Advertisement

ಸೇವಿಂಗ್ಸ್‌ ಅಕೌಂಟ್‌ ಅನಿರೀಕ್ಷಿತವೇ ನಿರೀಕ್ಷಿತ

03:45 PM Feb 26, 2018 | Harsha Rao |

ಜೀವನದಲ್ಲಿ ಉಳಿತಾಯವಾಗಲೀ, ಮುಂದಿನ ಭವಿಷ್ಯದ ಬಗೆಗಿನ ಯೋಚನೆಯಾಗಲೀ  ಇರಲೇ ಬೇಕು. ಇದು ತುಂಬಬಾ  ಮುಖ್ಯ. ಅಷ್ಟೇ ಅಲ್ಲ ಇದು ಅನಿವಾರ್ಯ. ಮುಂದಾಲೋಚನೆ ಇದ್ದಾಗ ಮಾತ್ರವೇ ಎಲ್ಲವನ್ನೂ ಸುಲಭವಾಗಿ ದಾಟಬಹುದು. ಉಳಿತಾಯ ಒಳಿತಯ್ಯ ಎಂದು ಜನರಲ್‌ ಆಗಿ ಹೇಳಿದರೆ ಮನಸ್ಸಿನಲ್ಲಿ ಅದು ಮನನ ಆಗುವುದಿಲ್ಲ. ಅಚ್ಚೊತ್ತುವುದಿಲ್ಲ. ಅದಕ್ಕೆ ಒಂದು ಕಥೆಯ ಮೂಲಕವೇ ವಿವರಿಸಬೇಕು.

Advertisement

ಒಂದು ಹಳ್ಳಿ. ಅಲ್ಲೊಬ್ಬ ಯುವಕ ಇದ್ದ. ಯುವಕ ಸದೃಡ, ಜೊತೆಗೆ ಬುದ್ಧಿವಂತ.  ತುಂಬ ಪ್ರಯತ್ನಪಟ್ಟ ಎಲ್ಲೂ ಅವನಿಗೆ ಸರಿ ಹೊಂದುವ, ಅವನು ಇಷ್ಟರೂ ಪಡುವ ಕೆಲಸ ಸಿಗಲೇ ಇಲ್ಲ. ಒಂದು ದಿನ ಊರಿನ ಹಿರಿಯರೊಬ್ಬರು ಅವನನ್ನು ಕರೆದು  ನೋಡು, ಈ ದೇಶದ ರಾಜಧಾನಿಗೆ ಹೋಗಿ ಅಲ್ಲಿ ರಾಜನನ್ನು ಕೇಳು ನಿನಗೆ ಕೆಲಸ ಕೊಡುತ್ತಾರೆ  ಎಂದರು. ರಾಜಧಾನಿಗೆ ಹೇಗೆ ಹೋಗಬೇಕು, ಎಷ್ಟು ದೂರ ಇದೆ ಎಂದೆಲ್ಲ ಅವರೇ ಮಾರ್ಗದರ್ಶನ ನೀಡಿದರು. ಅವರ ಮಾತಿನ ಮೇಲಿನ ವಿಶ್ವಾಸದಿಂದ  ಅವನು ಹಳ್ಳಿಯಂದ ಹೊರಟು ರಾಜಧಾನಿಗೆ ಬರುತ್ತಾನೆ. ರಾಜಧಾನಿಯಲ್ಲಿ ಭೇಟಿ ಆದ ವ್ಯಕ್ತಿ ಒಬ್ಬರನ್ನು ಕೇಳುತ್ತಾನೆ. ಇಲ್ಲಿ ರಾಜ ಎಲ್ಲಿರುತ್ತಾರೆ? ನಾನು ಅವರನ್ನು ಭೇಟಿ ಆಗಬೇಕು. ಅದಕ್ಕೆ ಆ ವ್ಯಕ್ತಿ ಆಶ್ಚರ್ಯದಿಂದ ಇವನನ್ನು ನೋಡಿ ಮತ್ತೆ ಅದೇ ಪ್ರಶ್ನೆ ಕೇಳಿಸಿಕೊಂಡು ಉತ್ತರಿಸುತ್ತಾನೆ.  ನಿನಗೆ ಗೊತ್ತೇ ಇಲ್ಲವಾ? ಈ ದೇಶಕ್ಕೆ ಈಗ ಯಾರೂ ರಾಜರೇ ಇಲ್ಲ.  ಯುವಕನಿಗೆ ಇನ್ನೂ ಆಶ್ಚರ್ಯ ಆಯಿತು.

ಏನು ಈ ದೇಶಕ್ಕೆ ರಾಜರೇ ಇಲ್ಲವಾ? ಯಾಕೆ?  ಈ ದೇಶದಲ್ಲಿ ಒಂದು ಕಾನೂನು ಇದೆ. ಯಾರು ಈ ದೇಶದ ರಾಜನಾಗುತ್ತಾನೋ ಅವನು ಅಧಿಕಾರ ವಹಿಸಿಕೊಂಡ 25 ವರ್ಷದ ನಂತರ ಈ ದೇಶದ ಆಚೆ ಇರುವ ದ್ವೀಪಕ್ಕೆ ಹೋಗಬೇಕು. ಕಾಡು ಪ್ರಾಣಿಗಳಿಂದ ತುಂಬಿರುವ ಆ ದ್ವೀಪದಲ್ಲಿ ಅವನು ಇರಬೇಕು. ಅವನ ಮಕ್ಕಳು, ಹೆಂಡತಿ ಯಾರೂ ಕೂಡ  ಸಿಂಹಾಸನವನ್ನು ಏರುವ ಹಾಗಿಲ್ಲ. 

ಅವರೂ ಕೂಡ ರಾಜನೊಂದಿಗೆ  ಹೊರಡಬೇಕು. ಹಾಗಾಗಿ ಈ ದೇಶದಲ್ಲಿ ಯಾರೂ ರಾಜರಾಗೋದಕ್ಕೆ ಇಷ್ಟಪಡುವುದಿಲ್ಲ. ಯುವಕ ಈ ವಿಷಯ ಕೇಳಿ ಅತ್ಯಂತ ಸಮಾಧಾನದಿಂದ ಇಷ್ಟೇನಾ? ಹಾಗಾದರೆ ನಾನು ಈ ದೇಶಕ್ಕೆ ರಾಜನಾಗುತ್ತೇನೆ   ಎಂದ.  ಮುಂದೆ ಅವನು ಆ ದೇಶದ ರಾಜನಾದ. ಅತ್ಯಂತ ಪರಿಶ್ರಮಿ, ಸಹೃದಯಿ ಯುವಕ ರಾಜನಾಗಿ ಬಹುಬೇಗ ಜನಪ್ರೀಯನಾದ. ಇಡೀ ದೇಶ ಸುಭಿಕ್ಷವಾಯಿತು. ಶಾಂತಿ, ಸಮಾಧಾನ, ಸಮೃದ್ದಿ ಎಲ್ಲಡೆಗೂ ಇತ್ತು. ಪ್ರತಿಯೊಬ್ಬರಲ್ಲೂ ಸಂತೋಷ ಇರುವಂತೆ ನೋಡಿಕೊಂಡ.

ಕಣ್ಣು ಮುಚ್ಚಿ ಕಣ್ಣು ತೆಗೆಯವುದರೊಳಗೆ  ರಾಜ ಅಧಿಕಾರ ವಹಿಸಿಕೊಂಡು 25 ವರ್ಷ ಆಗಿಯೇ ಹೋಯಿತು. ರಾಜ ಅಧಿಕಾರ ತ್ಯಜಿಸುವ ಸಂದರ್ಭವೂ ಬಂದೇಬಿಟ್ಟತು. ಈಗ ಇಡೀ ದೇಶದ ಜನ ಕಣ್ಣೀರಿಡುತ್ತಿದ್ದಾರೆ. ರಾಜನನ್ನು ಬಿಟ್ಟುಕೊಡಲು ಯಾರಿಗೂ ಮನಸ್ಸಿಲ್ಲ. ರಾಜನಿಲ್ಲದ ರಾಜ್ಯ ಊಹಿಸಲೂ ಅವರಿಗೆ ಕಷ್ಟ ವಾಗಿದೆ. ಆದರೆ ಕಾನೂನು ಬದಲಿಸುವ ಹಾಗಿಲ್ಲ. ಆದರೆ ರಾಜನಿಗೆ ಮಾತ್ರ ಯಾವುದೇ ರೀತಿಯಲ್ಲೂ ಬೇಸರವಿಲ್ಲ. ಅವನ ಮುಖದಲ್ಲಿ ಎಂದಿನ ಉತ್ಸಾಹ ಹಾಗೇ ಇದೆ. ರಾಜನನ್ನು ಕಳುಹಿಸಿಕೊಡುವ ಸಂದರ್ಭವಂತೂ ಇಡೀ ದೆಶದ ಜನರೂ ಅಳುತ್ತ ವಿದಾಯ ಹೇಳುತ್ತಿದ್ದಾರೆ. ರಾಜ ಸಂತೋಷದಿಂದ ಅವರೆಡೆಗೆ ಕೈ ಬೀಸುತ್ತಿದ್ದಾನೆ.

Advertisement

ರಾಜನನ್ನು ದ್ವೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಇರುವ ನಾವಿಕ ಬಹಳ ಹಳಬ.  ಅವನಿಗೋ ಇದು ಆಶ್ಚರ್ಯ. ಈ ಹಿಂದೆಲ್ಲ ರಾಜ ಕಣ್ಣೀರಿಡುತ್ತ ಹೊರಡುತ್ತಿದ್ದ, ಪ್ರಜೆಗಳು ಕೈಬೀಸಿ ಕಳುಹಿಸಿ ಕೊಡುತ್ತಿದ್ದರು. ಆದರೆ ಈಗ ರಾಜನ ಮುಖದಲ್ಲಿ ಎಂದಿನಂತೆ ಸಂತೋಷದ ನಗು. ಪ್ರಜೆಗಳು ಕಣ್ಣೀರಿಡುತ್ತಿದ್ದಾರೆ. ರಾಜ ಕೈಬೀಸಿ ವಿದಾಯ ಹೇಳುತ್ತಿದ್ದಾನೆ.   ನಾವಿಕ ರಾಜನನ್ನು  ಕೇಳುತ್ತಾನೆ  ನಿಮ್ಮ ಈ ನೆಮ್ಮದಿ, ಸಂತೋಷದ ಗುಟ್ಟೇನು? ಅದಕ್ಕೆ ರಾಜ ಹೇಳುತ್ತಾನೆ.  ನಾನು ಅಧಿಕಾರ ವಹಿಸಿಕೊಂಡಾಗಲೇ ಗೊತ್ತು 25 ವರ್ಷದ ನಂತರ ನಾನು ಈ ದ್ವೀಪಕ್ಕೆ ಬರಬೇಕು ಎಂದು ಹಾಗಾಗಿ ನನ್ನೆದುರು ಇರುವ 25 ವರ್ಷವನ್ನು ವ್ಯರ್ಥಮಾಡದೇ ಸರಿಯಾಗಿ ಬಳಸಿಕೊಂಡೆ. ಈ ದ್ವೀಪವನ್ನು ನನಗೆ ವಾಸಯೋಗ್ಯವಾದ ನಗರವಾಗಿ ಮಾಡಿಕೊಂಡೆ. ಹೀಗಿರುವಾಗ ಅಳುವ ಮಾತೆಲ್ಲಿ?
 ನಾವು ದುಡಿಯಲು ಆರಂಭಿಸಿರುವಾಗಲೇ ಗೊತ್ತು; ನಾವು ಎಲ್ಲ ಕಾಲದಲ್ಲೂ ದುಡಿಯಲಾರೆವು. ನಮಗೂ ವಯಸ್ಸಾಗತ್ತೆ,  ನಮಗೂ ಖಾಯಿಲೆಗಳು ಬರಬಹುದು, ಅನಿರೀಕ್ಷಿ$ತ ಆಪತ್ತು ಬರಬಹುದು. ಆದರೆ ಇವ್ಯಾವವೂ ಅನಿರೀಕ್ಷಿ$ತವಲ್ಲ. ನಿರೀಕ್ಷಿತವೇ. ಇದನ್ನು ನೆನಪಿಟ್ಟುಕೊಂಡು ಗಳಿಸುವಾಗಲೇ, ಚಿಕ್ಕ ವಯಸ್ಸಿನಲ್ಲಿಯೇ ಮುಂದಿನ ದಿನಗಳಿಗಾಗಿ ಉಳಿಸಿ, ಉಳಿಸಿದ ಹಣವನ್ನು ಬೆಳೆಸುವುದೆಂದರೆ ರಾಜ ಕ್ರೂರ ಪ್ರಾಣಿಗಳಿರುವ ದ್ವೀಪವನ್ನು ವಾಸ ಯೋಗ್ಯ ನಗರವಾಗಿ ಮಾಡಿಕೊಂಡಂತೆ. ಸಿದ್ದತೆ ಇಲ್ಲದೆ ಎಲ್ಲಿಗೂ ಹೊರಡಲು ಸಾಧ್ಯವಿಲ್ಲ. ಅಂತಹ ಸಿದ್ದತೆಯೇ ಅಪಾರ ಸಾಧ್ಯತೆಯ ಹೆಬ್ಟಾಗಿಲು.

– ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next