Advertisement

ಪಟಾಕಿ ಸದ್ದಿಗೆ ನಲುಗಿದ ಮೂಕ ಜೀವ

11:47 AM Nov 09, 2018 | |

ಬೆಂಗಳೂರು: ಉದ್ಯಾನ ನಗರಿ ತನ್ನದೇ ಆದ ರೀತಿಯಲ್ಲಿ ಪ್ರಾಣಿಪಕ್ಷಿಗಳಿಗೂ ತನ್ನೊಡಲಲ್ಲಿ ರಕ್ಷಣೆ ನೀಡಿದೆ. ಆದರೆ ಕಳೆದ ಮೂರು ದಿನಗಳಿಂದ ಸಂಭ್ರಮ ಸಡಗರಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದು, ಹಬ್ಬದ ಹಿನ್ನೆಲೆಯಲ್ಲಿ ಸಿಡಿಯುತ್ತಿರುವ ಪಟಾಕಿಗಳಿಗೆ ಹತ್ತಾರು ಜನರು ಕಣ್ಣು ಕಳೆದುಕೊಂಡಿರುವುದು ಒಂದೆಡೆಯಾದರೆ, ಪಟಾಕಿ ಸಿಡಿದು ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಂಡ ಹಾಗೂ ಗಾಯ ಮಾಡಿಕೊಂಡು ನೋವು ಅನುಭವಿಸಿದ ಘಟನೆಗಳು ನಗರದಲ್ಲಿ ನಡೆದಿವೆ. 

Advertisement

ಪಟಾಕಿ ಸಿಡಿತದಿಂದಾಗಿ ಇಬ್ಬರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದು, 66 ಜನರಿಗೆ ಸುಟ್ಟ ಗಾಯಗಳಾಗಿವೆ. ಅದೇ ರೀತಿ ಹತ್ತಾರು ಮೂಕ ಪ್ರಾಣಿಗಳಿಗೆ ಗಂಭೀರ ಗಾಯಗಳಾಗಿದ್ದು, ಥಣಿಸಂದ್ರದಲ್ಲಿ ಪಟಾಕಿ ಸಿಡಿತದಿಂದ ಕೋತಿಯೊಂದು ಪ್ರಾಣ ಕಳೆದುಕೊಂಡಿದೆ. ಇದರೊಂದಿಗೆ ರಾತ್ರಿ ಸಂಚಾರ ಮಾಡುವಂತಹ ಗೋಬೆ ಹಾಗೂ ಬಾವಲಿಗಳು ಕಳೆದ ಎರಡು ಮೂರು ದಿನಗಳಿಂದ ಊಟವಿಲ್ಲದೆ ನರಳುತ್ತಿರುವುದು ಕಂಡುಬಂದಿದೆ. 

ಕಿಡಿಗೇಡಿಗಳು ಬನಶಂಕರಿಯಲ್ಲಿ ಪಟಾಕಿಯನ್ನು ಕೋತಿಯ ಮೇಲೆ ಎಸೆದ ಪರಿಣಾಮ ಕೋತಿಯ ಎಡಗೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ತ್ರಾವವಾಗಿದೆ. ಪ್ರಾಣಿ ಪ್ರೇಮಿಗಳು ಸ್ಥಳಕ್ಕೆ ಧಾವಿಸುವ ವೇಳೆ ಭಯಗೊಂಡ ಕೋತಿ ಅಲ್ಲಿಂದ ಓಡಿ ಹೋಗಿದೆ. ಅದೇ ರೀತಿ ಥಣಿಸಂದ್ರದಲ್ಲಿ ಕೋತಿ ಮೃತಪಟ್ಟಿದ್ದು, ಜಿಗಣಿಯಲ್ಲಿ ಕಾಲಿಗೆ ಗಾಯಗೊಂಡಿದ್ದ ಕೋತಿಯನ್ನು ರಕ್ಷಣೆ ಮಾಡಲಾಗಿದೆ. 

ಇದರೊಂದಿಗೆ ಕಳೆದ ಎರಡು ಮೂರು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾವು ಹಾಗೂ ಇಲಿಗಳ ಹಾವಳಿ ಹೆಚ್ಚಾಗಿದ್ದು, ಹಲವಾರು ಭಾಗಗಳಲ್ಲಿ ಮನೆಗಳಿಗೆ ಹಾವು ನುಗ್ಗಿದ ಪ್ರಕರಣಗಳು ವರದಿಯಾಗಿವೆ. ಶಬ್ದ, ಹೊಗೆ ಹಾಗೂ ಜನರ ಕಿರುಚಾಟ ಹಾಗೂ ಓಡಾಟದಿಂದ ಭಯಭೀತಗೊಂಡಿರುವ ಮೂಕ ಪ್ರಾಣಿಗಳು ಗಲಿಬಿಲಿಗೊಂಡು ಒಂದೆ ಇರಲಾಗದೆ ಮನೆಗಳಿಗೆ ನುಗ್ಗುವಂತಹ ವಾತಾವರಣ ಸೃಷ್ಟಿಯಾಗಿತ್ತು. 

ದಾರಿ ಕಾಣದೆ ಕಂಗಾಲಾದ ಕೊಕ್ಕರೆ!: ಬುಧವಾರ ಸಂಜೆ ವೇಳೆಗೆ ಆಕಾಶದ ಹೊಕ್ಕ ರಾಕೆಟ್‌ಗಳ ಹಾವಳಿಯಿಂದ ತೀವ್ರ ಹೊಗೆ ಸೃಷ್ಟಿಯಾಗಿತ್ತು. ಇದರಿಂದಾಗಿ ನಾಗಾವಾರ ಕೆರೆಯಿಂದ ಗೂಡಿಗೆ ಮರಳುತ್ತಿದ್ದ ಕೊಕ್ಕರೆಯ ಗುಂಪಿನಲ್ಲಿದ್ದ ಒಂದು ಕೊಕ್ಕರೆ ದಾರಿ ಕಾಣದೆ ಆಕಾಶದಲ್ಲಿ ತಿರುಗಾಡಿದ ಘಟನೆ ನಡೆದಿದೆ. ಹೊಗೆಯಿಂದ ಉಸಿರುಗಟ್ಟಿದಂತಾಗಿ ಹಾಗೂ ಗೂಡಿಗೆ ಹೋಗುವ ದಾರಿ ಕಾಣದೇ ಅಲ್ಲೇ ಸುತ್ತು ಹೊಡೆಯುವ ಕೊಕ್ಕರೆಯನ್ನು ರಸ್ತೆಯಲ್ಲಿ ನಿಂತು ಸಾರ್ವಜನಿಕರು ನೋಡಿದ ಘಟನೆ ನಡೆದಿದ್ದು, ಸುಮಾರು ಅರ್ಧಗಂಟೆಯ ಬಳಿಕ ಚೇತರಿಸಿಕೊಂಡ ಕೊಕ್ಕರೆ ಕೊನೆಗೂ ಗೂಡು ಸೇರಿದೆ. 

Advertisement

ಮೂರ್‍ನಾಲ್ಕು ದಿನಗಳಿಂದ ಊಟವಿಲ್ಲ!: ದೀಪಾವಳಿ ಹಬ್ಬ ಆರಂಭವಾದ ದಿನಗಳಿಂದ ನಗರದ ಯಾವುದೇ ಭಾಗದಲ್ಲಿ ಗೋಬೆಗಳಾಗಲಿ, ಬಾವಲಿಗಳಾಗಿ ಕಾಣಿಸಿಕೊಂಡಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದಂದು ಸಿಡಿಯುವಂತಹ ಪಟಾಕಿಗಳ ಸದ್ದು ಹಾಗೂ ಬೆಳಕಿಗೆ ತೀವ್ರ ಭಯಭೀತಗೊಳ್ಳುತ್ತವೆ. ಈ ಕಾರಣಗಳಿಂದ ರಾತ್ರಿ ಆಹಾರ ಹುಡುಕಿ ಹೋಗುವ ಪಕ್ಷಿಗಳು ಎರಡು ಮೂರು ದಿನಗಳಿಂದ ಎಲ್ಲಿಯೂ ಕಾಣಸುತ್ತಿಲ್ಲ ಎನ್ನುತ್ತಾರೆ ವನ್ಯಜೀವಿ ಸಂರಕ್ಷಕರು. 

ನಾಯಿಗಳ ಗೋಳು ಹೇಳತೀರದು!: ನಗರದಲ್ಲಿ ಸಿಡಿಯುತ್ತಿರುವ ಪಟಾಕಿಗಳ ಸದ್ದಿಗೆ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಶ್ವಾನಗಳು. ಪಟಾಕಿಗಳ ಸದ್ದಿಗೆ ಕಂಗಾಲಾದ ನಾಯಿಗಳು ವಿಚಿತ್ರವಾಗಿ ವರ್ತಿಸಿ, ಜೋರಾಗಿ ಬೊಗಳುತ್ತಿದ್ದ ದೃಶ್ಯಗಳು ನಗರದ ಹಲವಾರು ಕಡೆಗಳಲ್ಲಿ ನಡೆದಿವೆ. ಇನ್ನು ಕೆಲ ಬಡಾವಣೆಗಳಲ್ಲಿ ಸಾಕು ನಾಯಿಗಳು ಪಟಾಕಿ ಸದ್ದಿಗೆ ಗಾಬರಿಗೊಂಡು ಮನೆ ಬಿಟ್ಟು ಓಡಿ ಹೋಗಿರುವುದು, ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಕ್ಯೂಪ ಸಂಸ್ಥೆಯ ಟ್ರಸ್ಟಿ ಸುಪರ್ಣ ಗಂಗೋಲಿ ಮಾಹಿತಿ ನೀಡಿದರು. 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ 10ಕ್ಕೂ ಹೆಚ್ಚು ಕೋತಿಗಳಿಗೆ ಗಾಯಗಳಾಗಿದ್ದು, ಥಣಿಸಂದ್ರದಲ್ಲಿ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟಿದೆ. ಇದರೊಂದಿಗೆ ನಗರದ ಹಲವಾರು ಕಡೆಗಳಲ್ಲಿ ಹಾವುಗಳು ಹಾಗೂ ಇಲಿಗಳು ಮನೆಯೊಳಗೆ ಬಂದಿರುವ ಬಗ್ಗೆ ಕರೆಗಳು ಬಂದಿದ್ದು, ಪಟಾಕಿ ಶಬ್ದಕ್ಕೆ ಗೋಬೆಗಳು ಹಾಗೂ ಬಾವಲಿಗಳು ಆಹಾರಕ್ಕಾಗಿ ಹೊರಗೆ ಬಂದಿಲ್ಲ.
-ಕೆ.ಮಹೇಶ್‌, ವಜ್ಯಜೀವ ಸಂರಕ್ಷಕರು

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next