Advertisement
ರಾಣಿ ಚನ್ನಮ್ಮ ರೈಲು ಸುಮಾರು 24 ವರ್ಷಗಳಿಂದ ಸಂಚರಿಸುತ್ತಿದೆ. ಆದರೆ, ಈ ರೈಲಿನ ಮೂಲಕ್ಕೆ ಹೋದರೆ 1940ರಿಂದಲೇ ಸಂಚರಿಸುತ್ತಿದೆ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಬ್ರಿಟಿಷ್ ಆಡಳಿತದಲ್ಲಿ 1940ರ ಸುಮಾರಿಗೆ ಮೀಟರ್ ಗೇಜ್‌ನಲ್ಲಿ ಈ ರೈಲು ಪುಣೆ-ಬೆಂಗಳೂರು ಮಧ್ಯೆ ಸಂಚರಿಸುತ್ತಿತ್ತು. ಸರಕು ಸಾಗಣೆ ಹಾಗೂ ಪ್ರಯಾಣದ ದೃಷ್ಟಿಯಿಂದ ಬ್ರಿಟಿಷ್ ಆಡಳಿತ ಈ ರೈಲು ಸಂಚಾರ ಆರಂಭಿಸಿತ್ತು. ಮುಂದಿನ ದಿನಗಳಲ್ಲಿ ಇದೇ ರೈಲು ಕೆಲವೊಂದು ಬದಲಾವಣೆಯೊಂದಿಗೆ ಮಹಾರಾಷ್ಟ್ರದ ಮಿರಜ್‌ನಿಂದ ಬೆಂಗಳೂರುವರೆಗೆ ಸಂಚರಿಸತೊಡಗಿತು. ನಂತರ ಕೊಲ್ಲಾಪುರಕ್ಕೆ ವಿಸ್ತರಿಸಲಾಯಿತು.
Related Articles
Advertisement
ಒಟ್ಟಾರೆ 16 ತಾಸು 25 ನಿಮಿಷದಿಂದ, 16 ತಾಸು 40 ನಿಮಿಷದವರೆಗೂ ಈ ರೈಲು ಸುಮಾರು 797 ಕಿಮೀ ಅಂತರ ಕ್ರಮಿಸುತ್ತದೆ. ಸರಾಸರಿ 3,000ಕ್ಕೂ ಅಧಿಕ ಪ್ರಯಾ ಣಿಕರನ್ನು ಸಾಗಿಸುತ್ತದೆ. 11 ಸ್ಲಿಪರ್ ಕೋಚ್, 4 ಜನರಲ್ ಕೋಚ್, 2 ಎಸ್‌ಎಲ್‌ರ್, ಹವಾನಿಯಂತ್ರಿತ ಸೇರಿದಂತೆ ಒಟ್ಟು 23 ಬೋಗಿಗಳೊಂದಿಗೆ ಸಾಗುತ್ತದೆ. ಒಟ್ಟು 29 ಕಡೆ ನಿಲುಗಡೆ ಸೌಲಭ್ಯ ಹೊಂದಿದೆ. ಬೆಂಗಳೂರು, ತುಮಕೂರು, ತಿಪಟೂರು, ಅರಸಿಕೆರೆ, ಕಡೂರು, ಬಿರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ, ರಾಯಭಾಗ, ಕುಡಚಿ, ಮಿರಜ್ ಮಾರ್ಗವಾಗಿ ಕೊಲ್ಲಾಪುರಕ್ಕೆ ಸಂಚರಿಸುತ್ತದೆ.
ರಾಣಿ ಚನ್ನಮ್ಮ ರೈಲಿನ (ಸಂಖ್ಯೆ 16590) ಎಲ್ಲ ಬೋಗಿಗಳನ್ನು ಅತ್ಯಾಕರ್ಷಕಗೊಳಿಸಲಾಗಿದೆ. ಎಚ್-1, ಎ-1 ಬೋಗಿಗಳಲ್ಲಿ ಹೂ ಕುಂಡಗಳನ್ನು ಇರಿಸಲಾಗಿದ್ದು, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಸ್ಲಿಪರ್ ಕೋಚ್‌ಗಳ ಒಳಪ್ರವೇಶ ವೇಳೆ ಚಿತ್ರಗಳನ್ನು ರೂಪಿಸಲಾಗಿದೆ. ಸಂಖ್ಯೆ 16589 ರೈಲು ಅರ್ಧ ಭಾಗ ಮಾತ್ರ ಬದಲಾವಣೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇದು ಸಹ ಪೂರ್ಣ ಪ್ರಮಾಣದಲ್ಲಿ ಆತ್ಯಾಕರ್ಷಕಗೊಳ್ಳಲಿದೆ ಎಂಬುದು ರೈಲ್ವೆ ಇಲಾಖೆ ಮೂಲಗಳ ಅನಿಸಿಕೆ.
ನೈಋತ್ಯ ರೈಲ್ವೆಗೆ ಮಾಹಿತಿಯೇ ಇಲ್ವಂತೆ!: ರಾಣಿ ಚನ್ನಮ್ಮ ರೈಲು ಯಾವಾಗ ನಾಮಕರಣಗೊಂಡಿತು? ಎಷ್ಟು ವರ್ಷಗಳಿಂದ ಈ ರೈಲು ಸಂಚಾರ ಮಾಡುತ್ತಿದೆ? ರೈಲಿನ ವಿಶೇಷತೆ ಏನಾದರೂ ಇದೆಯೇ? ಇದಾವುದಕ್ಕೂ ನೈಋತ್ಯ ರೈಲ್ವೆ ವಲಯದಲ್ಲಿ ಸಮರ್ಪಕ ಮಾಹಿತಿಯೇ ಇಲ್ಲವಂತೆ.
* ಅಮರೇಗೌಡ ಗೋನವಾರ