Advertisement

ನದಿ ದಾಟಲು ಕಟ್ಟಿನಾಡಿ –ರಾಮನಹಕ್ಲು ನಿವಾಸಿಗಳ ಸಂಕಷ್ಟ

12:43 AM Feb 07, 2020 | Team Udayavani |

ಹಳ್ಳಿಹೊಳೆ: ದೇವರಬಾಳುವಿನಿಂದ ಕಬ್ಬಿನಾಲುವಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ರಾಮನಹಕ್ಲು ಬಳಿ ನಿರ್ಮಿಸಿದ್ದ ಕಿರು ಸೇತುವೆ ಕಾಮಗಾರಿ ಪೂರ್ಣಗೊಂಡ 15 ದಿನದೊಳಗೆ ಕುಸಿದು ಬಿದ್ದಿದೆ. ಸೇತುವೆ ಕುಸಿದು 6-7 ತಿಂಗಳಾದರೂ, ಇನ್ನೂ ಮರು ನಿರ್ಮಾಣಕ್ಕೆ ಮಾತ್ರ ಯಾರೂ ಮುಂದಾಗಿಲ್ಲ. ನಕ್ಸಲ್‌ ಬಾಧಿತ ದೇವರಬಾಳು ಸಮೀಪದ ರಾಮನಹಕ್ಲು, ಕಟ್ಟಿನಾಡಿ ಪ್ರದೇಶದ ಜನರ ವ್ಯಥೆಯಿದು.

Advertisement

ಇದು ಆಳುವ ವರ್ಗದವರ ನಿರ್ಲಕ್ಷéವೋ ? ಗುತ್ತಿಗೆ ವಹಿಸಿಕೊಂಡವರ ಬೇಜಾವಾಬ್ದಾರಿತನವೋ ? ಒಟ್ಟಿನಲ್ಲಿ ಕಟ್ಟಿನಾಡಿ ಹಾಗೂ ರಾಮನಹಕ್ಲು ಭಾಗದ ನಿವಾಸಿಗಳು ಮಾತ್ರ ನಿತ್ಯ ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈಗಾದರೂ ನದಿಯಲ್ಲಿ ನೀರು ಕಡಿಮೆ ಇದೆ. ನದಿ ದಾಟಲು ಸಮಸ್ಯೆಯಿಲ್ಲ. ಆದರೆ ಮಳೆಗಾಲದಲ್ಲಿ ಅಡಿಕೆ ಮರವನ್ನು ಹಾಕಿ ನಿರ್ಮಿಸಿದ ಕಾಲು ಸಂಕದಲ್ಲಿ ಸಂಕಷ್ಟದಿಂದ ನಡೆಯಬೇಕಾದ ಅನಿವ್ಯಾತೆ ಇಲ್ಲಿನ ಜನರದ್ದು.

ಇಲ್ಲಿನ ಜನರಿಗೆ ನಡೆದಾಡಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ಕಿರು ಸೇತುವೆಯೊಂದು ಮಂಜೂರಾಗಿ, ಕಾಮಗಾರಿ ನಡೆದು, ಇನ್ನೇನು ಸಂಪರ್ಕಕ್ಕೆ ತೆರೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಕಳಪೆ ಕಾಮಗಾರಿಯಿಂದಾಗಿ ಮುರಿದು ಬಿದ್ದಿತ್ತು. ಇನ್ನೇನು ಸೇತುವೆಯ ಕನಸು ಈಡೇರುತ್ತದೆ ಎನ್ನುವ ಕನವರಿಕೆಯಲ್ಲಿದ್ದ ಕಟ್ಟಿನಾಡಿ, ರಾಮನಹಕ್ಲು ಭಾಗದ 30-35 ಕುಟುಂಬಗಳಿಗೆ ಈಗಲೂ ಸೇತುವೆ ಬೇಡಿಕೆ ಮಾತ್ರ ಕನಸಾಗಿಯೇ ಉಳಿದಿದೆ.

ಕಾಲು ಸಂಕ ಆಸರೆ
ಸುಮಾರು 15 – 20 ವರ್ಷಗಳಿಗೂ ಹೆಚ್ಚು ಕಾಲದಿಂದ ಬೇಡಿಕೆಯಾಗಿದ್ದ ದೇವರಬಾಳು ಮತ್ತು ರಾಮನಹಕ್ಲು ಸಂಪರ್ಕದ ಕಿರು ಸೇತುವೆಯು ಕಳೆದ ವರ್ಷದ ಜೂ. 21ರಂದು ಸ್ಲಾÂಬ್‌ ಕೆಳಭಾಗಕ್ಕೆ ಅಳವಡಿಸಿದ್ದ ಪೋಲ್ಸ್‌ ತೆಗೆದಾಗ ಕುಸಿದಿತ್ತು. ಆ ಬಳಿಕ ಇಲ್ಲಿನ ಜನರೇ ಸೇರಿ ಸೇತುವೆ ಕಂಬಗಳಿಗೆ ಅಡಿಕೆ ಮರವನ್ನು ಹಾಕಿ ನಿರ್ಮಿಸಿದ್ದ ಕಾಲು ಸಂಕವೇ ಇಲ್ಲಿನ ಜನರಿಗೆ ಈ ಕಬ್ಬಿಹಿತ್ಲು ಹೊಳೆ ದಾಟಲು ಆಸರೆಯಾಗಿದೆ.

ದ್ವೀಪದಂತಿರುವ ಊರು
ಹಳ್ಳಿಹೊಳೆ ಗ್ರಾಮದ ದೇವರಬಾಳು ಸಮೀಪದ ಈ ರಾಮನಹಕ್ಲು ಹಾಗೂ ಕಟ್ಟಿನಾಡಿ ಊರುಗಳೆರಡು ಕೂಡ ಸುತ್ತಲೂ ನದಿಗಳಿಂದ ಆವೃತ್ತವಾಗಿದ್ದು, ದ್ವೀಪದಂತಿದೆ. ಈ ಊರುಗಳೆರಡರ ಸುತ್ತ ಚಕ್ರ ನದಿ ಹಾಗೂ ಕಬ್ಬಿಹಿತ್ಲು ಹೊಳೆ ಹರಿಯುತ್ತಿದೆ. ಈ ನದಿಗಳೆರಡಕ್ಕೂ ಸರಿಯಾದ ಸೇತುವೆ ನಿರ್ಮಾಣವಾಗದ ಕಾರಣ ಸರಿಯಾದ ರಸ್ತೆ ಸಂಪರ್ಕವೂ ಆಗಿಲ್ಲ.

Advertisement

ಮಳೆಗಾಲಕ್ಕೆ ಮುನ್ನ ದುರಸ್ತಿಯಾಗಲಿ
ರಾಮನಹಕ್ಲು, ಕಟ್ಟಿನಾಡಿ ಭಾಗದ ಜನರಿಗೆ ದೇವರಬಾಳು, ಚಕ್ರಾ ಮೈದಾನಕ್ಕೆ ತೆರಳಲು ಈ ಕಿರು ಸೇತುವೆಯಾಗಿದ್ದರೆ ಬಹಳಷ್ಟು ಅನುಕೂಲವಾಗುತ್ತಿತ್ತು. ಈ ಭಾಗದಿಂದ ದೇವರಬಾಳುವಿನ ಶಾಲೆಗೆ ಹೋಗುವ ಮಕ್ಕಳು, ಕೂಲಿ ಕೆಲಸಕ್ಕೆ ಹೋಗುವ ಜನರು ಇದ್ದಾರೆ. ಅವರಿಗೆಲ್ಲ ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆಯಾಗುತ್ತಿದೆ. ಈಗ ನಾವೇ ಸೇರಿ ಒಂದು ಕಾಲು ಸಂಕವನ್ನು ನಿರ್ಮಿಸಿದ್ದೇವೆ. ಮುಂದಿನ ಮಳೆಗಾಲಕ್ಕೂ ಮೊದಲು ಈ ಮುರಿದು ಬಿದ್ದ ಸೇತುವೆಯನ್ನು ದುರಸ್ತಿ ಮಾಡಿದರೆ ಪ್ರಯೋಜನವಾದೀತು.

ಕಳಪೆ ಕಾಮಗಾರಿ ಆರೋಪ
ನಕ್ಸಲ್‌ ಪ್ಯಾಕೇಜ್‌ನಡಿ ರಾಮನಹಕ್ಲು ಹಾಗೂ ಕಟ್ಟಿನಾಡಿ ನಿವಾಸಿಗಳ ಅನುಕೂಲಕ್ಕೆಂದು ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ 35 ಅಡಿ ಉದ್ದ ಹಾಗೂ 6 ಅಡಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ನಡೆದಿತ್ತು. ಆದರೆ ಅದು ಉದ್ಘಾಟನೆಗೊಳ್ಳುವ ಮೊದಲೇ ಮುರಿದು ಬಿದ್ದಿತ್ತು. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ.

ಹೆಚ್ಚಿನ ಮಾಹಿತಿಯಿಲ್ಲ
ಟೆಂಡರ್‌ ಆಗುವ ಮೊದಲೇ ಗುತ್ತಿಗೆದಾರರು ಕೆಲಸ ಮಾಡಲು ಆರಂಭ ಮಾಡಿದ್ದಾರೆ. ಆದರೆ ಇದಕ್ಕೆ ಮಂಜೂರಾದ ಎಲ್ಲ ಅನುದಾನ ಇನ್ನೂ ಕೂಡ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಬಿಡುಗಡೆಯಾಗಿಲ್ಲ ಎನ್ನುವ ಮಾಹಿತಿಯಿದೆ. ನಕ್ಸಲ್‌ ಪ್ಯಾಕೇಜ್‌ ಅಥವಾ ಬೇರೆ ಯಾವ ಯೋಜನೆಯಡಿ ಮಂಜೂರಾಗಿದೆ ಎನ್ನುವ ಬಗ್ಗೆ ಪಂಚಾಯತ್‌ಗೆ ಹೆಚ್ಚಿನ ಮಾಹಿತಿಯಿಲ್ಲ.
– ಸುದರ್ಶನ್‌,
ಪಿಡಿಒ ಹಳ್ಳಿಹೊಳೆ ಗ್ರಾ.ಪಂ.

ಹೊಸ ಕಿರು ಸೇತುವೆಗೆ ಪ್ರಯತ್ನ
ಹಿಂದಿನ ಅವಧಿಯಲ್ಲಿ ಆಗಿದ್ದ ಕಿರು ಸೇತುವೆ ಕಳೆದ ವರ್ಷ ಮುರಿದು ಬಿದ್ದಿತ್ತು. ಅದಕ್ಕೆ ಪರ್ಯಾಯವಾಗಿ ಕಟ್ಟಿನಾಡಿ ಹಾಗೂ ರಾಮನಹಕ್ಲು ಭಾಗದ ನಿವಾಸಿಗಳಿಗೆ ಪ್ರಯೋಜನವಾಗಲು ಹೊಸ ಕಿರು ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ,
ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next