Advertisement

ಕುಸಿಯುವ ಭೀತಿಯಲ್ಲಿ ಮೈಲದ ಕಿರು ಸೇತುವೆ

03:32 AM May 08, 2019 | mahesh |

ಗುತ್ತಿಗಾರು: ಕೊಲ್ಲಮೊಗ್ರ ಗ್ರಾಮದ ಕಟ್ಟ ಸಮೀಪದ ಮೈಲ ಎನ್ನುವಲ್ಲಿ ಜಿಲ್ಲಾ ಪಂಚಾಯತ್‌ ರಸ್ತೆಯಲ್ಲಿನ ಕಿರು ಸೇತುವೆ ಕಳೆದ ಮೂರು ವರ್ಷಗಳಿಂದ ದುರಸ್ತಿಯನ್ನೇ ಕಂಡಿಲ್ಲ. ಕೊಲ್ಲಮೊಗ್ರು- ಕರಂಗಲ್ಲು- ಕಂದ್ರಪ್ಪಾಡಿ ಸಂಪರ್ಕ ರಸ್ತೆಯಾಗಿರುವ ಇಲ್ಲಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ದುರಸ್ತಿ ಕಾಣದೆ ಇಂದೋ ನಾಳೆಯೋ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಮಡಪ್ಪಾಡಿ ಮೂಲಕ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಿಂದ ಕರಂಗಲ್ಲು, ಮುಳಬಾಗಿಲು, ಕಟ್ಟ ಮಾರ್ಗವಾಗಿ ಕೊಲ್ಲಮೊಗ್ರವನ್ನು ನೇರವಾಗಿ ಸಂಪರ್ಕಿಸುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಮಂದಿ ಓಡಾಡುತ್ತಾರೆ. ಶಾಲಾ ವಾಹನಗಳು, ಸರ್ವೀಸ್‌ ಜೀಪ್‌ಗ್ಳು, ಖಾಸಗಿ ವಾಹನಗಳು ಸೇರಿದಂತೆ ನೂರಾರು ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ.

Advertisement

ನನೆಗುದಿಗೆ
ಕಟ್ಟ, ಮುಳುಬಾಗಿಲು ಗ್ರಾಮದ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಈ ಸೇತುವೆಯನ್ನು ದುರಸ್ತಿಪಡಿಸಲು ಮನವಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿಪಡಿಸುವ ಭರವಸೆ ನೀಡಿದ್ದರೂ, ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಸೇತುವೆ ನನೆಗುದಿಗೆ ಬಿದ್ದಿದೆ.

ಸೇತುವೆ ನಿರ್ಮಾಣಗೊಳ್ಳಲಿ
ನೂರಾರು ಜನರ ಸಂಪರ್ಕ ಸೇತುವಾಗಿರುವ ಮೈಲ ಪ್ರದೇಶದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟಲು ಅಸಾಧ್ಯವಾಗಿರುವ ಇಲ್ಲಿ ಸೇತುವೆ ರಚನೆ ಅಗತ್ಯವಾಗಿದೆ.

ವಾಹನ ಸಂಚಾರ ಕಷ್ಟ
ಕುಸಿಯುವ ಭೀತಿಯಲ್ಲಿರುವ ಮೈಲದ ಮೋರಿಯಿಂದ ಮಳೆಗಾಲದಲ್ಲಿ ಸಂಚಾರ ಕಷ್ಟವಾಗಲಿದೆ. ಸಂಪೂರ್ಣ ಶಿಥಿಲಗೊಂಡ ಸೇತುವೆಯಿಂದಾಗಿ ಘನ ವಾಹನಗಳು ಸಂಚರಿಸಲು ಪರದಾಟಪಡುತ್ತಿವೆ. ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ.

 10 ಲಕ್ಷ ರೂ. ಅಗತ್ಯ
ಗ್ರಾ.ಪಂ. ವತಿಯಿಂದ ಎಂಜಿನಿಯರ್‌ ಮೂಲಕ ಎಸ್ಟಿಮೇಟ್‌ ಮಾಡಿಸಲಾಗಿದೆ. 10 ಲಕ್ಷ ರೂ. ಅನುದಾನ ಬೇಕು. ಅದಕ್ಕಾಗಿ ಜಿ.ಪಂ. ಸದಸ್ಯರಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮಸಭೆಗಳಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ.
– ಮಣಿಕಂಠ ಕಟ್ಟ, ಉಪಾಧ್ಯಕ್ಷರು, ಗ್ರಾ.ಪಂ. ಕೊಲ್ಲಮೊಗ್ರು.

Advertisement

 ಮನವಿಗೂ ಸ್ಪಂದನೆ ಇಲ್ಲ
ಕಳೆದ ಮೂರು ವರ್ಷಗಳಿಂದ ಮೋರಿ ದುರಸ್ತಿಗೆ ಮನವಿ ಸಲ್ಲಿಸುತ್ತಿದ್ದೇವೆ. ಯಾವೊಂದು ಪ್ರಯೋಜನವೂ ಆಗಿಲ್ಲ. ಆದಷ್ಟು ಬೇಗ ಮೋರಿ ದುರಸ್ತಿಯಾಗಲಿ.
-ಮಿಥುನ್‌ ಕುಮಾರ್‌ ಸೋನ, ಸ್ಥಳೀಯರು

– ಕೃಷ್ಣಪ್ರಸಾದ್‌ ಕೋಲ್ಚಾರು

Advertisement

Udayavani is now on Telegram. Click here to join our channel and stay updated with the latest news.

Next