Advertisement

ಅಲ್ಪಾವಧಿಯಲ್ಲಿ ದೊಡ್ಡ ಗುರಿ: ಪ್ರಕಾಶಮಾನ ಸೌಭಾಗ್ಯ

10:51 AM Sep 27, 2017 | |

ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಘೋಷಿಸಿರುವ ಸೌಭಾಗ್ಯ ಯೋಜನೆ ದೇಶದ ಪ್ರತಿ ಮನೆಗೆ ವಿದ್ಯುತ್‌ ಸಂಪರ್ಕ ಒದಗಿಸಿ ದೇಶವನ್ನು ಪ್ರಕಾಶಮಾನ ಮಾಡುವ ಮಹತ್ತರವಾದ ಗುರಿ ಹೊಂದಿದೆ. ಪ್ರಧಾನ್‌ ಮಂತ್ರಿ ಸಹಜ್‌ ಬಿಜಿ ಹರ್‌ ಘರ್‌ ಯೋಜನಾ ಎನ್ನುವುದು ಈ ಯೋಜನೆಯ ಪೂರ್ಣರೂಪ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಆಗಿದ್ದರೂ ಇನ್ನೂ ಎಲ್ಲ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವಲ್ಲಿ ವಿಫ‌ಲರಾಗಿದ್ದೇವೆ ಎನ್ನುವುದು ತಲೆತಗ್ಗಿಸುವ ವಿಚಾರ. ಈಗಲೂ ನಾಲ್ಕು ಕೋಟಿಗೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಮರೀಚಿಕೆಯಾಗಿಯೇ ಉಳಿದಿದೆ. ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಕುಟುಂಬಗಳಿವೆ ಎನ್ನುವುದು ಈ ಕ್ಷೇತ್ರದಲ್ಲಿ ನಾವೆಷ್ಟು ಹಿಂದುಳಿದಿದ್ದೇವೆ ಎನ್ನುವುದನ್ನು ಸೂಚಿಸುತ್ತದೆ. ಸೌಭಾಗ್ಯ ಯೋಜನೆ ಈ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ದೇಶವನ್ನು ಕತ್ತಲಿನಿಂದ ಬೆಳಕಿನೆಡೆಗೆ ತರುವ ಯೋಜನೆ. ಯೋಜನೆ ಜಾರಿಗೆ 16,320 ಕೋ. ರೂ. ಖರ್ಚು ಅಂದಾಜಿಸಲಾಗಿದ್ದು, ಈ ಪೈಕಿ ಬಹುತೇಕ ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡಲಿದೆ. 

Advertisement

ನಾಲ್ಕು ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡುವ ಗುರಿಯನ್ನು ಸಾಧಿಸಲು ಕಾಲಮಿತಿಯನ್ನೂ ಹಾಕಿಕೊಳ್ಳಲಾಗಿದೆ. 2018ರ ಡಿಸೆಂಬರ್‌ ಒಳಗೆ ಯೋಜನೆ ಪೂರ್ತಿ ಯಾಗಬೇಕೆನ್ನುವುದು ಸರ್ಕಾರದ ಗುರಿ. ಈ ಹಿಂದೆ ಬಡ ಕುಟುಂಬದ ತಾಯಂದಿರನ್ನು ಸೀಮೆಎಣ್ಣೆ ಸ್ಟೌವ್‌ ಮತ್ತು ಉರುವಲಿನ ಹೊಗೆಯಿಂದ ಪಾರು ಮಾಡುವ ಸಲುವಾಗಿ ಜಾರಿಗೆ ತಂದಿರುವ ಉಜ್ವಲ್‌ ಯೋಜನೆಗೂ ಸೌಭಾಗ್ಯ ಯೋಜನೆಗೂ ಹಲವು ಸಾಮ್ಯತೆಗಳಿವೆ. ಪ್ರತಿ ಮನೆಗೆ ಗ್ಯಾಸ್‌ ಸಂಪರ್ಕ ಕೊಡುವುದು ಉಜ್ವಲ್‌ ಆಶಯವಾಗಿತ್ತು. ಬಿಪಿಎಲ್‌ ಕುಟುಂಬಳಿಗೆ ಉಚಿತವಾಗಿ ಗ್ಯಾಸ್‌ ಸಂಪರ್ಕ ನೀಡಲಾಗಿದೆ. ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ಅವರ ಪ್ರಯತ್ನದಿಂದಾಗಿ ಈ ಯೋಜನೆ ಭಾರೀ ಯಶಸ್ವಿಯಾಗಿದ್ದು, ಈ ಹುರುಪಿನಲ್ಲಿ ಮೋದಿ ನೇರವಾಗಿ ಬಡವರನ್ನು ತಟ್ಟುವ ಸೌಭಾಗ್ಯ ಯೋಜನೆಯನ್ನು ಘೋಷಿಸಿದ್ದಾರೆ. ಇಂತಹ ಜನಪ್ರಿಯ ಯೋಜನೆಗಳು ಬಿಜೆಪಿಗೆ ಮತ ತಂದುಕೊಡುತ್ತವೆ ಎನ್ನುವುದು ನಿಜವಾಗಿದ್ದರೂ ಅದರ ಜತೆಗೆ ಬಡವರ ಬಾಳಿನಲಾಗುವ ಪರಿವರ್ತನೆಯನ್ನೂ ಪರಿಗಣಿಸಬೇಕಾಗುತ್ತದೆ. ವಿದ್ಯುತ್‌ ಸಂಪರ್ಕ ಸಿಕ್ಕಿದರೆ ಬಡವರಿಗೆ ಸೀಮೆಎಣ್ಣೆಯ ಬುಡ್ಡಿ ದೀಪಗಳನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ. ಸೀಮೆಎಣ್ಣೆಯ ಹೊಗೆಯಿಂದ ಬರುವ ಅಸ್ತಮಾದಂತಹ ಕಾಯಿಲೆಗಳಿಂದ ಪಾರಾಗಬಹುದು. ಮಕ್ಕಳಿಗೆ ಓದಲು ಉತ್ತಮ ಬೆಳಕಿನ ವ್ಯವಸ್ಥೆ ಸಿಗುತ್ತದೆ. ಈ ಮೂಲಕ ಬಡವರ ಶೈಕ್ಷಣಿಕ ಮಟ್ಟವನ್ನು ಸುಧಾರಿಸಬಹುದು, ಸಂಪರ್ಕ ಸಾಧನಗಳ ಬಳಕೆ ಸುಲಭವಾಗುತ್ತದೆ, ಸುರಕ್ಷತೆ ಹೆಚ್ಚುತ್ತದೆ ಹಾಗೂ ಈ ಮೂಲಕ ಬಡವರ ಜೀವನಮಟ್ಟ ಸುಧಾರಣೆಯಾಗುತ್ತದೆ. ನಿರ್ದಿಷ್ಟವಾಗಿ ಮಹಿಳೆಯರ ಬದುಕು ಹಸನಾಗುತ್ತದೆ. ಸೌಭಾಗ್ಯ ಯೋಜನೆಯಡಿ 2ರಿಂದ 4 ಸಾವಿರ ತನಕ ಖರ್ಚು ತಗಲುವ ವಿದ್ಯುತ್‌ ಸಂಪರ್ಕ ಉಚಿತವಾಗಿ ಸಿಗಲಿದೆ. ಆದರೆ ಅನಂತರ ಬಳಸಿದ ವಿದ್ಯುತ್‌ಗೆ ಶುಲ್ಕ ಪಾವತಿಸಬೇಕು. ಉಚಿತವಾಗಿ ಸಿಗುವ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.  ಅಭಿವೃದ್ಧಿಗೆ ವಿದ್ಯುತ್‌ ಎಷ್ಟು ಅಗತ್ಯ ಎನ್ನುವುದು ನರೇಂದ್ರ ಮೋದಿಗೆ ಚೆನ್ನಾಗಿ ಗೊತ್ತಿದೆ. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗುಜರಾತ್‌ ವಿದ್ಯುತ್‌ ಉತ್ಪಾದನೆಯಲ್ಲಿ ನಂಬರ್‌ ಒನ್‌ ರಾಜ್ಯವಾಗಿತ್ತು. ಸೋಲಾರ್‌ ಸೇರಿದಂತೆ ಎಲ್ಲ ರೀತಿಯ ಉತ್ಪಾದನಾ ಮೂಲಗಳಿಗೆ ಉತ್ತೇಜನ ನೀಡಿದ ಪರಿಣಾಮವಾಗಿ ಗುಜರಾತ್‌ನಲ್ಲಿ ವಿದ್ಯುತ್‌ ಮಿಗತೆಯಾಗಿ ಉಳಿದ ರಾಜ್ಯಗಳಿಗೆ ಮಾರಾಟ ಮಾಡುತ್ತಿತ್ತು. ಪ್ರಧಾನಿಯಾದ ಬಳಿಕ ಭಾರೀ ರಿಯಾಯಿತಿ ದರದಲ್ಲಿ ಎಲ್‌ಇಡಿ ಬಲ್ಬ್ಗಳನ್ನು ವಿತರಿಸುವ ಮೂಲಕ ವಿದ್ಯುತ್‌ ಉಳಿತಾಯ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಇನ್ನೊಂದು ವರ್ಷದಲ್ಲಿ ಪ್ರತಿ ಮನೆಗೆ ವಿದ್ಯುತ್‌ ಸಂಪರ್ಕ ಒದಗಿಸುವ ಮೂಲಕ ದೇಶವನ್ನು ಪ್ರಕಾಶಮಾನಗೊಳಿಸುವ ಗುರಿಯನ್ನು ತಲುಪಲು ಕಾರ್ಯತತ್ಪರರಾಗಿದ್ದಾರೆ. ಪ್ರಧಾನಿಯ ಕನಸು ನನಸು ಮಾಡುವ ದೊಡ್ಡ ಜವಾಬ್ದಾರಿಯೀಗ ಇಂಧನ ಸಚಿವ ರಾಜ್‌ಕುಮಾರ್‌ ಸಿಂಗ್‌ ಮೇಲಿದೆ. ಉಜ್ವಲ್‌ ಯೋಜನೆಯ ಮೇಲ್ಪಂಕ್ತಿಯನ್ನು ಅನುಸರಿಸಿ ಸೌಭಾಗ್ಯ ಯೋಜನೆಯನ್ನು ಯಶಸ್ವಿಗೊಳಿಸಿದರೆ ಪ್ರಧಾನಿ ಅವರ ಮೇಲಿಟ್ಟಿರುವ ವಿಶ್ವಾಸ ನಿಜವಾಗಬಹುದು. ಸಿಂಗ್‌ ನಿವೃತ್ತ ಐಎಎಸ್‌ ಅಧಿಕಾರಿ. ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕೆಂದು ಅವರಿಗೆ ಹೇಳುವ ಅಗತ್ಯವಿಲ್ಲ. ಆದರೆ ಅವರ ಎದುರು ಇರುವ ಸಮಯ ಮಾತ್ರ ಕಡಿಮೆ. ಅಲ್ಪಾವಧಿಯಲ್ಲಿ ದೊಡ್ಡ ಗುರಿಯೊಂದನ್ನು ಅವರು ಸಾಧಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next