Advertisement

ವಿಶ್ವಾಸಮತ ಸಾಬೀತು ಪಡಿಸುವುದೇ ಪರಿಹಾರ

02:13 AM Jul 20, 2019 | mahesh |

ಕಳೆದೊಂದು ವಾರದಿಂದ ಕಲ್ಲು ಎಸೆದ ಜೇನುಗೂಡಿನಂತಾಗಿರುವ ರಾಜ್ಯ ರಾಜಕೀಯ ಸ್ಥಿತಿ ಇನ್ನೂ ಅತಂತ್ರವಾಗಿಯೇ ಉಳಿದಿರುವುದು ಕಳವಳಕಾರಿ. ಸದನದಲ್ಲಿ ವಿಶ್ವಾಸಮತ ಯಾಚಿಸಿದರೆ ಮುಕ್ತಾಯವಾಗಬಹುದಾದ ಒಂದು ಬಿಕ್ಕಟ್ಟನ್ನು ಆಡಳಿತ ಪಕ್ಷಗಳು ವಿನಾಕಾರಣ ಅತ್ತಿಂದಿತ್ತ ಇತ್ತಿಂದತ್ತ ಎಳೆದಾಡುತ್ತಾ ಕಾಲಹರಣ ಮಾಡುತ್ತಿವೆ. ರಾಜ್ಯದಲ್ಲಿ ಪ್ರಸ್ತುತ ಕಾಣಿಸಿರುವ ಬಿಕ್ಕಟ್ಟು ಅತ್ಯಂತ ಕ್ಲಿಷ್ಟಕರವಾಗಿ ಬದಲಾಗಿದೆ ಎನ್ನುವುದಕ್ಕಿಂತಲೂ ಅದನ್ನು ಆ ರೀತಿ ಬದಲಾಯಿ ಸಲಾಗಿದೆ ಎನ್ನುವುದೇ ಹೆಚ್ಚು ಸರಿ. ಈ ಬಿಕ್ಕಟ್ಟು ದೇಶದ ರಾಜಕೀಯ ಮತ್ತು ಸಾಂವಿಧಾನಿಕ ವ್ಯವಸ್ಥೆಯಲ್ಲೊಂದು ಪಾಠವಾಗುವ ಅರ್ಹತೆ ಪಡೆದಿದೆ.

Advertisement

ಸುಪ್ರೀಂ ಕೋರ್ಟ್‌, ರಾಜಭವನ, ಸದನ ಎಂದು ಈ ಬಿಕ್ಕಟ್ಟು ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ವರ್ಗಾವಣೆಯಾಗುತ್ತಾ ಇದೆಯೇ ಹೊರತು ಇತ್ಯರ್ಥವಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಂಥ ಸಾಂವಿಧಾನಿಕ ಬಿಕ್ಕಟ್ಟು ಕಾಣಿಸಿಕೊಂಡಾಗಲೆಲ್ಲ ಸ್ಪೀಕರ್‌ ಮತ್ತು ರಾಜ್ಯಪಾಲರು ನಿಭಾಯಿಸುವ ಪಾತ್ರ ಬಹಳ ಮುಖ್ಯವಾಗುತ್ತದೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡುವಾಗ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೂ ಗೊಂದಲವನ್ನು ತ್ವರಿತವಾಗಿ ಮುಗಿಸುವ ಇರಾದೆ ಇರುವಂತೆ ಕಾಣಿಸುತ್ತಿಲ್ಲ. ರಾಜ್ಯಪಾಲರು ಎರಡೆರಡು ಗಡುವು ನೀಡಿದ ಹೊರತಾಗಿಯೂ ಸ್ಪೀಕರ್‌ ನಿರ್ಣಯವನ್ನು ವಿಶ್ವಾಸಮತಕ್ಕೆ ಹಾಕುವ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಬಹುಶಃ ವಿಶ್ವಾಸಮತ ನಿರ್ಣಯದ ಮೇಲೆ ನಡೆದ ಅತಿ ದೀರ್ಘ‌ವಾದ ಚರ್ಚೆ ಇದಾಗಿರಬಹುದು.

ಗುರುವಾರ-ಶುಕ್ರವಾರ ನಡೆದಿರುವ ಬೆಳವಣಿಗೆಗಳನ್ನು ನೋಡುವಾಗ ‘ಸಾಂವಿಧಾನಿಕ ಸಂತುಲನ’ವನ್ನು ಕಾಪಾಡಿಕೊಳ್ಳುವ ಸಲುವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಸರಿಯಲ್ಲ ಎನ್ನಬೇಕಾಗುತ್ತದೆ. ಶಾಸಕರ ರಾಜೀ ನಾಮೆಗೆ ಸಂಬಂಧಪಟ್ಟ ನಿರ್ಧಾರವನ್ನು ಕೈಗೊಳ್ಳಲು ಸ್ಪೀಕರ್‌ಗೆ ಕಾಲಮಿತಿ ವಿಧಿಸುವಂತಿಲ್ಲ ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ ಕಲಾಪಕ್ಕೆ ಹಾಜರಾಗಲು ಬಲವಂತಪಡಿಸುವಂತಿಲ್ಲ ಎಂದಿರುವ ತ್ರಿಸದಸ್ಯ ಪೀಠದ ತೀರ್ಪಿನಲ್ಲೇ ಗೊಂದಲವಿದೆ. ಇದೊಂದು ರೀತಿಯಲ್ಲಿ ಹಾವು ಸಾಯಲೂಬಾರದು ಕೋಲು ಮುರಿಯಲೂಬಾರದು ಎಂದಿರುವಂತಿದೆ. ಈ ತೀರ್ಪೇ ವಿಶ್ವಾಸಮತ ಯಾಚನೆಯನ್ನು ಕೆಲವು ದಿನ ಮುಂದುವರಿಸಿಕೊಂಡು ಹೋಗಲು ಆಡಳಿತಕ್ಕೆ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿಯೇ ವಿಶ್ವಾಸಮತ ಯಾಚಿಸುವ ನಿರ್ಣಯ ಮಂಡಿಸಿರುವುದರಿಂದ ವಿಪಕ್ಷಕ್ಕೆ ಅವಿಶ್ವಾಸನಿರ್ಣಯ ಮಂಡಿಸುವ ಅವಕಾಶವೂ ಸಿಕ್ಕಿಲ್ಲ.

ಒಟ್ಟಾರೆಯಾಗಿ ಎರಡೂ ಪಕ್ಷಗಳು ಎಲ್ಲ ನಿಯಮಗಳನ್ನು ಬಳಸಿಕೊಂಡು ತಂತ್ರ-ಪ್ರತಿತಂತ್ರ ಹೂಡುವುದರಲ್ಲಿ ನಿರತವಾಗಿವೆ. ರಾಜ್ಯಪಾಲರು ಮತ್ತು ಸ್ಪೀಕರ್‌ ಅಧಿಕಾರ ಮಿತಿಯೂ ಈ ಬಿಕ್ಕಟ್ಟಿನಲ್ಲಿ ಬಯಲಾಗಿದೆ. ಅಂತಿಮವಾಗಿ ಇದು ಎತ್ತ ಹೊರಳಬಹುದು ಎಂದು ಹೇಳುವುದು ಅಸಾಧ್ಯ. ಆದರೆ ಸರಕಾರಕ್ಕೆ ಬಹುಮತ ಇಲ್ಲ ಎನ್ನುವುದು ನಿಚ್ಚಳ. ಈ ಪರಿಸ್ಥಿತಿಯಲ್ಲಿ ಅಧಿಕಾರ ನಿರ್ಗಮಿಸು ವುದೊಂದೇ ಸಮ್ಮಿಶ್ರ ಸರಕಾರಕ್ಕಿರುವ ಘನವಾದ ಮಾರ್ಗ.

ರಾಜ್ಯದ ಸದ್ಯದ ಪರಿಸ್ಥಿತಿ 25 ವರ್ಷ ಹಿಂದಿನ ರಾಜಕೀಯ ಬಿಕ್ಕಟ್ಟನ್ನು ನೆನಪಿಸುತ್ತದೆ. 1989ರಲ್ಲಿ ಎಸ್‌.ಆರ್‌. ಬೊಮ್ಮಾಯಿ ನೇತೃತ್ವದ ಜನತಾ ದಳ ಸರಕಾರದ ವಿರುದ್ಧ 19 ಶಾಸಕರು ಬಂಡೆದ್ದ ಬಳಿಕ ಕೇಂದ್ರದ ರಾಜೀವ್‌ ಗಾಂಧಿ ನೇತೃತ್ವದ ಸರಕಾರ ರಾಜ್ಯಪಾಲರ ಶಿಫಾರಸಿನ ಮೇರೆಗೆ ಸರಕಾರವನ್ನು ವಜಾಗೊಳಿಸಿತ್ತು. ಈ ನಿರ್ಧಾರದ ವಿರುದ್ಧ ಅಂತಿಮವಾಗಿ ಬೊಮ್ಮಾಯಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. 5 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್‌ ಸರಕಾರ ವಜಾಗೊಳಿಸಿದ್ದು ಸಂವಿಧಾನ ವಿರೋಧಿ ನಡೆ ಎಂದು ಬೊಮ್ಮಾಯಿ ಸರಕಾರದ ಪರವಾಗಿ ನೀಡಿದ ತೀರ್ಪು ಈಗಲೂ ಮೇಲ್ಪಂಕ್ತಿಯಾಗಿದೆ.

Advertisement

ಒಂದು ಕಾಲಕ್ಕೆ ರಾಜಕೀಯದ ಸನ್ನಡತೆಗಾಗಿ ಕರ್ನಾಟಕವನ್ನು ಮತ್ತು ರಾಜ್ಯ ಕಂಡ ಘನವೆತ್ತ ನಾಯಕರನ್ನು ಉದಾಹರಣೆಯಾಗಿ ಹೇಳುವ ಪರಂಪರೆಯಿತ್ತು. ಆದರೆ ಕಳೆದೊಂದು ದಶಕದಿಂದ ರಾಜ್ಯ ರಾಜಕೀಯ ಹೀನಾಯಮಟ್ಟಕ್ಕೆ ತಲುಪಿದೆ. ಪಕ್ಷಾಂತರ, ರೆಸಾರ್ಟ್‌ ರಾಜಕೀಯ, ಆಪರೇಶನ್‌ನ‌ಂಥ ಕೀಳು ವ್ಯವಹಾರಗಳಿಗೆ ರಾಜ್ಯ ಮಾದರಿಯಾಗಿರುವುದು ದುರದೃಷ್ಟಕರ. ಒಂದೆಡೆ ಅನಾವೃಷ್ಟಿ, ಬರದಂಥ ಸಮಸ್ಯೆಗಳು ತಾಂಡವವಾಡುತ್ತಿದ್ದರೆ‌ ಜನಪ್ರತಿನಿಧಿಗಳು ಕಚ್ಚಾಟದಲ್ಲಿ ತೊಡಗಿರುವುದು ಸರಿಯಲ್ಲ. ಸುಪ್ರೀಂ ಕೋರ್ಟಿನಿಂದಲೇ ಈ ಬಿಕ್ಕಟ್ಟಿಗೆ ಅಂತ್ಯ ಹಾಡಲು ಸಾಧ್ಯ. ಯಾವುದೇ ವಿಳಂಬವಿಲ್ಲದೆ ಬಹುಮತ ಸಾಬೀತುಪಡಿಸಲು ಆದೇಶಿಸಿ ಈ ರಾಜಕೀಯ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರುಮಾಡಬೇಕು. ಈಗ ಉಳಿದಿರುವ ಮಾರ್ಗ ಇದೊಂದೆ.

Advertisement

Udayavani is now on Telegram. Click here to join our channel and stay updated with the latest news.

Next