Advertisement

ವಿಶಿಷ್ಟ ಯೋಗ್ಯತೆಯ ಆಯ್ಕೆಯಾಗಲಿ ಗರಿಗೆದರಿದ ರಾಷ್ಟ್ರಪತಿ ಚುನಾವಣೆ

06:00 PM Jun 14, 2017 | Team Udayavani |

ಕಲಾಂರಂಥ ರಾಷ್ಟ್ರಪತಿಯನ್ನು ನೋಡಬೇಕೆಂದು ದೇಶದ ಜನರು ಇಚ್ಛಿಸುತ್ತಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಗಳ ಕೊರತೆಯಂತೂ  ಖಂಡಿತ ಇಲ್ಲ. 

Advertisement

ಚುನಾವಣಾ ಆಯೋಗ ರಾಷ್ಟ್ರಪತಿ ಚುನಾವಣೆಗೆ ಜು.17ರ ಮುಹೂರ್ತ ನಿಗದಿ ಮಾಡಿದೆ. ಸಾಮಾನ್ಯವಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಸಂಪ್ರದಾಯ ನಡೆದುಕೊಂಡು ಬಂದಿರುವುದರಿಂದ ಜನರಿಗೆ ಈ ಚುನಾವಣೆ ಮೇಲೆ ಇನ್ನಿತರ ಚುನಾವಣೆಗಳಷ್ಟು ಆಸಕ್ತಿ ಇರುವುದಿಲ್ಲ. 1969ರಲ್ಲಿ ಆಗಿನ ಪ್ರಧಾನಿ ಇಂದಿರಾ “ವಿವೇಚನೆ ಬಳಸಿ’ ಮತ ಹಾಕಲು ತನ್ನ ಪಕ್ಷದವರಿಗೆ ಕರೆ ನೀಡಿದ ಕಾರಣ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿಯನ್ನು ಸೋಲಿಸಿ ವಿ. ವಿ. ಗಿರಿ ಆಯ್ಕೆಯಾಗಿರುವುದೊಂದೇ ಈ ಚುನಾವಣೆಯಲ್ಲಿ ಅನಿರೀಕ್ಷಿತ ಫ‌ಲಿತಾಂಶ ಪ್ರಕಟವಾದ ಏಕೈಕ ನಿದರ್ಶನ. ಇದಕ್ಕೆ ಮೊದಲು ಹಾಗೂ ಆನಂತರ ಎಲ್ಲ ರಾಷ್ಟ್ರಪತಿಗಳ ಆಯ್ಕೆ ನಿರೀಕ್ಷಿತವೇ ಆಗಿತ್ತು. ಆಡಳಿತ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಅವರೇ ರಾಷ್ಟ್ರಪತಿಯಾಗುವುದು ಖಚಿತವಾಗುವುದರಿಂದ ಜನಸಾಮಾನ್ಯರು ಈ ಚುನಾವಣೆ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳುವುದಿಲ್ಲ. 2017ರ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಈಗಿರುವ ಕುತೂಹಲ ಆಡಳಿತ ಪಕ್ಷ ಮತ್ತು ವಿಪಕ್ಷದ ಅಭ್ಯರ್ಥಿಗಳಾರು ಎಂದು ಮಾತ್ರ.

ಬಹುತೇಕ ವಿವಾದರಹಿತರಾದ ಇಳಿ ಪ್ರಾಯದ ಅನುಭವಿ ರಾಜಕಾರಣಿಗಳನ್ನೇ ರಾಷ್ಟ್ರಪತಿ ಚುನಾವಣಾ ಕಣಕ್ಕಿಳಿಸಲಾಗುತ್ತದೆ. ಕಾಂಗ್ರೆಸ್‌ ಕಳೆದ ಎರಡು ಅವಧಿಯಲ್ಲಿ  ಹೀಗೇ ಮಾಡಿತ್ತು. ಆದರೆ 2002ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಕ್ಷಿಪಣಿ ವಿಜ್ಞಾನಿ ಅಬ್ದುಲ್‌ ಕಲಾಂರನ್ನು ರಾಷ್ಟ್ರಪತಿ ಮಾಡಿ ಹೊಸ ಪ್ರಯೋಗ ಮಾಡಿದ್ದರು. ಕಲಾಂ ಕೂಡ ಕ್ರಿಯಾಶೀಲ ಕಾರ್ಯಶೈಲಿಯಿಂದ ರಾಷ್ಟ್ರಪತಿ ಅಂದರೆ ರಬ್ಬರ್‌ ಸ್ಟಾ éಂಪ್‌ ಅಲ್ಲ ಎಂದು ಸಾಬೀತುಪಡಿಸಿದ್ದರು. ರಾಷ್ಟ್ರಪತಿ ಆಯ್ಕೆಯಲ್ಲಿ ಪ್ರಾದೇಶಿಕತೆಯೂ ಮುಖ್ಯ ಪಾತ್ರ ವಹಿಸುತ್ತದೆ. 2007ರಲ್ಲಿ ಶಿವಸೇನೆ ಮಹಾರಾಷ್ಟ್ರದವರು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರತಿಭಾ ಪಾಟೀಲ್‌ ಅವರನ್ನು ಬೆಂಬಲಿಸಿರುವುದು ಇದಕ್ಕೊಂದು ಉದಹಾರಣೆ. ವಿಪಕ್ಷ ಪಾಳಯ ಅಂತೆಯೇ ಆಡಳಿತಾರೂಢ ಎನ್‌ಡಿಎ ಕೂಟಕ್ಕೆ ಇನ್ನೂ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಮಹಾತ್ಮಾ ಗಾಂಧಿಯ ಮರಿ ಮೊಮ್ಮಗ, ಮಾಜಿ ರಾಜ್ಯಪಾಲರೂ ಆಗಿರುವ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿದೆ. ಗಾಂಧಿಯ ವಂಶಸ್ಥನ ಆಯ್ಕೆಯನ್ನು ಉಳಿದ ಪಕ್ಷಗಳು ಬೆಂಬಲಿಸುವ ಆಶೆ ಕಾಂಗ್ರೆಸ್‌ಗಿದೆ. ವಿಪಕ್ಷಗಳ ಮನವೊಲಿಸುವ ನಿಟ್ಟಿನಲ್ಲಿ ಸೋನಿಯಾ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಬಿಜೆಪಿ ಹಲವು ಹೆಸರುಗಳನ್ನು ಪರಿಶೀಲಿಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಆರಿಸ‌ಲು ಸಮಿತಿಯನ್ನೂ ರಚಿಸಿವೆ.

ಎನ್‌ಡಿಎಗೆ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೆಲವು ಮತಗಳ ಕೊರತೆಯಿದೆ. ಈ ಪರಿಸ್ಥಿತಿಯಲ್ಲಿ ಉಳಿದೆಲ್ಲ ಪಕ್ಷಗಳು ಒಗ್ಗೂಡಿದರೆ ಬಿಜೆಪಿಗೊಂದು ಶಾಕ್‌ ನೀಡುವ ಅವಕಾಶ ವಿಪಕ್ಷಗಳಿಗಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನ ನಿರತವಾಗಿದೆ. ಅತ್ತ ಎನ್‌ಡಿಎಗೂ ಸೇರದ ಇತ್ತ ಯುಪಿಎ ಜತೆಗೂ ಗುರುತಿಸಿಕೊಳ್ಳದ ಪಕ್ಷಗಳು ಕೈಗೊಳ್ಳುವ ನಿರ್ಣಯ ಚುನಾವಣೆಯಲ್ಲಿ ನಿರ್ಣಾಯಕವಾಗುತ್ತವೆ.  

ಎನ್‌ಡಿಎ ಹಿಂದುತ್ವ ಮೂಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ. ಒಂದು ವೇಳೆ ಸರಕಾರ ವಿಪಕ್ಷಗಳ ಜತೆಗೆ ಚರ್ಚಿಸಿ ಸರ್ವಸಮ್ಮತ ಅಭ್ಯರ್ಥಿಯನ್ನು ಆರಿಸಿದರೆ ಚುನಾವಣೆಯಿಲ್ಲದೆ ರಾಷ್ಟ್ರಪತಿ ಆಯ್ಕೆಯಾಗಬಹುದು. ಆದರೆ ಮೂರು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ವಿಪಕ್ಷಗಳ ಜತೆಗೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ ಉದಾಹರಣೆ ಇಲ್ಲ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯಾಗುವುದು ಬಹುತೇಕ ಅಸಾಧ್ಯ. ಅಬ್ದುಲ್‌ ಕಲಾಂ ಅವರಂತಹ ಇನ್ನೋರ್ವ ರಾಷ್ಟ್ರಪತಿಯನ್ನು ನೋಡಬೇಕೆಂದು ದೇಶದ ಜನರು ಇಚ್ಛಿಸುತ್ತಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಗಳ ಕೊರತೆ ಖಂಡಿತ ಇಲ್ಲ.

Advertisement

ವಿಜ್ಞಾನಿಯನ್ನೇ ರಾಷ್ಟ್ರಪತಿ ಮಾಡಿದ ವಾಜಪೇಯಿ ಮೇಲ್ಪಂಕ್ತಿಯೂ ಇದೆ. ಮೋದಿ ಸರಕಾರ ಈ ನಿಟ್ಟಿನಲ್ಲಿ ಒಂದು ಚಿಂತನೆ ನಡೆಸಿದರೆ ಜನರ ಆಶೋತ್ತರವನ್ನು ಈಡೇರಿಸಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next