Advertisement

ಅಕ್ಷರದಾಹ ನೀಗಿಸಲು ಆರಂಭವಾದ ಶಾಲೆ ಈಗ 108ರ ಹೊಸ್ತಿಲಲ್ಲಿ

11:46 AM Nov 14, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1911 ಶಾಲೆ ಆರಂಭ
56 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗುವ ಬೆಳುವಾಯಿ-ಕೆಸರ್‌ಗದ್ದೆಯಲ್ಲಿರುವ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ 1911-12ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪ್ರಾರಂಭಗೊಂಡಿತ್ತು. ಬೆಳುವಾಯಿ ಪೆಲಕುಂಜ ಮನೆ ಬಾಲಯ್ಯ ಹೆಗ್ಡೆ ಅವರ ಮುಂದಾಳತ್ವದಲ್ಲಿ ಕೆಸರ್‌ಗದ್ದೆಯ ಗೋವಿಂದ ಪ್ರಭು, ನಾಗಪ್ಪ ಶೆಣೈ, ಊರ ಹತ್ತು ಸಮಸ್ತರ ಸಹಕಾರದೊಂದಿಗೆ ಈ ಶಾಲೆ ಸ್ಥಾಪನೆಯಾಗಿತ್ತು.

ಬೆಳುವಾಯಿ ಪರಿಸರದ ಶಾಂತಿನಗರ, ನಡಿಗುಡ್ಡೆ, ಗೋಲಾರ, ಬೆಳುವಾಯಿ, ಮೂಡುಮಾರ್ನಾಡು ಪರಿಸರದಲ್ಲಿ ಪ್ರಾಥಮಿಕ ಶಾಲೆಗಳಿಲ್ಲದ ಆ ದಿನಗಳಲ್ಲಿ 56 ಮಕ್ಕಳೊಂದಿಗೆ ಶಾಲೆ ಪ್ರಾರಂಭವಾದಾಗ ಮಾರ್ನಾಡು ಮಂಜುನಾಥ ಅವರು ಮುಖ್ಯೋಪಾಧ್ಯಾಯರಾಗಿದ್ದರು ಎಂದು ಅವರ ಶಿಷ್ಯ, 95ರ ಇಳಿವಯಸ್ಸಿನಲ್ಲಿರುವ ಮೊಶ¡ಪ್ಪ ಡಾಂಗೆ ನೆನಪಿಸುತ್ತಾರೆ.ಅನಂತರ ಪದ್ಮಯ್ಯ ಹೆಗ್ಡೆ, ಶಂಕರ ರಾವ್‌, ಶೇಖರ ಶೆಟ್ಟಿ, ಮಾಧವ ಶೆಣೈ, ಸದಾಶಿವ ಅಡಿಗ, ಸುಮತಿ ಯು., ಸನ್ನು ಆರ್‌., ಸರಸ್ವತಿ ಎಂ. ಫಣಿರಾಜ್‌ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ರಾಜಶ್ರೀ ನಾಯಕ್‌ ಮುಖ್ಯೋಪಾಧ್ಯಾಯರಾಗಿ ಸೇವಾ ನಿರತರಾಗಿದ್ದು 10 ಮಂದಿನ ಶಿಕ್ಷಕರಿದ್ದು 263 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸುವ್ಯವಸ್ಥಿತ ಮೂಲಸೌಲಭ್ಯಗಳು
1.02 ಎಕ್ರೆ ಜಾಗವನ್ನು ಹೊಂದಿರುವ ಶಾಲೆಯಲ್ಲಿ ವಿದ್ಯುತ್ಛಕ್ತಿ, ಬೋರ್‌ವೆಲ್‌, ಶೌಚಾಲಯ, ಕಂಪ್ಯೂಟರ್‌ ವ್ಯವಸ್ಥೆ ಇದೆ. ಸ್ಮಾರ್ಟ್‌ ಕ್ಲಾಸ್‌ ಮೂಲಕ ಬೋಧಿಸುವ ವಿಷಯಗಳನ್ನು ಮನದಟ್ಟು ಮಾಡಲಾಗುತ್ತಿದೆ. ಮೆಂದಾ ಫೌಂಡೇಶನ್‌ನವರು ಎಲ್‌ಇಡಿ ಟಿವಿಯನ್ನು ಒದಗಿಸಲಾಗಿದೆ. 1997-98ರಲ್ಲಿ ಮಾದರಿ ಶಾಲೆಯಾಗಿ ಭಡ್ತಿ ಹೊಂದಿತು. 2010-11ರಲ್ಲಿ ಉನ್ನತೀಕರಿಸಲ್ಪಟ್ಟು 8ನೇ ತರಗತಿ ಪ್ರಾರಂಭವಾಯಿತು. 2012-13ರಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಹಾಗೂ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ನಡೆಸಲು ಸರಕಾರದಿಂದ ಅನುಮತಿ ದೊರೆತ್ತಿದ್ದು, ಎಲ್‌ಕೆಜಿ ತರಗತಿ ಆರಂಭಿಸಲಾಗಿದೆ.

Advertisement

ಶಾಲಾವರಣದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಆವರಣದೊಳಗೆ ಅಡಿಕೆ ಸಸಿ, ತರಕಾರಿಗಳನ್ನು ಬೆಳೆಸಲಾಗುತ್ತಿದೆ. 2014-15ರಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದನ್ವಯ “ಹಳದಿ ಶಾಲೆ’ ಪ್ರಶಸ್ತಿ ಲಭಿಸಿದೆ.

ಹಳೆ ವಿದ್ಯಾರ್ಥಿಗಳು
ಡಾ| ಎಸ್‌.ಕೆ. ಶೆಣೈ ಬೆಂಗಳೂರು, ಚಾರ್ಟರ್ಡ್‌ ಅಕೌಂಟೆಂಟ್‌ ಎನ್‌.ಕೆ. ಅಮೀನ್‌, ನವಿ ಮುಂಬಯಿ, ಸುನಂದಾ ಮಾಧವ ಪ್ರಭು ಚಾರಿಟೆಬಲ್‌ ಟ್ರಸ್ಟ್‌ ಪ್ರವರ್ತಕ ವಿಶ್ವನಾಥ ಪ್ರಭು, ಡಾ| ರಮೇಶ್‌ ಮೂಡುಬಿದಿರೆ, ವಕೀಲ ರಾಜೇಶ್‌ ಸುವರ್ಣ ಈ ಶಾಲೆಯ ಸಾಧಕ ಹಳೆವಿದ್ಯಾರ್ಥಿಗಳಾಗಿದ್ದಾರೆ

ಪ್ರಶಸ್ತಿ, ಪುರಸ್ಕಾರ
ಶಾಲಾ ಹಳೆವಿದ್ಯಾರ್ಥಿ ಫಣಿರಾಜ ಎಂ. ಅವರು ಇದೇ ಶಾಲೆಯ ಮುಖ್ಯಶಿಕ್ಷಕರಾಗಿ 13 ವರ್ಷ ಸೇವೆ ಸಲ್ಲಿಸಿದ್ದು ಶಾಲಾ ಮೂಲಸೌಕರ್ಯಗಳನ್ನು ಹೊಂದಿಸಿಕೊಳ್ಳುವಲ್ಲಿ , ಎರಡು ಕೊಠಡಿಗಳ ಶತಮಾನೋತ್ಸವ ಸೌಧ ನಿರ್ಮಾಣ, ಶತಮಾನೋತ್ಸವ ನಡೆಸುವಲ್ಲಿ ಸಂಘಟನ ಚತುರತೆ ತೋರಿದ್ದಾರೆ. ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿದೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ಪೂಜಾ ಕುಣಿತದಲ್ಲಿ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್‌ ಸಾಧನೆ, ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದು ಕ್ರೀಡೆಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ.

ಉತ್ತಮ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಗ್ರ ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ
-ರಾಜಶ್ರೀ ನಾಯಕ್‌,ಪದವೀಧರ ಮುಖ್ಯೋಪಾಧ್ಯಾಯಿನಿ

ಒಳ್ಳೇ ಕಲಿಸುತ್ತಿದ್ರು. ಮಂಜುನಾಥ, ಪದ್ಮಯ್ಯ ಹೆಗ್ಡೆ, ಪುತ್ತಿಗೆ ಸೋಮನಾಥ ಭಟ್‌, ಮತ್ತೆ ಸುಬ್ರಾಯ ಮಾಸ್ತರ ಪಾಠ ಇಂದಿಗೂ ನೆನಪು. ಸ್ಕೂಲ್‌ಡೇಗೆ ನಾಟಕ ಕಲಿಸ್ತಾ ಇದ್ರು.
-ಮೊಶಪ್ಪ ಡಾಂಗೆ, ಹಳೆ ವಿದ್ಯಾರ್ಥಿ.

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next