “ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಂದಹಾಗೆ, “ತಾಯಿಗೆ ತಕ್ಕ ಮಗ’ ಅಜೇಯ್ ರಾವ್ ಸಿನಿ ಬದುಕಿನ 25ನೇ ಚಿತ್ರವಾಗಿದ್ದು, ಚಿತ್ರದ ಮೇಲೆ ನಾಯಕ ಅಜೇಯ್ ರಾವ್, ನಿರ್ದೇಶಕ ಕಂ ನಿರ್ಮಾಪಕ ಶಶಾಂಕ್ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ. ಸದ್ಯ ಚಿತ್ರದ ಪ್ರಚಾರ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಒಂದೊಂದಾಗಿ “ತಾಯಿಗೆ ತಕ್ಕ ಮಗ’ನ ಹಾಡುಗಳನ್ನು ಬಿಡುಗಡೆಗೊಳಿಸಿತ್ತು. ಇನ್ನು ಬಿಡುಗಡೆಯಾದ ಎಲ್ಲಾ ಹಾಡುಗಳಿಗೂ, ಸಿನಿಪ್ರಿಯ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಇತ್ತೀಚೆಗೆ ಆಡಿಯೋ ಸಕ್ಸಸ್‌ಮೀಟ್ ಹೆಸರಿನಲ್ಲಿ ಪತ್ರಕರ್ತರ ಮುಂದೆ ಬಂದಿತ್ತು.
ಚಿತ್ರದ ಬಗ್ಗೆ ಮೊದಲಿಗೆ ಮಾತಿಗಿಳಿದ ನಿರ್ದೇಶಕ ಶಶಾಂಕ್, “ಇವತ್ತಿನ ಟ್ರೇಂಡ್‌ನಂತೆ ಒಂದೊಂದೆ ಹಾಡುಗಳನ್ನು ಬಿಡುಗಡೆ ಮಾಡಿ, ಪ್ರಚಾರ ಕಾರ್ಯ ಶುರು ಮಾಡಿದ್ದೇವೆ. ಚಿತ್ರದಲ್ಲಿ ಬರುವ ಯಾವುದೇ ಹಾಡಾಗಲಿ, ದೃಶ್ಯಗಳಾಗಲಿ, ಚಿತ್ರದ ಕಥೆಗೆ ಹೊರತಾಗಿಲ್ಲ. ಇಲ್ಲಿ ಆರೋಗ್ಯವಂತ ಸಮಾಜಕ್ಕಾಗಿ ಹೋರಾಡುವ ಆದರ್ಶ ತಾಯಿ ಮತ್ತು ಮಗನ ಕಥೆ ಇದೆ. ಸಮಾಜದಲ್ಲಿ ಬದಲಾವಣೆ ಆಗಬೇಕಾದ್ರೆ, ಯಾರಾದರೊಬ್ಬರು ಕೋಪ ಮಾಡಿಕೊಳ್ಳಲೇಬೇಕು ಅನ್ನೋದು ಸಿನಿಮಾದ ಥೀಮ್. ಯಾರು ಕೋಪ ಮಾಡಿಕೊಳ್ಳುತ್ತಾರೆ, ಯಾರ ವಿರುದ್ದ ಕೋಪ ಮಾಡಿಕೊಳ್ಳುತ್ತಾರೆ ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೇವೆ. ಮೊದಲ ಬಾರಿಗೆ ಅಜೇಯ್ ರಾವ್ ಈ ಥರದ ಪಾತ್ರದಲ್ಲಿ “ತಾಯಿಗೆ ತಕ್ಕ ಮಗನಾಗಿ’ ಕಾಣಿಸಿಕೊಂಡರೆ, ಸುಮಲತಾ ಅಂಬರೀಶ್ ಆದರ್ಶ ತಾಯಿಯಾಗಿ ಕಾಣುತ್ತಾರೆ. ಸದ್ಯ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ನ. 16ರಂದು “ತಾಯಿಗೆ ತಕ್ಕ ಮಗ’ನನ್ನು ಪ್ರೇಕ್ಷಕರ ಮುಂದೆ ತರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಚಿತ್ರದ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ’ ಎಂದು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.
ಚಿತ್ರದ ಬಗ್ಗೆ ಮತ್ತು ತನ್ನ ಪಾತ್ರದ ಬಗ್ಗೆ ಮಾತನಾಡಿದ ನಟ ಅಜೇಯ್ ರಾವ್, “ಒಬ್ಬ ಕಲಾವಿದನ ವೃತ್ತಿ ಬದುಕಿನಲ್ಲಿ 25ನೇ ಚಿತ್ರ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಹಾಗಾಗಿ ಈ ಚಿತ್ರ ನನಗೂ ತುಂಬ ಮಹತ್ವದ್ದಾಗಿದೆ. ನನ್ನ ಮೊದಲ ಚಿತ್ರದಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸಿದ್ದ ಸುಮಲತಾ ಅಂಬರೀಶ್ ಅವರೇ 25ನೇ ಚಿತ್ರದಲ್ಲೂ ತಾಯಿಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಕೋಪದ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲಾ ತಾಯಿ ತನ್ನ ಮಗನನ್ನು ಮಾತ್ರ ನೋಡಿಕೊಂಡರೆ, ಈ ತಾಯಿ ಇಡೀ ಸಮಾಜವನ್ನೇ ತನ್ನ ಮಗನಂತೆ ನೋಡಿಕೊಳ್ಳುತ್ತಾಳೆ. ತುಂಬ ಅಪರೂಪದ ತಾಯಿ-ಮಗನನ್ನು ಚಿತ್ರದಲ್ಲಿ ನೋಡಬಹುದು. ಮೊದಲ ಬಾರಿಗೆ ಈ ಥರದ ಪಾತ್ರ ನಿರ್ವಹಣೆ ಮಾಡಿದ್ದು, ಚಿತ್ರದ ಮೇಲೆ ನನಗೂ ಸಾಕಷ್ಟು ಭರವಸೆಯಿದೆ. ಅಣ್ಣನಂಥ ನಿರ್ದೇಶಕ ಶಶಾಂಕ್ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದರು.
ಚಿತ್ರದಲ್ಲಿ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಸುಮಲತಾ ಅಂಬರೀಶ್, “ಸಾಮಾನ್ಯವಾಗಿ ನಾನು ಚಿತ್ರದ ಕಥೆಗಳಿಗಿಂತ ಅದನ್ನು ಮಾಡುವ ಚಿತ್ರತಂಡದ ತುಡಿತ, ಹಂಬಲವನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ಅದು ಇದ್ದರೇನೇ, ಚಿತ್ರ ಪರಿಣಾಮಕಾರಿಯಾಗಿ ತೆರೆಮೇಲೆ ತರಲು ಸಾಧ್ಯ. ಇನ್ನು ಅಜೇಯ್, ಶಶಾಂಕ್ ಮತ್ತು ತಂಡವನ್ನು ಆರಂಭದಿಂದಲೂ ನೋಡುತ್ತ ಬಂದಿದ್ದೇನೆ. ಚಿತ್ರವನ್ನು ತುಂಬ ಚೆನ್ನಾಗಿ ಮಾಡಿದ್ದಾರೆ. ಇಂಥದ್ದೊಂದು ತಾಯಿ-ಮಗ ನಮ್ಮ ನಡುವೆ ಇದ್ದರೆ ಹೇಗಿರುತ್ತದೆ ಎಂಬ ಭಾವನೆ ಚಿತ್ರ ನೋಡಿದವರಿಗೆ ಬರುತ್ತದೆ’ ಎಂದರು. ನಟಿ ಆಶಿಕಾ ರಂಗನಾಥ್ ಮಾತನಾಡಿ, “ಶಶಾಂಕ್ ಮತ್ತು ಅಜೇಯ್ ರಾವ್ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಈ ಚಿತ್ರದಲ್ಲಿ ಅದು ನೆರವೇರಿದೆ. ಇಡೀ ಚಿತ್ರ ಒಳ್ಳೆಯ ಅನುಭವ ಕೊಟ್ಟಿದೆ. ಕೆಲವು ಚಿತ್ರಗಳಲ್ಲಿ ಹೀರೋಯಿನ್ ಇರಲೇಬೇಕು ಎಂಬ ಉದ್ದೇಶದಿಂದ ಪಾತ್ರಗಳನ್ನು ಇಟ್ಟಿರುತ್ತಾರೆ. ಆದರೆ ಈ ಚಿತ್ರದಲ್ಲಿ ಕಥೆಯೊಳಗೆ ಜೋಡಿಸಿರುವಂತೆ ನನ್ನ ಪಾತ್ರವಿದೆ. ಚಿತ್ರದ ಮೇಲೆ ನನಗೂ ಸಾಕಷ್ಟು ನಿರೀಕ್ಷೆ ಇದೆ’ ಎಂದರು.
ಇನ್ನು ಬಿಡುಗಡೆಗೆ ಸಿದ್ದವಾಗಿರುವ “ತಾಯಿಗೆ ತಕ್ಕ ಮಗ’ನ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರದಲ್ಲಿ ಬರುವ “ಹೃದಯಕ್ಕೆ… ಹೆದರಿಕೆ’ ಎಂಬ ಜಯಂತ ಕಾಯ್ಕಿಣಿ ಬರೆದಿರುವ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ ಉಪ್ಪಿ ದಂಪತಿ, ಚಿತ್ರದ ಶೀರ್ಷಿಕೆ, ಟೈಟಲ್ ಕೇಳುತ್ತಿದ್ದರೆ ಆದಷ್ಟು ಬೇಗ ಚಿತ್ರವನ್ನು ನೋಡಬೇಕೆಂಬ ಆಸೆ ಮೂಡುವಂತಿದೆ. ಚಿತ್ರ ಭರವಸೆ ಮೂಡಿಸುವಂತಿದೆ. ಚಿತ್ರದ ಬಿಡುಗಡೆಗೆ ನಾವು ಕೂಡ ಕಾಯುತ್ತಿದ್ದೇವೆ. ಇಂಥದ್ದೊಂದು ಒಳ್ಳೆ ಚಿತ್ರವನ್ನು ಕೊಟ್ಟ ನಿರ್ದೇಶಕ ಶಶಾಂಕ್, ನಟ ಅಜೇಯ್ ರಾವ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಇನ್ನಷ್ಟು ಇಂತಹ ಚಿತ್ರಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಜಿ.ಎಸ್. ಕಾರ್ತಿಕ ಸುಧನ್