Advertisement

ಸಿಜೆ ನಿವಾಸದ ಆವರಣದಲ್ಲೇ ಗಂಧದ ಮರ ಕಳವು

06:00 AM Nov 21, 2018 | |

ಬೆಂಗಳೂರು: ರಾಜಧಾನಿಯಲ್ಲಿ ಸರ್ಕಾರಿ ಕಚೇರಿ ಆವರಣಗಳಲ್ಲಿರುವ ಶ್ರೀಗಂಧದ ಮರ ಕದ್ದೊಯ್ಯುವ ಸರಣಿ ಮುಂದುವರಿಸಿರುವ ಕಳ್ಳರು, ಇದೀಗ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ನಿವಾಸದ ಆವರಣದಲ್ಲಿರುವ ಗಂಧದ ಮರವನ್ನು ಕಳವು ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಿಐಡಿ ಕಚೇರಿ ಪಕ್ಕದಲ್ಲಿರುವ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ನಿವಾಸದ ಆವರಣದಲ್ಲಿ ಹಲವು ವರ್ಷಗಳಿಂದ ಗಂಧದ ಮರವಿತ್ತು. ಶನಿವಾರ ತಡರಾತ್ರಿ ಆವರಣ ಗೋಡೆ ಹತ್ತಿ ನಿವಾಸದ ಆವರಣ ಪ್ರವೇಶಿಸಿರುವ ಕಳ್ಳರು ಶ್ರೀಗಂಧದ ಮರ ಕಟಾವು ಮಾಡಿಕೊಂಡು ಹೋಗಿದ್ದಾರೆ.

Advertisement

ಕಳೆದ 20 ದಿನಗಳ ಅಂತರದಲ್ಲಿ ವಿಧಾನಸೌಧದ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಶ್ರೀಗಂಧದ ಮರ ಕದ್ದೊಯ್ದ ಎರಡನೇ ಪ್ರಕರಣ ಇದಾಗಿದೆ. ಜತೆಗೆ, ಸೆ.3ರಂದು ಸೆವೆನ್‌ ಮಿನಿಸ್ಟರ್ ಕಾಲೋನಿಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ನಿವಾಸ ಬಳಿಯೇ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕದ್ದೊಯ್ದಿದ್ದರು. ನ್ಯಾಯಮೂರ್ತಿಗಳ ನಿವಾಸದ ಭದ್ರತೆಗೆ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಕೇಂದ್ರ ಕಚೇರಿಯಿಂದ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಭಾನುವಾರ ರಾತ್ರಿಯೂ ಇಬ್ಬರು ಪೇದೆಗಳು ಭದ್ರತೆಗೆ ಯೋಜನೆಗೊಂಡಿದ್ದರು. ಅವರ ಕಣ್ತಪ್ಪಿಸಿ ಕಳ್ಳರು ಮರ ಕದ್ದೊಯ್ದಿದ್ದಾರೆ. ಬೆಳಗ್ಗೆ ಪರಿಶೀಲನೆ ವೇಳೆ ಮರ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿಷಯ ಗೊತ್ತಾದ ಕೂಡಲೇ ಕೇಂದ್ರ ವಿಭಾಗದ ಪೊಲೀಸರು ಸೋಮ ವಾರ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ. 
ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಲೋಪದಿಂದಲೇ ಶ್ರೀಗಂಧ ಮರ ಕಳವು ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೇಂದ್ರ ವಿಭಾಗ ಮತ್ತು ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಾಹಿತಿ ನೀಡಲು  ನಿರಾಕರಿಸಿದರು.

ಪ್ರಸಾರ ಭಾರತಿ ಕೇಂದ್ರದಲ್ಲಿಯೂ ಕದ್ದಿದ್ದರು: ನಗರ ಪೊಲೀಸ್‌ ಆಯುಕ್ತರ ಕಚೇರಿಯ ಕೂಗಳತೆ ದೂರದಲ್ಲಿರುವ ಪ್ರಸಾರ ಭಾರತಿ ಕೇಂದ್ರ ಆವರಣದಲ್ಲಿದ್ದ ಶ್ರೀಗಂಧ ಮರವನ್ನು ಅ.29ರಂದು ದುಷ್ಕರ್ಮಿಗಳು ಕದ್ದೊಯ್ದಿದ್ದರು. ಈ ಕುರಿತು ಕೇಂದ್ರದ ಸಹಾಯಕ ನಿರ್ದೇಶಕ ಎಂ.ಆರ್‌ ಸಹದೇವನ್‌ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು
ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದರು. 

ಸಚಿವ ಪ್ರಿಯಾಂಕ್‌ ನಿವಾಸದಲ್ಲೂ ಕಟಾವು
ಅತಿ ಭದ್ರತಾ ವಲಯವಾದ ನಗರದ ಸ್ಯಾಂಕಿ ರಸ್ತೆಯಲ್ಲಿರುವ ಸಪ್ತ ಸಚಿವರ ನಿವಾಸ(ಸೆವೆನ್‌ ಮಿನಿಸ್ಟರ್‌ ಕ್ವಾಟ್ರರ್ಸ್‌)ದಲ್ಲಿ ಪ್ರಿಯಾಂಕ್‌ ಖರ್ಗೆ ಮನೆ ಆವರಣದಲ್ಲಿದ್ದ ಸೆ.3ರಂದು ರಾತ್ರಿ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕದ್ದೊಯ್ದಿದ್ದರು. ಸುಮಾರು 30 ವರ್ಷಗಳ ಎರಡು ಶ್ರೀಗಂಧದ ಮರಗಳನ್ನು ಯಂತ್ರದ ಮೂಲಕ ಕತ್ತರಿಸಿರುವ ಕಳ್ಳರು ಕಾಂಡಗಳು ಹಾಗೂ ದಪ್ಪ ಗಾತ್ರ ಮರದ ತುಂಡುಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಾಲತೇಶ್‌ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದರು.

Advertisement

ಮುಖ್ಯ ನ್ಯಾಯಮೂರ್ತಿಗಳ ನಿವಾಸದ ಆವರಣದಲ್ಲಿ ಶ್ರೀಗಂಧ ಮರ ಕಳವು ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಸೂಕ್ತ ಕ್ರಮ ವಹಿಸಲಾಗಿದೆ. 
● ಟಿ. ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next