Advertisement

ಮಳೆಗೆ ಶಾಲೆಗಳೂ ಶಿಥಿಲ

08:05 AM Aug 12, 2019 | sudhir |

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅನಾಹುತಕ್ಕೆ ಮನೆ, ತೋಟ, ಗದ್ದೆಗಳು ಮಾತ್ರವಲ್ಲದೆ ಶಾಲಾ ಕಟ್ಟಡಗಳೂ ನಾಶವಾಗಿವೆ. ಜತೆಗೆ ಜೀರ್ಣಾವಸ್ಥೆಯಲ್ಲಿದ್ದ ಸುಮಾರು 50 ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳು ಇನ್ನಷ್ಟು ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು, ಪಾಲಕರು, ಹೆತ್ತವರು ಹಾಗೂ ಶಿಕ್ಷಕರಲ್ಲಿ ಇನ್ನಷ್ಟು ಭಯ ಹುಟ್ಟಿಸಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಧಾರವಾಡ, ಯಾದಗಿರಿ, ಕೊಪ್ಪಳ, ರಾಯಚೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದೆ. ಈ ಭೀಕರತೆಗೆ ಸಾವಿರಾರು ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸಿಲುಕಿಕೊಂಡಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 2018-19ನೇ ಸಾಲಿನ ಶೈಕ್ಷಣಿಕ ವರದಿಯ ಪ್ರಕಾರ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 2,08,681 ಕೊಠಡಿಗಳಿದ್ದು, ಅದರಲ್ಲಿ 1,37,392 ಉತ್ತಮ, 27,445 ಸಣ್ಣ ಪ್ರಮಾಣದ ದುರಸ್ತಿ ಹಾಗೂ 43,844 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಅಗತ್ಯವಿದೆ. ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 23,318 ಕೊಠಡಿಗಳಿದ್ದು, ಅದರಲ್ಲಿ 11,601 ಉತ್ತಮ, 1,727 ಸಣ್ಣ ಪ್ರಮಾಣದ ದುರಸ್ತಿ ಹಾಗೂ 9,990 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಅಗತ್ಯವಿದೆ ಎಂದು ಇಲಾಖೆ ಹೇಳಿದೆ.

ಸರಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆ, ಸ್ಥಳೀಯ ಸಂಸ್ಥೆಗಳ ಶಾಲೆ ಸಹಿತ ಒಟ್ಟು 3,73,107 ಶಾಲಾ ಕೊಠಡಿಗಳಲ್ಲಿ 2,86,324 ಉತ್ತಮ, 29,578 ಸಣ್ಣ ಪ್ರಮಾಣದ ದುರಸ್ತಿ ಹಾಗೂ 57,205 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಆಗಬೇಕಿದೆ. ಹಾಗೆಯೇ ಎಲ್ಲ ಪ್ರೌಢಶಾಲೆಗಳಲ್ಲಿ ಒಟ್ಟು 74,765 ಕೊಠಡಿಗಳಿದ್ದು ಅದರಲ್ಲಿ 48,649 ಉತ್ತಮ, 2,378 ಸಣ್ಣ ಪ್ರಮಾಣದ ದುರಸ್ತಿ ಹಾಗೂ 23,738 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಅಗತ್ಯವಿದೆ.

ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಹಲವು ಶಾಲೆಗಳ ಗೋಡೆ ಬಿರುಕುಬಿಟ್ಟಿವೆ. ಅಲ್ಲದೆ ಕೊಠಡಿಯ ಮೇಲ್ಛಾವಣಿ ಅಪಾಯದ ಮಟ್ಟದಲ್ಲಿದೆ. ಶಾಲೆಗಳ ಸ್ಥಿತಿ ಹೇಗಿದೆ ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರ ಮಟ್ಟದಲ್ಲಿ ಸಮೀಕ್ಷೆ ಆರಂಭಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶದ ಶಾಲಾ, ಕಾಲೇಜುಗಳ ಕೊಠಡಿ, ಕಟ್ಟಡ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕುಳಿತುಕೊಳ್ಳಲು ಯೋಗ್ಯವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ಪ್ರವಾಹದಿಂದ ಸಾಕಷ್ಟು ಶಾಲೆಗಳಿಗೆ ಹಾನಿಯಾಗಿದೆ. ಇದರ ವರದಿ ಪಡೆಯುತ್ತಿದ್ದೇವೆ. ದುರಸ್ತಿ ಕಾಮಗಾರಿಗಾಗಿ ಸರಕಾರದಿಂದ ಅನುದಾನ ಹೆಚ್ಚು ಕೇಳಲಿದ್ದೇವೆ. ವಿದ್ಯಾರ್ಥಿಗಳಿಗೆ ಯಾವುದೇ ಅಪಾಯ ಆಗದಂತೆ ಎಚ್ಚರ ವಹಿಸಿದ್ದೇವೆ. ಭೀಕರ ಪ್ರವಾಹ ಇರುವ ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಶೀಲಿಸಿ, ಖಚಿತತೆ ನೀಡಿದ ಅನಂತರವೇ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿದೆ.

-ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next