ಶಿವಮೊಗ್ಗ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮಧ್ಯ ರಾತ್ರಿ ತಲುಪಿರುವ ಘಟನೆ ಮಂಗಳವಾರ ನಡೆದಿದೆ.
ಮೂರೂವರೆ ಗಂಟೆ ತಡವಾಗಿ ತಲುಪಿದ್ದು ಪ್ರಯಾಣಿಕರು ರೋಸಿ ಹೋಗಿದ್ದರು. ಅರಸೀಕೆರೆ, ಕಡೂರು, ಬೀರೂರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ರೈಲು ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ತಡವಾಗಿದ್ದಕ್ಕೆ ಕಾರಣವೂ ಗೊತ್ತಿರಲಿಲ್ಲ.
ಸಾಮಾನ್ಯವಾಗಿ ಬೆಂಗಳೂರಿನಿಂದ ಸಂಜೆ 5.15ಕ್ಕೆ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ಆದರೆ ಮಂಗಳವಾರ ರಾತ್ರಿ ಮೂರೂವರೆ ಗಂಟೆ ತಡವಾಗಿ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ.
ಜನ ಶತಾಬ್ದಿ ರೈಲು ನಿಗದಿಯಂತೆ 5.15ಕ್ಕೆ ಬೆಂಗಳೂರಿನಿಂದ ಹೊರಟಿದೆ. ಆದರೆ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಸುಮಾರು 37 ನಿಮಿಷ ರೈಲು ನಿಲ್ಲಿಸಲಾಗಿತ್ತು. ಕಡೂರು ನಿಲ್ದಾಣದಲ್ಲಿ 52 ನಿಮಿಷ, ಬೀರೂರಿನಲ್ಲಿ ಸುಮಾರು ಗಂಟೆಗಟ್ಟಲೆ ನಿಲುಗಡೆ ನೀಡಲಾಗಿತ್ತು. ರಾತ್ರಿ 11.56ಕ್ಕೆ ರೈಲು ತರೀಕೆರೆ ತಲುಪಿದೆ. ಮಧ್ಯರಾತ್ರಿ 12.41ಕ್ಕೆ ಭದ್ರಾವತಿ, ರಾತ್ರಿ 1.04ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಿದೆ.
Related Articles
ಪ್ರಯಾಣಿಕರು ಅಲ್ಲಿಯ ರೈಲ್ವೆ ಅಧಿಕಾರಿಗಳನ್ನು ವಿಚಾರಿಸಿದಾಗ ತಾಂತ್ರಿಕ ಕಾರಣ ಎಂದು ತಿಳಿಸಿದ್ದಾರೆ. ಊಟವಿಲ್ಲದೆ, ಮನೆ ಸೇರಲಾಗದೆ ಪರದಾಡಿದ್ದರು.
ಉಳಿದ ರೈಲುಗಳು ವಿಳಂಬ
ಕಳೆದ ರಾತ್ರಿ ಶಿವಮೊಗ್ಗದಿಂದ ತೆರಳುವ ಮತ್ತು ಶಿವಮೊಗ್ಗ ಕಡೆಗೆ ಆಗಮಿಸಬೇಕಿದ್ದ ಉಳಿದ ರೈಲುಗಳು ಕೂಡ ವಿಳಂಬವಾಗಿ ಸಂಚರಿಸಿವೆ. ಮಧ್ಯಾಹ್ನ 3 ಗಂಟೆಗೆ ಹೊರಡುವ ಬೆಂಗಳೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 25 ನಿಮಿಷ ತಡವಾಗಿ ಶಿವಮೊಗ್ಗ ನಿಲ್ದಾಣ ತಲುಪಿದೆ.
ಇನ್ನು, ರಾತ್ರಿಯ ತಾಳಗುಪ್ಪ – ಶಿವಮೊಗ್ಗ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲು ಕೂಡ ವಿಳಂಬವಾಗಿ ಸಂಚರಿಸಿದೆ. ಮಧ್ಯರಾತ್ರಿ 1.20ಕ್ಕೆ ತಿಪಟೂರು ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 2 ಗಂಟೆಗೆ ನಿಲ್ದಾಣಕ್ಕೆ ತೆರಳಿದೆ.