ಬೆಂಗಳೂರು: “ಐಎಂಎ ಸಂಸ್ಥೆಯ ಅವ್ಯವಹಾರಕ್ಕೂ ನನಗೂ, ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕಾಂಗ್ರೆಸ್ ನಾಯಕರ ವಿರುದ್ಧ ಬಂಡಾಯ ಸಾರಿದ ತಕ್ಷಣ ಈ ಬೆಳವಣಿಗೆ ಆಗಿರುವುದು ಆಶ್ಚರ್ಯ ತಂದಿದೆ’ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ಕಾಂಗ್ರೆಸ್‌ನ ಯಾವ ನಾಯಕರ ವಿರುದ್ಧವೂ ನೇರವಾಗಿ ಆರೋಪಿಸದ ಅವರು, “ನಾನು ಯಾವ ನಾಯಕರ ವಿರುದ್ಧವೂ ಆರೋಪ ಮಾಡುವುದಿಲ್ಲ. ಎಲ್ಲವೂ ತನಿಖೆಯಿಂದ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿ ಸಮುದಾಯದ ನಾಯಕನಾಗಲೂ ಪ್ರಯತ್ನ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ವಿರುದ್ದ ಆರೋಪ ಮಾಡಿದ್ದರು. ಆದರೆ, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಯಾವ ನಾಯಕರ ವಿರುದ್ಧವೂ ಅವರು ಆರೋಪ ಮಾಡಲಿಲ್ಲ. “ಜಮೀರ್ ಕೂಡ ನನ್ನ ಕಿರಿಯ ಸಹೋದರ’ ಎಂದು ತೇಲಿಸಿದರು.
ಸಿಬಿಐ ತನಿಖೆಯಾಗಲಿ: ರಾಜ್ಯದಲ್ಲಿ ಐಎಂಎ ಮಾತ್ರವಲ್ಲ ಆಂಬಿಡೆಂಟ್, ಅಜ್ಮೇರಾ, ಬುಕಾರ್, ಆಲಾ, ಕ್ಯಾಪಿಟಲ್ ಸೇರಿದಂತೆ ಅನೇಕ ಕಂಪನಿಗಳು ಸಾಮಾನ್ಯ ಜನರಿಗೆ ಮೋಸ ಮಾಡಿವೆ. ಬೆಳಗಾವಿಯಲ್ಲಿಯೂ ಒಂದು ಸಂಸ್ಥೆ ಇದೇ ರೀತಿ ಮೋಸ ಮಾಡಿದೆಯಂತೆ. ಅದಕ್ಕಾಗಿ ಎಲ್ಲ ಸಂಸ್ಥೆಗಳ ಅಕ್ರಮಗಳ ಬಗ್ಗೆ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಐಎಂಎ ಸಂಸ್ಥೆಯ ಮುಖ್ಯಸ್ಥ ಕಳೆದ 36 ಗಂಟೆಯಲ್ಲಿ ಯಾರ ಜೊತೆಗೆ ಸಂಪರ್ಕದಲ್ಲಿದ್ದಾರೆ. ಯಾರೊಂದಿಗೆ ವಾಟ್ಸ್ ಆಪ್ ಮಾಡಿದ್ದಾರೆ. ಅವರು ಆಡಿಯೋ ರೆಕಾರ್ಡ್ ಮಾಡುವ ಮೊದಲು ಯಾರೊಂದಿಗೆ ಸಂಪರ್ಕ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಓಡಿ ಹೋದವನು ಇನ್ನೂ ಏನಾಗಿದ್ದಾನೆ ಎಂಬುದೇ ಗೊತ್ತಾಗಿಲ್ಲ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ನೀಡಿದರೆ, ಅವರು ತಕ್ಷಣ ರೆಡ್ ಅಲರ್ಟ್ ನೋಟಿಸ್ ನೀಡುತ್ತಾರೆ ಎಂದು ಹೇಳಿದರು.
“ಪ್ರಕರಣ ಬೆಳಕಿಗೆ ಬಂದ ಮೇಲೆ ಐಎಂಎ ಮಾಲಿಕನ ವೈಯಕ್ತಿಕ ಅಕೌಂಟ್‌ಗೆ 1 ಸಾವಿರ ಕೋಟಿ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣ ಅವರ ಅಕೌಂಟ್ ಸೀಜ್ ಮಾಡಿ ಹೂಡಿಕೆದಾರರಿಗೆ ನೀಡಬೇಕು. ನನಗೂ ಐಎಂಎ ಸಂಸ್ಥೆಗೂ ಯಾವುದೇ ವೈಯಕ್ತಿಕ ಸಂಬಂಧವಿಲ್ಲ. ನನ್ನ ಕ್ಷೇತ್ರದಲ್ಲಿ ಬಿ.ಕೆ.ಅಬೇದುಲ್ಲಾ ಎನ್ನುವ ಉರ್ದು ಶಾಲೆ ಇದೆ.
ಆ ಶಾಲೆಯ ಅಭಿವೃದ್ಧಿಗೆ ಐಎಂಎ ಸಂಸ್ಥೆ ಸಿಎಸ್‌ಆರ್ ಫಂಡ್‌ನಿಂದ ಹಣ ನೀಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಕರೆಸಿ ಉದ್ಘಾಟನೆ ಮಾಡಿಸಿದ್ದೆ. ಸಿಯಾಸತ್ ಎಂಬ ಉರ್ದು ಪತ್ರಿಕೆ ಕೂಡ ಅಭಿವೃದ್ಧಿಗೆ ಸಿಎಸ್‌ಆರ್ ಫಂಡ್ ನೀಡಿದೆ. ಅದನ್ನು ಬಿಟ್ಟರೆ, ಐಎಂಎ ಸಂಸ್ಥೆ ಜೊತೆಗೆ ಯಾವುದೇ ರೀತಿಯ ವ್ಯವಹಾರವಿಲ್ಲ.
ನಾನು ಅವರಿಂದ 5 ಕೋಟಿ, 2 ಕೋಟಿ ರೂ.ಗಳನ್ನು ಯಾವಾಗಲೂ ಪಡೆದುಕೊಂಡಿಲ್ಲ. ನನ್ನ ಪುತ್ರ ರುಮಾನ್ ಬೇಗ್ ಚಾರ್ಟರ್ ಫ್ಲೈಟ್‌ನಲ್ಲಿ ತಿರುಗಾಡುತ್ತಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಚಾರ್ಟ್‌ರ್ ಪ್ಲೆ„ಟ್‌ನಲ್ಲಿ ಯಾರು ತಿರುಗಾಡುತ್ತಿದ್ದಾರೆ ಎನ್ನುವುದು ತನಿಖೆಯಾಗಬೇಕು’ ಎಂದು ಬೇಗ್ ಆಗ್ರಹಿಸಿದರು.
“ನಾನು ಪಕ್ಕಾ ರಾಜಕಾರಣಿಯಲ್ಲ. ನಾನೊಬ್ಬ ಸಾಮಾಜಿಕ ಹೋರಾಟಗಾರ. ಹೋರಾಟದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ನನ್ನ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್ ತಂದಿದ್ದೇನೆ. ನನ್ನ ಕ್ಷೇತ್ರದ ಜನತೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.