“ಇಂತಹ ಪಾತ್ರ ಮಾಡೋಕೆ ಧೈರ್ಯ ಬೇಕು, ಸಿದ್ಧತೆ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರದ ಮೇಲೆ ಆ ಕಲಾವಿದರಿಗೆ ಪ್ರೀತಿ ಇರಬೇಕು. ಇವೆಲ್ಲಾ ಇದ್ದರೆ ಮಾತ್ರ ಈ ರೀತಿಯ ಪಾತ್ರ ನಿರ್ವಹಿಸಲು ಸಾಧ್ಯ…’ ಇದು ದರ್ಶನ್ ಹೇಳಿದ ಮಾತು. ಅದು ಹೊಗಳಿಕೆಯಂತೂ ಅಲ್ಲ, ಮನದಾಳದ ಮಾತು. ಹಾಗಂತ ಸ್ವತಃ ದರ್ಶನ್ ಅವರೇ ಹೇಳಿಕೊಂಡರು. ಸಂದರ್ಭ, “ದಮಯಂತಿ’ ಚಿತ್ರದ ಹಾಡುಗಳ ಬಿಡುಗಡೆ. ಅವರು ಹೇಳಿದ್ದು ರಾಧಿಕಾ ಬಗ್ಗೆ.
ಅಂದು ರಾಧಿಕಾ ಅವರ ಬರ್ತ್‌ಡೇ. ಅದರ ಅಂಗವಾಗಿ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಕೋರಿದರು. ನಂತರ ಮೈಕ್ ಹಿಡಿದು ಮಾತಿಗೆ ನಿಂತ ದರ್ಶನ್ ಹೇಳಿದ್ದಿಷ್ಟು. “ರಾಧಿಕಾ ಇಂಡಸ್ಟ್ರಿಗೆ ನನಗಿಂತಲೂ ಒಂದು ವರ್ಷ ಮೊದಲೇ ಬಂದಿದ್ದಾರೆ. ಹಾಗಾಗಿ, ಅವರು ಸೀನಿಯರ್. ನಾನು “ಮೆಜೆಸ್ಟಿಕ್’ ಸಿನಿಮಾ ಮಾಡುವ ಮೊದಲೇ ಅವರು “ನೀಲ ಮೇಘ ಶ್ಯಾಮ’ ಚಿತ್ರ ಮಾಡಿದ್ದರು. ಆ ಬಳಿಕ ನಾನು “ಮೆಜೆಸ್ಟಿಕ್’ ಚಿತ್ರದಲ್ಲಿ ನಟಿಸಿದ್ದೆ.
ರಾಧಿಕಾ ಅವರ ಜೊತೆ ಇದ್ದ ನಟಿಯರೆಲ್ಲ ಈಗ ಹಿಂದೆ ಸರಿದಿದ್ದಾರೆ. ರಾಧಿಕಾ ಇಂದಿಗೂ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ, ಅದು ಅವರು ಉಳಿಸಿಕೊಂಡಿರುವ ಚಾರ್ಮ್. ಅವರಿಗೆ ನಟನೆಯಲ್ಲಿ ಬದ್ಧತೆ ಇದೆ. ಶ್ರದ್ಧೆ, ಪ್ರೀತಿ ಇದೆ. ಹಾಗಾಗಿಯೇ ಅವರು ಇಲ್ಲಿಯವರೆಗೂ ಕಲಾರಂಗದಲ್ಲಿದ್ದಾರೆ. ಇನ್ನು, ಅವರ “ದಮಯಂತಿ’ ಚಿತ್ರದ ತುಣುಕು ನೋಡಿದಾಗ, ಅದರ ಹಿಂದಿನ ಶ್ರಮ ಗೊತ್ತಾಗುತ್ತೆ.
ಒಬ್ಬ ಕಲಾವಿದ ತಮ್ಮನ್ನು ತಾವು ಕಲೆಯಲ್ಲಿ ಸಮರ್ಪಿಸಿಕೊಂಡಾಗ ಮಾತ್ರ, ಇಂತಹ ಪಾತ್ರಗಳನ್ನು ಸಲೀಸಾಗಿ ಮಾಡಲು ಸಾಧ್ಯ. ಚಿತ್ರದಲ್ಲಿ ಅವರ ನಟನೆ ಜೊತೆ, ಛಾಯಾಗ್ರಹಣ ಕೆಲಸ ಎದ್ದು ಕಾಣುತ್ತದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ದರ್ಶನ್. ಅಂದು ದರ್ಶನ್ ಆಗಮನ ಇಡೀ ಚಿತ್ರತಂಡಕ್ಕೆ ಖುಷಿಯನ್ನು ಹೆಚ್ಚಿಸಿತ್ತು. ಆ ಖುಷಿ ರಾಧಿಕಾ ಅವರಿಗೂ ಹೊರತಾಗಿರಲಿಲ್ಲ. ಆ ಬಗ್ಗೆ ಹೇಳಿಕೊಂಡ ರಾಧಿಕಾ, “ನನ್ನ ಬರ್ತ್‌ಡೇ ದಿನ ಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ ಮಾಡುವ ಮೂಲಕ ಜನ್ಮದಿನಕ್ಕೊಂದು ಗಿಫ್ಟ್ ಕೊಟ್ಟಿದ್ದಾರೆ.
ಅವರೊಂದಿಗೆ ನಾನು “ಮಂಡ್ಯ’ ಹಾಗೂ “ಅನಾಥರು’ ಚಿತ್ರದಲ್ಲಿ ನಟಿಸಿದ್ದೆ. ಸ್ವಲ್ಪ ಗ್ಯಾಪ್‌ನಲ್ಲಿದ್ದ ನಾನು, ಒಳ್ಳೆಯ ಕಥೆ ಮೂಲಕವೇ ಬರುತ್ತಿದ್ದೇನೆ. ಇಲ್ಲಿ ಕಥೆ, ಪಾತ್ರ ಎಲ್ಲವೂ ಸೊಗಸಾಗಿದೆ. ಚಿತ್ರದಲ್ಲಿ ಹಿನ್ನಲೆ ಸಂಗೀತ ಮತ್ತೂಂದು ಹೈಲೈಟ್’ ಎಂದರು ರಾಧಿಕಾ. ನಿರ್ದೇಶಕ ನವರಸನ್ ಅವರಿಗೂ “ದಮಯಂತಿ’ ಮೇಲೆ ನಂಬಿಕೆ ಹೆಚ್ಚಾಗಿದೆ. ಪೋಸ್ಟರ್‌ನಲ್ಲೇ ಕುತೂಹಲ ಹೆಚ್ಚಿಸಿದ್ದ ಚಿತ್ರ, ಈಗ ಟ್ರೇಲರ್‌ನಲ್ಲೂ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.
ಇದೊಂದು ಮನರಂಜನೆಯ ಚಿತ್ರ. ಇಂತಹ ಚಿತ್ರ ತಯಾರಾಗಲು ಕಲಾವಿದರು, ತಂತ್ರಜ್ಞರ ಸಹಕಾರ ಕಾರಣ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ತೆರೆಗೆ ಬರಲಿದೆ’ ಎಂಬ ವಿವರ ಕೊಟ್ಟರು ನವರಸನ್. “ಈ ಹಿಂದೆ “ಅರುಧಂತಿ’ ಚಿತ್ರದ ಹಾಡುಗಳ ಹಕ್ಕನ್ನು ನಮ್ಮ ಸಂಸ್ಥೆ ಪಡೆದಿತ್ತು. ಆ ಚಿತ್ರದ ಹಾಡುಗಳು ಯಶಸ್ವಿಯಾಗಿದ್ದವು. ಈಗ “ದಮಯಂತಿ’ ಚಿತ್ರದ ಹಾಡುಗಳನ್ನೂ ನಮ್ಮ ಸಂಸ್ಥೆ ಖರೀದಿಸಿದೆ.
ಈ ಹಾಡುಗಳು ಕೂಡ ಡಬಲ್ ಹಿಟ್ ಆಗಲಿ. ಆದಷ್ಟು ಬೇಗನೆ ಪ್ಲಾಟಿನಂ ಡಿಸ್ಕ್ ಕೊಡೆತ್ತೇವೆ’ ಎಂಬುದು ಲಹರಿ ಸಂಸ್ಥೆಯ ವೇಲು ಅವರ ಮಾತು. ಚಿತ್ರದಲ್ಲಿ ಮಿತ್ರ, ತಬಲನಾಣಿ, “ಭಜರಂಗಿ’ ಲೋಕಿ, ಪವನ್‌ಕುಮಾರ್, ಕಂಪೇಗೌಡ, ಸಂಗೀತ ನಿರ್ದೇಶಕ ಗಣೇಶ್‌ನಾರಾಯಣ್, ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಇತರರು ಇದ್ದರು.