Advertisement

ವ್ಯಾಪ್ತಿ ಸಣ್ಣದಾದರೂ ಸಮಸ್ಯೆ ಬಗೆಹರಿದಿಲ್ಲ

05:43 PM Nov 29, 2021 | Team Udayavani |

ಸುಬ್ರಹ್ಮಣ್ಯ: ಪಂಜ ಹೋಬ ಳಿಯು ಈಗ ಹಿಂದಿನ ವ್ಯಾಪ್ತಿಯನ್ನು ಹೊಂದಿಲ್ಲ. ಕಡಬ ತಾಲೂಕು ರಚನೆಗೆ ಮೊದಲು 19 ಗ್ರಾಮಗಳನ್ನು ಒಳಗೊಂಡಿದ್ದ ಪಂಜ ಹೋಬಳಿ ಇಂದು 12 ಗ್ರಾಮಗಳ ವ್ಯಾಪ್ತಿಯನ್ನು ಮಾತ್ರವೇ ಹೊಂದಿದೆ. ವ್ಯಾಪ್ತಿ ಕಡಿಮೆಯಾದರೂ ಇಲ್ಲಿನ ಸಮಸ್ಯೆಗಳೇನೂ ಕಡಿಮೆಯಾಗಿಲ್ಲ.

Advertisement

ತಾಲೂಕು ಕೇಂದ್ರ ಸುಳ್ಯದಿಂದ 30 ಕಿ.ಮೀ. ದೂರದಲ್ಲಿ ಪಂಜ ಹೋಬಳಿ ಕೇಂದ್ರವು ಪಂಜ ಗ್ರಾ.ಪಂ. ವ್ಯಾಪ್ತಿಯ ಐವತ್ತೂಕ್ಲು ಗ್ರಾಮದಲ್ಲಿದೆ. ರಾಜರ ಕಾಲದಲ್ಲಿಯೂ ಆಡಳಿತ ಕೇಂದ್ರ ಸ್ಥಾನದ ಖ್ಯಾತಿ ಪಡೆದಿರುವ ಪಂಜ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.

19ರಿಂದ 12ಕ್ಕೆ ಇಳಿಕೆ
ಅವಿಭಜಿತ ಸುಳ್ಯ ತಾಲೂಕಿನ ಪಂಜ ಹೋಬಳಿ 10 ಗ್ರಾ.ಪಂ. (ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು, ಸುಬ್ರಹ್ಮಣ್ಯ, ಬಳ್ಪ, ಪಂಜ, ಎಡಮಂಗಲ, ಕಲ್ಮಡ್ಕ, ಮುರುಳ್ಯ, ದೇವಚಳ್ಳ)ಗಳ 19 ಗ್ರಾಮಗಳನ್ನು ಒಳಗೊಂಡಿತ್ತು. ಕಡಬ ತಾಲೂಕು ಅನುಷ್ಠಾನವಾದ ಬಳಿಕ ಪಂಜ ಹೋಬಳಿ ತನ್ನ ಮೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯನ್ನು (ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ) ಕಡಬ ತೆಕ್ಕೆಗೆ ಬಿಟ್ಟುಕೊಟ್ಟ ಪರಿಣಾಮ ಇಲ್ಲಿಯ ಗ್ರಾ.ಪಂ.ಗಳ ಸಂಖ್ಯೆ 7ಕ್ಕೆ ಇಳಿದಿದ್ದು ಪ್ರಸ್ತುತ 12 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ.

ಸಕಾಲದಲ್ಲಿ ಸಿಗದ ಸೇವೆ
ವ್ಯಾಪ್ತಿ ಕಡಿಮೆಯಾದರೂ ಸಕಾಲದಲ್ಲಿ ಸೇವೆ ಎಂಬುದು ಮರೀಚಿಕೆಯಾಗಿದೆ. ಕಾರಣ ಕೇಳಿದರೆ ಸಾಕಷ್ಟು ಸಿಬಂದಿ ಇಲ್ಲ ಎಂಬ ಉತ್ತರ ಬರುತ್ತಿದೆ. ಪ್ರಥಮ ದರ್ಜೆ ಸಹಾಯಕ, ಡಿ ಗ್ರೂಪ್‌, ಟೈಪಿಸ್ಟ್‌ ಹುದ್ದೆ ಖಾಲಿ ಇದೆ. ಪಂಜ ವ್ಯಾಪ್ತಿಯ 6-7 ಗ್ರಾಮಗಳಿಗೆ ಗ್ರಾಮಕರಣಿಕರ ಹುದ್ದೆಯೇ ಇಲ್ಲ. ಇದರಿಂದ ಅಲ್ಲಿನ ಕೆಲಸ ಕಾರ್ಯಗಳೂ ವಿಳಂಬವಾಗುತ್ತಿದೆ. ನಾಡಕಚೇರಿಯಲ್ಲಿ ಪ್ರಸ್ತುತ ಉಪತಹಶೀಲ್ದಾರ್‌, ಕಂದಾಯ ನಿರೀಕ್ಷಕ, ಗ್ರಾಮ ಸಹಾ ಯಕ, ಕಂಪ್ಯೂಟರ್‌ ಆಪರೇಟರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹತ್ತಿರದ ಕೇಂದ್ರವ ಬಿಟ್ಟು…
ಕಡಬ ತಾಲೂಕು ಅನುಷ್ಠಾನ ಆದ ಸಂದರ್ಭದಲ್ಲಿ ಹೋಬಳಿ ಕೇಂದ್ರ ಎಂಬ ಹಿನ್ನೆಲೆಯಲ್ಲಿ ಪಂಜವನ್ನು ಕಡಬಕ್ಕೆ ಸಮೀಪದಲ್ಲಿದ್ದರೂ ಅಲ್ಲಿಗೆ ಸೇರಿಸದೆ ಸುಳ್ಯದಲ್ಲೇ ಉಳಿಸಿಕೊಳ್ಳಲಾಗಿತ್ತು. ಇಲ್ಲಿನ ಜನ ಅಂದು ಕಡಬಕ್ಕೆ ಸೇರಿಸುವಂತೆ ಒತ್ತಡವನ್ನೂ ಹಾಕಿದ್ದರು. ಆದರೆ ಅದಕ್ಕೆ ಮನ್ನಣೆ ಸಿಗಲಿಲ್ಲ. ಇತ್ತ ಕಡಬಕ್ಕೆ ಸೇರ್ಪಡೆಗೊಂಡ ಗ್ರಾಮಗಳನ್ನು ಹಾಗೂ ಸಮೀಪದ ಗ್ರಾಮಗಳನ್ನು ಸೇರಿಸಿಕೊಂಡು ಸುಬ್ರಹ್ಮಣ್ಯ ಹೋಬಳಿ ರಚಿಸುವಂತೆ ಮಾಡಿದ ಆಗ್ರಹವೂ ಈಡೇರಿಲ್ಲ. ಗುತ್ತಿ ಗಾರು ಹೋಬಳಿ ರಚಿಸಬೇಕೆಂಬ ಬೇಡಿ ಕೆಯೂ ಯಾರಿಗೂ ಕೇಳಿಸಲೇ ಇಲ್ಲ.

Advertisement

ನೂತನ ನಾಡಕಚೇರಿ
ಪಂಜದಲ್ಲಿ ಪ್ರಸ್ತುತ ಹಳೆ ನಾಡ ಕಚೇರಿಯಲ್ಲಿ ಕೆಲಸ ಕಾರ್ಯ ನಡೆಯುತ್ತಿದ್ದು, ಹೊಸ ನಾಡಕಚೇರಿ ಕಟ್ಟಡ ನಿರ್ಮಿಸಲು ಅನುದಾನ ಮಂಜೂ ರಾಗಿದ್ದು, ಕಾಮಗಾರಿಗೆ ಚಾಲನೆಯೂ ನೀಡಲಾಗಿದೆ. ಒಟ್ಟು ಸುಮಾರು 42 ರೂ. ವೆಚ್ಚದಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣ ವಾಗಲಿದ್ದು, ಈಗಾಗಲೇ 17 ಲಕ್ಷ ರೂ. ಬಿಡುಗಡೆಗೊಂಡಿದೆ. ಹೊಸ ನಾಡ ಕಚೇರಿ ಕಟ್ಟಡ ನಿರ್ಮಾಣವಾದಲ್ಲಿ ಇಕ್ಕಟ್ಟಿನ ಕೊಠಡಿಯ ಸಮಸ್ಯೆಗೆ ಮುಕ್ತಿ ಸಿಗಲಿದೆ.

ರೈತ ಸಂಪರ್ಕ ಕೇಂದ್ರ ನೋಡಲು ಚೆಂದ!
ಗ್ರಾಮೀಣ ಭಾಗದಲ್ಲಿ ಕೃಷಿಕರೇ ಹೆಚ್ಚಾಗಿರುವ ಕಡೆಗಳಲ್ಲಿ ರೈತ ಸಂಪರ್ಕ ಕೇಂದ್ರ ಕೃಷಿಕರಿಗೆ ಪ್ರಮುಖವಾಗಿದೆ. ಆದರೆ ಪಂಜದ ರೈತ ಸಂಪರ್ಕ ಕೇಂದ್ರ ಕಡಬ, ಸುಳ್ಯ ತಾಲೂ ಕಿನ ಸುಮಾರು 19 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಸುಸಜ್ಜಿತ ಕಟ್ಟಡ ಹೊಂದಿದ್ದರೂ ಇಲ್ಲಿ ಪ್ರಮುಖ ಹುದ್ದೆ ಖಾಲಿಯಾಗಿದೆ. ಕೃಷಿ ಅಧಿಕಾರಿ, ಸಹಾ ಯಕ ಕೃಷಿ ಅಧಿಕಾರಿ ಹುದ್ದೆ ಖಾಲಿ ಇದ್ದು ಪ್ರಸ್ತುತ ಪ್ರಭಾರವಾಗಿ ಸಹಾಯಕ ಕೃಷಿ ಅಧಿ ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ಅಧಿಕಾರಿ ಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ.

ಪಂಜ
ಹೋಬಳಿಯ ಗ್ರಾಮಗಳು
ಐವತ್ತೂಕ್ಲು, ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಬಾಳುಗೋಡು, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಕಲ್ಮಡ್ಕ, ಮುರುಳ್ಯ, ಪಂಬೆತ್ತಡಿ.

ವಿವಿಧ ಕಚೇರಿಗಳು
ಅಂಗನವಾಡಿ ಕೇಂದ್ರ, ವಲಯ ಅರಣ್ಯ ಕಚೇರಿ, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಉಪ ಆರೋಗ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಕ್‌, ಸಹಕಾರಿ ಸಂಘಗಳು, ವಾಣಿಜ್ಯ ವ್ಯವಹಾರ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿವಿಧ ಕಚೇರಿಗಳು ಪಂಜ ಹೋಬಳಿ ವ್ಯಾಪ್ತಿಯವೆ.

ಸುಳ್ಯ ತಾಲೂಕಿನಲ್ಲಿ ಸುಳ್ಯ ಮತ್ತು ಪಂಜ ಹೋಬಳಿಗಳಿದ್ದು, ಪ್ರಸ್ತುತ ಸುಳ್ಯ ಹೋಬಳಿ ವ್ಯಾಪ್ತಿ ದೊಡ್ಡ ದಾಗಿದೆ. ಹೊಸ ಹೋಬಳಿ ರಚನೆಯಾಗುವ ಅವಕಾಶ ಇದ್ದಲ್ಲಿ ಪಂಜಕ್ಕೆ ದೂರವಾಗುವ ಕೆಲವು ಗ್ರಾಮಗಳನ್ನು ಹಾಗೂ ಸುಳ್ಯದ ಕೆಲವು ಗ್ರಾಮಗಳನ್ನು ಪ್ರತ್ಯೇಕಿಸಿ ಬೇರೆ ಹೋಬಳಿ ಮಾಡಲು ಸಾಧ್ಯವಿದೆ. ಇದರಿಂದ ಸುಳ್ಯದ ಹೊರೆ ಕಡಿಮೆಯಾಗಲಿದೆ.
ಅನಿತಾಲಕ್ಷ್ಮೀ, ತಹಶೀಲ್ದಾರ್‌, ಸುಳ್ಯ

ಹೋಬಳಿ ಕೇಂದ್ರಗಳಲ್ಲೂ ತಾಲೂಕು ಮಟ್ಟದ ಪ್ರಮುಖ ಕಚೇರಿಗಳನ್ನು ತೆರೆಯಬೇಕು. ಇದು ಜನ ಸಾಮಾನ್ಯರ ತಾಲೂಕು ಕೇಂದ್ರಗಳ ಅಲೆದಾಟವನ್ನು ತಪ್ಪಿಸಿ, ಅಧಿಕಾರಿಗಳಿಗೂ ಜನರಿಗೆ ಶೀಘ್ರ ಸೇವೆ ನೀಡಲು ಸಾಧ್ಯವಾಗುತ್ತದೆ
ಜಿನ್ನಪ್ಪ ಗೌಡ, ಸ್ಥಳೀಯರು

-ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next