Advertisement

ಇಂದ್ರಾಣಿ ಸೇರುತ್ತಿರುವ ಕೊಳಚೆ ನೀರು

11:23 PM Feb 04, 2020 | mahesh |

ಮಲ್ಪೆ: ಉಡುಪಿ ನಗರದ ಕೊಳಚೆನೀರು ನೇರ ಇಂದ್ರಾಣಿ ಹೊಳೆಯನ್ನು ಸೇರುತ್ತಿರುವುದರಿಂದ ಕೊಡವೂರು ಗ್ರಾಮದ ಕಂಬ್ಲಕಟ್ಟ, ಕೊಡಂಕೂರು, ಮೂಡುಬೆಟ್ಟು ನದಿ ತೀರ ವಾಸಿಗಳ ಬದುಕು ನರಕ ಸದೃಶವಾದರೆ, ಇಲ್ಲಿಯೇ ಕೃಷಿಯನ್ನು ಮಾಡಿ ಜೀವನ ಸಾಗಿಸುವ ರೈತರ ಬದುಕು ಅತಂತ್ರವಾಗಿದೆ. ಪರಿಸರವಿಡೀ ಸಾಂಕ್ರಾಮಿಕ ರೋಗಗಳ ಮೂಲವಾಗಿ ಪರಿ ವರ್ತನೆಯಾಗಿದ್ದು, ತೀರದ ವಾಸಿಗಳು ದಿನದ 24ಗಂಟೆಯೂ ಮೂಗು ಬಾಯಿ ಮುಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ನಿಟ್ಟೂರು ಬಳಿಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸದೆ ಹೊರ ಬಿಡುವುದರಿಂದ ಸಮಸ್ಯೆ ಉದ್ಭವಿಸುತ್ತದೆ ಎಂದು ನಾಗರಿಕರು ಆರೋಪಿಸಿದ್ದಾರೆ. ನದಿಯ ನೀರು ಡಾಮರು ರೀತಿಯಲ್ಲಿ ದಪ್ಪವಾಗಿ ಕಪ್ಪು ಬಣ್ಣಕ್ಕೆ ಪರಿವರ್ತನೆಗೊಂಡಿದ್ದು ಅಸಹ್ಯ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡ ಈ ನದಿ ತೀರದ ಮಂದಿಗೆ ಈಗ ಮಲೇರಿಯಾದಂತಹ ರೋಗಗಳು ಕಾಣಿಸಿಕೊಳ್ಳಲಾರಂಭಿಸಿದೆ. ಕಳೆದ 20ವರ್ಷ ಗಳಿಂದ ಇಲ್ಲಿನ ಗ್ರಾಮಸ್ಥರು ಸಮಸ್ಯೆಯನ್ನು ಅನುಭವಿಸಿ ಕೊಂಡು ಬರುತ್ತಿರುವುದು ಸಾಮಾನ್ಯವಾಗಿದೆ.

ನೀರು ನಿಂತು ಮತ್ತಷ್ಟು ಸಮಸ್ಯೆ
ಒಂದು ಕಾಲದಲ್ಲಿ ತಳ ಕಾಣುವಷ್ಟು ಶುದ್ದ ನೀರಿದ್ದ ಈ ನದಿಯಲ್ಲಿ ನೀರೀಗ ಕಪ್ಪು ಡಾಮರಿನಂತಾಗಿದೆ.
ಆದರೆ ಇಲ್ಲಿನ ಕೆಲವು ರೈತರು ನೀರಿನ ಪಸೆಯಾದರೂ ಪಸರಿಸಲಿ ಎಂದು ಕಪ್ಪು ಡಾಮರಿನಂತ ಹರಿಯುವ ನೀರಿಗೆ ಅಣೆಕಟ್ಟೆಗೆ ಹಲಗೆ ಹಾಕಿ ನೀರು ನಿಲ್ಲಿಸಿದ್ದಾರೆ. ಈ ನೀರಿನ ಪಸೆಯನ್ನೆ ನಂಬಿಕೊಂಡು ಧಾನ್ಯಗಳನ್ನು ಬೆಳೆಸಲು ಮುಂದಾಗಿದ್ದಾರೆ. ಆದರೆ ನೀರು ನಿಲ್ಲಿಸಿದ್ದರಿಂದ ಈ ದುರ್ವಾಸನೆಯುಕ್ತ ಕೊಳಚೆ ನೀರು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಲಾರಂಭಿಸಿದೆ.

ಅತಂತ್ರದಲ್ಲಿ ಕೃಷಿಕರು
ಈ ಹಿಂದೆ ಇಂದ್ರಾಣಿ ನದಿಗೆ ಕಟ್ಟಹಾಕಿ ಕಂಬ್ಲಕಟ್ಟ, ಮಧ್ವನಗರ ಕೊಡವೂರು ಪರಿಸರದ ಜನರು ತಲೆತಲಾಂತರದಿಂದ ಈ ನೀರಿನಿಂದಲೇ ಎರಡು ಮೂರು ಬೆಳೆಯನ್ನು ಬೆಳೆಸುತ್ತಿದ್ದರು. ಆದರೆ ನಗರಸಭೆ ಇಂದ್ರಾಣಿ ನದಿಯನ್ನೇ ಚರಂಡಿ ಮಾಡಿ ಗಬ್ಬೆಬ್ಬಿಸಿದ ಬಳಿಕ ಇಲ್ಲಿನ ಕುಟುಂಬಗಳು ಕೃಷಿ ಮಾಡುವುದನ್ನೆ ಕೈ ಬಿಟ್ಟವು. ಇದನ್ನೇ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳು ಅತ್ತ ಕೃಷಿಯನ್ನು ಮಾಡಲಾಗದೆ ಇತ್ತ ಕೃಷಿಯನ್ನು ಬಿಡಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕಂಬಳಕಟ್ಟ ಬಳಿ ಅಣೆಕಟ್ಟುವಿಗೆ ಹಲಗೆ ಹಾಕಿ ನೀರು ನಿಲ್ಲಿಸಿದ್ದರಿಂದ ಮೂಡುಬೆಟ್ಟು, ಕಂಬ್ಲಕಟ್ಟ ಮಧ್ವನಗರ, ಕೊಡಂಕೂರು, ನ್ಯೂ ಕಾಲನಿ ಪರಿಸರದ ಜನರಿಗೆ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ. ಈ ಭಾಗದ ಸುಮಾರು 1000ಕ್ಕೂ ಅಧಿಕ ಮನೆಗಳ ಮಂದಿ ನರಕಯಾತನೆಯನ್ನು ಅನುಭವಿಸುವಂತಾಗಿದೆ. ಇಲ್ಲಿನ ಬಹುತೇಕ ಬಾವಿಗಳ ನೀರು ಮಲೀನಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ನೀರು ಹರಿದು ಹೋಗದೆ ಪರಿಸರವೆಲ್ಲ ಸಾಂಕ್ರಾಮಿಕ ರೋಗಗಳಿಗೆ ಗುರಿಯಗಿದೆ ಎಂದು ಸ್ಥಳೀಯರಾದ ರವಿರಾಜ್‌ ಪುತ್ತೂರು ಹೇಳುತ್ತಾರೆ. ತತ್‌ಕ್ಷಣ ಅಣೆಕಟ್ಟಿನ ಹಲಗೆಯನ್ನು ತೆರವುಗೊಳಿಸಬೇಕೆಂದು ಸುಮಾರು 15ಸಂಘಟನೆಗಳನ್ನೊಳಗೊಂಡ ಕೊಡಂ ಕೂರು ನಾಗರಿಕ ಹಿತರಕ್ಷಣಾ ವೇದಿಕೆಯು ನಗರಸಭೆ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದೆ.

Advertisement

ಮೀನಿನ ಸಂತತಿ ನಾಶ
ಈ ಹಿಂದೆ ಉತ್ತಮ ದರ ವಿವಿಧ ರೀತಿಯ ಮೀನುಗಳು ಈ ಹೊಳೆಯಲ್ಲಿ ಸಾಕಷ್ಟಿದ್ದವು. ಅದನ್ನು ಹಿಡಿದು ಜೀವನ ಸಾಗಿಸುವ ಕುಟುಂಬ ವರ್ಗಗಳು ಇದ್ದವು. ಇದೀಗ ದಶಕಗಳಿಂದ ಎಲ್ಲಾ ಮೀನಿನ ಸಂತತಿಯೇ ನಾಶವಾಗಿದೆ.

ತೆರವಿಗೆ ನೊಟೀಸು
ಅಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಅಣೆಕಟ್ಟೆಗೆ ಹಲಗೆ ಹಾಕಿರುವ ಬಗ್ಗೆ ದೂರು ಬಂದಿದೆ. ಆರೋಗ್ಯ ಅಧಿಕಾರಿಗಳು ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೆರವುಗೊಳಿಸಲು ಸಂಬಂಧಪಟ್ಟವರಿಗೆ ನೋಟಿಸು ಮಾಡಲಾಗಿದೆ. ಮೂರು ದಿನದ ಅವಕಾಶವನ್ನು ನೀಡಲಾಗಿದ್ದು ಮುಂದೆ ಇಲಾಖೆಯ ವತಿಯಿಂದ ತೆರವು ಮಾಡಲಾಗುವುದು.
– ಸ್ನೇಹಾ, ಪರಿಸರ ಎಂಜಿನಿಯರ್‌, ಉಡುಪಿ ನಗರಸಭೆ

ಪ್ರತಿಭಟನೆ
ಈಗಾಗಲೇ ಕಳೆದ ಕೆಲವು ದಿನಗಳಿಂದ ದುರ್ನಾತ ಬೀರಿ ಸಾರ್ವಜನಿಕ ವಾತಾವರಣವನ್ನು ಕೆಡಿಸುತ್ತಿರುವ ಈ ಸಮಸ್ಯೆಗೆ ಅತೀ ಶೀಘ್ರವಾಗಿ ಸ್ಥಳೀಯಾಡಳಿತ ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಮತ್ತೆ ಉಗ್ರ ಪ್ರತಿಭಟನೆಯ ಹಾದಿಯನ್ನು ಹಿಡಿಯಲಾಗುವುದು .
– ರಘುನಾಥ ಮಾಬೆನ್‌ , ಅಧ್ಯಕ್ಷ , ನಾಗರಿಕ ಹಿತರಕ್ಷಣಾ ವೇದಿಕೆ

ಸಾಂಕ್ರಾಮಿಕ ರೋಗ
ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಲುಷಿತ ನೀರು ಹೊಳೆಗೆ ಸೇರುತ್ತಿದೆ. ನಗರಸಭೆಯ ಶುದ್ಧೀಕರಣ ಘಟಕ ಕಾರ್ಯಾಚರಿಸದಿರುವುದೇ ಸಮಸ್ಯೆ ಕಾರಣವಾಗಿದೆ. ಇಡೀ ನಗರದ ಕೊಳಚೆಯನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಸೊಳ್ಳೆಕಾಟದಿಂದ ಪರಿಸರದ ಬಹುತೇಕ ಮಂದಿ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿದ್ದಾರೆ.
– ಜಗನ್ನಾಥ ಪೂಜಾರಿ, ಸಾಯಿಬಾಬ ನಗರ

ಭಕ್ತರಿಗೂ ತೊಂದರೆ
ಧಾರ್ಮಿಕ ಕ್ಷೇತ್ರವಾದ ಕೊಡಂಕೂರು ಬಬ್ಬುಸ್ವಾಮಿ ಮೂಲಕ್ಷೇತ್ರ, ಶಿರಡಿ ಸಾಯಿಬಾಬ ಮಂದಿರ, ಮಹಾಲಿಂಗೇಶ್ವರ ದೇವಸ್ಥಾನವಿದ್ದು ಇಲ್ಲಿಗೆ ಬರುವ ಭಕ್ತರಿಗೂ ತೊಂದರೆಯಾಗುತ್ತಿದೆ. ನೀರು ಹರಿದು ಹೋಗುತ್ತಿದ್ದರೆ ಸ್ವಲ್ಪ ಮಟ್ಟಿಗೆ ಸೊಳ್ಳೆ ಕಾಟವೂ ಕಡಿಮೆಯಾಗುತ್ತಿತ್ತು. ನೀರು ನಿಂತಿದ್ದ ರಿಂದ ದೊಡ್ಡ ದೊಡ್ಡ ಸೊಳ್ಳೆಗಳು ಉತ್ಪತ್ತಿಯಾಗಿವೆ.
– ದಿವಾಕರ ಶೆಟ್ಟಿ , ತೋಟದ ಮನೆ, ಧರ್ಮದರ್ಶಿ, ಶಿರಡಿ ಸಾಯಿಬಾಬ ಮಂದಿರ

Advertisement

Udayavani is now on Telegram. Click here to join our channel and stay updated with the latest news.

Next